ಬಾಲ್ಯ ವಿವಾಹ ತಡೆಗೆ ಸಮಿತಿ ರಚಿಸಿ ಮಕ್ಕಳ ರಕ್ಷಣಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ
ರಾಮನಗರ: ಬಾಲ್ಯ ವಿವಾಹ ತಡೆ ನಿಟ್ಟಿನಲ್ಲಿ ಹೋಬಳಿ, ತಾಲೂಕು ಮತ್ತು ಜಿಲ್ಲಾಮಟ್ಟದಲ್ಲಿ ಸಮಿತಿ ರಚನೆಗೆ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ನಗರದ ಕಂದಾಯ ಭವನದ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬಾಲ್ಯ ವಿವಾಹಗಳ ತಡೆಗೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸುವ ಮೂಲಕ ಪಿಡುಗು ತೊಲಗಿಸಬೇಕು ಎಂದು ಹೇಳಿದರು.ಬಾಲ್ಯ ವಿವಾಹ ತಡೆಗೆ ಮುಂದಾದ ವೇಳೆ ಪೋಷಕರು ಮತ್ತು ಸಂಬಂಧಿಕರು ಹಲ್ಲೆಗೆ ಮುಂದಾಗುತ್ತಿದ್ದು, ಭೀತಿಯ ವಾತಾವರಣ ಮೂಡಿಸುತ್ತಾರೆ. ತಮ್ಮ ಕರ್ತವ್ಯಕ್ಕೆ ಅಡ್ಡಿ ಉಂಟಾಗುತ್ತಿದೆ ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸದಸ್ಯರು, ಅಧಿಕಾರಿಗಳು ಅಳಲು ತೋಡಿಕೊಂಡರು.ಮಾಗಡಿಯ ವಿವಿಧೆಡೆ ಬೆದರಿಕೆ ವ್ಯಕ್ತವಾಗಿದೆ.
ಚನ್ನಪಟ್ಟಣ ತಾಲೂಕಿನ ಚಕ್ಕೆರೆಯಲ್ಲಿ ಬಾಲಕಿ ವಿವಾಹಕ್ಕೆ ನಿಶ್ಚಯಿಸಿರುವ ಕುಟುಂಬಕ್ಕೆ ನೊಟೀಸ್ ಜಾರಿಗೊಳಿಸಲಾಗಿದೆ. ಸಂಕಷ್ಟದಲ್ಲಿರುವ ಮಕ್ಕಳ ಸಮೀಕ್ಷೆ ನಡೆಸಿದ್ದು, ನಿವಾರಣೆಗೆ ಯೋಜನೆ ರೂಪಿಸಲಾಗುತ್ತಿದೆ ಎಂದು ಮಕ್ಕಳ ರಕ್ಷಣಾ ಘಟಕದ ಅಧಿಕಾರಿ ರಾಧಾ ವಿವರಿಸಿದರು.ಜಾನಪದ ಲೋಕದ ಬಳಿ ಲಭ್ಯವಿರುವ 5 ಎಕರೆ ಭೂಮಿಯನ್ನು ಮಕ್ಕಳ ರಕ್ಷಣಾ ಘಟಕಕ್ಕೆ ಮಂಜೂರು ಮಾಡಿದರೆ, ಅಲ್ಲಿ ಬಾಲಭವನ ನಿರ್ಮಿಸಬಹುದಾಗಿದೆ ಎಂದು ಅಧಿಕಾರಿಗಳು ಸಲ್ಲಿಸಿದ ಕೋರಿಕೆಗೆ ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ ಸಕಾರಾತ್ಮಕವಾಗಿ ಸ್ಪಂದಿಸಿದರು. ತಕ್ಷಣವೇ ಈ ಬಗ್ಗೆ ಲಿಖಿತ ಮನವಿ ಸಲ್ಲಿಸಿದರೆ ಶಿಫಾರಸು ಮಾಡುವ ಭರವಸೆಯಿತ್ತರು.
ವರದಿ ನೀಡಲು ಸೂಚನೆ: ಜಿಲ್ಲೆಯಲ್ಲಿ ಅನಧಿಕೃತವಾಗಿ ಶಾಲೆಗಳನ್ನು ಸ್ಥಾಪಿಸುವುದನ್ನು ತಡೆಗಟ್ಟಲಾಗುತ್ತಿದೆ. ಶಾಲೆ ತೆರೆಯಲು ಜಿಲ್ಲಾ ಮಕ್ಕಳ ರಕ್ಷಣಾ ಘಟಕದಿಂದ ಕಡ್ಡಾಯವಾಗಿ ಅನುಮತಿ ಪಡೆದು, ನೊಂದಣಿ ಮಾಡಿಸಬೇಕು. ಬಿಡದಿ ಬಳಿಯ ನಿತ್ಯಾನಂದ ಆಶ್ರಮದಲ್ಲಿ ಸುಮಾರು 65 ಮಕ್ಕಳಿದ್ದು, ಈ ಕುರಿತು ತಕ್ಷಣ ಪರಿಶೀಲಿಸಿ ವರದಿ ನೀಡುವಂತೆ ಶ್ರೀರಾಮರೆಡ್ಡಿ ಅವರು ಶಿಕ್ಷಣ ಇಲಾಖೆ ಅಧಿಕಾರಿಗಳಿಗೆ ಆದೇಶಿಸಿದರು.
ಪರಿಹಾರ ವಿತರಣೆಗೆ ಕ್ರಮ: ಅತ್ಯಾಚಾರಕ್ಕೆ ಒಳಗಾಗಿ ನೊಂದ ಬಾಲಕಿಯರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 5000 ದಿಂದ 1.20 ಲಕ್ಷದವರೆಗೆ ಪರಿಹಾರ ನೀಡಲು ಅವಕಾಶವಿದೆ. ಈ ನಿಟ್ಟಿನಲ್ಲಿ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಸಮಾಜ ಕಲ್ಯಾಣಾಧಿಕಾರಿಗೆ ಶ್ರೀರಾಮರೆಡ್ಡಿ ಸೂಚಿಸಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಎಸ್.ಎಂ.ಚಂದ್ರ, ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಾರ್ಜ್, ಸದಸ್ಯ ಪ್ರೊ. ಶಿವಲಿಂಗಯ್ಯ ಸೇರಿದಂತೆ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

