ಸುಬ್ರಹ್ಮಣ್ಯ, ಸತೀಶ್ಗೆ ಸಮಾಜಸೇವಾ ಪುರಸ್ಕಾರ
ಕನಕಪುರ: ಯೂತ್ ಹಾಸ್ಟಲ್ಸ್ ಅಸೋಸಿಯೇಷನ್ ಆಫ್ ಇಂಡಿಯಾ (ವೈಎಚ್ಎಐ)ಕನಕಪುರ ಶಾಖೆಯ ನಿರ್ದೇಶಕ ಹೆಚ್ಎಂಟಿ ಸುಬ್ರಹ್ಮಣ್ಯ ಹಾಗೂ ಅಧ್ಯಕ್ಷ ಜಿ.ಎನ್. ಸತೀಶ್ ಅವರಿಗೆ ದೆಹಲಿಯಲ್ಲಿ ರಾಷ್ಟ್ರಮಟ್ಟದ ಸಮಾಜಸೇವಾ ಪುರಸ್ಕಾರವನ್ನು ನೀಡಿ ಗೌರವಿಸಲಾಯಿತು. ಪ್ರಕೃತಿ, ಪರಿಸರ ಜಾಗೃತಿ, ಚಾರಣ, ಸಾಹಸ ಕಾರ್ಯಕ್ರಮಗಳು, ಪ್ರವಾಸಗಳಿಗೆ ಸೀಮಿತವಾದ ಸಂಸ್ಥೆಯಲ್ಲಿಯೂ ಗ್ರಾಮೀಣ ಪ್ರದೇಶಗಳ ಸರ್ಕಾರಿ ಶಾಲೆಗಳಲ್ಲಿನ ಮಕ್ಕಳಿಗೆ ಉಚಿತವಾಗಿ ಸ್ವಯಂ ಹೊಲಿದ ಬಟ್ಟೆಗಳನ್ನು ವಿತರಿಸುವ ಕಾರ್ಯವನ್ನು ಹಲವಾರು ವರ್ಷಗಳಿಂದ ನಿರಂತರವಾಗಿ ನಡೆಸುತ್ತಾ ಬಂದಿರುವುದನ್ನು ಪರಿಗಣಿಸಿ ಪುರಸ್ಕರಿಸಲಾಗಿದೆ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ ಗಣೇಶ್ ತಿಳಿಸಿದ್ದಾರೆ. ಇತ್ತೀಚೆಗೆ ದೆಹಲಿಯ ಯೂತ್ ಹಾಸ್ಟೆಲ್ಸ್ ಅಂತರ ರಾಷ್ಟ್ರೀಯ ಕೇಂದ್ರದ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ಕಾರ್ಯಕಾರಿಣಿ ಸಮಾವೇಶದಲ್ಲಿ ಅಂತರರಾಷ್ಟ್ರೀಯ ಯೂತ್ ಹಾಸ್ಟೆಲ್ ಚೇರ್ಮನ್ ಡಾ.ಹರೀಶ್ ಸಕ್ಸೇನಾ ಹಾಗೂ ರಾಷ್ಟ್ರೀಯ ಅಧ್ಯಕ್ಷ ವೆಂಕಟನಾರಾಯಣ ಪ್ರಶಸ್ತಿ ಪತ್ರ ನೀಡಿ ಪುರಸ್ಕರಿಸಿದರು.
