ಬೆಂಗಳೂರು ಗ್ರಾಮಾಂತರ

ಶಾಸಕರೇ, ಇವು ಹಿಂದಿನ ಸರ್ಕಾರದ ಯೋಜನೆ

Published On :

ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಡಿ.17
ಜಕ್ಕಲ ಮಡಗು ನೀರು ದೊಡ್ಡಬಳ್ಳಾಪುರಕ್ಕೆ ನೀವು ಶಾಸಕರಾದ ಮೇಲೆ ಬಂದಿರಬಹುದು, ಆದರೆ ಅದಕ್ಕೆ ನಿಮ್ಮ ಪರಿಶ್ರಮವೇನೂ ಇಲ್ಲ ಎಂಬುದನ್ನು ಮರೆಯಬೇಡಿ. ನಗರೋತ್ಥಾನ ನಿಧಿಯಲ್ಲಿ ದೊಡ್ಡಬಳ್ಳಾಪುರ ನಗರಸಭೆಯ ಪ್ರದೇಶಾಭಿವೃದ್ಧಿಗೆ ಬಂದಿರುವ 15 ಕೋಟಿ ರಾಜ್ಯದ ಎಲ್ಲ ನಗರಸಭೆಗಳಿಗೂ ಸಂದಾಯವಾಗಿರುವಂತೆ ದೊಡ್ಡಬಳ್ಳಾಪುರಕ್ಕೂ ಬಂದಿದೆಯಷ್ಟೇ. ಇದು ಈ ಕ್ಷೇತ್ರಕ್ಕೇ ವಿಶೇಷವಾಗಿ ಬಿಡುಗಡೆಯಾದ ಹಣವೇನಲ್ಲ. ವಾಸ್ತವವನ್ನು ಜನರ ಮುಂದಿಡಿ. ನಿಮ್ಮ ಬಗ್ಗೆ ನೀವೇ ಹೇಳಿಕೊಳ್ಳಬೇಡಿ...
ದೊಡ್ಡಬಳ್ಳಾಪುರ ಶಾಸಕ ಟಿ.ವೆಂಕಟರಮಣಯ್ಯ ಅವರಿಗೆ ಬಿಜೆಪಿ ಹೇಳಿರುವ ಕಿವಿಮಾತು ಇದು.
ಶಾಸಕರು ಕಳೆದ 2 ದಿನಗಳಿಂದ ನಗರಸಭೆಯ ವಿವಿಧ ವಾರ್ಡ್‌ಗಳಲ್ಲಿ ಜನಸಂಪರ್ಕಸಭೆಗಳನ್ನು ನಡೆಸುತ್ತಾ, ಕುಂದು-ಕೊರತೆಗಳ ನಿವಾರಣೆಗೆ ತಾವು ಹಾಕಿಕೊಂಡಿರುವ ಕಾರ್ಯಯೋಜನೆಗಳನ್ನು ಜನರ ಮುಂದೆ ಪ್ರಸ್ತಾಪಿಸುತ್ತಾ, ಕೆಲ ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರದ ಕೊಡುಗೆ ಎಂದು ಹೇಳಿಕೊಂಡು ಬರುತ್ತಿರುವುದು ಆಕ್ಷೇಪಾರ್ಹ ಎಂದು ತಾಲೂಕು ಮತ್ತು ನಗರ ಬಿಜೆಪಿ ತೀವ್ರವಾಗಿ ಖಂಡಿಸಿದೆ.
ಈ ಕುರಿತು ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಪಕ್ಷದ ನಗರಾಧ್ಯಕ್ಷ ಎಚ್.ಎಸ್.ಶಿವಶಂಕರ್, ಜಿಲ್ಲಾ ಕಾರ್ಯದರ್ಶಿ ಪುಷ್ಪಾ ಕೆ.ಶಿವಶಂಕರ್ ಮತ್ತಿತರರು, ನಗರೋತ್ಥಾನ ನಿಧಿ ಬಿಜೆಪಿ ಸರ್ಕಾರದಲ್ಲಿ ಆಗಿದ್ದ ಯೋಜನೆ. ಅದೇ ರೀತಿ ಜಕ್ಕಲ ಮಡಗು ನೀರು ದೊಡ್ಡಬಳ್ಳಾಪುರಕ್ಕೆ ಬರಲು ಹಿಂದಿನ ಶಾಸಕ ಜೆ.ನರಸಿಂಹಸ್ವಾಮಿ, ಮಾಜಿ ಕೇಂದ್ರ ಸಚಿವ ಆರ್.ಎಲ್.