ಮುದ್ದುರಾಜ್ ಯಾದವ್ ರಾಜಿನಾಮೆ ಅಂಗೀಕೃತ
- ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜು. 4
ಜಿ.ಪಂ. ಅಧ್ಯಕ್ಷ ಸ್ಥಾನಕ್ಕೆ ಕೆ. ಮುದ್ದುರಾಜ್ ಯಾದವ್ ರಾಜಿನಾಮೆ ಅಂಗೀಕೃತವಾಗಿದೆ. ಇದರೊಂದಿಗೆ
ಪ್ರಸಕ್ತ ಅವಧಿಯ 28 ತಿಂಗಳಲ್ಲೇ 5ನೇ ಅಧ್ಯಕ್ಷರ ಆಗಮನಕ್ಕೆ ವೇದಿಕೆ ಸಜ್ಜಾಗಿದೆ. ಈ ಜಿಲ್ಲೆಗೆ 6 ವರ್ಷ ತುಂಬುವಷ್ಟರಲ್ಲಿ ಜಿ.ಪಂ. ಅಧ್ಯಕ್ಷರ ಫಲಕದಲ್ಲಿ 14ನೇ ಹೆಸರು ಮೂಡಲಿದೆ. ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಮತ್ತು ಆಯಕಟ್ಟಿನ ಹುದ್ದೆಯಲ್ಲಿರುವ ಅಧಿಕಾರಿಗಳಷ್ಟೇ ಅಲ್ಲದೆ ಜಿ.ಪಂ. ವರಿಷ್ಠರ ಬದಲಾವಣೆಯಲ್ಲೂ ರಾಮನಗರದ್ದೇ ಎತ್ತಿದ ಕೈ ಎಂಬಂತಾಗಿದೆ. ಜಿ.ಪಂ.ನಲ್ಲಿ ಆಗುತ್ತಿರುವ ಬದಲಾವಣೆಗಳು ಆಕಾಂಕ್ಷಿಗಳನ್ನು ಸಂತೃಪ್ತಿಗೊಳಿಸಲಷ್ಟೇ ಸೀಮಿತವಾಗಿವೆ.
ರಾಮನಗರವು ಜಿಲ್ಲೆಯಾದ ಬಳಿಕ ಮೊದಲ ಅವಧಿಯಲ್ಲಿ ಇಬ್ಬರು ಪ್ರಭಾರ ಸಹಿತ 5 ಮಂದಿ ಅಧ್ಯಕ್ಷ ಹುದ್ದೆ ಅನುಭವಿಸಿದ್ದರು. ನಂತರದಲ್ಲಿ ಆಡಳಿತಾಧಿಕಾರಿಗೆ ಪ್ರಭಾರ ವಹಿಸಲಾಗಿತ್ತು. ಈ ಅವಧಿಯಲ್ಲಿ ಈಗಾಗಲೇ 4 ಮಂದಿ ಕುರ್ಚಿ ಏರಿದಂತಾಗಿದೆ. ಒಟ್ಟಾರೆ, 5 ಮಂದಿ ಉಪಾಧ್ಯಕ್ಷರಾಗಿದ್ದಾರೆ.
ಬದಲಾವಣೆ ಪರ್ವ: ರಾಮನಗರವು ಜಿಲ್ಲೆಯಾಗಿ ಅಸ್ತಿತ್ವಕ್ಕೆ ಬಂದ ಬಳಿಕ ಅಧಿಕಾರಕ್ಕೆ ಎರಡನೇ ಅವಧಿಯ ಆಡಳಿತ ಮಂಡಳಿ ಅಧಿಕಾರಕ್ಕೆ ಬಂದಿದೆ. ಈ ಮೊದಲು ಇದ್ದ ಆಡಳಿತ ಮಂಡಳಿ ಸದಸ್ಯರು ಅವಿಭಜಿತ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿಗೆ ಆಯ್ಕೆಯಾಗಿದ್ದರು.
ಈ ಜಿಲ್ಲೆಯು ಅಸ್ತಿತ್ವಕ್ಕೆ ಬಂದಾಗ ಇಲ್ಲಿನ ವ್ಯಾಪ್ತಿಗೆ ಸೇರಿದ 22 ಕ್ಷೇತ್ರಗಳ ಸದಸ್ಯರನ್ನು ಪ್ರತ್ಯೇಕಿಸಿ, ಆ ಪೈಕಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರನ್ನು ಆಯ್ಕೆ ಮಾಡಲಾಗಿತ್ತು. 2010ರ ಡಿಸೆಂಬರ್ನಲ್ಲಿ ನಡೆದ ಚುನಾವಣೆಯೇ ಈ ಜಿ.ಪಂ. ಪಾಲಿಗೆ ಚೊಚ್ಚಲ ಚುನಾವಣೆ.
