'ನೇತ್ರದಾನದಿಂದ ಅಂಧರ ಬಾಳಿಗೆ ಬೆಳಕು'
ರಾಮನಗರ: ನಾವು ಮಾಡುವ ನೇತ್ರದಾನದಿಂದ ಇಬ್ಬರು ಅಂಧರ ಬಾಳು ಬೆಳಗುತ್ತದೆ. ಪ್ರತಿಯೊಬ್ಬರೂ ನೇತ್ರದಾನಿಗಳಾಗುವ ಜತೆಗೆ ಕುಟುಂಬ ಸದಸ್ಯರು ಮತ್ತು ಹಿತೈಷಿಗಳನ್ನೂ ನೇತ್ರದಾನಕ್ಕೆ ಪ್ರೇರೇಪಿಸಬೇಕು ಎಂದು ವಿಧಾನಸಭೆ ಪ್ರತಿಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಕರೆ ನೀಡಿದರು. ಬೆಂಗಳೂರಿನ ಡಾ.ರಾಜಕುಮಾರ್ ಟ್ರಸ್ಟ್, ಬಿಡದಿಯ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಫೌಂಡೇಷನ್, ಡಾ.ರಾಜಕುಮಾರ್ ನೇತ್ರ ಸಂಗ್ರಹಣಾ ಕೇಂದ್ರದಿಂದ ಬೆಂಗಳೂರಿನ ಶಂಕರ ಕಣ್ಣಿನ ಆಸ್ಪತ್ರೆ ಸಹಯೋಗದಲ್ಲಿ ಗುರುಭವನದಲ್ಲಿ ಗುರುವಾರ ನೇತ್ರ ದೋಷವಿರುವ ಶಾಲಾ ಮಕ್ಕಳಿಗೆ ಕನ್ನಡಕ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ರಾಜ್ ಹಾದಿಯಲ್ಲಿ: ಕನ್ನಡದ ಮೇರು ನಟ ಡಾ.ರಾಜಕುಮಾರ್ ಅವರು ತಮ್ಮ ಕಣ್ಣುಗಳನ್ನೇ ದಾನ ಮಾಡುವ ಮೂಲಕ ಸಮಾಜಕ್ಕೆ ಆದರ್ಶಪ್ರಾಯರಾಗಿದ್ದಾರೆ. ಅವರು ಹಾಕಿಕೊಟ್ಟ ಹಾದಿಯಲ್ಲೇ ನಾವು ಸಾಗಬೇಕಿದೆ. ಸತ್ತಾಗ ಮಣ್ಣು ಸೇರುವ ಬದಲು ನಮ್ಮ ಕಣ್ಣುಗಳು ಅಂಧರ ಬಾಳಿಗೆ ಬೆಳಕಾಗುವುದರಿಂದ ಆತ್ಮತೃಪ್ತಿ ಸಿಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
ಪಾರ್ವತಮ್ಮ ಕರೆ: ತಮ್ಮ ಪತಿಯ ಹೆಸರಿನ ಟ್ರಸ್ಟಿನಿಂದ ನೇತ್ರ ಸಂಗ್ರಹಣೆ, ತಪಾಸಣೆ, ಅಂಧ್ವತ್ವ ನಿವಾರಣೆಯಂತಹ ಮಹತ್ಕಾರ್ಯದಲ್ಲಿ ತೊಡಗಿರುವ ಟ್ರಸ್ಟಿಗಳ ಸೇವೆ ನಿಜಕ್ಕೂ ಸ್ಮರಣೀಯವಾದುದು. ನೇತ್ರಗಳನ್ನು ದಾನ ಮಾಡುವುದು ಪುಣ್ಯದ ಕೆಲಸವಾಗಿದೆ. ಸಮಾಜದ ಪ್ರತಿಯೊಬ್ಬರೂ ನೇತ್ರದಾನಕ್ಕೆ ಮುಂದಾಗಬೇಕು ಎಂದು ಡಾ.ರಾಜಕುಮಾರ್ ಅವರ ಪತ್ನಿ ಪಾರ್ವತಮ್ಮ ರಾಜಕುಮಾರ್ ಕರೆಯಿತ್ತರು. ಶಾಸಕ ಎಚ್.ಸಿ.ಬಾಲಕೃಷ್ಣ ಟ್ರಸ್ಟಿನ ಅಧ್ಯಕ್ಷ ಎಚ್.ಮಂಜುನಾಥ್ ಮಾತನಾಡಿದರು.
ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿ ರಾಮನಗರ ತಾಲೂಕಿನಾದ್ಯಂತ 1 ರಿಂದ 10ನೇ ತರಗತಿವರೆಗಿನ 27952 ಮಕ್ಕಳ ನೇತ್ರ ತಪಾಸಣೆ ನಡೆಸಲಾಗಿದೆ. ಈ ಪೈಕಿ 512 ಮಕ್ಕಳಲ್ಲಿ ನೇತ್ರ ದೋಷ ಕಂಡು ಬಂದಿದ್ದು, ಅವರೆಲ್ಲರಿಗೂ ಸದರಿ ಸಮಾರಂಭದಲ್ಲಿ ಉಚಿತ ಕನ್ನಡಕ ವಿತರಿಸಲಾಗುತ್ತಿದೆ ಎಂದು ಅವರು ಹೇಳಿದರು.
ದೋಷಪೂರಿತ ನೇತ್ರಗಳುಳ್ಳ ಮಕ್ಕಳಿಗೆ ಗಣ್ಯರು ಕನ್ನಡಕ ವಿತರಿಸಿದರು.ನಟ ದೊಡ್ಡಣ್ಣ, ಜಿ.ಪಂ. ಡಾ.ಎಂ.ವಿ.ವೆಂಕಟೇಶ್, ಡಿಡಿಪಿಐ ಪ್ರಹ್ಲಾದಗೌಡ, ಸಹಾಯಕ ಔಷಧ ನಿಯಂತ್ರಕ ಎಂ.ಸುರೇಶ್, ಎ.ಕೆ.ಜೀವನ್, ಟ್ರಸ್ಟಿ ಟಿ.ವಾಸನ್, ಎಸ್‌ಪಿಆರ್ ಗ್ರೂಪ್ಸ್ ಅಧ್ಯಕ್ಷ ತಿಮ್ಮೇಗೌಡ, ರಾಜಕುಮಾರ್ ಕುಟುಂಬ ಸದಸ್ಯರು ಮತ್ತಿತರರು ಈ ಸಂದರ್ಭದಲ್ಲಿ ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

