ಬೆಂಗಳೂರು ಗ್ರಾಮಾಂತರ

ಲೋಡ್‌ಶೆಡ್ಡಿಂಗ್ ವಿರುದ್ಧ ಪ್ರತಿಭಟನೆ ಇಂದು

Published On :

ದೊಡ್ಡಬಳ್ಳಾಪುರ: ಇಲ್ಲಿನ ನೇಕಾರರ ಹೋರಾಟ ಸಮಿತಿ ನೇತೃತ್ವದಲ್ಲಿ ಅನಿಯಮಿತ ಲೋಡ್‌ಶೆಡ್ಡಿಂಗ್ ವಿರುದ್ಧ ಬೆಸ್ಕಾಂ ಕಚೇರಿ ಮುಂದೆ ಪ್ರತಿಭಟನಾ ಧರಣಿ ಡಿ.20ರ ಶುಕ್ರವಾರ ಬೆಳಗ್ಗೆ 10 ಗಂಟೆಗೆ ನಡೆಯಲಿದೆ. ಲೋಡ್‌ಶೆಡ್ಡಿಂಗ್ ವಿಚಾರದಲ್ಲಿ ನಿರ್ಲಕ್ಷ್ಯ ಧೋರಣೆ ವಹಿಸುತ್ತಿರುವ ಬೆಸ್ಕಾಂ ಅಧಿಕಾರಿಗಳು, ಸಾರ್ವಜನಿಕರ ಬೇಡಿಕೆಗೆ ಸರಿಯಾಗಿ ಸ್ಪಂದಿಸದ ಇಲಾಖೆ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ವಿದ್ಯುತ್ ಪೂರೈಕೆ ವ್ಯವಸ್ಥೆ ಸರಿಹೋಗುವವರೆಗೆ ಪ್ರತಿಭಟನೆ ನಿಯಮಿತವಾಗಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಾಳೆ ಕನ್ನಡ ರಾಜ್ಯೋತ್ಸವ
ನೆಲಮಂಗಲ:
ತಾಲೂಕಿನ ಶಾಂತಿನಗರದಲ್ಲಿ ಡಿ.21ರ ಶನಿವಾರ ಸಂಜೆ 6 ಗಂಟೆಗೆ ಹೊಯ್ಸಳ ಸೇನೆಯ 3ನೇ ವಾರ್ಷಿಕೋತ್ಸವ ಹಾಗೂ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಶಿವಗಂಗೆಯ ಮೇಲಣಗವಿ ಮಠದ ಶ್ರೀ ಮಲಯ ಶಾಂತಮುನಿ ದೇಶೀಕೇಂದ್ರ ಶಿವಾಚಾರ್ಯ ಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಲಿದ್ದು ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ಉದ್ಘಾಟನೆಯನ್ನು ನೆರವೇರಿಸಲಿದ್ದು,  ಹೊಯ್ಸಳ  ಸೇನೆ ರಾಜ್ಯಾಧ್ಯಕ್ಷ ಬಿ.ಎಸ್.ಕೃಷ್ಣಮೂರ್ತಿ ಅಧ್ಯಕ್ಷತೆ ವಹಿಸಲಿದ್ದಾರೆ.  ಮುಖ್ಯ ಅತಿಥಿಗಳಾಗಿ ತಹಶೀಲ್ದಾರ್ ಡಾ.ಎನ್.ಆರ್.ಗೀತಾ, ಡಿ.ವೈ.ಎಸ್ಪಿ ಆರ್.ಮಲ್ಲೇಶ್, ಮಾಜಿ ಪ್ರಧಾನರು ಕರಿವರದಯ್ಯ, ಜಿ.ಪಂ.ಸದಸ್ಯರಾದ ಕಾಂತರಾಜು, ಎಂ.ಎನ್.ರಾಮು, ಯಂಟಗಾನಹಳ್ಳಿ ಗ್ರಾ.ಪಂ.ಅಧ್ಯಕ್ಷ ಕೆ.ಎನ್.ಸುರೇಶ್, ಸದಸ್ಯೆ ಧನಲಕ್ಷ್ಮಮ್ಮ, ಸಮಾಜ ಸೇವಕ ಎಂ.ಜಿ. ರಂಗಧಾಮಯ್ಯ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ  ಸಿದ್ದರಾಮು ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ನಟರಾಜು, ಸಾಹಿತಿ ಬಿದಲೂರು ಸೋಮಶೇಖರಯ್ಯ, ನಾಟಿ ವೈದ್ಯ ಭಟ್ಟರಹಳ್ಳಿ ಗಂಗಣ್ಣ ಅವರನ್ನು ಸನ್ಮಾನಿಸಲಾಗುವುದು ಎಂದು ಹೊಯ್ಸಳ ಸೇನೆಯ ತಾಲೂಕು ಅಧ್ಯಕ್ಷ  ಹನುಮಂತರಾಜು ತಿಳಿಸಿದ್ದಾರೆ.