ಒಡಂಬಡಿಕೆ ಸೂತ್ರ: ಹಿಂದಿನ ಅವಧಿಯಿಂದಲೂ ಅಧಿಕಾರ ಹಂಚಿಕೆಯ ಒಡಂಬಡಿಕೆ ಸೂತ್ರದ ಆಧಾರದ ಮೇಲೆಯೇ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನಗಳ ಬದಲಾವಣೆ ನಡೆದುಕೊಂಡು ಬಂದಿದೆ. ಬಹುಶಃ ರಾಮನಗರದಷ್ಟು ಪ್ರಮಾಣದಲ್ಲಿ ಬೇರೆ ಯಾವ ಜಿ.ಪಂ.ನಲ್ಲೂ ಬದಲಾವಣೆ ನಡೆದಿರಲಾರದು. ಕಳೆದ ಅವಧಿಯಲ್ಲಿ ಸಮಬಲದ ಸೆಣೆಸಿನ ಕಾರಣಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ನಡುವೆ ಒಡಂಬಡಿಕೆ ಏರ್ಪಟ್ಟಿತ್ತು. ಅವಧಿ ಅಂತ್ಯದಲ್ಲಿ ಒಪ್ಪಂದವನ್ನು ಗಾಳಿಗೆ ತೂರಿದ ಕಾಂಗ್ರೆಸ್ ತನ್ನದೇ ಪ್ರಾಬಲ್ಯ ಮೆರೆದಿತ್ತು. ಈ ಬಾರಿ ಜೆಡಿಎಸ್ ಬಹುಮತದೊಂದಿಗೆ ಆಡಳಿತ ಚುಕ್ಕಾಣಿ ಹಿಡಿದಿದೆ.
ಒಪ್ಪಂದ ಮುರಿದರು: ಆಕಾಂಕ್ಷಿಗಳು ಹುದ್ದೆಗೇರುವ ಸಂದರ್ಭದಲ್ಲಿ ಆರು ತಿಂಗಳು ಕೊಟ್ಟರೆ ಸಾಕೆನ್ನುತ್ತಾರೆ. ಕುರ್ಚಿ ಮಹಿಮೆಯೋ ಏನೋ ಅಧಿಕಾರ ಅನುಭವಿಸುತ್ತಿರುವಾಗ ಕೊಟ್ಟ ಮಾತಿನಂತೆ ಪದತ್ಯಾಗ ಮಾಡಬೇಕೆನ್ನುವ ಬಗ್ಗೆ ಯೋಚಿಸುವುದೇ ಇಲ್ಲ. ಈ 28 ತಿಂಗಳ ಅವಧಿಯಲ್ಲಾದ 4 ಬದಲಾವಣೆ ಪೈಕಿ 3 ಪ್ರಕರಣಗಳಲ್ಲಿ ವಚನಭ್ರಷ್ಟತೆ, ವಿಶ್ವಾಸದ್ರೋಹ ನಡೆದಿದೆ. ಒಂದೂವರೆ ತಿಂಗಳಷ್ಟೇ ಅಧ್ಯಕ್ಷ ಸ್ಥಾನ ಪಡೆದ ಬಿ.ವಿ.ಹಂಸಕುಮಾರಿ ಅವರೊಬ್ಬರೇ ನತದೃಷ್ಟೆ.
ಅವಧಿ ಮೀರಿದವರು: 6 ತಿಂಗಳ ಮಟ್ಟಿಗಷ್ಟೇ ಅವಕಾಶ ಪಡೆದ ಕಲ್ಪನಾ ಮಲ್ಲಿಕಾರ್ಜುನಗೌಡ ಚನ್ನಪಟ್ಟಣ ಮರು ಚುನಾವಣೆ ಲಾಭದಿಂದ 3 ತಿಂಗಳು ಬೋನಸ್ ಅವಧಿ ಗಿಟ್ಟಿಸಿದರು. ವರಿಷ್ಠರ ಆದೇಶ ಧಿಕ್ಕರಿಸಿ ಹುದ್ದೆಗೇರಿದ ಯು.ಪಿ.ನಾಗೇಶ್ವರಿ ಅಧ್ಯಕ್ಷೆಯಾದ ದಿನದಿಂದಲೇ ರಾಜಿನಾಮೆಯ ಮಂತ್ರ ಜಪಿಸುತ್ತಾ 7 ತಿಂಗಳು ಆಳಿದರು. ಒಮ್ಮೆ ರಾಜಿನಾಮೆ ಕೊಟ್ಟು, ಮತ್ತೆ ವಾಪಸ್ ಪಡೆದರು. ಕಡೆಗೆ, ಪದಚ್ಯುತಿಯ ಸುಳಿವನ್ನರಿತು ಮತ್ತೆ ರಾಜೀನಾಮೆ ನೀಡಿದರು. ಎರಡನೇ 20 ತಿಂಗಳ ಅವಧಿಯಲ್ಲಿ ಮುದ್ದುರಾಜ್ ಯಾದವ್ ಅವರಿಗೆ ನಿಗದಿಪಡಿಸಿದ್ದೂ ಆರೇ ತಿಂಗಳು. ವಿಧಾನಸಭೆ ಚುನಾವಣೆ ಪರಿಣಾಮ 2 ತಿಂಗಳು ಅವಧಿ ಮೀರಿದರು.
