ಬೊಂಬೆ ನಗರಿಯತ್ತ ಸುಳಿಯದ ಉಸ್ತುವಾರಿ ಮಂತ್ರಿ
- ಮತ್ತೀಕೆರೆ ಜಯರಾಮ್
ಕ.ಪ್ರ.ವಾರ್ತೆ ರಾಮನಗರ ಜು.5
ಸ್ವಪಕ್ಷೀಯ ಮುಖಂಡರು ಮತ್ತು ಕಾರ್ಯಕರ್ತರ ಮಾತಿಗೆ ಮನ್ನಣೆ ನೀಡುವ ಮೂಲಕ ಜಿಲ್ಲಾ ಉಸ್ತುವಾರಿ, ಗೃಹ ಸಚಿವ ಕೆ.ಜೆ.ಜಾರ್ಜ್ ಸತತ ಎರಡನೇ ಬಾರಿ ಚನ್ನಪಟ್ಟಣ ಕ್ಷೇತ್ರದ ಸರ್ಕಾರಿ ಕಾರ್ಯಕ್ರಮಗಳಿಗೆ ಗೈರಾಗಿದ್ದಾರೆ.
ಈಚೆಗೆ ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರದಿಂದ ಆಯೋಜಿಸಿದ್ದ ಖಾಸಗಿ ಬಸ್ನಿಲ್ದಾಣ ಕಾಮಗಾರಿಗೆ ಕಡೆ ಗಳಿಗೆಯಲ್ಲಿ ಕೈಕೊಡುವ ಮೂಲಕ ಸಚಿವರು ಕಾಂಗ್ರೆಸಿಗರಿಂದ ಶಹಬ್ಬಾಷ್ಗಿರಿ ಪಡೆದುಕೊಂಡಿದ್ದರು.
ಶುಕ್ರವಾರ ಚನ್ನಪಟ್ಟಣದ ಪೊಲೀಸ್ ತರಬೇತಿ ಶಾಲೆಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರಾದರೂ ಅದೇ ತಾಲೂಕಿನ ಬೇವೂರು ಗ್ರಾಮದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಶಂಕುಸ್ಥಾಪನೆ ಸಮಾರಂಭಕ್ಕೆ ತೆರಳಲು ನಿರಾಕರಿಸಿದ್ದಾರೆ.
ಮನವಿಗೆ ಸಿಗದ ಸ್ಪಂದನೆ: ಪೊಲೀಸ್ ತರಬೇತಿ ಶಾಲೆಯಲ್ಲಿ ನಿರ್ಗಮನ ಪಥ ಸಂಚಲನದಲ್ಲಿ ಪಾಲ್ಗೊಂಡ ಬಳಿಕ ಪೊಲೀಸ್ ಉನ್ನತ ಅಧಿಕಾರಿಗಳೊಂದಿಗೆ ಉಪಹಾರ ಸೇವಿಸುತ್ತಿದ್ದ ಜಾರ್ಜ್ ಅವರನ್ನು ಭೇಟಿಯಾದ ಸ್ಥಳೀಯ ಶಾಸಕ ಸಿ.ಪಿ.ಯೋಗೇಶ್ವರ್ ಕಾರ್ಯಕ್ರಮಕ್ಕೆ ಆಗಮಿಸುವಂತೆ ಮನವಿ ಮಾಡಿದರು.
ಸುಮಾರು ಅರ್ಧ ತಾಸು ಸಚಿವರೊಟ್ಟಿಗೆ ಇದ್ದು ಯೋಗೇಶ್ವರ್ ಸಾಕಷ್ಟು ಕಾಡಿ, ಬೇಡಿದರು. ಇಷ್ಟಾಗಿಯೂ ಸಚಿವರು ಸುತಾರಾಂ ಒಪ್ಪಲಿಲ್ಲ. ಕಡೆಗೆ, ಬಂದ ದಾರಿಗೆ ಸುಂಕವಿಲ್ಲದಂತೆ ನಿರ್ಗಮಿಸಿದ ಯೋಗೇಶ್ವರ್ ತಾವೇ ಶಂಕುಸ್ಥಾಪನೆ ನೆರವೇರಿಸಿದ್ದಾರೆ.
