ಮರಳು ಗಣಿಗಾರಿಕೆ ನಿಷೇಧಿಸುವಂತೆ ಆಗ್ರಹ
ಚನ್ನಪಟ್ಟಣ: ತಾಲೂಕಿನ ಇಗ್ಗಲೂರು ಜಲಾಶಯದಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆ ನಿಷೇಧಿಸುವಂತೆ ಆಗ್ರಹಿಸಿ ತಾ.ಪಂ ಮಾಜಿ ಅಧ್ಯಕ್ಷ ಸಿದ್ದರಾಮ ಹೆಗಡೆ ನೀರಿನ ಟ್ಯಾಂಕ್ ಮೇಲೇರಿ ಪ್ರತಿಭಟಿಸಿದ ಘಟನೆ ಶನಿವಾರ ತಾಲೂಕಿನ ಇಗ್ಗಲೂರು ಗ್ರಾಮದಲ್ಲಿ ನಡೆಯಿತು.
ಶುಕ್ರ ವಾರ ಸಂಜೆಯ ವೇಳೆಗೆ ಗ್ರಾಮದ ಕುಡಿಯುವ ನೀರಿನ ಟ್ಯಾಂಕರ್ ಮೇಲೇರಿದ ಸಿದ್ದರಾಮ ಹೆಗಡೆ ಇಲ್ಲಿನ ದೇವೇಗೌಡ ಬ್ಯಾರೇಜ್ನಲ್ಲಿ ಕೆಲ ಮಂದಿ ನಿರಂತರವಾಗಿ ಮರಳು ಗಣಿಗಾರಿಕೆ ನಡೆಸುತ್ತಿದ್ದು ತೆಪ್ಪಗಳ ಮೂಲಕ ಡ್ಯಾಂನ ಮಧ್ಯಭಾಗದಲ್ಲಿ ಮರಳು ಗಣಿಗಾರಿಕೆ ನಡೆಸುತ್ತಿದ್ದಾರೆ. ಆದರೆ ತಾಲೂಕು ಆಡಳಿತ ಇದುವರೆಗೂ ಯಾವುದೇ ಕ್ರಮ ಕೈಗೊಂಡಿದ್ದ ಎಂದು ಆಕ್ರೋಶ ವ್ಯಕ್ತ ಪಡಿಸಿದರು.
ಮರಳು ಗಣಿಗಾರಿಕೆಯಿಂದ ಜಲಾಶಯಕ್ಕೆ ಅಪಾಯವಿದ್ದು, ಹೀಗೆ ಮರಳು ಲೂಟಿ ಮುಂದುವರೆದರೆ ಜಲಾಶಯಕ್ಕೆ ಸಂಚಕಾರವಿದೆ. ಆದರೆ ನಮ್ಮ ದಾವಂತವನ್ನು ತಾಲೂಕು ಆಡಳಿತ ಅರ್ಥಮಾಡಿಕೊಳ್ಳುತ್ತಿಲ್ಲ ಎಂದು ಅವರು ಕಿಡಿಕಾರಿದರು. ಗ್ರಾಮದ ಜಲಾಶಯಲ್ಲಿ ಈ ಹಿಂದೆ ವ್ಯಾಪಕ ಪ್ರಮಾಣದಲ್ಲಿ ಮರಳು ಲೂಟಿ ನಡೆದಿದ್ದು, ಈ ಬಗ್ಗೆ ಪ್ರತಿಭಟನೆ ನಡೆಸಿದಾಗ ಭರವಸೆ ನೀಡಿ ಸುಮ್ಮನಾದ ಅಧಿಕಾರಿಗಳು ಮತ್ತೆ ಇತ್ತ ಗಮನ ಹರಿಸಲಿಲ್ಲ. ಮರಳು ಗಣಿಗಾರಿಕೆಗೆ ಕಡಿವಾಣ ಹಾಕುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.
ತಹಸೀಲ್ದಾರ್ ದಾಳಿ: ಸಿದ್ದರಾಮ ಹೆಗಡೆ ಪ್ರತಿಭಟನೆಯ ಹಿನ್ನೆಲೆಯಲ್ಲಿ ಸ್ಥಳಕ್ಕಾಗಮಿಸಿದ ತಹಸೀಲ್ದಾರ್ ಅರುಣ ಪ್ರಭಾ ಜಲಾಶಯದಲ್ಲಿ ಮರಳು ಸಂಗ್ರಹಣೆ ಮಾಡುತ್ತಿದ್ದ 8 ತೆಪ್ಪಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ತೆಪ್ಪಗಳ ಮಾಲೀಕರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದ್ದು ಪ್ರತಿಭಟನಾ ನಿರತ ಸಿದ್ದರಾಮ ಹೆಗಡೆಯ ಮನ ಒಲಿಸಿ ಕೆಳಗಿಳಿಸಲು ಪ್ರಯತ್ನಿಸಿದರು.
ಪಟ್ಟು ಸಡಿಲಿಸದ ಹೆಗಡೆ: ಮರಳು ಗಣಿಗಾರಿಕೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸ ಬೇಕು, ಮರಳು ಲೂಟಿ ನಡೆದಿರುವ ಬಗ್ಗೆ ತನಿಖೆ ನಡೆಸಬೇಕೆಂದು ಪಟ್ಟು ಹಿಡಿದಿರುವ ಹೆಗಡೆ ಕೆಳಗಿಳಿಯಲು ನಿರಾಕರಿಸಿದರು. ಸಂಜೆಯವರೆಗೂ ತಹಸೀಲ್ದಾರ್ ಮತ್ತು ಪೊಲೀಸ್ ಅಧಿಕಾರಿಗಳು ಹೆಗಡೆಯವರನ್ನು ಕೆಳಗಿಳಿಸಲು ತೀವ್ರ ಪ್ರಯತ್ನ ನಡೆಸಿದ್ದು ಅವರನ್ನು ಕೆಳಗಿಳಿಸಿ ಪ್ರಕರಣ ಸುಖಾಂತ್ಯ ಗೊಳಿಸುವುದಾಗಿ ತಹಸೀಲ್ದಾರ್ ಅರುಣ ಪ್ರಭ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಂಬಲ: ಸಿದ್ದರಾಮ ಹೆಗಡೆ ಪ್ರತಿಭಟನೆಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ, ಜಯಕರ್ನಾಟಕ ಸಂಘಟನೆ ಬೆಂಬಲ ನೀಡಿದ್ದು ಇಗ್ಗಲೂರು ಜಲಾಶಯದಲ್ಲಿ ನಡೆಯುತ್ತಿರುವ ಮರಳು ಗಣಿಗಾರಿಕೆಯನ್ನು ನಿಷೇಧಿಸುವಂತೆ ತಾಲೂಕು ಆಡಳತ ವನ್ನು ಆಗ್ರಹಿಸಿದರು. ಜನಪರ ವೇದಿಕೆಯ ತಾಲೂಕು ಅಧ್ಯಕ್ಷ ಬಿ.ಸಿ.ಯೋಗೇಶ್, ಜಯಕರ್ನಾಟಕದ ಸೋಮಸುಂದರ್ ಹಾಗೂ ಸ್ಥಳೀಯ ಗ್ರಾಮಸ್ಥರು ಹೆಗಡೆ ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

