ಬೆಂಗಳೂರು ಗ್ರಾಮಾಂತರ

'ದೇಗುಲಗಳು ಧಾರ್ಮಿಕ ಸಮನ್ವಯದ ಸಂಕೇತವಾಗಲಿ'

Published On :
ದೊಡ್ಡಬಳ್ಳಾಪುರ: ದೇವಾಲಯಗಳು ಧಾರ್ಮಿಕ ಸಮನ್ವಯದ ಸಂಕೇತವಾಗಬೇಕು. ಗ್ರಾಮಗಳ ಎಲ್ಲ ವರ್ಗದ ಜನರನ್ನೂ ಒಂದು ವೇದಿಕೆಯಲ್ಲಿ ಒಗ್ಗೂಡಲು ಅವಕಾಶ ಮಾಡಿಕೊಡುವಂತಿರಬೇಕು ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದ ಸ್ವಾಮೀಜಿ ಹೇಳಿದರು. ತಾಲೂಕಿನ ಜೋಡಿತಿಮ್ಮಸಂದ್ರ ಗ್ರಾಮದಲ್ಲಿ ಶುಕ್ರವಾರ ನಡೆದ ಆಂಜನೇಯಸ್ವಾಮಿ ದೇವಾಲಯದ 12ನೇ ವಾರ್ಷಿಕೋತ್ಸವ ಕುಂಭಾಭಿಷೇಕ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದರು.
ಆಧುನಿಕ ಜೀವನಶೈಲಿ ಜನರನ್ನು ಸದಾ ಒತ್ತಡದಲ್ಲಿ ಇರುವಂತೆ ಮಾಡಿದೆ. ಭಾರತೀಯ ಜೀವನ ಶೈಲಿಯಿಂದಾಗಿಯೇ ನಮ್ಮ ಹಿರಿಯರು ಸಾರ್ಥಕ ಬದುಕು ಸಾಗಿಸುತ್ತಿದ್ದರು. ಇಂದಿಗೂ ನಮ್ಮಲ್ಲಿ ಶಾಂತಿ, ನೆಮ್ಮದಿ ನೆಲೆಸಲು ನಮ್ಮ ಸಾಂಸ್ಕೃತಿಕ ಸಿರಿವಂತಿಕೆ ಕಾರಣವಾಗಿದೆ ಎಂದರು.
ಶಾಸಕ ಟಿ. ವೆಂಕಟರಮಣಯ್ಯ ಮಾತನಾಡಿ, ದೇವಾಲಯಗಳು ಹೆಚ್ಚಿಗೆ ಇರುವ ಗ್ರಾಮಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ವೈವಿಧ್ಯತೆ ಇರುತ್ತದೆ. ದೇವಾಲಯ ನಿರ್ಮಾಣದಲ್ಲಿ ಗ್ರಾಮಸ್ಥರು ಮತ್ತು ಭಕ್ತಾದಿಗಳ ಸಹಕಾರ ಮುಖ್ಯವಾದದ್ದು. ತಾಲೂಕಿನಲ್ಲಿ ಈ ವರ್ಷ ಮುಂಗಾರು ಸಕಾಲಕ್ಕೆ ಬಂದಿದ್ದರಿಂದ ಬಿತ್ತನೆ ಕಾರ್ಯ ಆರಂಭವಾಗಿದೆ. ನೀರಿನ ಬವಣೆ ನೀಗಿಸಲು ಎಲ್ಲ ಕ್ರಮಗಳನ್ನೂ ಕೈಗೊಳ್ಳಲಾಗಿದೆ. ಜನ ಮಳೆನೀರು ಸಂಗ್ರಹ ಮತ್ತು ಅಂತರ್ಜಲ ವೃದ್ಧಿಗೆ ಗಮನಹರಿಸಬೇಕು ಎಂದರು.
ಸಿದ್ಧಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿ, ಪಟ್ಟನಾಯಕನಹಳ್ಳಿ ಮಠದ ನಂಜಾವದೂತ ಸ್ವಾಮೀಜಿ ಭಾಗವಹಿಸಿದ್ದರು. ಸಮಾರಂಭದಲ್ಲಿ ಸಿ.ನಾಗರಾಜ್, ಮಾಜಿ ಸಚಿವ ಆಂಜನಮೂರ್ತಿ, ಜಿ.ಪಂ ಮಾಜಿ ಅಧ್ಯಕ್ಷ ಸತ್ಯನಾರಾಯಣಗೌಡ, ಜಿ.ಪಂ ಸದಸ್ಯ ದಯಾನಂದಸ್ವಾಮಿ, ರೇಷ್ಮೆ ಮಾರಾಟ ಮಂಡಲಿ ಮಾಜಿ ಅಧ್ಯಕ್ಷ ಕೆ.ಎಂ. ಹನುಮಂತರಾಯಪ್ಪ ಮತ್ತಿತರರು ಹಾಜರಿದ್ದರು.

