ಮಕ್ಕಳಿಗೆ ಮೇಸ್ತ್ರಿ ಆದ ಮಾಸ್ತರ್!
ರಾಮದುರ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ಅಕ್ಷರ ದಾಸೋಹ ಕೊಠಡಿ ಕಾಮಗಾರಿಗೆ ಕೂಲಿಗಳಾದ ಮಕ್ಕಳು
- ಮತ್ತೀಕೆರೆ ಜಯರಾಮ್
ರಾಮನಗರ: ಬೆತ್ತ ಹಿಡಿದು ಮೇಸ್ತ್ರಿಯಂತೆ ನಿಂತ ಮಾಸ್ತರೊಬ್ಬರು ಕಟ್ಟಡ ಕೆಲಸಕ್ಕೆ ಶಾಲಾ ಮಕ್ಕಳನ್ನು ಕೂಲಿಯಾಳುಗಳಂತೆ ದುಡಿಮೆಗೆ ಹಚ್ಚಿರುವ ಕೃತ್ಯ ರಾಮನಗರದ ರಾಮದುರ್ಗ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿದೆ.
ಕೇಂದ್ರ ಸರ್ಕಾರದ ಅನುದಾನದಡಿ ಕೈಗೆತ್ತಿಕೊಳ್ಳಲಾದ 3.01 ಲಕ್ಷ ವೆಚ್ಚದ ಅಕ್ಷರ ದಾಸೋಹ ಯೋಜನೆ ಕೊಠಡಿ ಕಾಮಗಾರಿಗೆ ಇಲ್ಲಿ ಮಕ್ಕಳನ್ನು ಕೂಲಿಯಾಳುಗಳಂತೆ ದುಡಿಮೆಗೆ ಬಳಸಿಕೊಳ್ಳಲಾಗಿದೆ. ಆದರೆ, ಅವರಿಗೆ ಕೂಲಿ ಮಾತ್ರ ಇಲ್ಲ.
ಶಿಕ್ಷೆ ನೀಡುವಂತಿಲ್ಲ: ಶಾಲೆಗಳಲ್ಲಿ ಮಕ್ಕಳಿಗೆ ಶಿಕ್ಷಣ ಕಲಿಸುವಾಗ ಶಿಕ್ಷಕರು ಬೈಯ್ಯುವುದು, ಹೆದರಿಸುವುದು, ಬೆತ್ತ ಹಿಡಿದು ಶಿಕ್ಷೆ ನೀಡುವುದು ಅಪರಾಧ. ಆದರೆ, ಇಲ್ಲಿ ಶಿಕ್ಷಕರು ಬೆತ್ತ ಹಿಡಿದುಕೊಂಡು ಮಕ್ಕಳನ್ನು ಮೈಬಗ್ಗಿಸಿ ದುಡಿಯುವಂತೆ ಮಾಡಿರುವುದು ವಿಪರ್ಯಾಸದ ಸಂಗತಿ.
ಅಂಗಡಿ ಮುಂಗಟ್ಟು, ಹೊಟೇಲ್ ಸೇರಿದಂತೆ ಖಾಸಗಿ ಉದ್ದಿಮೆಗಳಲ್ಲಿ 14 ವರ್ಷಕ್ಕಿಂತ ಕೆಳಪಟ್ಟ ಮಕ್ಕಳನ್ನು ದುಡಿಮೆಗೆ ಹಾಕಿಕೊಳ್ಳುವುದು ಶಿಕ್ಷಾರ್ಹ ಅಪರಾಧ. ಆದರೆ, ಇಲ್ಲಿ ಸರ್ಕಾರಿ ವ್ಯವಸ್ಥೆಯಿಂದಲೇ ಬಾಲ ಕಾರ್ಮಿಕ ಪದ್ಧತಿ ನಡೆಯುತ್ತಿದೆ.
3 ಹಂತದಲ್ಲಿ ಹಣ: ಅಕ್ಷರ ದಾಸೋಹ ಯೋಜನೆ ಕೊಠಡಿ ನಿರ್ಮಾಣಕ್ಕೆ ಅನುದಾನವು ತಾಲೂಕು ಪಂಚಾಯಿತಿ ಮೂಲಕ ಬಿಡುಗಡೆಯಾಗಿದೆ. 3 ಹಂತದಲ್ಲಿ ಈ ಹಣ ಬಿಡುಗಡೆಯಾಗಿದ್ದು, ಕಾಮಗಾರಿ ಹೊಣೆಯನ್ನು ಶಾಲಾಭಿವೃದ್ಧಿ ಸಮಿತಿ ಮತ್ತು ಮುಖ್ಯ ಶಿಕ್ಷಕರಿಗೆ ವಹಿಸಲಾಗಿದೆ.
ಬಹುತೇಕ ಕಡೆ ಈ ಕಾಮಗಾರಿಯನ್ನು ಗುತ್ತಿಗೆ ನೀಡಲಾಗುತ್ತದೆ. ಆದರೆ, ರಾಮದುರ್ಗ ಶಾಲೆಯಲ್ಲಿ ಕಾಮಗಾರಿ ನಿರ್ವಹಣೆ ವ್ಯವಸ್ಥೆ ಮಾತ್ರ ನಿಗೂಢವಾಗಿದೆ. ಮಕ್ಕಳನ್ನೇ ಕೆಲಸಕ್ಕೆ ಬಳಸಿಕೊಂಡಿರುವುದನ್ನು ಗಮನಿಸಿದರೆ ಸಹಜವಾಗಿಯೇ ಅನುಮಾನ ಮೂಡುತ್ತದೆ.