ಸಜ್ಜಾಗಿರುವ ರಾಜು: ಜೆಡಿಎಸ್ ಪಡಸಾಲೆಯಲ್ಲಿ ಆಗಿರುವ ಒಡಂಬಡಿಕೆಯಂತೆ ತೆರವಾಗಿರುವ ಅಧ್ಯಕ್ಷ ಸ್ಥಾನಕ್ಕೇರಲು ಕೈಲಾಂಚ ಕ್ಷೇತ್ರದ ಸದಸ್ಯ ಎಚ್.ಸಿ.ರಾಜು ಸಜ್ಜಾಗುತ್ತಿದ್ದಾರೆ. ಕರಾರು ಪ್ರಕಾರ ಇವರ ದರ್ಬಾರ್ ಕೂಡ ಆರೇಳು ತಿಂಗಳು ಮಟ್ಟಿಗಷ್ಟೇ ಸೀಮಿತ. ನಂತರದ ಸರದಿ ಸುಧಾ ರಾಜು ಅವರದು.
ಸದ್ಯ ಉಪಾಧ್ಯಕ್ಷೆಯಾಗಿರುವ ಗೌರಮ್ಮ ಅವರು ಪದತ್ಯಾಗ ಮಾಡಬೇಕಿರುವ ದಿನಗಳೂ ಸಮೀಪಿಸುತ್ತಿವೆ. ಅವರಿಗೆ ನಿಗದಿಪಡಿಸಿರುವ ಅವಧಿ 10 ತಿಂಗಳಷ್ಟೇ. ನಂತರದಲ್ಲಿ ಪರಿಹಾರ ರೂಪದಲ್ಲಿ ಹಂಸಕುಮಾರಿ ಅವರಿಗೆ ಅವಕಾಶ ಒದಗಿಸುವ ಒಪ್ಪಂದವಾಗಿದೆ.
ಕಾಂಗ್ರೆಸ್ ನಡೆ ನಿಗೂಢ: 22 ಸದಸ್ಯ ಬಲದ ಜಿ.ಪಂ.ನಲ್ಲಿ 12 ಸದಸ್ಯರೊಂದಿಗೆ ಜೆಡಿಎಸ್ ಬಹುಮತವನ್ನೇನೋ ಹೊಂದಿದೆ. ಆದರೆ, 10 ಸದಸ್ಯರಿರುವ ಕಾಂಗ್ರೆಸ್ ಯಾವ ಹಂತದಲ್ಲೂ ಶರಣಾಗತಿಗೆ ಒಳಗಾಗಿಯೇ ಇಲ್ಲ. ಈ ಬಾರಿ ಕಾಂಗ್ರೆಸಿಗರ ನಡೆ ಇನ್ನೂ ನಿಗೂಢವಾಗಿದೆ.
ಆಪರೇಷನ್ ಕಾಂಗ್ರೆಸ್ ಕಾರ್ಯಾಚರಣೆಯ ಸಾಧ್ಯತೆಯನ್ನು ಈ ಬಾರಿ ಯಾವ ಕಾರಣಕ್ಕೂ ಅಲ್ಲಗಳೆಯುವಂತಿಲ್ಲ. ಜೆಡಿಎಸ್ ಸದಸ್ಯರು ಪಕ್ಷದ ವರಿಷ್ಠರ ಬೆನ್ನಿಗೆ ಚೂರಿ ಇರಿದ ತಾಜಾ ನಿದರ್ಶನಗಳು ಕಣ್ಮುಂದೆಯೇ ಇವೆ.
