ಬೆಂಗಳೂರು ಗ್ರಾಮಾಂತರ

ಏಕರೂಪ ಶಿಕ್ಷಣ ವ್ಯವಸ್ಥೆ ಜಾರಿಗೆ ತನ್ನಿ

Published On :

ಕ.ಪ್ರ.ವಾರ್ತೆ ರಾಮನಗರ ಡಿ.15
ಶಿಕ್ಷಣವನ್ನು ಸಾರ್ವಜನಿಕ ಸೇವೆಯಾಗಿ ಪರಿವರ್ತಿಸಿ, ಎಲ್ಲಾ ಮಕ್ಕಳಿಗೂ ಸಮಾನ ಗುಣಮಟ್ಟದ ಶಿಕ್ಷಣ ಒದಗಿಸಬಲ್ಲ ಏಕರೂಪ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತರಬೇಕು ಎಂದು ಸಾಹಿತಿ ಡಾ.ಬಂಜಗೆರೆ ಜಯಪ್ರಕಾಶ್ ಸರ್ಕಾರವನ್ನು ಒತ್ತಾಯಿಸಿದರು.
ನಗರದ ಸ್ಫೂರ್ತಿ ಭವನದಲ್ಲಿ ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆ ಮತ್ತು ಮಹಿಳಾ ಶಕ್ತಿ ವೇದಿಕೆಯು ಭಾನುವಾರ ಹಮ್ಮಿಕೊಂಡಿದದ ಅರಿವು ಆಂದೋಲನ ಕೈಪಿಡಿ ಬಿಡುಗಡೆ ಹಾಗೂ ಅಂತರ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪ್ರಜಾ ಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನೂ ಸಮಾನ ಹಕ್ಕು ಬಾಧ್ಯತೆಗಳನ್ನು ಪಡೆದುಕೊಂಡಿರುತ್ತಾನೆ. ಎಲ್ಲರಿಗೂ ಏಕರೂಪ ಶಿಕ್ಷಣ ನೀಡಬೇಕಾದ ಸರ್ಕಾರವೇ ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ಪರೋಕ್ಷ ಬೆಂಬಲ ನೀಡುವ ಮೂಲಕ ಸಮಾಜದಲ್ಲಿ ಅಸಮಾನತೆ ಹೆಚ್ಚಾಗಲು ಕಾರಣವಾಗಿದೆ ಎಂದು ಆರೋಪಿಸಿದರು.
ಶಿಕ್ಷಣ ಮೂಲಭೂತ ಹಕ್ಕಾಗಿದ್ದರೂ ಸಹ ನಮ್ಮ ಶಿಕ್ಷಣ ಪದ್ಧತಿಯು ಅಸಮಾನತೆ ಮತ್ತು ತಾರತಮ್ಯದಿಂದ ಕೂಡಿದೆ. ಬಡ ಮಕ್ಕಳು ಮಾತೃ ಭಾಷಾ ಮಾಧ್ಯಮದ ಸರ್ಕಾರಿ ಶಾಲೆಗಳಲ್ಲಿ ಕಲಿಯುತ್ತಿದ್ದರೆ, ಶ್ರೀಮಂತರ ಮಕ್ಕಳು ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಆಂಗ್ಲ ಭಾಷೆಯ ಮಾಧ್ಯಮದ ಶಿಕ್ಷಣ ಪಡೆಯುತ್ತಿದ್ದಾರೆ. ಇದರಿಂದ ಅಸಮಾನತೆ ಉಂಟಾಗುತ್ತಿದೆ ಎಂದರು.
ಮಾತೃ ಭಾಷೆ ಮೂಲಕ: ಶಿಕ್ಷಣ ತಜ್ಞರು ಪ್ರತಿಪಾದಿಸುವಂತೆ ಎಲ್ಲಾ ಮಕ್ಕಳು ತಮ್ಮ ನೆರೆಹೊರೆಯ ಸಮಾನ ಶಾಲೆಗಳಲ್ಲಿ ಮಾತೃಭಾಷೆಯ ಮೂಲಕ ಸಮಾನ ಶಿಕ್ಷಣ ಪಡೆಯಬೇಕು. ಆದರೆ, ಇಂದು ಶಿಕ್ಷಣ ಮಾರಾಟದ ಸರಕಾಗಿದ್ದು, ದಿನದಿಂದ ದಿನಕ್ಕೆ ಖಾಸಗೀಕರಣವಾಗುತ್ತಿದೆ. ಇದು ಸಾಮಾನ್ಯರ ಸ್ವತ್ತಾಗಲು ಏಕ ರೂಪ ಸಮಾನ ಶಿಕ್ಷಣವನ್ನು ಜಾರಿಗೆ ತರುವ ಅವಶ್ಯಕತೆಯಿದೆ ಎಂದು ಹೇಳಿದರು.
ಸರ್ಕಾರ ನಡೆಸುತ್ತಿರುವ ಸಚಿವರೇ ಖಾಸಗಿ ಶಿಕ್ಷಣ ಸಂಸ್ಥೆಗಳ ಮಾಲೀಕರಾಗಿದ್ದಾರೆ. ಆದ್ದರಿಂದ ಖಾಸಗಿ ಶಿಕ್ಷಣ ಸಂಸ್ಥೆಗಳ ಮೇಲೆ ಸರ್ಕಾರ ತನ್ನ ಹಿಡಿತವನ್ನು ಸಡಿಲಗೊಳಿಸಿದೆ. ಸರ್ಕಾರಿ ಶಾಲೆಗಳಲ್ಲಿನ ಗುಣಮಟ್ಟದ ನೆಪವೊಡ್ಡಿ, ಹಂತ ಹಂತವಾಗಿ ಸರ್ಕಾರಿ ಶಾಲೆಗಳನ್ನು ಮುಚ್ಚಿಸುವುದು ಇದರ ಹಿಂದಿನ ಕುತಂತ್ರವಾಗಿದೆ ಎಂದರು.
ಹೆಚ್ಚುತ್ತಿದೆ ಜಾತಿ ವ್ಯವಸ್ಥೆ: ಸರ್ಕಾರಿ ಶಾಲೆಗಳಲ್ಲಿ ಕೃಷಿಕರು, ಕೂಲಿ ಕಾರ್ಮಿಕರ ಮಕ್ಕಳು ಮಾತ್ರ ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಸರ್ಕಾರಿ ನೌಕರರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ದಾಖಲು ಮಾಡುತ್ತಿದ್ದಾರೆ. ಇದರಿಂದ ದಿನದಿಂದ ದಿನಕ್ಕೆ ಜಾತಿ ವ್ಯವಸ್ಥೆ ಹೆಚ್ಚುತ್ತಲೇ ಇದೆ. ಇಂದಿನ ಶಿಕ್ಷಣ ಪದ್ಧತಿ ಸಮಾನತೆಯನ್ನು ಹುಟ್ಟುಹಾಕುವ ಬದಲು ಅಸಮಾನತೆಯ ಕಂದಕವನ್ನು ನಿರ್ಮಿಸುತ್ತಿದೆ ಎಂದರು.
ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆ ಜಿಲ್ಲೆಯಲ್ಲಿ ಹಮ್ಮಿಕೊಂಡಿದ್ದ ಅಂತರ ಕಾಲೇಜು ಮಟ್ಟದ ಚರ್ಚಾ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅರಿವು ಆಂದೋಲನ ಪುಸ್ತಕವನ್ನು ಬಿಡುಗಡೆಗೊಳಿಸಲಾಯಿತು.
ನಿವೃತ್ತ ಪ್ರಾಧ್ಯಾಪಕ ಕೆ.ಪಿ.ಶ್ರೀಕಾಂತ, ದಲಿತ ಮುಖಂಡ ರಾ.ಸಿ.ದೇವರಾಜು, ಮಹಿಳಾ ಶಕ್ತಿ ವೇದಿಕೆಯ ಸಾಕಮ್ಮ, ಸಮಾನ ಶಿಕ್ಷಣಕ್ಕಾಗಿ ನಾಗರಿಕ ವೇದಿಕೆಯ ಜಿಲ್ಲಾ ಘಟಕದ ಸಂಚಾಲಕಿ ನಾಗರತ್ನ ಬಂಜಗೆರೆ,  ತಾಲೂಕು ಸಂಚಾಲಕ ವಿಜಯ್ ರಾಂಪುರ, ಉಪನ್ಯಾಸಕ ಡಾ.ಪಾರ್ಥ, ಸಿ.ರಮೇಶ್ ಮತ್ತಿತರರು ಭಾಗವಹಿಸಿದ್ದರು.