ಉಡಾಫೆ ಉತ್ತರ: ಮಕ್ಕಳಿಂದ ದುಡಿಸಿಕೊಳ್ಳುತ್ತಿರುವ ಕೆಲಸದ ದೃಶ್ಯವನ್ನು ಕ್ಯಾಮೆರಾದಿಂದ ಸೆರೆ ಹಿಡಿದಾಗ ಅದನ್ನು ಶ್ರಮದಾನವೆಂದು ಬೆತ್ತ ಹಿಡಿದ ಶಿಕ್ಷಕ ಸಮರ್ಥಿಸಿಕೊಳ್ಳಲು ಯತ್ನಿಸಿದರು. ಶ್ರಮದಾನದ ಹೆಸರಿನಲ್ಲಿ ಕೂಲಿಗಳಂತೆ ಮಕ್ಕಳನ್ನು ದುಡಿಸಿಕೊಳ್ಳಬಹುದೇ ಎನ್ನುವ ಪ್ರಶ್ನೆ ಎದುರಾಗುತ್ತದೆ.
ಅವರ ಮಾತನ್ನು ನಂಬೋಣವೆಂದರೆ, ಸದರಿ ಶಾಲೆಯಲ್ಲಿ ಹೆಣ್ಣು ಮತ್ತು ಗಂಡು ಮಕ್ಕಳ ಸಹ ಶಿಕ್ಷಣ ವ್ಯವಸ್ಥೆ ಇದೆ. ಹೆಣ್ಣು ಮಕ್ಕಳು ತರಗತಿಯಲ್ಲೇ ಉಳಿದು, ಗಂಡು ಮಕ್ಕಳು ಮಾತ್ರವೇ ಶ್ರಮದಾನಕ್ಕೆ ಹಾಜರಾಗಿದ್ದರು. ಹೀಗಾಗಿ ಇದು ಶ್ರಮದಾನವಲ್ಲ ಎನ್ನುವುದು ಸಾಬೀತಾಗುತ್ತದೆ.
ಗರ್ಜಿಸಿಯೇ ಬಿಟ್ಟರು: ಮಕ್ಕಳನ್ನು ಕೂಲಿಯಾಳುಗಳಂತೆ ಬಳಸಿಕೊಳ್ಳುತ್ತಿರುವ ಬಗ್ಗೆ ಪ್ರಶ್ನಿಸಿದಾಗ ಮುಖ್ಯ ಶಿಕ್ಷಕರು ಗರ್ಜಿಸಿಯೇ ಬಿಟ್ಟರು. ಇದು ಎಲ್ಲೂ ಮಾಡಿಸ್ದೇ ಇರೋ ಕೆಲ್ಸವೇನಲ್ಲ. ಮಕ್ಕಳು ಕೆಲ್ಸ ಮಾಡಿದ್ರೆ ನಿಮ್ಗೇನ್ರೀ. ಅದೇನ್ ಬರ್ಕೋತೀರೋ ಬರ್ಕೊಳ್ಳಿ. ಐ ಡೋಂಟ್ ಕೇರ್ ಎಂದರು.
ಇವರ ಮಾತನ್ನು ಗಮನಿಸಿದರೆ, ಶಾಲೆಯಲ್ಲಿ ನಡೀತಿರೋ ಸಾಕಷ್ಟು ಕೆಲಸಗಳಿಗೆ ಮಕ್ಕಳನ್ನೇ ಬಳಸಿಕೊಳ್ಳಲಾಗುತ್ತಿದೆ ಎಂದು ಭಾವಿಸಬಹುದಾಗಿದೆ. ಇದು ಎಲ್ಲ ಶಾಲೆಗಳಲ್ಲಿ ನಡೀತಿರೋ ಕೆಲಸಾನೇ ಎನ್ನುವ ಸತ್ಯವನ್ನೂ ಅವರಿಲ್ಲಿ ಬಿಚ್ಚಿಟ್ಟಂತಿದೆ.
ಮಕ್ಕಳಿಂದ ದುಡಿಸಿಕೊಳ್ಳುವುದು ಅಪರಾಧ. ರಾಮದುರ್ಗ ಶಾಲೆಯ ಪ್ರಕರಣ ಕುರಿತು ಸಂಬಂಧಿಸಿದ ಶಿಕ್ಷಕ, ಮುಖ್ಯ ಶಿಕ್ಷಕರನ್ನು ವಿಚಾರಣೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
- ಪ್ರಹ್ಲಾದ್, ಡಿಡಿಪಿಐ, ರಾಮನಗರ.
ಶಾಲೆಯಲ್ಲಿ ಅಕ್ಷರ ದಾಸೋಹ ಕಟ್ಟಡ ಕಾಮಗಾರಿಗೆ ರು.3.01 ಲಕ್ಷವನ್ನು 1 ಹಂತದಲ್ಲಿ ಬಿಡುಗಡೆ ಮಾಡಲಾಗಿದೆ. ಜಲ್ಲಿ ಹೊರಿಸುವ ಕೆಲಸವನ್ನು ಮಕ್ಕಳಿಂದ ಮಾಡಿಸಿದ್ದು
ಅಮಾನವೀಯ ಕೃತ್ಯ.
- ನಾರಾಯಣಸ್ವಾಮಿ, ಇಒ, ತಾ.ಪಂ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