ಸರ್ಕಾರದ ವಿವಿಧ ಜನಪರ ಯೋಜನೆ ಜನರಿಗೆ ತಲುಪಿಸಿ
ಕನಕಪುರ: ಸರ್ಕಾರದ ವಿವಿಧ ಜನಪರ ಯೋಜನೆಗಳನ್ನು ಪುಸ್ತಕದಲ್ಲಿ ದಾಖಲಿಸುವ ಬದಲಾಗಿ ಜನರ ಮನೆಬಾಗಿಲಿಗೆ ತಲುಪಿಸುವ, ಫಲಾನುಭವಿಗಳಿಗೆ ನೀಡುವ ಮೂಲಕ ಜಾರಿಗೊಳಿಸಿ ಎಂದು ಜಿಪಂ ಸಿಇಓ ಡಾ. ವೆಂಕಟೇಶಯ್ಯ ಹೇಳಿದ್ದಾರೆ. ಅವರು ಕನಕಪುರ ತಾಲೂಕಿನ ಕೋಡಿಹಳ್ಳಿ ಹೋಬಳಿಯ ಗ್ರಾಮ ಪಂಚಾಯತ್ಗಳಿಗೆ ಭೇಟಿ ನೀಡಿ ಅಧಿಕಾರಿಗಳಿಗೆ ಸೂಚನೆ ನೀಡುತ್ತಾ ಮಾತನಾಡಿದರು. ಜಿಪಂ ಸದಸ್ಯ ಇಕ್ಬಾಲ್ ಹುಸೇನ್ ಪಾಲ್ಗೊಂಡಿದ್ದರು. ಕೋಡಿಹಳ್ಳಿ ಜಿಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಾರ್ವಜನಿಕರ ಕುಂದುಕೊರತೆ ಆಲಿಸಲು ಆಯೋಜಿಸಿದ್ದ ಪ್ರವಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಡಾ. ವೆಂಕಟೇಶಯ್ಯ ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ ಅಹವಾಲುಗಳನ್ನು ಸ್ವೀಕರಿಸಿದರು. ಸರ್ಕಾರವು ಪ್ರತಿಯೊಂದು ಇಲಾಖೆಗೂ ಅನೇಕ ಯೋಜನೆಗಳನು ನೀಡುತ್ತಿದೆ. ಆದರೆ ಅವುಗಳು ಅರ್ಹ ಫಲಾನುಭವಿಗಳನ್ನು ತಲಪದಿರುವುದು ವಿಪರ್ಯಾಸವಾಗಿದೆ, ಪಂಚಾಯತ್ ಅಧಿಕಾರಿಗಳು ಜನಪರ ಕಾಳಜಿ ಪ್ರದರ್ಶಿಸಿ ಸಮಸ್ಯೆಗಳಿಗೆ ಸಕಾರಾತ್ಮಕವಾಗಿ ಸ್ಪಂದಿಸಬೇಕಾಗಿದೆ ಎಂದು ಹೇಳಿದರು. ಜಿಪಂ ಸದಸ್ಯ ಇಕ್ಬಾಲ್ ಹುಸೇನ್ ಮಾತನಾಡಿ, ತಾಲೂಕಿನಲ್ಲಿ ನರೇಗಾ ಯೋಜನೆಯಲ್ಲಿ ಕೋಟ್ಯಂತರ ವೆಚ್ಚದ ಕಾಮಗಾರಿಗಳು ಜಾರಿಯಲ್ಲಿವೆ. ಬಯಲು ಬಹಿರ್ದೆಸೆ ತಡೆಯಲು ಶೌಚಾಲಯ ನಿರ್ಮಾಣ, ಕೊಟ್ಟಿಗೆ ನಿರ್ಮಾಣ, ಕುರಿ ಕೋಳಿ ಸಾಕಾಣಿಕಾ ಕೇಂದ್ರ ನಿರ್ಮಾಣ, ಎರೆಹುಳು ಗೊಬ್ಬರ ಗುಂಡಿ ನಿರ್ಮಾಣ, ಕೃಷಿ ಚಟುವಟಿಕೆ, ಪರಿಸರ ಚಟುವಟಿಕೆಗಳಿಗೆ ಸರ್ಕಾರ ನೀಡುತ್ತಿರುವ ನೆರವನ್ನು ಸಾರ್ವಜನಿಕರು ಬಳಸಿಕೊಳ್ಳಬೇಕು ಎಂದು ಕರೆ ನೀಡಿದರು. ಜಿಪಂ ಸದಸ್ಯೆ ಲಕ್ಷ್ಮಮ್ಮ ಮುನಿಹುಚ್ಚೇಗೌಡ, ಪಿಡಿಓ ಹನುಮಪ್ಪರೇಣಿ, ನಾಗರಾಜ್, ಅಧ್ಯಕ್ಷೆ ಮುನಿರತ್ನಮ್ಮ, ವೆಂಕಟೇಶ್, ಚಂದ್ರು, ಸಾವಿತ್ರಮ್ಮ ಪಾಲ್ಗೊಂಡಿದ್ದರು. ತಂಡವು ಕೋಡಿಹಳ್ಳಿ ಜಿಪಂ ವ್ಯಾಪ್ತಿಯ ಹೇರಿಂದ್ಯಾಪನಹಳ್ಳಿ, ಕೊಳಗೊಂಡನಹಳ್ಳಿ, ಗಟ್ಟಿಗುಂದ, ಹುಣಸನಹಳ್ಳಿ, ಹೊಸದುರ್ಗ ಗ್ರಾಪಂ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿತು.
