ಬೆಂಗಳೂರು ಗ್ರಾಮಾಂತರ

ಹಣವಂತರ ಪ್ರಾಬಲ್ಯದಿಂದ ಸಂಘದ ಭವಿಷ್ಯ ಆತಂಕಕಾರಿ

Published On :

ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ.19
ಪರಿಸ್ಥಿತಿ ಹೀಗೆ ಮುಂದುವರೆದರೆ ಒಕ್ಕಲಿಗರ ಸಂಘದ ಮುಂದಿನ ಭವಿಷ್ಯ ಆತಂಕಕಾರಿಯಾಗಿದೆ. ಹಣವಂತರೇ ಪ್ರಾಬಲ್ಯ ಸಾಧಿಸುತ್ತಿರುವ ಸಂಘದಲ್ಲಿ ಈ ಬಾರಿಯಾದರೂ ಸಾರ್ವಜನಿಕ ಕಾಳಜಿ ಇರುವವರು ಆಯ್ಕೆಯಾಗಿ ಬರಬೇಕಿದೆ ಎಂದು ಡಾ.ಅಪ್ಪಾಜಿ ಗೌಡ ಹೇಳಿದರು.
ಇಲ್ಲಿನ ಬೆಸೆಂಟ್‌ಪಾರ್ಕ್‌ನಲ್ಲಿ ನಡೆದ ಒಕ್ಕಲಿಗರ ಸಂಘದ ಚುನಾವಣೆ ಸಭೆಯಲ್ಲಿ ಅವರು ತಮ್ಮ ಸಿಂಡಿಕೇಟ್‌ನ ಸದಸ್ಯರ ಪರ ಮತಯಾಚಿಸಿ ಮಾತನಾಡಿದರು.
ರಾಜ್ಯದ ಬಲಿಷ್ಠ ಸಮುದಾಯಗಳಲ್ಲಿ ಒಂದಾಗಿರುವ ಒಕ್ಕಲಿಗರ ಸಮುದಾಯಕ್ಕೆ ಸಂಘದ ಕೊಡುಗೆ ಶೂನ್ಯ. ಹಣ ದೊಡ್ಡ ಮಟ್ಟದಲ್ಲಿ ಕೆಲಸ ಮಾಡುತ್ತಿದೆ. 45 ವರ್ಷ ಇತಿಹಾಸವಿರುವ ಆದಿಚುಂಚನಗಿರಿ ಮಠ ನೂರಾರು ವಿದ್ಯಾ ಸಂಸ್ಥೆಗಳನ್ನು ಕಟ್ಟಿ ಬೆಳೆಸಲು ಶಕ್ತವಾಗಿದೆ. ಆದರೆ 107 ವರ್ಷ ಇತಿಹಾಸವಿರುವ ಒಕ್ಕಲಿಗರ ಸಂಘ ಶೈಕ್ಷಣಿಕ ಕ್ಷೇತ್ರಕ್ಕೆ ನೀಡಿರುವ ಕೊಡುಗೆ ಏನೇನೂ ಸಾಲದು. ಲಕ್ಷಾಂತರ ಸಂಖ್ಯೆಯಲ್ಲಿ ಸದಸ್ಯತ್ವ ಇರುವ ಸಂಘ ಹಲವು ಕ್ಷೇತ್ರಗಳಲ್ಲಿ ಸಾಧಿಸಬೇಕಾದ್ದು ಬಹಳ. ಸಾಧಿಸಿರುವುದು ವಿರಳ. ಇದು ಅಪಮಾನಕರ ಸಂಗತಿಯಾಗಿದೆ. ಈ ಕಳಂಕ ತೊಡೆದು ಹಾಕಬೇಕಿದ್ದರೆ ಈ ಬಾರಿ ಪ್ರಾಜ್ಞರಿರುವ ಡಾ.ಅಪ್ಪಾಜಿಗೌಡ ಬಣವನ್ನು ಜನ ಬೆಂಬಲಿಸಬೇಕಿದೆ ಎಂದರು.
ಸಂಘದ ನಿರ್ದೇಶಕ ಸ್ಥಾನಾಕಾಂಕ್ಷಿ ಎನ್.ಹನುಮಂತೇಗೌಡ ಮಾತನಾಡಿ, ಜನಾಂಗದ ಸಾಮಾಜಿಕ ,ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಆರ್ಥಿಕ ಬೆಳವಣಿಗೆ ಮತ್ತು ಅಶಕ್ತರ ನೆರವಿಗೆ ಸಂಘ ಒತ್ತುಕೊಡಬೇಕಿದೆ.  ಸಂಘವನ್ನು ಸುಸ್ಥಿತಿಯಲ್ಲಿ ಕಟ್ಟಿ ಬೆಳೆಸುವ ಹೊಣೆಗಾರಿಕೆ ಇಂದಿನ ಅನಿವಾರ್ಯ. ಈ ನಿಟ್ಟಿನಲ್ಲಿ ಜನ ಯೋಚಿಸಿ ಮತ ನೀಡುವ ವ್ಯವಸ್ಥೆಯಾಗಬೇಕು. ಹಣ ಬಲ ಸಂಘವನ್ನು ಹಾಳು ಮಾಡುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಸಂಘದ ಚುನಾವಣಾ ಅಭ್ಯರ್ಥಿಗಳಾದ ಡಾ.ನಿಸರ್ಗ, ಎಂ.ಎ.ಆನಂದ್, ಅ.ದೇವೇಗೌಡ, ಮಲ್ಲಿಕಾರ್ಜುನೇಗೌಡ, ಕಾಳೇಗೌಡ, ಚಿಕ್ಕರಾಮಕೃಷ್ಣಪ್ಪ, ಶಿವಣ್ಣೇಗೌಡ, ಸಂಪಂಗಿರಾಮಯ್ಯ, ಮೋಹನ್‌ಕುಮಾರ್, ಕೃಷ್ಣಮೂರ್ತಿ, ಜಯಮುತ್ತು, ರಮೇಶ್, ಪಿಳ್ಳಾಂಜಿನಪ್ಪ, ಜೆಡಿಎಸ್ ಮುಖಂಡ ಅಪ್ಪಯ್ಯಣ್ಣ, ನರಸಿಂಹಯ್ಯ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಬಿ.ಸಿ.ನಾರಾಯಣಸ್ವಾಮಿ, ಟಿ.ವಿ.ಲಕ್ಷ್ಮೀನಾರಾಯಣ್, ಆಂಜಿನಪ್ಪ, ಪದ್ಮನಾಭ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.