ಬೆಂಗಳೂರು ಗ್ರಾಮಾಂತರ

ತಾಲೂಕಿನ ಋಣ ತೀರಿಸುವೆ: ಸಚಿವ ಸೋಮಣ್ಣ ವಿಶ್ವಾಸ

Published On :

ಕನಕಪುರ: ಕನಕಪುರ ತಾಲೂಕಿನ ಕುಗ್ರಾಮದಲ್ಲಿ ಜನಿಸಿದ ತಾವು ಜನ್ಮಭೂಮಿಯ ಋಣವನ್ನು ತೀರಿಸುವ ಸಲುವಾಗಿ ತಾಲೂಕಿನ ಅಭಿವೃದ್ಧಿಗೆ ಗರಿಷ್ಠ ಸಹಾಯ ಮಾಡುತ್ತಿರುವುದಾಗಿ ವಸತಿ ಸಚಿವ ವಿ.ಸೋಮಣ್ಣ ಹೇಳಿದ್ದಾರೆ.
 ಅವರು ಕನಕಪುರದ ತಾಲೂಕು ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ರಾಜೀವ್‌ಗಾಂಧಿ ಗ್ರಾಮೀಣ ವಸತಿ ನಿಗಮ ಆಯೋಜಿಸಿದ್ದ ಉಚಿತ ನಿವೇಶನ ಹಕ್ಕುಪತ್ರ ವಿತರಣೆ ಸಮಾರಂಭದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡುತ್ತಿದ್ದರು.
 ಕಾರ್ಯಕ್ರಮದಲ್ಲಿ ಕನಕಪುರ ಹೊರವಲಯದ ಕರಡೀಗುಡ್ಡೆ ಪ್ರದೇಶದಲ್ಲಿ 60 ಎಕರೆಯಲ್ಲಿ ನೂತನವಾಗಿ ನಿರ್ಮಿಸುತ್ತಿರುವ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಲೇಔಟ್‌ನಲ್ಲಿ ಬಡವರಿಗೆ, ವಸತಿರಹಿತರಿಗೆ ನೀಡಲು ವಾಜಪೇಯಿ ನಗರ ನಿವೇಶನ ಯೋಜನೆ ಯಲ್ಲಿ ಒಟ್ಟಾರೆ 2,800 ನಿವೇಶನಗಳ ಹಕ್ಕುಪತ್ರಗಳ ವಿತರಣೆ ನೆರವೇರಿಸಿದರು. ವಸತಿ ಇಲಾಖೆ ವತಿಯಿಂದ ಪಟ್ಟಣದಲ್ಲಿ ನಾಲ್ಕು ಸಾವಿರ ನಿವೇಶನಗಳ ಹಂಚಿಕೆ ಮಾಡಲಾಗಿದೆ ಎಂದು ಸಚಿವ ಸೋಮಣ್ಣ ತಿಳಿಸಿದರು.
ಐತಿಹಾಸಿಕ ದಿನ:  ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಶಾಸಕ ಡಿ.ಕೆ.