ಅಡ್ಡಗಟ್ಟಿದ ಕಾಂಗ್ರೆಸಿಗರು: ಚನ್ನಪಟ್ಟಣದಲ್ಲಿ ಯೋಗೇಶ್ವರ್ ಅಧ್ಯಕ್ಷತೆಯಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಅವರ ಪಾಲ್ಗೊಳ್ಳುವಿಕೆಯನ್ನು ತಡೆಯಲು ಸ್ಥಳೀಯ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಪೂರ್ವ ನಿಯೋಜಿತ ಕಾರ್ಯತಂತ್ರ ರೂಪಿಸಿದ್ದಾರೆ.
ಹೇಳಿ ಕೇಳಿ ಯೋಗೇಶ್ವರ್ ಮತ್ತು ಕನಕಪುರ ಶಾಸಕ ಡಿ.ಕೆ.ಶಿವಕುಮಾರ್ ರಾಜಕೀಯ ಬದ್ಧ ವೈರಿಗಳು. ಜಾರ್ಜ್ ಅವರನ್ನು ಚನ್ನಪಟ್ಟಣಕ್ಕೆ ಬರದಂತೆ ಅಡ್ಡಗಟ್ಟಲು ಸ್ಥಳೀಯ ಕಾಂಗ್ರೆಸಿಗರು ಶಿವಕುಮಾರ್ ಮೊರೆ ಹೋಗಿರುವುದು ಜಗಜ್ಜಾಹೀರವಾಗಿದೆ.
ಜಾರ್ಜ್ ಫರ್ಮಾನು: ರಘುನಂದನ್ ರಾಮಣ್ಣ, ಪಿ.ಡಿ.ರಾಜು, ಎ.ಸಿ.ವೀರೇಗೌಡ ನೇತೃತ್ವದ ಕಾಂಗ್ರೆಸ್ ನಿಯೋಗ ಮೊದಲೇ ಜಾರ್ಜ್ ಕಿವಿ ಕಚ್ಚಲಾರಂಭಿಸಿತ್ತು. ಯೋಗೇಶ್ವರ್ ಸಾರಥ್ಯದ ಕಾರ್ಯಕ್ರಮದಲ್ಲಿ ಪಾಲ್ಗೊಂಡರೆ ಕಾಂಗ್ರೆಸ್ ಪ್ರತಿಷ್ಠೆ ಮಣ್ಣು ಪಾಲಾಗುತ್ತದೆ ಎನ್ನುವ ಮಟ್ಟಕ್ಕೆ ಅವರು ಕಿವಿ ಊದಿದ್ದರು.
ಜಾರ್ಜ್ ಅವರನ್ನು ಮನವೊಲಿಸಲು ಯೋಗೇಶ್ವರ್ ಯತ್ನ ನಡೆಸಿದ ಸಂದರ್ಭದಲ್ಲಿ ಸ್ಥಳೀಯ ಕಾಂಗ್ರೆಸಿಗರೂ ಹಾಜರಿದ್ದರು. ಬಿಲ್ಕುಲ್ ಬರೋದಿಲ್ಲ ಎಂದು ಹೇಳಿದ ಜಾರ್ಜ್ ಮುಂದೆ ಕಾರ್ಯಕ್ರಮ ಹಮ್ಮಿಕೊಳ್ಳುವಾಗ ಕಾಂಗ್ರೆಸ್ ಜಿಲ್ಲಾ ಮತ್ತು ಬ್ಲಾಕ್ ಅಧ್ಯಕ್ಷರ ಗಮನಕ್ಕೂ ತನ್ನಿ ಎನ್ನುವ ಫರ್ಮಾನು ಹೊರಡಿಸಿದರೆಂದು ಅಲ್ಲಿದ್ದ ಕಾಂಗ್ರೆಸಿಗರು ಹೇಳಿಕೊಳ್ಳುತ್ತಿದ್ದಾರೆ.
ಸಿಪಿವೈಗೆ ಹಿನ್ನಡೆ: ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಮ್ಮ ಸಾರಥ್ಯದಲ್ಲಿ ಚನ್ನಪಟ್ಟಣ ತಾಲೂಕಿನಲ್ಲಿ ಆಯೋಜಿಸಿದ ಸತತ ಎರಡನೇ ಸರ್ಕಾರಿ ಕಾರ್ಯಕ್ರಮಕ್ಕೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಗೈರಾಗಿರುವುದು ಸಹಜವಾಗಿಯೇ ಯೋಗೇಶ್ವರ್ ಅವರಿಗೆ ಹಿನ್ನಡೆ ಉಂಟು ಮಾಡಿದೆ.