ಈ ಬಾರಿ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವಿರುವುದು ಆ ಪಕ್ಷಕ್ಕೆ ವರದಾನವೇ ಸರಿ. ಹೀಗಾಗಿ ಜೆಡಿಎಸ್ ತನ್ನ ಸದಸ್ಯರನ್ನು ಮುಷ್ಟಿಯಲ್ಲಿಟ್ಟುಕೊಂಡು, ಪ್ರತಿ ಹೆಜ್ಜೆಯನ್ನೂ ಎಚ್ಚರಿಕೆಯಿಂದಲೇ ಇಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ.
ನಡೆಯದ ಅಧಿಕಾರ ಸ್ವೀಕಾರ
ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ, ಉಪ ಕಾರ್ಯದರ್ಶಿ ಸಹಿತ ಉನ್ನತ ಮಟ್ಟದ ಅಧಿಕಾರಿಗಳ ಗೈರು ಹಿನ್ನೆಲೆಯಲ್ಲಿ ಜಿ.ಪಂ. ಪ್ರಭಾರ ಅಧ್ಯಕ್ಷ ಅಧಿಕಾರ ಹಸ್ತಾಂತರ ಕಾರ್ಯಕ್ರಮವು ಒಂದು ದಿನದ ಮಟ್ಟಿಗೆ ಮುಂದೂಡಲ್ಪಟ್ಟಿದೆ. ಮುದ್ದುರಾಜ್ ಯಾದವ್ ಅವರ ರಾಜಿನಾಮೆಯಿಂದ ತೆರವಾದ ಅಧ್ಯಕ್ಷ ಸ್ಥಾನದ ಪ್ರಭಾರ ಹೊಣೆಯನ್ನು ವಹಿಸಿಕೊಳ್ಳಲು ಉಪಾಧ್ಯಕ್ಷೆ ಗೌರಮ್ಮ ಸಿದ್ಧವಾಗಿಯೇ ಬಂದಿದ್ದರು. ಅಧಿಕಾರಿಗಳಿಲ್ಲದ ಕಾರಣ ಅವರು ತಮ್ಮ ಅಧಿಕಾರ ಸ್ವೀಕಾರವನ್ನೇ ಮುಂದೂಡಿದರು. ಪಂಚಾಯತ್ ರಾಜ್ ಅಧಿನಿಯಮದ ಪ್ರಕಾರ ಅಧ್ಯಕ್ಷ ಹುದ್ದೆ ತೆರವಾಗುತ್ತಿದ್ದಂತೆಯೇ ಉಪಾಧ್ಯಕ್ಷರು ಪ್ರಭಾರ ಅಧ್ಯಕ್ಷರಾಗುತ್ತಾರೆ. ಅಧಿಕಾರ ಹಸ್ತಾಂತರ ಔಪಚಾರಿಕವಷ್ಟೇ. ಈ ವಿಷಯವನ್ನು ಅಧಿಕಾರಿಗಳು ಮನದಟ್ಟು ಮಾಡಿಕೊಟ್ಟರೂ ಗೌರಮ್ಮ ಒಪ್ಪಲಿಲ್ಲ. ಅಧಿಕಾರಿಗಳ ಹಾಜರಿ ಬೇಕೆಂದು, ಉಪಾಧ್ಯಕ್ಷರ ಕೊಠಡಿಯಲ್ಲೇ ಕೆಲಸ ನಿರ್ವಹಿಸಿದರು.
ನಮ್ಮಲ್ಲಿ ಒಗ್ಗಟ್ಟಿದೆ
ಜೆಡಿಎಸ್ ಪಕ್ಷದ ಎಲ್ಲ 12 ಸದಸ್ಯರು ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಯಾವುದೇ ಬಿರುಕು ಇಲ್ಲ. ಪಕ್ಷದ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಅವರ ಅಣತಿಯಂತೆ ನಡೆದುಕೊಳ್ಳಲು ಎಲ್ಲ ಸದಸ್ಯರು ಸಮ್ಮತಿಸಿದ್ದಾರೆ. ಹೀಗಾಗಿ ಅಧ್ಯಕ್ಷ ಸ್ಥಾನದ ಚುನಾವಣೆ ಬಗ್ಗೆ ಪಕ್ಷಕ್ಕೆ ಯಾವುದೇ ರೀತಿ ಚಿಂತೆಯ ಪ್ರಶ್ನೆಯೇ ಇಲ್ಲ.
-ಎಚ್.ಸಿ.ರಾಜು, ಅಧ್ಯಕ್ಷ ಸ್ಥಾನಾಕಾಂಕ್ಷಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