ಜಾಲಪ್ಪ ಅವರ ಕೊಡುಗೆ ಇದೆ. ಬಿಜೆಪಿ ಸರ್ಕಾರ ಇದ್ದಾಗ ಕೊಳಗೇರಿ ವಾರ್ಡ್‌ಗಳಿಗೆ ಕುಡಿಯುವ ನೀರು ಮತ್ತು ರಸ್ತೆ ಅಭಿವೃದ್ಧಿಗೆ ಬಿಡುಗಡೆಯಾಗಿದ್ದ ಹಣದಲ್ಲಿ ಈಗಿನ ಶಾಸಕರು ಕೊಳವೆ ಬಾವಿಗಳನ್ನು ತೆಗೆಸಿದ್ದಾರೆ. ಆದರೆ ಇದನ್ನು ಕಾಂಗ್ರೆಸ್ ಸರ್ಕಾರದ ಅನುದಾನ ಎಂದು ಬಿಂಬಿಸುವ ಮೂಲಕ ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಆರೋಪಿಸಿದರು.
ನಾಮಕಾವಾಸ್ತೆ ಸಭೆ: ನಗರಸಭೆ ವಾರ್ಡ್‌ಗಳಲ್ಲಿ ನಡೆಯುತ್ತಿರುವ ಸಭೆಗಳು ನಾಮಕಾವಸ್ತೆ ಸಭೆಗಳಷ್ಟೇ. ಶಾಸಕರಿಗೆ ನಿಜವಾದ ಕಾಳಜಿ ಇದ್ದರೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಹೈಟೆಕ್ ಬಸ್ ನಿಲ್ದಾಣ, 100 ಹಾಸಿಗೆಗಳ ಆಸ್ಪತ್ರೆ, ಇಎಸ್‌ಐ ಆಸ್ಪತ್ರೆಗಳ ಕಾಮಗಾರಿ ಆರಂಭಿಸಲಿ. ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ಮಾಡಿದರೆ ಸಾಲದು, ಅವುಗಳನ್ನು ಉದ್ಘಾಟಿಸುವ ಹಂತಕ್ಕೆ ಕೊಂಡೊಯ್ಯಲಿ. ನಗರದಲ್ಲಿ ಒಳಚರಂಡಿ ಕಾಮಗಾರಿ ಚುನಾವಣಾ ಸಂದರ್ಭದಲ್ಲಿ ನಿಂತು ಹೋಗಿದ್ದು, ಮತ್ತೆ ಆರಂಭವಾಗೇ ಇಲ್ಲ. ನಗರದಲ್ಲಿ ರಸ್ತೆಗಳು ಹಾಳಾಗಿವೆ. ಧೂಳು-ಗುಂಡಿಗಳು ಇಡೀ ನಗರವನ್ನು ಆವರಿಸಿದೆ. ಈ ಕೂಡಲೇ ಶಾಸಕರು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಕೊಡಲಿ. ಹೊಸ ಯೋಜನೆಗಳನ್ನು ತರುವುದಕ್ಕೆ ಆದ್ಯತೆ ನೀಡಲಿ. ತಪ್ಪಿದಲ್ಲಿ ಬಿಜೆಪಿ ಪ್ರತಿಭಟನೆಗೆ ಮುಂದಾಗಬೇಕಾದೀತು ಎಂದು ಎಚ್ಚರಿಸಿದರು.
ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಗೋಪಿ, ಜಿಲ್ಲಾ ಕಾರ್ಯಕಾರಿಣಿ ಸದಸ್ಯ ಡಿ.ಎಲ್.ಸತ್ಯನಾರಾಯಣ್, ಮುಖಂಡರಾದ ಕೆ.ಮೋಹನ್‌ಕುಮಾರ್, ಮಹದೇವ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ವತ್ಸಲ, ನಗರ ಕಾರ್ಯದರ್ಶಿ ಮುನಿರಾಜು, ಮುದ್ದಪ್ಪ, ಕಂಬಿ ನಂಜಪ್ಪ, ನಮೋ ಬ್ರಿಗೇಡ್ ಸಂಚಾಲಕ ಮುರಳಿ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.