'ದೇಶ ಒಗ್ಗೂಡಿಸಲು ಶ್ರಮಿಸಿದ್ದ ಪಟೇಲ್'
ಹೊಸಕೋಟೆ: ರಾಷ್ಟ್ರದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿನ ಸಂಸ್ಥಾನಗಳನ್ನು ಒಗ್ಗೂಡಿ ಸಂಯುಕ್ತ ಭಾರತ ದೇಶ ನಿರ್ಮಾಣ ಮಾಡುವಲ್ಲಿ ಸರ್ದಾರ್ ಪಟೇಲ್ ಪ್ರಮುಖ ಪಾತ್ರ ವಹಿಸಿದ್ದರು ಎಂದು ಮಾಜಿ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.
ಅವರು ಪಟ್ಟಣದ ಚನ್ನಬೈರೇಗೌಡ ಕ್ರೀಡಾಂಗಣದಲ್ಲಿ ಗ್ರಾಮಾಂತರ ಜಿಲ್ಲಾ ಲೋಹ ಸಂಗ್ರಹ ಸಹಕಾರ ಸಮಿತಿ ಏರ್ಪಡಿಸಿದ್ದ ಏಕತಾ ಓಟಕ್ಕೆ ಚಾಲನೆ ನೀಡಿ ಮಾತನಾಡಿದರು. ಯಾವುದೇ ಸ್ವಹಿತಾಸಕ್ತಿ, ಪದವಿಗಳಿಗೆ ಆಕಾಂಕ್ಷೆ ಹೊಂದದೆ ನಿಸ್ವಾರ್ಥ ಸೇವೆ ಸಲ್ಲಿಸಿದ ಮಹಾನ್ ವ್ಯಕ್ತಿಯ ಸ್ಮರಣಾರ್ಥ ಗುಜರಾತ್ನಲ್ಲಿ ನಿರ್ಮಿಸಲಿರುವ ಬೃಹತ್ ಪ್ರತಿಮೆಗೆ ಲೋಹ ಸಂಗ್ರಹಿಸುವ, ಜನರಲ್ಲಿ ರಾಷ್ಟ್ರಪ್ರೇಮ ಬೆಳೆಸುವ, ರಾಷ್ಟ್ರನಾಯಕರ ಬಗ್ಗೆ ಗೌರವ, ಉತ್ತಮ ಭಾವನೆ ಮೂಡಿಸುವ ಉದ್ದೇಶದಿಂದ ಈ ಓಟವನ್ನು ಆಯೋಜಿಸಲಾಗಿದೆ. ರಾಷ್ಟ್ರದ ಎಲ್ಲ ಜಿಲ್ಲೆಗಳಲ್ಲೂ ಏಕಕಾಲದಲ್ಲಿ ಪ್ರಾರಂಭಗೊಂಡಿದೆ. ತಾಲೂಕಿನಲ್ಲಿ 300 ಕೆಜಿ ಲೋಹ ಸಂಗ್ರಹಿಸಿ ನೀಡಲು ಉದ್ದೇಶಿಸಿದ್ದು ಜನರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹುಟ್ಟುಹಬ್ಬದ ಪ್ರಯುಕ್ತ ಪಟ್ಟಣದಲ್ಲಿ ಡಿ.21ರಿಂದ 3 ದಿನಗಳ ಕಾಲ ತಾಲೂಕು ಮಟ್ಟದ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಏರ್ಪಡಿಸಲಾಗುವುದು ಎಂದು ತಿಳಿಸಿದರು. ಲೋಹ ಸಂಗ್ರಹಣ ಸಹಕಾರ ಸಮಿತಿ ಸಂಚಾಲಕ ಬಿ.ಎಂ.ನಾರಾಯಣಸ್ವಾಮಿ ಮಾತನಾಡಿದರು. ಸಮಿತಿಯ ಜಿಲ್ಲಾಧ್ಯಕ್ಷ ವಿ.ಸಿ. ನಾರಾಯಣಸ್ವಾಮಿ, ಟಿಎಪಿಎಂಎಸ್ ಅಧ್ಯಕ್ಷ ಟಿ. ಸೊಣ್ಣಪ್ಪ, ಗ್ರಾಮಾಂತರ ಜಿ.ಪಂ.ಅಧ್ಯಕ್ಷ ವಿ.ನಾರಾಯಣಸ್ವಾಮಿ, ತಾಲೂಕು ಬಿಜೆಪಿ ಅಧ್ಯಕ್ಷ ಜಗದೀಶ್, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು. ಕ್ರೀಡಾಂಗಣದಿಂದ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಏಕತಾ ಓಟ ಸಂಚರಿಸಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

