ಬೆಂಗಳೂರು ಗ್ರಾಮಾಂತರ

ಬೇಸಿಗೆ ಮುನ್ನವೇ ಜಿಲ್ಲೆಯಲ್ಲಿ ಜಲಕ್ಷಾಮ

Published On :

ರಾಮನಗರ:  ಸತತ 2ನೇ ವರ್ಷವೂ ಕಾಡಿದ ಭೀಕರ ಬರದಿಂದ ಕೆರೆ, ಕಟ್ಟೆ, ನದಿ, ತೊರೆಗಳೆಲ್ಲವೂ ಬರಿದಾಗಿವೆ. ಅಂತರ್ಜಲ ತೀವ್ರ ಕುಸಿದಿದ್ದು, ಹಾಲಿ ಇರುವ ಬೋರ್‌ವೆಲ್‌ಗಳಲ್ಲಿ ನೀರು ಬತ್ತಿದೆ. ಹೊಸದಾಗಿ ಕೊರೆಯುತ್ತಿರುವ ಕೊಳವೆ ಬಾವಿಗಳು ವಿಫಲವಾಗುತ್ತಿವೆ. ಬೇಸಿಗೆಗೆ ಮುನ್ನವೇ ಬವಣೆಗಳ ಸುಳಿಗೆ ಸಿಲುಕಿರುವ ರೈತರು ಕಂಗಾಲಾಗಿದ್ದಾರೆ.
2010 ಮತ್ತು 2011ರಲ್ಲಿ ಮಳೆ ಅಭಾವ ಎದುರಿಸಿರುವ ಜಿಲ್ಲೆಯಲ್ಲಿ ಆಹಾರ, ಮೇವು ಉತ್ಪಾದನೆ ಗಣನೀಯವಾಗಿ ಕುಸಿದಿದೆ. ಕಳೆದ 6 ತಿಂಗಳಲ್ಲಿ ಹೊಸದಾಗಿ ಕೊರೆದಿರುವ 6 ಸಾವಿರದಷ್ಟು ಕೊಳವೆ ಬಾವಿಗಳು ವಿಫಲವಾಗಿದೆ.  ಹಾಲಿ ಇದ್ದ 14 ಸಾವಿರಕ್ಕೂ ಹೆಚ್ಚು ಬೋರ್‌ವೆಲ್‌ಗಳು ಬತ್ತಿ ಹೋಗಿವೆ. ಕಂಡರಿಯದ ಜಲಕ್ಷಾಮ ಈ ಜಿಲ್ಲೆಯಲ್ಲಿ ಎದುರಾಗಿದೆ.
ವಿಫಲವಾಗಿರುವ ಕೊಳವೆ ಬಾವಿಗಳಲ್ಲಿ ಕುಡಿಯುವ ನೀರಿನ ಉದ್ದೇಶದ ಕೊಳವೆ ಬಾವಿಗಳ ಪ್ರಮಾಣವೂ ಅಧಿಕವಾಗಿದೆ. ಜಿಲ್ಲಾಡಳಿತವೇ ಘೋಷಿಸಿರುವ ಪ್ರಕಾರ ಜಿಲ್ಲೆಯ 500ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಬವಣೆ ಇದ್ದು, 159 ಗ್ರಾಮಗಳನ್ನು ತೀವ್ರ ಸಮಸ್ಯಾತ್ಮಕವೆಂದು ಗುರ್ತಿಸಲಾಗಿದೆ. ದಿನ ಕಳೆದಂತೆ ಈ ಪ್ರಮಾಣ ಮತ್ತಷ್ಟು ಹೆಚ್ಚುವ ಆತಂಕವಿದೆ.
ಕುಡಿಯುವ ನೀರಿಗೆ ತತ್ವಾರ:  ಶಾಸಕರು, ಸಂಸದರ ಕ್ಷೇತ್ರಾಭಿವೃದ್ಧಿ ನಿಧಿ ಮತ್ತು ಜಿಲ್ಲಾ ಪಂಚಾಯತ್ ಮೂಲಕ ಜಿಲ್ಲೆಯಲ್ಲಿ ಕಳೆದೊಂದು ವರ್ಷದಿಂದ ಸುಮಾರು 2 ಸಾವಿರಕ್ಕೂ ಹೆಚ್ಚು ಕೊಳವೆ ಬಾವಿಗಳನ್ನು ಕೊರೆಸಿದ್ದು, ಇವುಗಳಲ್ಲಿ ಶೇಕಡ 60ರಷ್ಟು ಅಂದರೆ 1200ರಷ್ಟು ಕೊಳವೆ ಬಾವಿಗಳು ನೀರು ಸಿಗದೆ ವಿಫಲವಾಗಿವೆ.
