ರೈತರ ಬೇಡಿಕೆ ಈಡೇರಿಕೆಗೆ ಭಾಗಶಃ ಸಮ್ಮತಿ
ಕ.ಪ್ರ.ವಾರ್ತೆ , ರಾಮನಗರ , ಜು.2
ಸರಬರಾಜು ಮಾಡಿರುವ ಕಬ್ಬಿನ ಬಾಕಿ ಹಣ ಪಾವತಿ ಸೇರಿದಂತೆ ರೈತರ ಬೇಡಿಕೆಗಳ ಈಡೇರಿಕೆಗೆ ಬಿಡದಿ ಬಳಿ ಕದ ಮುಚ್ಚಿರುವ ಎಸ್ಪಿಆರ್ ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿಯು ಭಾಗಶಃ ಸಮ್ಮತಿಸಿದೆ.
ಕನಕಪುರ ತಾಲೂಕಿನ ಕೊಳ್ಳಿಗನಹಳ್ಳಿ ಗ್ರಾಮದ ಹಾಲು ಉತ್ಪಾದಕರ ಸಹಕಾರ ಸಂಘದ ಆವರಣದಲ್ಲಿ ಮಂಗಳವಾರ ಉಪ ವಿಭಾಗಾಧಿಕಾರಿ ಡಾ.ರಾಜೇಂದ್ರ ಪ್ರಸಾದ್ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ರೈತರ ಮೂರು ಪ್ರಮುಖ ಬೇಡಿಕೆಗಳು ಈಡೇರಿವೆ.
2011-12ನೇ ಸರಬರಾಜು ಮಾಡಿಕೊಂಡ ಕಬ್ಬಿನ ಸಂಪೂರ್ಣ ಬಾಕಿಯನ್ನು ಸಂಪೂರ್ಣ ಚುಕ್ತಾ ಮಾಡಲಾಗುವುದು. ಶೇಕಡ 10 ರಿಂದ 20ರಷ್ಟು ವೇಸ್ಟೇಜ್ ಪ್ರಮಾಣವನ್ನು ಕಡಿತಗೊಳಿಸಿದ್ದು, ಅದರ ಮೊತ್ತವನ್ನು ಎಲ್ಲ ರೈತರಿಗೂ ವಿತರಿಸಬೇಕೆನ್ನುವ ಬೇಡಿಕೆಗೆ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ.
ಕಡುಗೂಲಿ ಪ್ರೋತ್ಸಾಹ ಧನವನ್ನು ರೈತರಿಗೆ ಪಾವತಿಸಬೇಕೆನ್ನುವ ಬೇಡಿಕೆಯೂ ಈಡೇರಿದೆ. ಆದರೆ, ಪ್ರತಿ ಟನ್ ಕಬ್ಬಿಗೆ ರು.100 ಹೆಚ್ಚುವರಿ ದರ ಪಾವತಿಸಬೇಕು ಎನ್ನುವ ಮಹತ್ವದ ಬೇಡಿಕೆಗೆ ಆಡಳಿತ ಮಂಡಳಿ ಆಕ್ಷೇಪ ವ್ಯಕ್ತಪಡಿಸಿತು.
ರೈತರ ಬಿಗಿ ಪಟ್ಟು: ಹೆಚ್ಚುವರಿಯಾಗಿ ರು.100 ಪಾವತಿ ಮಾಡಲೇಬೇಕು ಎಂದು ರೈತರು ಬಿಗಿ ಪಟ್ಟು ಹಿಡಿದರು. ಕಾರ್ಖಾನೆ ಆಡಳಿತ ಮಂಡಳಿ ನಿರಾಕರಿಸಿದಾಗ ಕೆಲ ಕಾಲ ಗೊಂದಲ ಉಂಟಾಯಿತು. ಆಗ ಉಪ ವಿಭಾಗಾಧಿಕಾರಿ ಮಧ್ಯೆ ಪ್ರವೇಶಿಸಿ ಮಾತುಕತೆ ಮುಂದುವರೆಸಿದರು.
