ಬೆಂಗಳೂರು ಗ್ರಾಮಾಂತರ

ಅನುದಾನ ಸಮರ್ಪಕ ವಿತರಣೆಗೆ ಗಮನಹರಿಸಿ

Published On :

ಹೊಸಕೋಟೆ: ಸರಕಾರಿ ಅಧಿಕಾರಿಗಳು ಸರಕಾರದ ಸೌಲಭ್ಯಗಳನ್ನು ಅರ್ಹರಿಗೆ ವಿತರಿಸಲು ಆದ್ಯತೆ ನೀಡಬೇಕು ಎಂದು ಶಾಸಕ ಎನ್.ನಾಗರಾಜ್ ಸೂಚಿಸಿದರು.
ಅವರು ತಾಲೂಕು ಕಚೇರಿ ಆವರಣದಲ್ಲಿ ಗ್ರಾಮಾಂತರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಂವಿಧಾನಾತ್ಮಕವಾಗಿ ಲಭ್ಯವಿರುವ ಮಾನವ ಹಕ್ಕುಗಳ ಬಗ್ಗೆ ಸಾರ್ವಜನಿಕರಿಗೆ ಜಾಗೃತಿ ಮೂಡಿಸಬೇಕಾದ್ದು  ಅತ್ಯವಶ್ಯವಾಗಿದೆ. ಯಾವುದೇ ಕಾನೂನು ಉಲ್ಲಂಘನೆ, ಕಾನೂನುಬಾಹಿರ ಚಟುವಟಿಕೆಗಳು ಕಂಡುಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತರಬೇಕಾದ್ದು ಪ್ರತಿಯೊಬ್ಬರ ಕರ್ತವ್ಯವಾಗಿದೆ. ಸರ್ವರಿಗೂ ಸಮಾನತೆ,ಸಮಬಾಳು ದೊರಕಿದಲ್ಲಿ ಮಾತ್ರ ಉತ್ತಮ  ಸಮಾಜ ನಿರ್ಮಾಣಗೊಳ್ಳಲು ಸಾಧ್ಯ.ಈ ನಿಟ್ಟಿನಲ್ಲಿ ಜನಪ್ರತಿನಿಧಿಗಳು ನಿಷ್ಪಕ್ಷ  ಪಾತವಾಗಿ ಕಾರ್ಯನಿರ್ವಹಿಸಿ ಅಧಿಕಾರಿಗಳು ಸರಕಾರದ ಅನುದಾನಗಳನ್ನು ಸಮರ್ಪಕವಾಗಿ ಜಾರಿಗೊಳಿಸಬೇಕಾಗಿದೆ. ಹಲವಾರು ಕಾರಣಗಳಿಂದಾಗಿ ಸೌಲಭ್ಯಗಳ ವಿತರಣೆಯಲ್ಲಿ ಲೋಪದೋಷಗಳು ಸಂಭವಿಸುತ್ತಿರುವುದು ದುರದೃಷ್ಟಕರ ಎಂದರು.
ಜಿಲ್ಲಾ ಪಂಚಾಯಿತಿ ಅಧ್ಯಕ್ಷ ವಿ.ನಾರಾಯಣಸ್ವಾಮಿ ಮಾತನಾಡಿ ಅವಕಾಶಗಳಿಂದ ವಂಚಿತರಾದವರಿಗೆ ಸರಕಾರದ ಯೋಜನೆಗಳ ಮೂಲಕ ಮುಖ್ಯವಾಹಿನಿಗೆ ತರಬೇಕಾಗಿದ್ದು ನಾಗರಿಕ ಹಕ್ಕುಗಳ ರಕ್ಷಣೆಗೂ ಸಹ ಗಮನಹರಿಸಲಾಗುತ್ತಿದೆ.ಸರಕಾರೇತರ ಸಂಸ್ಥೆಗಳ ಜನರಲ್ಲಿ ಅರಿವು ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ.ಗ್ರಾಮ ಪಂಚಾಯಿತಿ ಪಿಡಿಓಗಳು ಅಸಹಾಯಕರಿಗೆ ಸವಲತ್ತುಗಳನ್ನು ನೀಡಲು ಪ್ರಥಮ ಆದ್ಯತೆ ನೀಡಿದಲ್ಲಿ ಮಾತ್ರ ಸಮಾಂಗೀಣ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಮಹಿಳೆಯರಿಗೆ ಮಾಹಿತಿ: ಜಿಲ್ಲಾಧಿಕಾರಿ ವಿ.