ದೊಡ್ಡಬಳ್ಳಾಪುರದಲ್ಲಿ ಬಿಗಡಾಯಿಸಿದೆ ವಿದ್ಯುತ್ ಬರ
-ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ಅನಿಯಮಿತ ಲೋಡ್ಶೆಡ್ಡಿಂಗ್ನಿಂದಾಗಿ ದೊಡ್ಡಬಳ್ಳಾಪುರದ ಜೀವನಾಡಿ ನೇಕಾರಿಕೆ ಬಹುತೇಕ ಸಂಕಷ್ಟಕ್ಕೆ ಸಿಲುಕಿದೆ. ದಿನದಲ್ಲಿ 4 ಗಂಟೆ ಕಾಲವೂ ಸರಿಯಾಗಿ ವಿದ್ಯುತ್ ಸರಬರಾಜು ಇಲ್ಲದ ಕಾರಣ ನೇಕಾರಿಕೆಯನ್ನೇ ನಂಬಿರುವ ಸಾವಿರಾರು ಕುಟುಂಬಗಳು ತೀವ್ರ ಪರಿತಪಿಸುವಂತಾಗಿದೆ.
ದೊಡ್ಡಬಳ್ಳಾಪುರ ನಗರ ಮತ್ತು ಗ್ರಾಮಾಂತರ ಪ್ರದೇಶದಲ್ಲಿ ಕಳೆದ 3 ವಾರದಿಂದೀಚೆಗೆ ಅನಿಯಮಿತವಾಗಿ ಮತ್ತು ಅವ್ಯಾಹತವಾಗಿ ನಡೆಯುತ್ತಿರುವ ಪವರ್ಕಟ್, ಇಲ್ಲಿನ ಜನರ ಬದುಕನ್ನೇ ಬರಡಾಗಿಸುವ ಲಕ್ಷಣಗಳು ಗೋಚರಿಸುತ್ತಿದೆ. ಇಲ್ಲಿನ ಬಹುಮುಖ್ಯ ಉದ್ದಿಮೆ ನೇಕಾರಿಕೆ. ಸದ್ಯ ಈ ಊರಿನಲ್ಲಿ 20 ಸಾವಿರಕ್ಕೂ ಅಧಿಕ ವಿದ್ಯುತ್ ಮಗ್ಗಳಿವೆ. ಈ ಮಗ್ಗಗಳು ಲಾಟಾಪಟಿ ಸದ್ದು ಮಾಡಿದರೇನೇ ಈ ಊರಿನ ಉಸಿರಾಟ. ಆದರೆ ವಿದ್ಯುತ್ ಕೈಕೊಡುವ ಪರಿಣಾಮ ದಿನದ ಬಹುತೇಕ ಅವಧಿಯಲ್ಲಿ ಮಗ್ಗಗಳು ಸದ್ದು ಮಾಡದೆ ನಿಂತೇ ಹೋಗುವ ಪರಿಸ್ಥಿತಿ ಎದುರಾಗಿದೆ. ಪರಿಣಾಮವಾಗಿ ಸಾಲದ ಶೂಲಕ್ಕೆ ಸಿಲುಕುವ ನೇಕಾರನ ಭವಿಷ್ಯ ತೂಗುಯ್ಯಾಲೆಯಾಗಲಿದೆ.
ತೀವ್ರಗೊಂಡ ವಿದ್ಯುತ್ ಬರ: ವಿದ್ಯುತ್ ಬರ ತೀವ್ರಗೊಂಡಿದೆ. ಬೇಡಿಕೆಯ ವಿದ್ಯುತ್ಗಿಂತ ಬರೋಬ್ಬರಿ 60ರಷ್ಟು ಕಡಿಮೆ ವಿದ್ಯುತ್ ಪೂರೈಕೆಯಾಗುತ್ತಿದೆ. ಹೀಗಾಗಿ ಅನಿಯಮಿತವಾಗಿ ಲೋಡ್ಶೆಡ್ಡಿಂಗ್ ಮಾಡಲಾಗುತ್ತಿದೆ ಎಂಬುದು ಬೆಸ್ಕಾಂ ಅಧಿಕಾರಿಗಳ ಸ್ಪಷ್ಟನೆ. ಆದರೆ ಇರುವ ವಿದ್ಯುತ್ ಅನ್ನು ಕೈಗಾರಿಕಾ ಪ್ರದೇಶದ ಬಂಡವಾಳಶಾಹಿಗಳಿಗೆ ಪೂರೈಕೆ ಮಾಡಿ, ಬಡ ನೇಕಾರರು ವಾಸಿಸುವ ಬಡಾವಣೆಗಳಲ್ಲೇ ವಿದ್ಯುತ್ ಸರಬರಾಜು ಸ್ಥಗಿತ ಮಾಡುವ ಕುತಂತ್ರ ನಡೆಯುತ್ತಿದೆ. ಕೈಗಾರಿಕೋದ್ಯಮಿಗಳಿಗೆ ನಿರಂತರ ವಿದ್ಯುತ್ ಪೂರೈಕೆ ಮಾಡುವ ಬೆಸ್ಕಾಂ ಸಾರ್ವಜನಿಕರ ಬಳಕೆ ವಿದ್ಯುತ್ ನೀಡಲು ಕುಂಟು ನೆಪ ಹೇಳುತ್ತಿದೆ. ಲಭ್ಯವಿರುವ ವಿದ್ಯುತ್ ಅನ್ನು ಸಾರ್ವಜನಿಕರಿಗೆ, ನೇಕಾರರ ಬಳಕೆ ನೀಡಿ ಬೇಕಾದರೆ ಉಳಿದದ್ದನ್ನು ಕೈಗಾರಿಕೆಗಳಿಗೆ ಸರಬರಾಜು ಮಾಡಲಿ. ಅದನ್ನು ಬಿಟ್ಟು ಬಡ ಮತ್ತು ಮಧ್ಯಮವರ್ಗದ ಜನರ ಬದುಕಿನೊಂದಿಗೆ ಚೆಲ್ಲಾಟವಾಡುವುದು ಬೇಡ ಎಂಬುದು ನೇಕಾರರ ಆಗ್ರಹವಾಗಿದೆ.