ನಾಳೆ ವಾರ್ಷಿಕ ದಿನಾಚರಣೆ
ನೆಲಮಂಗಲ:
ಪಟ್ಟಣದ ಹರ್ಷ ಸಮೂಹ ಶಿಕ್ಷಣಸಂಸ್ಥೆ ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆ ಆವರಣದಲ್ಲಿ ಆಯೋಜಿಸಿದ್ದ  ವಾರ್ಷಿಕ ದಿನಾಚರಣೆ ಕಾರ್ಯಕ್ರಮವನ್ನು ಡಿ. 21ರ ಶನಿವಾರ ಸಂಜೆ 4 ಗಂಟೆ ಹಮ್ಮಿಕೊಳ್ಳಲಾಗಿದೆ.  ರಾಜೀವ್‌ಗಾಂಧಿ  ವಿಶ್ವ ವಿದ್ಯಾಲಯದ ಆರೋಗ್ಯ ವಿಜ್ಞಾನ ವಿಭಾಗದ ಮುಖ್ಯಸ್ಥರಾದ  ಡಾ.ಕೆ.ಎಸ್ ಶ್ರೀಪ್ರಕಾಶ್ ಹೈಕೋರ್ಟ್ ಹಿರಿಯ ವಕೀಲ ಕೇಶವಮೂರ್ತಿ, ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ, ಎಂ.ಎಸ್.ರಾಮಯ್ಯ ಹರ್ಷ ಆಸ್ಪತ್ರೆ ನರ್ಸಿಂಗ್ ಸೂಪರಿಂಟೆಂಡೆಂಟ್ ಲಿಸ್ಸಿ ಜಾನ್ ಆಗಮಿಸಲಿದ್ದಾರೆ.

ವಿದ್ಯಾರ್ಥಿ ದಿಶೆಯಲ್ಲಿ ಶಿಸ್ತು ಬದ್ಧ ಜೀವನ ರೂಪಿಸಿಕೊಳ್ಳಿ
ನೆಲಮಂಗಲ:
ವಿದ್ಯಾರ್ಥಿ ದಿಶೆಯಲ್ಲಿ ಶಿಸ್ತು ಬದ್ಧ ಜೀವನ ರೂಪಿಸಿಕೊಂಡಾಗ ಮಾತ್ರ ಉತ್ತಮ ನಾಗರಿಕರಾಗಲು ಸಾಧ್ಯ ಎಂದು ಸ್ಥಳೀಯ ಜೆ.ಎಂ.ಎಫ್.ಸಿ ನ್ಯಾಯಾಲಯದ ಹಿರಿಯ ನ್ಯಾಯಾಧೀಶರಾದ ಬಿ.ಎಸ್.ರೇಖಾ ತಿಳಿಸಿದರು. ಅವರು ಗುರುವಾರ ತಾಲೂಕಿನ ಅರಿಶಿನಕುಂಟೆಯ ಕಣ್ವ ಪಬ್ಲಿಕ್ ಶಾಲೆಯಲ್ಲಿ  ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘದ ವತಿಯಿಂದ ಕಾನೂನು ಸಾಕ್ಷರತಾ ರಥದ ಮೂಲಕ ಉಚಿತ ಕಾನೂನು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಇಂದಿನ ಮಕ್ಕಳೆ ಮುಂದಿನ ಪ್ರಜೆಗಳಾಗುವುದರಿಂದ ತಾವು ಕಾನೂನಿನ ಅರಿವು ಮೂಡಿಸಿಕೊಳ್ಳುವುದರ ಮೂಲಕ ಶಿಸ್ತು ಮತ್ತು ನೀತಿ ನಿಯಮ ಪಾಲಿಸುವುದು ರೂಡಿಸಿಕೊಳ್ಳಬೇಕು. ಉತ್ತಮ ಶಿಕ್ಷಣ ಪಡೆಯುವುದು ನಿಮ್ಮ ಹಕ್ಕು, ನಿಮಗೆ ಉತ್ತಮ ಜೀವನ ರೂಪಿಸಿಕೊಡುವುದು ನಿಮ್ಮ ಪೋಷಕರ ಕರ್ತವ್ಯ ಎಂದು ಹೇಳಿದರು. ಮಕ್ಕಳಿಗೆ ಶಿಕ್ಷಣದ ಮಹತ್ವ ಹಾಗೂ ಬಾಲ ಕಾರ್ಮಿಕರ ಕಾಯ್ದೆಯ ಕಾನೂನನ್ನು ಕುರಿತು ವಕೀಲ ರಮೇಶ್ ಉಪನ್ಯಾಸ ನೀಡಿದರು. ಕಿರಿಯ ನ್ಯಾಯಾಧೀಶರಾದ ಶ್ರೀಧರ್, ಚಂಪಕಾ, ಸರ್ಕಾರಿ ಅಭಿಯೋಜಕಿ ಭಾಗ್ಯಲಕ್ಷ್ಮಿ, ಚಂದ್ರಕಲಾ, ವಕೀಲ ಕೇಶವಮೂರ್ತಿ, ಕಣ್ವ ಶಾಲೆ ಮುಖ್ಯೋಪಾಧ್ಯಾಯ ಶ್ರೀನಿವಾಸ್, ಶಿಕ್ಷಕರು ಹಾಗೂ ವಿದ್ಯಾರ್ಧಿಗಳು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.