ಗಮನ ಹರಿಸಲಿ
ಪಠ್ಯದಲ್ಲಿನ ತಾರತಮ್ಯಗಳನ್ನು ತೊಡೆದು ಹಾಕಿ ಪ್ರತಿ ಮಕ್ಕಳಿಗೂ ಗುಣಮಟ್ಟದ ಹಾಗೂ ಮೌಲ್ಯಯುತ ಶಿಕ್ಷಣ ನೀಡುವ ಕಡೆಗೆ ಸರ್ಕಾರ ಗಮನಹರಿಸಬೇಕಾಗಿದೆ. ಇದರಿಂದ ಇಡಿ ವಿಶ್ವದಲ್ಲಿ ಜಾತ್ಯತೀತ ರಾಷ್ಟ್ರವೆಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಭಾರತದಲ್ಲಿ ನಶಿಸಿ ಹೋಗುತ್ತಿರುವ ಹಲವು ಭಾಷೆಗಳು ಮುಂದಿನ ಪೀಳಿಗೆಗೆ ಉಳಿಯುತ್ತವೆ ಎಂದು ಅವರು ತಿಳಿಸಿದರು.
ಸಮಾಜದ ಮುಂದಿನ ವಾರಸುದಾರರು ಯಾವ ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂಬುದನ್ನು ತಿಳಿದು, ಅದನ್ನು ಶಿಕ್ಷಣದ ಮೂಲಕ ಒದಗಿಸುವುದು ಸರ್ಕಾರದ ಜವಾಬ್ದಾರಿ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಎಲ್ಲರೂ ಸಾಮಾಜಿಕವಾಗಿ ಹಾಗೂ ರಾಜಕೀಯವಾಗಿ ಸಮಾನವಾಗಿ ಬೆಳೆಯಬೇಕಾದರೆ ಎಲ್ಲಾ ಮಕ್ಕಳು ಕಡ್ಡಾಯವಾಗಿ ಉಚಿತವಾಗಿ ಸಮಾನ ಶಿಕ್ಷಣ ಪಡೆಯಬೇಕು ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಎಚ್.ಡಿ.ಲಿಂಗರಾಜು ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.