ಯಾತ್ರಿ ನಿವಾಸ್ ಕಾಮಗಾರಿಗೆ ಗುದ್ದಲಿ ಪೂಜೆ
ಮಾಗಡಿ:
ಯಾತ್ರಾರ್ಥಿಗಳ ಹಾಗು ಭಕ್ತರ ಅನುಕೂಲಕ್ಕಾಗಿ ರು.1 ಕೋಟಿ ವೆಚ್ಚದಲ್ಲಿ ಸುಸಜ್ಜಿತ ಯಾತ್ರಿನಿವಾಸ್ ನಿರ್ಮಿಸಲಾಗುವುದು ಎಂದು ಶಾಸಕ ಎಚ್.ಸಿ. ಬಾಲಕೃಷ್ಣ ತಿಳಿಸಿದ್ದಾರೆ.     ಪಟ್ಟಣದ ಐತಿಹಾಸಿಕ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಯಾತ್ರಿ ನಿವಾಸ್ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಭವರೋಗ ನಿವಾರಕ ತಿರುಮಲೆ ರಂಗನಾಥಸ್ವಾಮಿ ಸನ್ನಿಧಿಗೆ ಸಹಸ್ರಾರು ಭಕ್ತರು ಬರುತ್ತಾರೆ. ಇಲ್ಲಿಗೆ ಬರುವ ಭಕ್ತರ ಅನುಕೂಲಕ್ಕಾಗಿ ಯಾತ್ರಿ ನಿವಾಸ್  ಅಗತ್ಯವಿದ್ದು, ಪ್ರವಾಸೋದ್ಯೋಮ ಇಲಾಖೆ ವತಿಯಿಂದ ರು.1 ಕೋಟಿ ಮಂಜೂರಾಗಿದ್ದು, ಈಗಾಗಲೇ 30 ಲಕ್ಷ ರು ಬಿಡುಗಡೆಯಾಗಿದೆ. ಯಾತ್ರಿ ನಿವಾಸ್ ಕಟ್ಟಡ ಕಾಮಗಾರಿಯನ್ನು ನಿರ್ಮಿತಿ ಕೇಂದ್ರ ನಿರ್ಮಿಸಲಿದೆ ಎಂದರು.  ತಹಸೀಲ್ದಾರ್  ಡಾ.ಬಿ.ಆರ್.ಹರೀಶ್ ಮತ್ತಿತರರು  ಮಾತನಾಡಿದರು. ತಾಪಂ ಅಧ್ಯಕ್ಷ ಬಿ.ಟಿ. ವೆಂಕಟೇಶ್, ಮಾಜಿ ಅಧ್ಯಕ್ಷ ಎ.ಬಿ.ಮಹದೇವಯ್ಯ, ಪುರಸಭಾ ಸದಸ್ಯರಾದ ಬಸವರಾಜು,ನಾಗೇಂದ್ರ, ಟಿ.ವಿ.ವೆಂಕಟೇಶ ಅಯ್ಯಂಗಾರ್, ಗುತ್ತಿಗೆದಾರರಾದ ಗೋವಿಂದರಾಜು, ಹರೀಶ್, ದೇವರಾಜು, ಮೂರ್ತಿ, ಉಮಾಪತಿ, ಅರ್ಚಕ ಜಿ.ಕೃಷ್ಣ ಮತ್ತಿತರರು ಉಪಸ್ಥಿತರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.