ಶಂಕರ್ ಮಾತನಾಡಿ ಕೇವಲ ಅಧಿಕಾರಿಗಳಿಗೆ, ಸಿಬ್ಬಂದಿಗೆ ಮಾನವ ಹಕ್ಕುಗಳ ಬಗ್ಗೆ ಅರಿವು ಮೂಡಿಸಲಾಗುತ್ತಿದ್ದು, ಸಾರ್ವಜನಿಕರಿಗೆ ವಿಶೇಷವಾಗಿ ಮಹಿಳೆಯರಿಗೆ ಹೆಚ್ಚಿನ ಮಾಹಿತಿ ನೀಡುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥಪಡಿಸಲು ಜಿಲ್ಲಾ ಮಟ್ಟದ ಸಮಿತಿಯನ್ನು ರಚಿಸಲಾಗಿದೆ. ನಿಷೇಧಗೊಂಡಿರುವ ಶಿಕ್ಷಾರ್ಹ ಅಪರಾಧವಾದ ಭಿಕ್ಷಾಟನೆಯಲ್ಲಿ ತೊಡಗಿರುವವರಿಗೆ ನಿರಾಶ್ರಿತರ ಪುರ್ನಸತಿ ಕೇಂದ್ರ ಸ್ಥಾಪಿಸಲಾಗಿದೆ. ನಿರಾಶ್ರಿತರಿಗೆ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಗೆ ನೇಮಿಸಿಕೊಂಡು ಜೀವನಭದ್ರತೆ ನೀಡುವುದರೊಂದಿಗೆ ಮತದಾರರ ಪಟ್ಟಿಯಲ್ಲೂ ಸಹ ಸೇರ್ಪಡೆ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಬೆಂಗಳೂರಿನ ಅಪ್ಸಾ ಸಂಸ್ಥೆ ಪ್ರತಿನಿಧಿ ಲಕ್ಷಪತಿ ಬಾಲಕಾರ್ಮಿಕ ಪದ್ಧತಿ, ಮಕ್ಕಳ ಹಕ್ಕುಗಳ ಉಲ್ಲಂಘನೆ, ಇಂಡೋ ಗ್ಲೋಬಲ್ ಸೋಷಿಯಲ್ ಸರ್ವೀಸ್ ಸೊಸೈಟಿಯ ರಶ್ಮಿ ವಸತಿರಹಿತರ ಸಮಸ್ಯೆ, ನ್ಯೂ ಡಾನ್ ರಿಹ್ಯಾಬಿಲಿಟೇಶನ್ ಟ್ರಸ್ಟ್ನ ಸೈಯದ್ ರುಕ್ಸಾನ ಹಸನ್ ಕೌಟುಂಬಿಕ ಸಮಸ್ಯೆ ಬಗ್ಗೆ, ಸಿಎಫ್ಎಆರ್ನ ಎನ್. ಸುಧಾ, ರೇಖಾ, ಮೇರಿ, ಸರಕಾರಿ ಅಸ್ಪತ್ರೆಗಳಲ್ಲಿ ಅಸಮರ್ಪಕ ಸೇವೆ, ಆರೋಗ್ಯದ ಹಕ್ಕಿನ ಬಗ್ಗೆ,
ವಕೀಲ ಡಾ.ಎಂ.ವಿಷ್ಣು ಹೆಗಡೆ ಕಾನೂನಿನಡಿ ಸಮನ್ವಯತೆಗೆ ಇರುವ ಅವಕಾಶಗಳ ಬಗ್ಗೆ ವಿವರಿಸಿದರು.
ತಾಲೂಕು ಪಂಚಾಯಿತಿ ಸದಸ್ಯೆ ಕಮಲಾಕ್ಷಿ ರಾಜಣ್ಣ  ಮಾತನಾಡಿದರು. ಉಪವಿಭಾಗಾಧಿಕಾರಿ ಮಂಜುನಾಥ್, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಎನ್.ಕೃಷ್ಣಪ್ಪ,ತಾಲೂಕು ಪಂಚಾಯಿತಿ ಅಧ್ಯಕ್ಷೆ ರಾಣಿ ರಾಮಚಂದ್ರ,ಸದಸ್ಯ ಗೋಪಾಲಪ್ಪ, ಕಾರ್ಯನಿರ್ವಹಣಾಧಿಕಾರಿ ದ್ಯಾಮಪ್ಪ,ದೇವನಹಳ್ಳಿ ತಹಶೀಲ್ದಾರ್ ವೆಂಕಟರಾಜು ಮುಂತಾದವರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.