ಸಮಸ್ಯೆಗಳೇ ಎಲ್ಲ, ಸೌಕರ್ಯಗಳಂತೂ ಸರಿಯಿಲ್ಲ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಡಿ.21
ಇಲ್ಲಿನ ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ನೇತೃತ್ವದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಪ್ರೌಢಶಾಲೆ ವಿಭಾಗದ ಕುಂದು-ಕೊರತೆಗಳ ಕುರಿತ ಸಭೆ ನಡೆಯಿತು.
ಈ ಸಭೆಯಲ್ಲಿ ಹಲವು ಸಮಸ್ಯೆಗಳ ಬಗ್ಗೆ ಚರ್ಚೆ ನಡೆಸಲಾಯಿತು. ಕಳೆದ 2007ರಲ್ಲೇ ಪದವಿ ಪೂರ್ವ ಕಾಲೇಜಿಗೆ 5.12 ಎಕರೆ ಜಾಗ ಮಂಜೂರಾಗಿದೆ. ಆದರೆ ಇದನ್ನೂ ಹಲವರು ಒತ್ತುವರಿ ಮಾಡಿಕೊಂಡಿದ್ದಾರೆ. ಈ ಜಾಗಕ್ಕೆ ಕನಿಷ್ಠ ಒಂದು ತಂತಿ ಬೇಲಿ ಅಳವಡಿಸಿಕೊಂಡು ಭದ್ರಪಡಿಸಿಕೊಳ್ಳಲು ಸಾಧ್ಯವಾಗಿಲ್ಲ. ಈಗ ಪ್ರಸ್ತುತ ಇರುವ ಪ್ರೌಢಶಾಲೆಯಲ್ಲಿ 3000 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಶೌಚಾಲಯ ವ್ಯವಸ್ಥೆ ಸರಿಯಿಲ್ಲ. ಕುಡಿಯುವ ನೀರಿಗೆ ತತ್ವಾರ ನಿತ್ಯ ಕಾಡುತ್ತಿದೆ. ಪದವಿ ಪೂರ್ವ ಕಾಲೇಜಿಗೆ ಯಾವುದೇ ಅನುದಾನಗಳು ಬರುತ್ತಿಲ್ಲ. ಪ್ರೌಢಶಾಲೆಗೆ ಪ್ರತಿವರ್ಷ 30 ಲಕ್ಷ ಅನುದಾನ ಸಿಗುತ್ತಿದೆ. ಅದೂ ಪೀಠೋಪಕರಣ ಮತ್ತು ಇತರೆ ವಸ್ತುಗಳ ಖರೀದಿಗೆ ಮಾತ್ರ. ಶುಚಿತ್ವ ಕಾಪಾಡಿಕೊಳ್ಳಲೂ ಕೆಲಸಗಾರರ ಕೊರತೆ ಕಾಡುತ್ತಿದೆ ಎಂದು ಕಾಲೇಜಿನ ಪ್ರಾಂಶುಪಾಲರು ಮೋಹನ್ ದೂರಿದರು.
ಕಾಲೇಜಿನಲ್ಲಿ ಅಟೆಂಡರ್ ಮತ್ತು ಉಪನ್ಯಾಸಕರ ಕೊರತೆ ಇದೆ. ಹೀಗಿರುವಾಗ ಬಾಹ್ಯ ಮೂಲಗಳಿಂದ ಅಗತ್ಯ ಉಪನ್ಯಾಸಕರನ್ನು ಕರೆಸಿಕೊಂಡು ಸಂಬಳ ನೀಡಬೇಕು. ಹೀಗಾಗಿ ವಿದ್ಯಾರ್ಥಿಗಳಿಂದ ವಾರ್ಷಿಕ 400ರು. ಅಭಿವೃದ್ಧಿ ಶುಲ್ಕ ಕಟ್ಟಿಸಿಕೊಳ್ಳಲಾಗುತ್ತದೆ. ಒಂದೇ ಸೂರಿನಡಿ ಕಾಲೇಜು ಮತ್ತು ಪ್ರೌಢಶಾಲೆ ವಿವಿಧ ಪಾಳಿಗಳಲ್ಲಿ(ಪ್ರತ್ಯೇಕ ಪಾಳಿಗಳಲ್ಲಿ) ಕೆಲಸ ನಿರ್ವಹಿಸುತ್ತಿರುವುದು ಕೆಲವು ಮಾತ್ರ. ಅದರಲ್ಲಿ ದೊಡ್ಡಬಳ್ಳಾಪುರದ ಕಾಲೇಜೂ ಸೇರಿರುವುದು ದುರದೃಷ್ಟಕರ. ವಿಜ್ಞಾನ ವಿದ್ಯಾರ್ಥಿಗಳಿಗೆ ಸುಸಜ್ಜಿತ ಪ್ರಯೋಗಾಲಯದ ಕೊರತೆ ಇದೆ. ಪಿಯುಸಿ ಪರೀಕ್ಷಾ ಕೇಂದ್ರವೂ ಇದಾಗಿರುವುದೆ. ಆದರೆ ವಿದ್ಯಾರ್ಥಿಗಳು ಕುಳಿತುಕೊಳ್ಳಲಿಕ್ಕಾಗುವಷ್ಟು ಡೆಸ್ಕುಗಳೇ ಕಾಲೇಜಿನಲ್ಲಿಲ್ಲ. ಹೊರಗಡೆಯಿಂದ ಬಾಡಿಗೆಗೆ ತರಿಸಿ ಪರೀಕ್ಷೆ ನಡೆಸಬೇಕಾದ ಅನಿವಾರ್ಯತೆ ಇದೆ ಎಂದು ಪರಿಸ್ಥಿತಿಯನ್ನು ವಿವರಿಸಿದರು.