ಅಂಗಡಿ ಮಳಿಗೆಗಳ ಬಹಿರಂಗ ಹರಾಜು
ಕನಕಪುರ: ಕನಕಪುರ ತಾಲೂಕು ಸಂತೇಕೋಡಿಹಳ್ಳಿ ಗ್ರಾಮದಲ್ಲಿ ಪಂಚಾಯತ್ ವತಿಯಿಂದ ಇಲ್ಲಿನ ಹೊಳೆಬೀದಿಯಲ್ಲಿ ನಿರ್ಮಿಸಿದ್ದ ಅಂಗಡಿ ಮಳಿಗೆಗಳ ಬಹಿರಂಗ ಹರಾಜು ಗ್ರಾಪಂ ಅಧ್ಯಕ್ಷೆ ಮೀರಾ ಶಿವರಾಜು ಅಧ್ಯಕ್ಷತೆಯಲ್ಲಿ ನಡೆಯಿತು. ಪಿಡಿಓ ಲೋಕೇಶ್ ಹರಾಜು ಪ್ರಕ್ರಿಯೆಯನ್ನು ನೆರವೇರಿಸಿದರು. ಸದ್ಯದಲ್ಲಿಯೇ ಕೋಡಿಹಳ್ಳಿ ಗ್ರಾಮದ ಮಧ್ಯೆ ಹಾದು ಹೋಗಲಿರುವ ಅಂತರ ರಾಜ್ಯ ಮುಖ್ಯರಸ್ತೆಗಾಗಿ ರಸ್ತೆ ಅಗಲೀಕರಣ ಪ್ರಕ್ರಿಯೆಗೆ ಚಾಲನೆ ದೊರೆಯಲಿದ್ದು ಮಳಿಗೆಗಳು ಕಳೆದುಕೊಳ್ಳಲಿರುವ ವ್ಯಾಪಾರಸ್ತರು ಬದಲೀ ಸ್ಥಳಕ್ಕಾಗಿ ಹರಾಜಿನಲ್ಲಿ ಹೆಚ್ಚಾಗಿ ಪಾಲ್ಗೊಂಡಿದ್ದರು. ಲಭ್ಯ 14 ಮಳಿಗೆಗಳಿಗೆ ಗರಿಷ್ಠ ಮಾಸಿಕ 5,200 ರಿಂದ ಕನಿಷ್ಠ 1,800 ವರೆಗೆ ಬಾಡಿಗೆ ದರ ದೊರೆಯಿತು. ಪ್ರತಿಯೊಂದು ಅಂಗಡಿಗೂ ಭದ್ರತಾ ಠೇವಣಿಯಾಗಿ 50 ಸಾವಿರ ನಿಗದಿಗೊಳಿಸಲಾಗಿತ್ತು. ಈ ಹಿಂದೆ ಸದರೀ ಮಳಿಗೆಗಳಲ್ಲಿ ಕೋಡಿಹಳ್ಳಿ ಸರ್ಕಾರಿ ಪದವಿ ಕಾಲೇಜು ಕಾರ್ಯ ನಿರ್ವಹಿಸುತ್ತಿತ್ತು. ಹರಾಜಿನಿಂದಾಗಿ ಕೋಡಿಹಳ್ಳಿ ಗ್ರಾಪಂಗೆ ಲಕ್ಷಾಂತರ ಲಾಭವಾಗಿದೆ ಎಂದು ಮೀರಾ ಶಿವರಾಜು ತಿಳಿಸಿದರು.