ಆದರೆ, ಅಧಿಕಾರಿಗಳು ನೀಡುವ ಮಾಹಿತಿಯಲ್ಲಿ ಶೇ.90ರಷ್ಟು ಕೊಳವೆ ಬಾವಿಗಳು ಸಫಲವಾಗಿವೆ ಎಂದಾಗಿರುತ್ತದೆ. ಹೀಗೆ ತಪ್ಪು ಲೆಕ್ಕ ನೀಡುವ ಮೂಲಕ ಮೇಲಧಿಕಾರಿಗಳು ಮತ್ತು ಸರ್ಕಾರವನ್ನು ತಪ್ಪುದಾರಿಗೆ ಎಳೆದಿದ್ದಾರೆ. ಕೊಳವೆ ಬಾವಿ ವಿಫಲವೆಂದು ವರದಿ ನೀಡಿದರೆ, ಗುತ್ತಿಗೆದಾರನಿಗೆ ಸಿಗುವ ಲಾಭದ ಪ್ರಮಾಣ ಕಡಿಮೆಯಾಗುತ್ತದೆ.
ಗುತ್ತಿಗೆದಾರರ ಜತೆ ಅಧಿಕಾರಿಗಳು ಶಾಮೀಲಾಗಿದ್ದಾರೆ. ಲಂಚದಾಸೆಗೆ ಬಿದ್ದ ಅಧಿಕಾರಿಗಳು ವಾಸ್ತವವನ್ನು ಮರೆಮಾಚಿ ಸರ್ಕಾರ ಮತ್ತು ಜನತೆಗೆ ದ್ರೋಹವೆಸಗುತ್ತಿದ್ದಾರೆ. ಪರಿಣಾಮ ಸರ್ಕಾರದ ಅನುದಾನಕ್ಕೂ ಕತ್ತರಿ ಬೀಳುವಂತಹ ಪರಿಸ್ಥಿತಿ ಎದುರಾಗಿದ್ದು, ಜಿಲ್ಲೆಗೆ ಅನ್ಯಾಯವಾಗುತ್ತಿದೆ.
ಕೃಷಿಕರ ಸ್ಥಿತಿ ಶೋಚನೀಯ:  ಸಮೃದ್ಧವಾಗಿ ನೀರು ಬಂದಿದ್ದ ಅದೆಷ್ಟೋ ಕೊಳವೆಬಾವಿಗಳು ಈಗ ಬತ್ತಿ ಹೋಗಿವೆ. ಒಂದು ದಿನದ ಅಂತರದಲ್ಲಿ ನೀರಿನ ಪ್ರಮಾಣ ಕುಸಿದ ಇಲ್ಲವೇ ಬತ್ತಿದ ಕೊಳವೆಬಾವಿಗಳ ಸಂಖ್ಯೆ ಸಾಕಷ್ಟಿದೆ. ಸಾಲ ಮಾಡಿ, ಬೋರ್‌ವೆಲ್ ಕೊರೆಸಿದ ರೈತರು ಈಗ ನೀರು ಬತ್ತಿ ಹೋಗಿರುವುದನ್ನು ಕಂಡು ಕಣ್ಣೀರಿಡುವಂತಾಗಿದೆ.  ಒಂದೆಡೆ ವಿದ್ಯುತ್ ಅಭಾವ, ಮತ್ತೊಂದೆಡೆ ಹೆಚ್ಚಿರುವ ಕೃಷಿ ಉತ್ಪಾದನಾ ವೆಚ್ಚದ ನಡುವೆ ಕೊಳವೆ ಬಾವಿಗಳಲ್ಲಿ ನೀರು ಬತ್ತಿ ಹೋಗುತ್ತಿರುವುದು ರಾಮನಗರ ಜಿಲ್ಲೆಯ ರೈತಾಪಿ ಸಮುದಾಯವನ್ನು ನಿಜಕ್ಕೂ ಶೋಚನೀಯ ಸ್ಥಿತಿಗೆ ದೂಡಿದೆ. ಪರಿಸ್ಥಿತಿ ಹೀಗೇ ಮುಂದುವರಿದಲ್ಲಿ ಜನ, ಜಾನುವಾರುಗಳಿಗೂ ಕುಡಿಯಲು ನೀರಿಲ್ಲದ ದುಸ್ಥಿತಿ ಎದುರಾಗುವ ಸಂಭವವಿದೆ.
ಯಂತ್ರಗಳಿಗೆ ಡಿಮ್ಯಾಂಡ್:  ರಾಮನಗರ ಜಿಲ್ಲಾದ್ಯಂತ ಬೋರ್‌ವೆಲ್ ಕೊರೆಸುವವರ ಸಂಖ್ಯೆ ಹೆಚ್ಚಾಗಿದ್ದು, ಕೊರೆಯುವ ಯಂತ್ರಗಳನ್ನು ಒಳಗೊಂಡ ಲಾರಿಗಳು ಮತ್ತು ಗುತ್ತಿಗೆದಾರರಿಗೆ ಎಲ್ಲಿಲ್ಲದ ಡಿಮ್ಯಾಂಡ್ ಬಂದಿದೆ. ಡೀಸೆಲ್ ದರ ಹೆಚ್ಚಳವನ್ನೇ ನೆಪವಾಗಿಟ್ಟುಕೊಂಡ ಗುತ್ತಿಗೆದಾರರು ಕೊಳವೆಬಾವಿ ಕೊರೆಯುವ ದರವನ್ನು ಗಣನೀಯವಾಗಿ ಹೆಚ್ಚಿಸಿ, ರೈತರ ಮೇಲೆ ಮತ್ತಷ್ಟು ಹೊರೆ ಹೇರುತ್ತಿದ್ದಾರೆ.
