ಎಗ್ಗಿಲ್ಲದೆ ಸಾಗಿದೆ ಅಧಿಕಾರಿಗಳ ವಸೂಲಿಬಾಜಿ
-ವಿಶೇಷ ವರದಿ
ರಾಮನಗರ: ಅರಾಜಕತೆ ಮತ್ತು ಅದ್ವಾನಗಳ ಆಗರವಾಗಿರುವ ರಾಮನಗರ ನಗರಸಭೆಯಲ್ಲಿ ಅಧಿಕಾರಿಗಳ ವಸೂಲಿಬಾಜಿ ಎಗ್ಗಿಲ್ಲದೆ ಸಾಗಿದೆ. ಪರವಾನಗಿ ಇಲ್ಲದೆ ಕಟ್ಟಡ ಕಟ್ಟಡುವಾಗ ಜಾಣ ಕುರುಡುತನ ಪ್ರದರ್ಶಿಸುವ ಅಧಿಕಾರಿಗಳು ಕಟ್ಟಡ ಪೂರ್ಣಗೊಂಡ ಮೇಲೆ ಜೆಸಿಬಿ ಜತೆ ತೆರಳಿ ಕೆಡವಿ ಹಾಕುವ ಬೆದರಿಕೆ ಒಡ್ಡಿ ದೊಡ್ಡ ಮಟ್ಟದ ಡೀಲ್ ಕುದುರಿಸುತ್ತಿದ್ದಾರೆ.
ಇದು, ಇಂದು ನಿನ್ನೆಯ ಸಂಗತಿಯೇನಲ್ಲ. ಬಹಳ ವರ್ಷದಿಂದಲೂ ಈ ಕಾರ್ಯಾಚರಣೆ ಮುಂದುವರೆದಿದೆ. ಅನಧಿಕೃತ ಕಟ್ಟಡವನ್ನು ಕೆಡವಿಯೇ ತೀರುತ್ತೇವೆಂದು ಅಧಿಕಾರಿಗಳು ಉತ್ತರಕುಮಾರನ ಪೌರುಷ ತೋರುತ್ತಾರೆ. ಇಲ್ಲಿವರೆಗೆ ಯಾವೊಂದು ಕಟ್ಟಡವನ್ನೂ ಕೆಡವಿಲ್ಲ. ಮಾಲೀಕರಿಂದ ಕೈ ಬೆಚ್ಚಗಾಗುತ್ತಲೇ ಕಿಸೆ ತುಂಬಿಸಿಕೊಂಡು ಜಾಗ ಖಾಲಿ ಮಾಡುತ್ತಾರೆ.
ಈ ದಂಧೆಯ ಮುಂದುವರೆದ ಪ್ರಹಸನದ ಒಂದು ಭಾಗವು ಗುರುವಾರ ಪ್ರದರ್ಶನವಾಯಿತು. ನಗರದ ಆಯಕಟ್ಟಿನ ಸ್ಥಳಗಳಲ್ಲಿ ನಿರ್ಮಾಣವಾಗಿರುವ ಅನಧಿಕೃತ 27 ಬೃಹತ್ ಕಟ್ಟಡಗಳ ವಿವರಗಳನ್ನು ಹೊಂದಿದ ಕಡತ ಸಮೇತ ಅಧಿಕಾರಿಗಳ ದಂಡು ದಾಳಿಗೆ ಇಳಿಯಿತು. ಆದರೆ, ತಂಡದಲ್ಲಿದ್ದ ಅಧಿಕಾರಿಗಳ ಬಾಯಿ ಜೋರಾಗಿತ್ತೇ ಹೊರತು ಎಲ್ಲೂ ಜೆಸಿಬಿ ಸದ್ದು ಮಾಡಲಿಲ್ಲ.
