ವಾರ್ಡ್ ಸಭೆಯಲ್ಲಿ ಶಾಸಕರಿಗೆ ದೂರುಗಳ ಸುರಿಮಳೆ
ದೊಡ್ಡಬಳ್ಳಾಪುರ: ನಗರದಲ್ಲಿ ನೈರ್ಮಲ್ಯದ ಸಮಸ್ಯೆ ಮಿತಿಮೀರಿದೆ. ಹಲವು ಸಾಂಕ್ರಾಮಿಕ ರೋಗಗಳಿಗೆ ಕಾರಣವಾಗುತ್ತಿರುವ ನೈರ್ಮಲ್ಯ ಸಮಸ್ಯೆಯನ್ನು ಬಗೆಹರಿಸಿ. ಹದಗೆಟ್ಟ ರಸ್ತೆಗಳನ್ನು ಸರಿಪಡಿಸಿ ಎಂದು ನಾಗರಿಕರು ಸ್ಥಳೀಯ ಶಾಸಕರು, ನಗರಸಭೆ ಪೌರಾಯುಕ್ತರು ಮತ್ತು ಜನಪ್ರತಿನಿಧಿಗಳನ್ನು ಆಗ್ರಹಿಸಿದರು.
ಶನಿವಾರ ನೆಲದಾಂಜನೇಯಸ್ವಾಮಿ ದೇವಾಲಯ ಆವರಣ, ಕಲ್ಲುಪೇಟೆ ಮತ್ತಿತರ ಕಡೆಗಳಲ್ಲಿ ನಡೆದ ವಾರ್ಡ್ ಸಭೆಗಳಲ್ಲಿ ಜನ ಶಾಸಕರಿಗೆ ದೂರುಗಳ ದೊಡ್ಡ ಪಟ್ಟಿಯನ್ನೇ ನೀಡಿದರು. ಕುಡಿಯುವ ನೀರು, ರಸ್ತೆ, ಚರಂಡಿ, ಬೀದಿದೀಪ, ಕುಡುಕರ ಹಾವಳಿ, ಬಾರ್ಗಳ ಆಟಾಟೋಪ, ಸರ್ಕಾರಿ ಜಮೀನು ಒತ್ತುವರಿ, ಬಸ್ ನಿಲ್ದಾಣದ ಸಮಸ್ಯೆ, ಸ್ಥಳೀಯ ಜನಪ್ರತಿನಿಧಿಗಳ ನಿರ್ಲಕ್ಷ್ಯ ಸೇರಿದಂತೆ ಅನೇಕ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ನಂತರ ಮಾತನಾಡಿದ ಶಾಸಕ ಟಿ.ವೆಂಕಟರಮಣಯ್ಯ, ನಗರ ವ್ಯಾಪ್ತಿಯಲ್ಲಿ ಒಳಚರಂಡಿ ಕಾಮಗಾರಿ ಕುಂಠಿತವಾಗಿದ್ದು, ಈಗ ಮತ್ತೆ ಗುತ್ತಿಗೆದಾರರಿಗೆ ಮನವಿ ಮಾಡಿ ಕಾಮಗಾರಿ ಪುನರಾರಂಭಕ್ಕೆ ಸೂಚಿಸಲಾಗಿದೆ. ಸದ್ಯದಲ್ಲೇ ಕಾಮಗಾರಿ ಮುಗಿಯಲಿದೆ. ಈ ಹಂತದಲ್ಲಿ ರಸ್ತೆ ಕಾಮಗಾರಿಗಳನ್ನು ಒಳಚರಂಡಿ ಕಾಮಗಾರಿ ಮುಗಿದ ನಂತರವಷ್ಟೇ ಮಾಡಬೇಕಾಗುತ್ತದೆ. ನೆನೆಗುದಿಗೆ ಬಿದ್ದಿದ್ದ ಜಕ್ಕಲಮಡಗು ನೀರು ಈಗ ದೊಡ್ಡಬಳ್ಳಾಪುರಕ್ಕೆ ಬರುತ್ತಿದೆ. ಒಟ್ಟು ನೀರಿನಲ್ಲಿ ಶೇ.66ರಷ್ಟು ಚಿಕ್ಕಬಳ್ಳಾಪುರಕ್ಕೆ ಮತ್ತು ಶೇ.34ರಷ್ಟು ದೊಡ್ಡಬಳ್ಳಾಪುರಕ್ಕೆ ಎಂಬ ಒಪ್ಪಂದದಲ್ಲಿ ನೀರು ತರಲಾಗುತ್ತಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶಗಲ್ಲಿ ಕೊಳವೆ ಬಾವಿಗಳನ್ನೂ ತೆರಸಲಾಗಿದೆ. ಎಲ್ಲವೂ ಒಂದೇ ಹಂತದಲ್ಲಿ ಆಗುವುದಿಲ್ಲ. ಹಂತ ಹಂತವಾಗಿ ಅಭಿವೃದ್ಧಿ ಕಾಮಗಾರಿಗಳನ್ನು ನಡೆಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದರು.
ಕೊಳಗೇರಿ ವಾಸಿಗಳಿಗೆ ಹಕ್ಕುಪತ್ರ ವಿತರಣೆ, ಮಾಸಾಶನ, ಪಿಂಚಣಿ, ಪಡಿತರ ವ್ಯವಸ್ಥೆ ಬಲಗೊಳಿಸುವುದು ಸೇರಿದಂತೆ ಸಾಮಾಜಿಕ ಭದ್ರತಾ ಯೋಜನೆಗಳನ್ನು ಸುಲಲಿತಗೊಳಿಸಲಾಗಿದೆ. ಸಾರ್ವಜನಿಕರಿಂದ ಬರುವ ದೂರುಗಳನ್ನು ತಕ್ಷಣ ವಿಲೇವಾರಿ ಮಾಡಿ ಸರ್ಕಾರಿ ಕಚೇರಿಗಳಲ್ಲಿ ಕೆಲಸ ಕಾರ್ಯಗಳು ಸುಗಮವಾಗಿ ನಡೆಯುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.
ನಗರಸಭೆ ಪೌರಾಯುಕ್ತ ಬಿಳಿಕೆಂಚಪ್ಪ ಮಾತನಾಡಿದರು. ಸ್ಥಳೀಯ ನಗರಸಭೆ ಸದಸ್ಯೆ ಕೆ.ಜಿ.ರಘುರಾಂ, ಲೋಕೇಶ್ ಬಾಬು, ಜಯಲಕ್ಷ್ಮಿ ನಟರಾಜ್, ಮಮತಾಶ್ರೀ, ನಗರಸಭೆ ಅಧಿಕಾರಿಗಳು, ಮುಖಂಡರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

