ನಿಗದಿಗಿಂತ 4 ದಿನ ಮುನ್ನವೇ ನಿತ್ಯನ ಹುಟ್ಟುಹಬ್ಬ
ರಾಮನಗರ: ಬಿಡದಿಯ ವಿವಾದಿತ ಧ್ಯಾನಪೀಠದ ಸ್ವಘೋಷಿತ ದೇವಮಾನವ ನಿತ್ಯಾನಂದ ತಮ್ಮ ಈ ಬಾರಿಯ ಹುಟ್ಟುಹಬ್ಬವನ್ನು ನಿಗದಿಗಿಂತ ನಾಲ್ಕು ದಿನ ಮುನ್ನವೇ ಆಚರಿಸಿಕೊಳ್ಳಲು ಅಮಾವಾಸ್ಯೆ ಕರಿನೆರಳಿನ ಭೀತಿ ಕಾರಣವಾಯಿತೇ?
ಹೌದು ಎನ್ನುತ್ತವೆ ಧ್ಯಾನಪೀಠದ ಮೂಲಗಳು. ಕಳೆದೊಂದು ದಶಕದಿಂದ ನಿತ್ಯಾನಂದ ಜ.1ರಂದೇ ಹೊಸ ವರ್ಷಾಚರಣೆ ಜತೆಗೆ ತಮ್ಮ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಆದರೆ, 2014ರ ಜ.1 ರಂದು ಅಮಾವಾಸ್ಯೆ ಇರುವ ಪರಿಣಾಮ 4 ದಿನ ಮೊದಲೇ ಕಾರ್ಯಕ್ರಮ ಜರುಗಿದೆ.
ಆಚರಣೆ ಹೆಸರೂ ಬದಲು: ಪ್ರತಿ ವರ್ಷ ಹುಟ್ಟುಹಬ್ಬವನ್ನು ಆನಂದೋತ್ಸವದ ಹೆಸರಿನಲ್ಲಿ ಮಾಡಿಕೊಂಡು ಬಂದಿದ್ದ ನಿತ್ಯಾನಂದ ಈ ಬಾರಿಯ 37ನೇ ಜನ್ಮ ದಿನವನ್ನು ಅವತಾರೋತ್ಸವ ಎಂದು ಬದಲಿಸಿದ್ದು, ಆಚರಣೆಗಳಲ್ಲಿ ಮಾತ್ರ ಯಾವುದೇ ಬದಲಾವಣೆ ಕಾಣಲಾಗಿಲ್ಲ.
ರಾಸಲೀಲೆ ಸಿಡಿ ಬಹಿರಂಗ ಮತ್ತು ಲೈಂಗಿಕ ಕಿರುಕುಳ ಸಹಿತ ನಾನಾ ಆರೋಪಗಳ ಹಿನ್ನೆಲೆಯಲ್ಲಿ ಸತತ 3 ವರ್ಷ ಆನಂದೋತ್ಸವ ಕಳಾಹೀನವಾಗಿತ್ತು. ಈ ಬಾರಿ ದೇಶ, ವಿದೇಶಗಳ ಅಪಾರ ಅನುಯಾಯಿಗಳೊಟ್ಟಿಗೆ ನಿತ್ಯಾನಂದ ಅವತಾರೋತ್ಸವ ವೈಭವವಾಗಿ ನಡೆದಿದೆ.
ಚಿತ್ರವಿಚಿತ್ರ ಆಚರಣೆಗಳು: ನಿತ್ಯಾನಂದ ಹುಟ್ಟುಹಬ್ಬ ತೀರಾ ವಿಚಿತ್ರವಾದ ಆಚರಣೆಗಳಿಂದ ಕೂಡಿರುತ್ತದೆ. ಚಿನ್ನಲೇಪಿತ ಕಿರೀಟ, ಖಡ್ಗಧಾರಿ ನಿತ್ಯಾನಂದರನ್ನು ಪಲ್ಲಕ್ಕಿ ಮೇಲೆ ಕೂರಿಸಿಕೊಂಡು ಧ್ಯಾನಪೀಠದ ಆವರಣದಲ್ಲೆಲ್ಲಾ ಹೊತ್ತು ಮೆರೆಯುವ ಸಂಪ್ರದಾಯವನ್ನು ಅನುಯಾಯಿಗಳು ಈ ಬಾರಿಯೂ ಮುಂದುವರೆಸಿದ್ದಾರೆ. ಧ್ಯಾನಪೀಠದ ಸರ್ವಾಧಿಕಾರಿ ನಿತ್ಯಾನಂದರನ್ನು ಸಿಂಹಾಸನದ ಮೇಲೆ ಕೂರಿಸಿ ಮಹಾಮಂಗಳಾರತಿ ಎತ್ತುವುದು, ಅವರ ಪಾದುಕೆಗಳಿಗೂ ಪೂಜೆ ನೆರವೇರಿಸಿದ್ದಾರೆ. ನವಪಾಶಾಣ ನಿರ್ಮಿತ 51 ಅಡಿ ಲಿಂಗಕ್ಕೆ ನಿತ್ಯಾನಂದ ಪೂಜೆ ಸಲ್ಲಿಸಿದ ಬಳಿಕ ಆ ಕಲ್ಯಾಣಿಯಲ್ಲಿ ಅನುಯಾಯಿಗಳು ಮಿಂದೆದ್ದಿದ್ದಾರೆ.
