ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕುಸಿದ ಜಿಲ್ಲೆ
ರಾಮನಗರ: ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನದಲ್ಲಿ ಕಳೆದ ವರ್ಷ ರಾಜ್ಯದಲ್ಲಿ 2ನೇ ಸ್ಥಾನದಲ್ಲಿದ್ದ ರಾಮನಗರ ಈ ಬಾರಿ 27ನೇ ಸ್ಥಾನಕ್ಕೆ ಕುಸಿದಿದೆ. ಅಧಿಕಾರಿಗಳ ಅಸಡ್ಡೆ, ಹೆಚ್ಚಿದ ಕಮೀಷನ್ ದಂಧೆ, ಸಿಬ್ಬಂದಿಯ ಅಕಾಲಿಕ ವರ್ಗಾವಣೆಯ ಪರಿಣಾಮ ಇಲ್ಲಿ ನರೇಗಾ ಹಳ್ಳ ಹಿಡಿದಿದೆ.
2011-12ನೇ ಸಾಲಿನ ಅನುಷ್ಠಾನಕ್ಕೆ ಶಹಬ್ಬಾಶ್ ಗಿರಿ ಸಿಕ್ಕಿದ್ದ ಗುಂಗಿನಲ್ಲೇ ಉನ್ನತ ಅಧಿಕಾರಿಗಳು ಮೈಮರೆತರು. ಗ್ರಾ.ಪಂ. ಹಂತದ ಅಧಿಕಾರಿಗಳು ವಸೂಲಿ ಬಾಜಿಗೆ ಇಳಿದಿದ್ದಾರೆ. ಹೀಗಾಗಿಯೇ 2012-13ನೇ ಸಾಲಿನಲ್ಲಿ ಯೋಜನೆ ಅನುಷ್ಠಾನ ವಿಫಲವಾಗಿದೆ ಎನ್ನುವ ಆರೋಪ ವ್ಯಾಪಕವಾಗಿದೆ.
ಈಚೆಗೆ ಬಿಡುಗಡೆಯಾದ ವರದಿ ಪ್ರಕಾರ ಈ ಜಿಲ್ಲೆಯಲ್ಲಿ ಪ್ರಸಕ್ತ ಹಂಗಾಮಿನಲ್ಲಿ 7636 ಕಾಮಗಾರಿಗಳನ್ನು ಕೈಗೆತ್ತಿಕೊಂಡಿದ್ದು, ಪೂರ್ಣಗೊಂಡಿರುವುದು 44 ಮಾತ್ರ. ಇದರ ಪ್ರತಿಶತ ಪ್ರಗತಿ 0.58 ಆಗಿದೆ ಎನ್ನುವುದು ಯೋಜನೆ ಕುರಿತ ಅಧಿಕಾರಿಗಳ ಕಾಳಜಿಗೆ ಕೈಗನ್ನಡಿಯಾಗಿದೆ.
2.95 ಲಕ್ಷ ಮಾನವ ದಿನಗಳ ಬಳಕೆಯ ಗುರಿ ಹೊಂದಲಾಗಿತ್ತಾದರೂ ಒದಗಿಸಿರುವುದು 1.95 ಲಕ್ಷ ಮಾನವ ದಿನಗಳಷ್ಟೇ. 120 ಗ್ರಾಮ ಪಂಚಾಯಿತಿಗಲ್ಲಿ ಹಿಂದಿನ ಸಾಲಿನ ಬಾಬ್ತು ಸೇರಿದಂತೆ ಒಟ್ಟಾರೆ ರು.6.03 ಕೋಟಿ ಬಾಕಿ ಮೊತ್ತ ಉಳಿಸಿಕೊಂಡಿರುವುದು ವಿಪರ್ಯಾಸದ ಸಂಗತಿಯಾಗಿವೆ.
ಜನಪ್ರತಿನಿಧಿಗಳ ತಾತ್ಸಾರ: ರಾಮನಗರ ಜಿಲ್ಲೆಯಲ್ಲಿ ಘಟಾನುಘಟಿ ರಾಜಕಾರಣಿಗಳಿದ್ದಾರೆ. ಸಂಸದ ಸುರೇಶ್ ಹೊರತಾಗಿ ಯಾವೊಬ್ಬ ಜನಪ್ರತಿನಿಧಿಯೂ ಅಧಿಕಾರಿಗಳಿಗೆ ಬೆವರಿಳಿಸುವ ಕೆಲಸ ಮಾಡಿಲ್ಲ. ಜಿಲ್ಲೆಯಲ್ಲಿ ಪದೇ ಪದೇ ಆಗುತ್ತಿರುವ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಉನ್ನತ ಅಧಿಕಾರಿಗಳ ಬದಲಾವಣೆಯೂ ನರೇಗಾ ವೈಫಲ್ಯಕ್ಕೆ ಪ್ರಮುಖ ಕಾರಣಗಳಲ್ಲೊಂದು.
ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ನಾಮ್ಕೇ ವಾಸ್ತೆಗೆ ಎನ್ನುವಂತಿದ್ದು, ಈ ಯೋಜನೆ ಪ್ರಗತಿ ನೋಟ ಗಮಿಸಿಯೇ ಇಲ್ಲ. ಮಿತಿ ಮೀರಿದ ರಾಜಕಾರಣವೂ ಯೋಜನೆಗೆ ಅಡ್ಡಗಾಲಾಗಿದೆ ಎನ್ನುವುದು ನಿರ್ವಿವಾದ ಸತ್ಯ.