ಚಿರತೆ ದಾಳಿಗೆ ಹಸು ಬಲಿ
ಮಾಗಡಿ: ತಾಲೂಕಿನ ಲಕ್ಕೇನಹಳ್ಳಿ ಸುತ್ತಮುತ್ತ ಚಿರತೆ ಹಾವಳಿ ಹೆಚ್ಚಾಗಿದ್ದು, ಮನೆಯ ಮುಂದೆ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಚಿರತೆ ದಾಳಿ ಮಾಡಿದ ಪರಿಣಾಮ ಹಸುವೊಂದು ಬಲಿಯಾಗಿದೆ. ಲಕ್ಕೇನಹಳ್ಳಿ ಪಂಚಾಯ್ತಿ ವ್ಯಾಪ್ತಿಯ ಕಾಳೀಪಾಳ್ಯದ ನಾಗರಾಜು ಅವರಿಗೆ ಸೇರಿದ ಹಸುವನ್ನು ಮಂಗಳವಾರ ಸಂಜೆ ಚಿರತೆ ಬಲಿ ತೆಗೆದುಕೊಂಡಿದೆ. ಕಳೆದ 3 ದಿನಗಳ ಹಿಂದೆಯಷ್ಟೆ ಎಣ್ಣೆಗೆರೆ ಗ್ರಾಮದ ಗಂಗಾಧರಯ್ಯ ಹಾಗೂ ರಾಮಯ್ಯ ಅವರಿಗೆ ಸೇರಿದ ಹಸುವಿನ ಮೇಲೆ ಸಹ ಚಿರತೆ ದಾಳಿ ನಡೆಸಿದ್ದರಿಂದ ಎರಡು ಹಸುಗಳು ಸಾವನ್ನಪ್ಪಿವೆ. ಚಿರತೆ ಹಾವಳಿಯಿಂದ ರೈತ ಮಹಿಳೆಯರು, ಮಕ್ಕಳು, ರೈತರು ತಮ್ಮ ಹೊಲ, ಗದ್ದೆ, ತೋಟಗಳಿಗೆ ಹೋಗಲು ಭಯಭೀತರಾಗಿದ್ದಾರೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿದರೂ ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಲಕ್ಕೇನಹಳ್ಳಿ ಗ್ರಾ.ಪಂ. ಮಾಜಿ ಅಧ್ಯಕ್ಷ ಎಚ್.ಗಂಗರಾಜು ಆಕ್ರೋಶ ವ್ಯಕ್ತಪಡಿಸಿದರು. ಹೆಸರಿಗೆ ಮಾತ್ರ ಅರಣ್ಯ ಇಲಾಖೆ ಇದೆ. ರೈತರ ಕಷ್ಟ, ಸುಖಗಳಿಗೆ ಸ್ಪಂದಿಸುತ್ತಿಲ್ಲ. ನಮ್ಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಚಿರತೆ ದಾಳಿಗೆ ಮೂರು ಹಸುಗಳು ಬಲಿಯಾದರೂ ಅಧಿಕಾರಿಗಳು ಹಿಂತಿರುಗಿ ನೋಡಿಲ್ಲ. ಚಿರತೆ ಮನುಷ್ಯರ ಮೇಲೆ ದಾಳಿ ಮಾಡುವ ಮುನ್ನ ಎಚ್ಚೆತು ಅರಣ್ಯ ಇಲಾಖೆ ಅಧಿಕಾರಿಗಳು ಕೂಡಲೆ ಸ್ಥಳಕ್ಕೆ ಭೇಟಿ ನೀಡಿ ಚಿರತೆಯನ್ನು