ಕುಣಿತ ಈಗಲೂ ಇತ್ತು: ಕುಂಡಲಿನಿ ಯಾಗದ ಹೆಸರಿನಲ್ಲಿ ನಾಲ್ಕು ವರ್ಷದ ಹಿಂದೆ ನಿತ್ಯಾನಂದ ಎದುರು ಅನುಯಾಯಿಗಳು ಹುಚ್ಚೆದ್ದು ಕುಣಿದಿದ್ದರು. ಅಷ್ಟರಲ್ಲಾಗಲೇ ನಿತ್ಯಾನಂದ ಜತೆ ರಾಸಲೀಲೆ ಸಿಡಿಯಲ್ಲಿ ಕಾಣಿಸಿಕೊಂಡು ಮುಜುಗರಕ್ಕೀಡಾಗಿದ್ದ ರಂಜಿತಾ ಕೂಡ ಆಗ ಕುಣಿದು ದಣಿದಿದ್ದರು. ಈಗಿನ ಅವತಾರೋತ್ಸವ-37ರಲ್ಲಿ ಸ್ವಯಂ ನಿತ್ಯಾನಂದರಿಂದಲೇ ರಂಜಿತಾ ದೀಕ್ಷೆ ಪಡೆದು ಮಾ ಆನಂದಮಯಿ ಎನ್ನುವ ಹೆಸರಿನೊಂದಿಗೆ ಸನ್ಯಾಸಾಶ್ರಮ ಪ್ರಾರಂಭಿಸಿದ್ದಾರೆ. ಮಾ ಆನಂದಮಯಿ ಉರುಫ್ ರಂಜಿತಾ ವಾಸಸ್ಥಾನವೂ ಧ್ಯಾನಪೀಠವೇ ಎನ್ನುವುದು ಇನ್ನೂ ಖಚಿತವಾಗಿಲ್ಲ.
ಪಾದಯಾತ್ರೆ ಪರಿಸಮಾಪ್ತಿ: ಪ್ರಚಾರಕ್ಕಾಗಿ ನಾನಾ ವೇಷಭೂಷಣ, ಆಚರಣೆಗಳನ್ನು ಮಾಡಿಕೊಂಡು ಬಂದಿರುವ ನಿತ್ಯಾನಂದ ಅದೆಷ್ಟೇ ವಿವಾದ ಸುತ್ತಿಕೊಂಡರೂ ಜಗ್ಗುತ್ತಿಲ್ಲ. ಪೊಲೀಸರಿಂದ ಬಂಧನ, ಜೈಲುವಾಸ, ಕೋರ್ಟ್ಗೆ ಹಾಜರಿಯಂತಹ ಸಂದರ್ಭದಲ್ಲೂ ಆಶೀರ್ವಾದ ನೀಡುತ್ತಲೇ ಫೋಸು ಕೊಟ್ಟಿದ್ದರು. ಬಿಡದಿ ಬಳಿ ಭಾರಿ ಬೆಲೆ ಬಾಳುವ ಆಸ್ತಿಯನ್ನು ದಾನ ಮತ್ತಿತರೆ ರೂಪದಲ್ಲಿ ಪಡೆದು ಧ್ಯಾನಪೀಠ ಸ್ಥಾಪಿಸಿದ್ದರೂ ನಿತ್ಯಾನಂದಗೆ ತಮಿಳುನಾಡಿನ ಬಗ್ಗೆಯೇ ಹೆಚ್ಚು ವ್ಯಾಮೋಹ. ಅವರ ಅವತಾರೋತ್ಸವಕ್ಕೆ ತಿರುವಣ್ಣಾಮಲೈನಿಂದಲೇ ಅನುಯಾಯಿಗಳು ಪಾದಯಾತ್ರೆಯಲ್ಲಿ ಆಗಮಿಸಿದ್ದಾರೆ.
ಕನ್ನಡದ ಗಾಳಿಯೇ ಇಲ್ಲ: ನಿತ್ಯಾಶ್ರಮ ಧ್ಯಾನಪೀಠ ಹೊರಗೆ ಫಲಕದಲ್ಲಿ ಒಂದು ಸಾಲು ಮಾತ್ರ ಕನ್ನಡವಿರುತ್ತದೆ. ಆಶ್ರಮದ ಒಳಹೊಕ್ಕರೆ ಅಲ್ಲೆಲ್ಲೂ ಕನ್ನಡ ಕೇಳುವ ಮತ್ತು ಕನ್ನಡದ ಬರಹಗಳನ್ನು ಕಾಣುವ ಅವಕಾಶವೇ ಇರುವುದಿಲ್ಲ. ಧ್ಯಾನಪೀಠವೆಲ್ಲವೂ ಇಂಗ್ಲಿಷ್, ತಮಿಳುಮಯವಾಗಿದೆ. ಸ್ವತಃ ನಿತ್ಯಾನಂದ ಕನ್ನಡ ಗೊತ್ತಿದ್ದರೂ ಬಳಸುವುದಿಲ್ಲ. ಸತ್ಸಂಗದ ಹೆಸರಿನಲ್ಲಿ ಅವರು ಇಡೀ ಭಕ್ತವೃಂದಕ್ಕೆ ಇಂಗ್ಲಿಷಿನಲ್ಲೇ ಪ್ರವಚನ ನೀಡಿದ್ದಾರೆ. ಬಿಡದಿ ಆಸುಪಾಸು ಸಹಿತ ಕನ್ನಡಿಗ ಅನುಯಾಯಿಗಳು ಅಲ್ಲೆಲ್ಲೂ ಕಾಣಲಿಲ್ಲ.
ಮತ್ತೀಕೆರೆ ಜಯರಾಮ್
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