ಶಿವಕುಮಾರ್ ಮಾತನಾಡಿ, ಕನಕಪುರದ ಇತಿಹಾಸದಲ್ಲಿ ದಾಖಲಾರ್ಹವಾದ ಐತಿಹಾಸಿಕ ದಿನವಾಗಿದೆ. ಮಾನವನ ಜೀವನದ ಮಹದಾಸೆಯೆಂದರೆ ಸ್ವಂತಃ ಸೂರನ್ನು ಹೊಂದುವುದು. ಅದಕ್ಕಾಗಿ ಕನಕಪುರ ತಾಲೂಕಿನಲ್ಲಿ ವಸತಿಕ್ರಾಂತಿ ಆರಂಭವಾಗಿದೆ. ಗುಡಿಸಲುರಹಿತ ಕ್ಷೇತ್ರವನ್ನಾಗಿಸುವ ತಮ್ಮ ಅಭಿಲಾಷೆಗೆ ವಸತಿಸಚಿವ ಸೋಮಣ್ಣ ಬೆನ್ನೆಲುಬಾಗಿ ನಿಂತಿದ್ದಾರೆ, ತಾಲೂಕಿನ 12,528 ಜನರಿಗೆ ತಲಾ 50 ರಿಂದ 75 ಸಾವಿರ ವೆಚ್ಚದಲ್ಲಿ ಮನೆಗಳನ್ನು ನಿರ್ಮಿಸಿಕೊಡಲಾಗಿದೆ, ಕೇಂದ್ರ ಸರ್ಕಾರದ ಯೋಜನೆಯಲ್ಲಿ ತಲಾ 1.85 ಲಕ್ಷ ವೆಚ್ಚದಲ್ಲಿ ಪಟ್ಟಣವ್ಯಾಪ್ತಿಯ ಕುರೂಪೇಟೆ, ಮಳಗಾಳು, ಮಹಾರಾಜರಕಟ್ಟೆ, ಮೆಳೇಕೋಟೆಗಳಲ್ಲಿ ಒಟ್ಟಾರೆ 20 ಕೋಟಿ ವೆಚ್ಚದಲ್ಲಿ 727 ಮನೆಗಳನ್ನು ಕಟ್ಟಿ ಹಸ್ತಾಂತರಿಸಲಾಗಿದೆ ಎಂದು ಹೇಳಿದರು.
 ಕಾಂಗ್ರೆಸ್‌ಮುಖಂಡ ಡಿ.ಕೆ. ಸುರೇಶ್ ಮಾತನಾಡಿ, ಈಗ ನೀಡಿರುವ 3 ಸಾವಿರ ಉಚಿತ ನಿವೇಶನಗಳೊಂದಿಗೆ ಇನ್ನೂ 2 ಸಾವಿರ ನಿವೇಶನಗಳನ್ನು ಬಾಕಿಯಿರುವ ಅರ್ಜಿದಾರರಿಗೆ ನೀಡಲಾಗುವುದು ಎಂದರು.
ಜಿಲ್ಲಾಧಿಕಾರಿ ಶ್ರೀರಾಮರೆಡ್ಡಿ, ಜಿಪಂ ಸಿಇಓ ಡಾ. ಸಿದ್ದರಾಮಯ್ಯ, ಜಿಪಂ ಸದಸ್ಯ ಇಕ್ಬಾಲ್‌ಹುಸೇನ್, ಡಿ.ಕೆ.ಸುರೇಶ್, ನಳಿನಾ ರವಿಶಂಕರ್, ಪುರಸಭಾಧ್ಯಕ್ಷ ಆರ್.ಕೃಷ್ಣಮೂರ್ತಿ, ತಾಪಂ ಅಧ್ಯಕ್ಷೆ
ನಾಗರತ್ನ, ಉಪಾಧ್ಯಕ್ಷ ಬಿ.ಎಸ್.ರವಿ ಕುಮಾರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯದೇವ್, ಕೆ.ಎನ್.ದಿಲೀಪ್, ಉಪವಿಭಾಗಾಧಿಕಾರಿ ಡಾ.ಸ್ನೇಹಾ, ಆಯುಕ್ತರಾದ ಗುರುಪ್ರಸಾದ್, ಶ್ರೀರಂಗರಾಜು,ಡಾ.ಮಹದೇವಪ್ರಸಾದ್, ಜಗದೀಶ್, ತಹಸೀಲ್ದಾರ್ ಡಾ.ದಾಕ್ಷಾಯಣಿ ಪಾಲ್ಗೊಂಡಿದ್ದರು. ಪುರಸಭಾ ಮುಖ್ಯಾಧಿಕಾರಿ ಮಾಯಣ್ಣಗೌಡ ಕಾರ್ಯಕ್ರಮ ನಿರ್ವಹಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.