ಉತ್ತರನ ಪೌರುಷ: ರಾಮನಗರ ನಗರಸಭೆಗಿಂತಲೂ ಮೀರಿದ ಹಗರಣ, ಕರ್ಮಕಾಂಡಗಳು ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಬೆಳಕಿಗೆ ಬಂದಿವೆ. ಸರ್ಕಾರದ ಅಧೀನಕ್ಕೊಳಪಟ್ಟ ಉಭಯ ಜನ ವಿರೋಧಿ ಸಂಸ್ಥೆಗಳು ಈ ಬಾರಿ ಜಂಟಿ ಕಾರ್ಯಾಚರಣೆಗೆ ಇಳಿದಿದ್ದವು. ನಗರಸಭೆ ಆಯುಕ್ತ ಯಶವಂತ್ ಸಾರಥ್ಯದ ತಂಡಕ್ಕೆ ರಾ-ಚ ಪ್ರಾಧಿಕಾರದ ಆಯುಕ್ತ ಪದ್ಮನಾಭ ಸಾಥ್ ಕೂಡ ಸಿಕ್ಕಿತ್ತು. ಹೋದೆಡೆಯಲ್ಲೆಲ್ಲಾ ಅಧಿಕಾರಿಗಳಿಂದ ವೀರಾವೇಷದ ಮಾತುಗಳ ಮೊಳಗಿದವು. ಅವರ ಅಬ್ಬರ, ಆರ್ಭಟ, ಆಟಾಟೋಪವನ್ನು ಗಮನಿಸಿದರೆ ಇನ್ನೇನು ಕಟ್ಟಡ ನೆಲಸಮ ಆಗಿಬಿಡಬಹುದು ಎನ್ನುವಂತಾಗಿತ್ತು. ತನ್ಮಧ್ಯೆ, ಅಧೀನ ಅಧಿಕಾರಿಗಳು ಕಟ್ಟಡ ಮಾಲೀಕರನ್ನು ಪಕ್ಕಕ್ಕೆ ಕರೆದೊಯ್ದು, ಪಿಸು ಮಾತಿನೊಂದಿಗೆ ವ್ಯವಹಾರ ಮುಗಿಸುತ್ತಿದ್ದರು. ಅಲ್ಲಿಂದ ಗ್ರೀನ್ ಸಿಗ್ನಲ್ ಸಿಗುತ್ತಿದ್ದಂತೆಯೇ ಕಚೇರಿಗೆ ಬಂದು ಮತ್ತೆ ಕಾಣುವಂತೆ ಕಟ್ಟಡ ಮಾಲೀಕನಿಗೆ ಸೂಚಿಸಿ ತಂಡ ಮುಂದಕ್ಕೆ ಸಾಗುತ್ತಿತ್ತು.
ಮಾಲೀಕರ ತಾತ್ಸಾರ: ರಾಮನಗರವೂ ಸಹಿತ ಜಿಲ್ಲೆಯ ನಗರ, ಪಟ್ಟಣಗಳಲ್ಲಿ ಅನಧಿಕೃತ ಕಟ್ಟಡಗಳ ನಿರ್ಮಾಣ ಅವ್ಯಾಹತವಾಗಿ ನಡೆಯುತ್ತಿದೆ. ಕೆಲವರು ವಾಣಿಜ್ಯ ಮತ್ತು ವಸತಿ ಕಟ್ಟಡಗಳನ್ನು ನಿರ್ಮಿಸಿ ವರ್ಷಾನುಗಟ್ಟಲೆ ಕಳೆದರೂ ಪರವಾನಗಿ ಪಡೆದುಕೊಳ್ಳುವ ಗೋಜಿಗೆ ಹೋಗುತ್ತಿಲ್ಲ. ನೆರೆಹೊರೆಯವರಿಂದ ತಂಟೆ-ತಕರಾರಿದ್ದಾಗಷ್ಟೇ ಪರವಾನಗಿ ಬೇಕು. ಇಲ್ಲವಾದರೆ ಅದೆಲ್ಲಾ ಏಕೆ ಎನ್ನುವವರಿದ್ದಾರೆ.
ಪೌರ ಸಂಸ್ಥೆ ಸಹಿತ ಸಂಬಂಧಿಸಿದ ಪ್ರಾಧಿಕಾರದ ಅಧಿಕಾರಿಗಳು, ಸಿಬ್ಬಂದಿಯ ಲಂಚಾವತಾರವೇ ಈ ಜಿಲ್ಲೆಯಲ್ಲಿ ಪರವಾನಗಿ ಕುರಿತು ತಾತ್ಸಾರ ಭಾವನೆ ಮೂಡಲು ಕಾರಣವಾಗಿದೆ. ಆಗಾಗ್ಗೆ ತಪಾಸಣೆ, ದಾಳಿಯ ಕಾರ್ಯಾಚರಣೆ ಹೆಸರಿನಲ್ಲಿ ಬರುವ ಅಧಿಕಾರಿಗಳಿಗೆ ನಿಗದಿಪಡಿಸಿದಷ್ಟು ಲಂಚ ಕೊಟ್ಟು ಸಾಗ ಹಾಕುವ ಪರಿಪಾಠ ಇಲ್ಲಿದೆ. ಹೀಗಾಗಿಯೇ ಜಿಲ್ಲೆಯಲ್ಲಿ ವಸತಿ, ವಾಣಿಜ್ಯ ಕಟ್ಟಡಗಳ ಕರ ವಸೂಲಾತಿ ಪ್ರಮಾಣವೂ ಕುಸಿದಿದೆ.