ಕಳೆದ ವರ್ಷ 6.5 ಇಂಚು ಕೊಳವೆ ಬಾವಿ ಕೊರೆಯಲು ಪ್ರತಿ ಅಡಿಗೆ 65 ಶುಲ್ಕ ವಿಧಿಸಲಾಗುತ್ತಿತ್ತು. ಈ ಬಾರಿ 70 ರಿಂದ 75 ರವರೆಗೆ ವಿಧಿಸಿ ವಸೂಲು ಮಾಡಲಾಗುತ್ತಿದೆ. ಕೇಸಿಂಗ್ ಪೈಪ್ ಧಾರಣೆಯೂ ಹೆಚ್ಚಿದೆ. ನೀರು ಸಿಕ್ಕರೂ ಎಷ್ಟು ದಿನ ಬರುತ್ತದೆ ಎನ್ನುವ ಖಾತ್ರಿ ಇಲ್ಲ. ನೀರು ಸಿಗಲಿ, ಸಿಗದಿರಲಿ ರೈತರ ಸುಲಿಗೆ ಮಾತ್ರ ತಪ್ಪುತ್ತಿಲ್ಲ. ರೀ ಡ್ರಿಲ್ಲಿಂಗ್ ಕೂಡ ದೊಡ್ಡ ದಂಧೆಯಾಗಿದೆ. ರೈತರ ಶೋಷಣೆಗೆ ದಾರಿಯಾಗಿದೆ.
ಸಾವಿರ ಅಡಿಗೆ ಆಳ:  ಈ ಜಿಲ್ಲೆಯಲ್ಲಿ ನೀರು ಕಾಣಲು ಬಹುತೇಕ ಕಡೆ 800 ಅಡಿಯಿಂದ ಆಳಕ್ಕೆ ಕೊರೆಯುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ, ಕೋಲಾರ, ತಮಿಳುನಾಡು ಸೇರಿದಂತೆ ಹೊರಗಿನಿಂದ ಬಂದಿರುವ ಸಾವಿರ ಅಡಿ ಕೊರೆಯುವ ಸಾಮರ್ಥ್ಯದ ಯಂತ್ರಗಳಿಗೆ ಬೇಡಿಕೆ ಹೆಚ್ಚಾಗಿದೆ.
ಒಂದು ಬೋರ್‌ವೆಲ್ ಕೊರೆಸಲು ರೈತರು ಕನಿಷ್ಠ 1.25 ಲಕ್ಷದವರೆಗೆ ಹೊಂದಿಸಿಕೊಳ್ಳಬೇಕಿದೆ. ಒಂದೊಮ್ಮೆ ನೀರು ಸಿಕ್ಕಲ್ಲಿ ಪಂಪ್, ಮೋಟಾರ್, ಪೈಪ್, ಕೇಬಲ್, ವಿದ್ಯುತ್ ಸಂಪರ್ಕಕ್ಕಾಗಿ ಇನ್ನೂ 2 ಲಕ್ಷ ಬೇಕು. ಹೀಗಾಗಿ ಪ್ರತಿ ಬೋರ್‌ವೆಲ್‌ಗೆ ರೈತರು ಸರಾಸರಿ 3 ಲಕ್ಷದಿಂದ 3.5 ಲಕ್ಷ ಹೊಂದಿಸಿಕೊಳ್ಳಬೇಕಿದೆ.
ಕಿವಿಗೊಡದ ಸರ್ಕಾರ:  ಕೈಗಾರಿಕೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೆ ಕೋಟಿಗಟ್ಟಲೆ ಪ್ರೋತ್ಸಾಹ ಧನ ನೀಡುತ್ತಿರುವ ಸರ್ಕಾರವು ಕೊಳವೆಬಾವಿ ಕೊರೆಸುವುದಕ್ಕೆ ಸಬ್ಸಿಡಿ ನೀಡಬೇಕು ಎನ್ನುವ ರೈತಾಪಿ ಸಮುದಾಯದ ಬಹುದಿನಗಳ ಬೇಡಿಕೆಗೆ ಕಿವಿಗೊಡುತ್ತಿಲ್ಲ. ಈಗಲಾದರೂ ಸರ್ಕಾರ ಇತ್ತ ಗಮನ ಹರಿಸಬೇಕೆನ್ನುವುದು ರೈತರ ಆಗ್ರಹವಾಗಿದೆ.
-ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.