ಅನಿಯಮಿತ ಪವರ್ ಕಟ್: ಜೊತೆಗೆ ಪವರ್ ಕಟ್ ಮಾಡುವುದಕ್ಕೆ ಕನಿಷ್ಠ ಒಂದು ಸಮಯವನ್ನೂ ನಿಗದಿ ಪಡಿಸಿಲ್ಲ. ಬೇಕಾದಾಗ ಸರಬರಾಜು ಮಾಡುವುದು, ಬೇಕಾದಾಗ ಸ್ಥಗಿತಗೊಳಿಸುವ ಅವೈಜ್ಞಾನಿಕ ಧೋರಣೆ ಅನುಸರಿಸಲಾಗುತ್ತಿದೆ. ವಿದ್ಯುತ್ ಬರ ಬಿಗಡಾಯಿಸಿದ್ದರೆ ಸಾರ್ವಜನಿಕರಿಗೆ ಇಂತಿಷ್ಟು ಅವಧಿ ವಿದ್ಯುತ್ ಪೂರೈಕೆ ಇರುತ್ತದೆ, ಇಂತಿಷ್ಟು ಅವಧಿ ಇರುವುದಿಲ್ಲ ಎಂಬುದನ್ನು ಮುಕ್ತವಾಗಿ ಪ್ರಕಟಿಸಲಿ. ಅದು ಪರ್ಯಾಯ ಕ್ರಮಗಳಿಗಾದರೂ ಅವಕಾಶ ಕೊಟ್ಟಂತಾಗುತ್ತದೆ. ಅದನ್ನು ಬಿಟ್ಟು ಅರ್ಧ ಗಂಟೆ ವಿದ್ಯುತ್ ಕೊಟ್ಟು 3 ಗಂಟೆ ತೆಗೆಯುವುದು, ಪ್ರತಿ ಅರ್ಧಗಂಟೆಗೊಮ್ಮೆ ಲೋಡ್ಶೆಡ್ಡಿಂಗ್ ಮಾಡುವುದು ಸರಿಯಾದ ಕ್ರಮವಲ್ಲ ಎಂದು ದೂರಿದ್ದಾರೆ.
ಪ್ರತಿಭಟನೆ ಎಚ್ಚರಿಕೆ: ಒಂದೆಡೆ ವಿದ್ಯುತ್ ದರ ಏರಿಕೆ ಅವ್ಯಾಹತ ನಡೆಯುತ್ತಿದೆ. ಅಗತ್ಯ ವಸ್ತುಗಳ ದರ ಏರಿಕೆಯಿಂದ ಬದುಕು ದುಬಾರಿಯಾಗಿದೆ. ನೇಕಾರರ ಕಚ್ಚಾವಸ್ತುಗಳ ಬೆಲೆ ಗಗನಮುಖಿಯಾಗಿದೆ. ಉತ್ಪಾದಿಸಿದ ವಸ್ತ್ರಗಳನ್ನು ಕೇಳುವವರಿಲ್ಲ. ಜೊತೆಗೆ ವಿದ್ಯುತ್ ಬಿಲ್ ಪಾವತಿಸದಿದ್ದರೆ ಒಂದು ದಿನವೂ ತಡಮಾಡದೆ ಸಂಪರ್ಕವನ್ನೇ ಕಡಿತ ಮಾಡುವ ಶಿಸ್ತು, ಪೂರೈಕೆ ವಿಚಾರದಲ್ಲೂ ಇರಬೇಕು. ಪರಿಸ್ಥಿತಿ ಇದೇ ರೀತಿ ಮುಂದುವರೆದರೆ, ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯ ಮತ್ತು ಜನವಿರೋಧಿ ಧೋರಣೆ ಮುಂದುವರೆದರೆ ಉಗ್ರ ಪ್ರತಿಭಟನೆ ಮಾಡಬೇಕಾದೀತು. ಉಳ್ಳವರ ಪರವಾಗಿ ವರ್ತಿಸುವುದನ್ನು ಬಿಟ್ಟು ಸಾಮಾನ್ಯ ಜನರ ಬಗ್ಗೆ ಬೆಸ್ಕಾಂ ಚಿಂತಿಸಲಿ ಎಂದು ಎಚ್ಚರಿಕೆ ನೀಡಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