ಅವರು ನಡೆಸಿದ ಸಂಧಾನದ ಫಲವಾಗಿ ಕಾರ್ಖಾನೆ ಆಡಳಿತ ಮಂಡಳಿ ಸಕಾರಾತ್ಮಕವಾಗಿ ಸ್ಪಂದಿಸಿತು. ಹೆಚ್ಚುವರಿ ಹಣ ಪಾವತಿ ಕುರಿತಾಗಿ ಜಿಲ್ಲಾಡಳಿತದೊಂದಿಗೆ ಸಮಾಲೋಚನೆ ನಡೆಸಿ, ಒಂದು ವಾರದಲ್ಲಿ ಅಂತಿಮ ತೀರ್ಮಾನ ಪ್ರಕಟಿಸಲಾಗುವುದು ಎಂದು ಆಡಳಿತ ಮಂಡಳಿ ನಿಲುವು ಪ್ರಕಟಿಸಿತು.
ಒಪ್ಪಿಗೆ ಮಾಡಿಕೊಂಡ ಕಬ್ಬಿಗೆ ಪರ್ಮಿಟ್ ನೀಡದ ಪರಿಣಾಮ ಸಾಕಷ್ಟು ರೈತರು ಬೆಂಕಿ ಹಚ್ಚಿದ್ದರು. ಅದರಿಂದ ಆಗಿದ್ದ ನಷ್ಟವನ್ನು ಭರಿಸಿಕೊಡಬೇಕೆನ್ನುವ ಹಕ್ಕೊತ್ತಾಯವನ್ನು ಸಭೆಯಲ್ಲಿ ಮಂಡಿಸಿದಾಗ ಆಡಳಿತ ಮಂಡಳಿ ಒಪ್ಪಿಗೆ ನೀಡಿದೆ.
ಮಂಡಳಿ ಅಳಲು: ಬಿಡದಿ ಭಾಗ ಸೇರಿದಂತೆ ರಾಮನಗರ ಜಿಲ್ಲೆಯಲ್ಲಿ ಬೆಳೆಯುವ ಕಬ್ಬನ್ನು ಅವಲಂಬಿಸಿ ಸಕ್ಕರೆ ಕಾರ್ಖಾನೆಯನ್ನು ಪ್ರಾರಂಭಿಸಲಾಗಿತ್ತು. ಮಳೆ ಪ್ರಮಾಣದಲ್ಲಿ ಇಳಿಮುಖ ಸೇರಿದಂತೆ ನಾನಾ ಕಾರಣಗಳಿಂದ ಇಲ್ಲಿ ಕಬ್ಬು ಬೆಳೆ ಕುಸಿದಿದೆ ಎಂದು ಕಾರ್ಖಾನೆ ಅಧ್ಯಕ್ಷ ತಿಮ್ಮೇಗೌಡ ಹೇಳಿದರು.
ಸಮರ್ಪಕ ಪ್ರಮಾಣದಲ್ಲಿ ಕಬ್ಬು ಸರಬರಾಜು ಆಗದ ಪರಿಣಾಮ ಕಾರ್ಖಾನೆಯನ್ನು ಮುಂದುವರೆಸಲು ಸಾಧ್ಯವಾಗುತ್ತಿಲ್ಲ. ಪ್ರಸ್ತುತ ಕಾರ್ಖಾನೆಯನ್ನು ಮುಚ್ಚಿದ್ದು, ರೈತರಿಗೆ ಒಪ್ಪಿಕೊಂಡಿರುವ ಬೇಡಿಕೆಗಳನ್ನು ಈಡೇರಿಸಿದ ಬಳಿಕವಷ್ಟೇ ಯಂತ್ರೋಪಕರಣಗಳನ್ನು ವಿಲೇವಾರಿಗೆ ಮುಂದಾಗುವುದಾಗಿ ಭರವಸೆಯಿತ್ತರು.
ಕುರುಬೂರು ಶಾಂತಕುಮಾರ್, ಸಿ.ಪುಟ್ಟಸ್ವಾಮಿ, ಲಕ್ಷ್ಮಣಸ್ವಾಮಿ, ಸಂಪತ್ಕುಮಾರ್, ಕೃಷ್ಣಪ್ಪ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