ಅನಧಿಕೃತ ಕಟ್ಟಡಗಳಿವು: ನಗರಸಭೆ ಹಾಗೂ ರಾ-ಚ ಪ್ರಾಧಿಕಾರಿದ ಅಧಿಕಾರಿಗಳ ತಂಡದಲ್ಲಿದ್ದ ಕಡತದ ಪ್ರಕಾರ ಹಲವು ಕಟ್ಟಡಗಳಿಗೆ ಪರವಾನಗಿಯನ್ನೇ ಪಡೆಯದಿರುವುದು ಬಯಲಾಗಿದೆ. ಕೆಲ ಕಟ್ಟಡಗಳನ್ನು ನೀಲನಕ್ಷೆ ಮತ್ತು ಪರವಾನಗಿ ಷರತ್ತಿಗೆ ವಿರುದ್ಧವಾಗಿ ನಿರ್ಮಿಸಿರುವುದು, ಇನ್ನಷ್ಟು ಕಟ್ಟಡಗಳಲ್ಲಿ ನೆಲ ಮಹಡಿ ಮತ್ತು 1ನೇ ಮಹಡಿಗೆ ಪರವಾನಗಿ ಪಡೆದಿದ್ದರೂ ಅದಕ್ಕಿಂತ ಹೆಚ್ಚಿನ ಅಂತಸ್ತು ನಿರ್ಮಿಸಲಾಗುತ್ತಿತ್ತು. ಬೆಂಗಳೂರು-ಮೈಸೂರು ಹೆದ್ದಾರಿಯ ಕನಕಪುರ ತಿರುವಿನಲ್ಲಿರುವ ತಾಜ್ಬ್ಬಿರಿಯಾನಿ ಹೋಟೆಲ್ಗೆ ಕಟ್ಟಡ ಪರವಾನಗಿ, ಉದ್ದಿಮೆ ಪರವಾನಗಿಯೂ ಇಲ್ಲ. ವಿವೇಕಾನಂದ ನಗರದಲ್ಲಿ 4 ಅಂತಸ್ತಿನ ಒಂದು, 3 ಅಂತಸ್ತಿನ 2 ಕಟ್ಟಡಗಳಿಗೂ ಪರವಾನಗಿ ಇರಲಿಲ್ಲ. ಹೀಗೆ 27 ಕಟ್ಟಡಗಳ ಮಾಲೀಕರಿಗೂ ನಿರ್ಮಾಣ ಕಾಮಗಾರಿ ಸ್ಥಗಿತಕ್ಕೆ ನೊಟೀಸ್ ಜಾರಿಗೊಳಿಸಿದ ಷರಾ ಬರೆದುಕೊಂಡು ತಂಡ ಕಾರ್ಯಾಚರಣೆಗೆ ಎಳ್ಳುನೀರು ಬಿಟ್ಟಿದೆ.
ಕಾರ್ಯಾಚರಣೆ ಮುಗಿದ ಬೆನ್ನಲ್ಲೇ ಕಟ್ಟಡ ಮಾಲೀಕರು ಮತ್ತು ಅಧಿಕಾರಿಗಳ ನಡುವೆ ಮಧ್ಯವರ್ತಿಗಳು ಮಾತುಕತೆಗೆ ಇಳಿದಿದ್ದಾರೆ. ಡೀಲ್ ಆಧರಿಸಿ ಮುಂದಿನ ಕ್ರಮ ಜರುಗಲಿದೆ. ಇಂತಹ ಕಾರ್ಯಾಚರಣೆ, ಪ್ರಕರಣಗಳ ಬಗ್ಗೆ ಮೊದಲೇ ಜಾಗ್ರತೆ ವಹಿಸಲು ಅಧಿಕಾರಿಗಳಿಗೆ ಇರುವ ಅಡ್ಡಿಯಾದರೂ ಏನೆನ್ನುವ ಮಾತು ಅಲ್ಲಿ ನೆರೆದಿದ್ದ ಸಾರ್ವಜನಿಕರಿಂದ ಕೇಳಿ ಬಂದಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