ಹಿಡಿದು ದೂರದ ಅರಣ್ಯ ಪ್ರದೇಶಕ್ಕೆ ಬಿಡಬೇಕು. ಜೀವನಕ್ಕೆ ಆಧಾರವಾಗಿದ್ದ ಹಸುವನ್ನು ಕಳೆದುಕೊಂಡ ರೈತರಿಗೆ ಸಾಂತ್ವನ ಹೇಳಬೇಕು. ಸೂಕ್ತ ಪರಿಹಾರ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಬೇಕು. ಇಲ್ಲದಿದ್ದರೆ ರೈತರೆಲ್ಲರೂ ಸೇರಿ ಅರಣ್ಯ ಇಲಾಖೆಗೆ ಬೀಗ ಜಡಿದು ತೀವ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿದ್ದಾರೆ.
ತಂತಿ ತುಳಿದು ಸಾವನ್ನಪ್ಪಿದ ಮಕ್ಕಳ ಕುಟುಂಬಕ್ಕೆ 4 ಲಕ್ಷ ಪರಿಹಾರ
ಬೆಂಗಳೂರು: ಅತ್ತಿಬೆಲೆ ಸಮೀಪ ಕಡಿದು ಬಿದ್ದಿದ್ದ ಬೆಸ್ಕಾಂ ವಿದ್ಯುತ್ ತಂತಿ ತುಳಿದು ಮೃತಪಟ್ಟ ಜಿಂಟು ದಾಸ್ (10) ಹಾಗೂ ವಾನುಸ್ಮಿತಾ ದಾಸ್ (8) ಕುಟುಂಬಕ್ಕೆ ಬೆಸ್ಕಾಂ 4 ಲಕ್ಷ ಪರಿಹಾರ ವಿತರಿಸಿದೆ. ಡಿ.12 ರಂದು ಅತ್ತಿಬೆಲೆ ಬಾಳಗಾರನಹಳ್ಳಿ ನಿವಾಸಿ ದೀಪಕ್ ದಾಸ್ ಹಾಗೂ ಪ್ರಣೀತಾ ದಾಸ್ ದಂಪತಿಯ ಇಬ್ಬರು ಮಕ್ಕಳು ಬಳಿ ತಿಂಡಿ ತರಲು ಮನೆಯಿಂದ ಅಂಗಡಿಗೆ ಹೋಗುತ್ತಿದ್ದ ವೇಳೆ ಕಡಿದು ಬಿದ್ದಿದ್ದ ಬೆಸ್ಕಾಂ ತಂತಿ ತುಳಿದು ಮೃತಪಟ್ಟಿದ್ದರು.
ವಿಶ್ವ ವಿಕಲಚೇತನರ ದಿನಾಚರಣೆ
ರಾಮನಗರ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ವಿಕಲಚೇತನರ ಏಳ್ಗೆಗಾಗಿ ಶ್ರಮಿಸುತ್ತಿರುವ ಸರ್ಕಾರೇತರ ಸಂಘ-ಸಂಸ್ಥೆಗಳ ಸಂಯುಕ್ತಾಶ್ರಯದಲ್ಲಿ ಡಿ.20ರ ಬೆಳಗ್ಗೆ 11ಕ್ಕೆ ನಗರದ ಅಂಬೇಡ್ಕರ್ ಭವನದಲ್ಲಿ ವಿಶ್ವ ವಿಕಲಚೇತನರ ದಿನಾಚರಣೆಯನ್ನು ಏರ್ಪಡಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