ಕಡಿಮೆ ಕೂಲಿಯೂ ಕಾರಣ: ಕಾರ್ಖಾನೆಗಳಲ್ಲಿ ಉದ್ಯೋಗಾವಕಾಶ ಹೆಚ್ಚಿದೆ. ನರೇಗಾದಲ್ಲಿ ನೀಡುವ ರು.175 ಕೂಲಿಗಾಗಿ ಮಣ್ಣು ಹೊರುವ ಬದಲು ಕಾರ್ಖಾನೆ ಕೆಲಸಕ್ಕೆ ಹೋಗುವುದೇ ವಾಸಿ ಎನ್ನುವ ಮಂದಿಯೇ ಹೆಚ್ಚಿದ್ದಾರೆ.
ಕೆರೆ, ಕಟ್ಟೆ ಹೂಳೆತ್ತುವುದು ಸಹಿತ ಸೀಮಿತ ಕಾಮಗಾರಿಗಳ ಹೊರತಾಗಿ ಕೃಷಿ ಅವಲಂಬಿತ ಕೆಲಸಗಳಿಗೆ ಗ್ರಾ.ಪಂ.ಗಳು ಕ್ರಿಯಾ ಯೋಜನೆಯನ್ನೇ ಸಲ್ಲಿಸಿಲ್ಲ. ಇಂತಹ ಕೆಲಸದಿಂದ ಕಮೀಷನ್ ಸಿಗದೆನ್ನುವುದೇ ಅವರ ತಾತ್ಸಾರಕ್ಕೆ ಕಾರಣ.
ತಿಂಗಳಿಗೊಬ್ಬ ಪಿಡಿಒ, ಕಾರ್ಯದರ್ಶಿ ಬದಲಾಗುತ್ತಲೇ ಇದ್ದಾರೆ. ಈ ಅಧಿಕಾರಿಗಳು ಲಂಚ ಕೊಟ್ಟು ಲಾಭದಾಯಕ ಗ್ರಾ.ಪಂ.ಗಳಿಗೆ ವರ್ಗ ಮಾಡಿಸಿಕೊಂಡು ಹೋಗುತ್ತಲೇ ಇದ್ದಾರೆ. ಇದು ನರೇಗಾ ಮಾತ್ರವಲ್ಲದೆ ಇತರೆ ಸರ್ಕಾರಿ ಯೋಜನೆಗಳ ಅನುಷ್ಠಾನಕ್ಕೂ ಅಡ್ಡಿಯಾಗಿದೆ.
14 ಬಾರಿ ಪಿಡಿಒ ಬದಲಾವಣೆ
ಚನ್ನಪಟ್ಟಣ ತಾಲೂಕಿನ ಮತ್ತೀಕೆರೆ ಗ್ರಾಮ ಪಂಚಾಯಿತಿಯಲ್ಲಿ 2 ವರ್ಷದಿಂದ ಈಚೆಗೆ 14 ಬಾರಿ ಪಿಡಿಒ ಮತ್ತು 6 ಬಾರಿ ಕಾರ್ಯದರ್ಶಿಗಳ ಬದಲಾವಣೆ ಆಗಿದೆ. ಇಂತಹ ಗ್ರಾ.ಪಂ.ನಲ್ಲಿ ನರೇಗಾ ಅನುಷ್ಠಾನ ಸಹಿತ ಅಭಿವೃದ್ಧಿಯನ್ನು ನಿರೀಕ್ಷಿಸುವುದಾದರೂ ಹೇಗೆ ಎನ್ನುವುದು ಅಲ್ಲಿನ ಚುನಾಯಿತ ಸದಸ್ಯರ ಪ್ರಶ್ನೆಯಾಗಿದೆ. ಕಾಯಂ ಪಿಡಿಒ ನೇಮಕಕ್ಕಾಗಿ ಚುನಾಯಿತ ಪ್ರತಿನಿಧಿಗಳು, ಗ್ರಾಮಸ್ಥರು ಪ್ರತಿಭಟನೆ ನಡೆಸಿದ್ದಾಗ್ಯೂ ಪ್ರಯೋಜನವಾಗಿಲ್ಲ. ಅದಾದ ನಂತರವೂ 2 ಬಾರಿ ಬದಲಾವಣೆ ಕಾಣಲಾಗಿದೆ. ಈ ಗ್ರಾ.ಪಂ.ನಲ್ಲಿ ಉದ್ಯೋಗ ಖಾತ್ರಿ ಯೋಜನೆಯಡಿ ಕೃಷಿ ಅವಲಂಬಿತರಿಗೆ ಒಂದೇ ಒಂದು ಕಾಮಗಾರಿಯೂ ಮಂಜೂರಾಗಿಲ್ಲ.
ನರೇಗಾ ಕಾಮಗಾರಿಗಳ ಬಾಕಿ ಬಿಡುಗಡೆ ಮಾಡದ ಬಗ್ಗೆ ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗಳಿಗೆ ಕಾರಣ ಕೇಳಿ ನೊಟೀಸ್ ಜಾರಿಗೊಳಿಸಿದ್ದು, ಬಾಕಿ ಬಿಲ್ ಚುಕ್ತ ಮಾಡಲು ಡಿ.6ರ ಗಡುವು ನೀಡಲಾಗಿದೆ. ಟಿ ಪುಟ್ಟಸ್ವಾಮಿ
ಸಹಾಯಕ ಸಾಂಖ್ಯಿಕ ಅಧಿಕಾರಿ(ನರೇಗಾ), ರಾಮನಗರ.
ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