ಉಪಪ್ರಾಂಶುಪಾಲ ಸುಧೀಂದ್ರನಾಥ್ ಮಾತನಾಡಿ ಪ್ರೌಢಶಾಲೆ ಪಾಠ ಪ್ರವಚನ ಆರಂಭಿಸುವುದೇ ಮಧ್ಯಾಹ್ನ 12 ಗಂಟೆಯಾಗುತ್ತಿದೆ. ಇದರಿಂದಾಗಿ ಪರಿಪೂರ್ಣವಾಗಿ ಪಠ್ಯಕ್ರಮ ಮುಗಿಸಲು ಸಮಯಾವಕಾಶದ ಕೊರತೆ ಕಾಡುತ್ತಿದೆ. ಪರೀಕ್ಷೆ ಮಕ್ಕಳನ್ನು ಸಜ್ಜುಗೊಳಿಸುವುದು ಪ್ರಯಾಸದ ಕೆಲಸವಾಗಿದೆ. ಪದವಿ ಪೂರ್ವ ಕಾಲೇಜನ್ನು ಪ್ರತ್ಯೇಕ ಕಟ್ಟಡ ಮಾಡಿ ವರ್ಗಾಯಿಸಿದರೆ ಪೂರ್ಣಪ್ರಮಾಣದಲ್ಲಿ ಪ್ರೌಢಶಾಲೆ ಕಾರ್ಯನಿರ್ವಹಿಸಲು ಅನುಕೂಲವಾಗುತ್ತದೆ ಎಂದರು.
ಶಾಸಕರೇ ಇತ್ತ ನೋಡಿ: ಪ್ರಾಂಶುಪಾಲರು ವಿವರಿಸಿದ ಸಮಸ್ಯೆಗಳನ್ನು ಆಲಿಸಿದ ಸ್ಥಳೀಯ ನಗರಸಭಾ ಸದಸ್ಯ ರವಿಕುಮಾರ್ ಪ್ರತಿಕ್ರಿಯಿಸಿ, ಕಾಲೇಜಿನಲ್ಲಿ ಹಲವು ಕೊಠಡಿಗಳನ್ನು ಸ್ಥಳೀಯ ದಾನಿಗಳು ಕಟ್ಟಿಸಿಕೊಟ್ಟಿದ್ದಾರೆ. ನಗರಸಭೆ ಆಗಾಗ್ಗೆ ಶೌಚಾಲಯ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದೆ. ಇತ್ತೀಚೆಗೆ ಶಿಕ್ಷಣ ಸಚಿವರೂ ಕೂಡ ಕಾಲೇಜಿಗೆ ಭೇಟಿ ನೀಡಿದ್ದಾರೆ. ಆದರೆ ಸೂಕ್ತ ಕ್ರಮ ಕೈಗೊಳ್ಳಲು ಸಾಧ್ಯವಾಗಿಲ್ಲ. ಸ್ಥಳೀಯ ಶಾಸಕರು ಈ ಬಗ್ಗೆ ಹೆಚ್ಚಿನ ಗಮನ ಹರಿಸಿ ಆದ್ಯತೆ ನೀಡಿ ಕಟ್ಟಡ ನಿರ್ಮಾಣಕ್ಕೆ ಸಿಎಂ ವಿಶೇಷಾನುದಾನ ತರಲು ಯತ್ನಿಸಬೇಕು ಎಂದು ಆಗ್ರಹಿಸಿದರು.
ಕುಂದು-ಕೊರತೆ ಸಭೆಯಲ್ಲಿ ನಗರಸಭಾ ಸದಸ್ಯ ಕೆ.ಎಚ್.ವೆಂಕಟರಾಜು, ಶಿವಕುಮಾರ್, ಕೆ.ಜಿ.ರಘುರಾಂ, ಆರ್.ಕೆಂಪರಾಜು, ಮುಖಂಡರಾದ ನಟರಾಜ್ ಕುಮಾರ್, ಎ.ಸುಬ್ರಹ್ಮಣ್ಯ, ರಾಜಶೇಖರ್, ಕೆ.ಎಸ್.ಪ್ರಭಾ, ಎಂ.ಪಿ.ನಾಗರಾಜ್, ಶಿವಾನಂದ್, ನಾಗಪ್ರಿಯ, ದೊಡ್ಡಬಳ್ಳಾಪುರ ಅಭಿವೃದ್ಧಿ ಸಮಿತಿಯ ಹಲವು ಪದಾಧಿಕಾರಿಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