ಒಂದೆಡೆ ಸಂಸತ್ ಚುನಾವಣೆ, ಮತ್ತೊಂದೆಡೆ ಮೈತ್ರಿ ರಾಜಕಾರಣ ಜಪಿಸುತ್ತಿರುವ ಯೋಗೇಶ್ವರ್ ಅವರಿಗೆ ಈಗ ಜೆಡಿಎಸ್, ಕಾಂಗ್ರೆಸ್, ಬಿಜೆಪಿ ಈ ಮೂರು ಪಕ್ಷಗಳೂ ಸಮಾನ ಶತ್ರುಗಳಾಗಿರುವುದು ಸದ್ಯದ ರಾಜಕೀಯ ವಿದ್ಯಮಾನಗಳಿಂದ ಸಾಬೀತಾದಂತಾಗಿದೆ.
ಸತ್ಯ ಬಿಚ್ಚಿಟ್ಟರು: ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರ ಹಿತರಕ್ಷಣೆ, ಪಕ್ಷ ಸಂಘಟನೆ ಉದ್ದೇಶದ ಕಾರಣದಿಂದಲೇ ಚನ್ನಪಟ್ಟಣದ ಕಾರ್ಯಕ್ರಮಗಳಿಗೆ ಗೈರಾಗುತ್ತಿರುವುದಾಗಿ ಉಸ್ತುವಾರಿ ಸಚಿವರಾಗಿ ರಾಮನಗರಕ್ಕೆ ಚೊಚ್ಚಲ ಭೇಟಿಯಲ್ಲೇ ಜಾರ್ಜ್ ಬಹಿರಂಗಪಡಿಸಿದ್ದರು.
ಸೈಕಲ್ ಏರಿದವರ ಸಹವಾಸ ಬೇಡ: ಚನ್ನಪಟ್ಟಣದಲ್ಲಿ ಸೈಕಲ್ ಏರಿದವರನ್ನು ಅರ್ಥಾತ್ ಸಮಾಜವಾದಿ ಪಕ್ಷಕ್ಕೆ ವಲಸೆ ಹೋದವರಿಗೆ ಮಣೆ ಹಾಕಕೂಡದು ಎಂದು ಅದೇ ವೇದಿಕೆಯಲ್ಲಿ ಡಿ.ಕೆ.ಶಿವಕುಮಾರ್ ಉಪದೇಶ ನೀಡಿದ್ದರು.ಇಷ್ಟಲ್ಲದೆ, ಚನ್ನಪಟ್ಟಣದ ಸರ್ಕಾರಿ ಕಾರ್ಯಕ್ರಮಕ್ಕೆ ಹೋಗಬೇಡಿ ಎಂದು ಜಾರ್ಜ್ ಅವರಿಗೆ ಹೇಳಿದ್ದು ನಾನೇ ಎಂದಿದ್ದರು.
ಮೂಡಿದ ಅನುಮಾನ: ಜಾರ್ಜ್ ಅವರ ಧೋರಣೆ, ಸ್ವತ- ನೀಡಿರುವ ಹೇಳಿಕೆ ಮತ್ತು ಶಿವಕುಮಾರ್ ನೀಡುತ್ತಿರುವ ಮಾರ್ಗದರ್ಶನ ಗಮನಿಸಿದರೆ, ಜಾರ್ಜ್ ಈ ಜಿಲ್ಲೆಗೆ ಉಸ್ತುವಾರಿ ಸಚಿವರಾಗಿ ಸರ್ಕಾರದಿಂದ ನೇಮಿಸಲ್ಪಟ್ಟವರೋ ಅಥವಾ ಪಕ್ಷ ಸಂಘಟನೆಗೆ ಕೆಪಿಸಿಸಿಯಿಂದ ನಿಯೋಜಿಸಲ್ಪಟ್ಟ ಪದಾಧಿಕಾರಿಯೋ ಎನ್ನುವ ಅನುಮಾನ ಮೂಡುತ್ತದೆ.
ಎಚ್ಡಿಕೆ ಆರೋಪಕ್ಕೆ ಪುಷ್ಟಿ: ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಪ್ರತಿಪಕ್ಷಗಳ ಶಾಸಕರ ಕ್ಷೇತ್ರಗಳ ಬಗ್ಗೆ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ. ಕಾಂಗ್ರೆಸ್ ಪಟಾಲಂ ಉಪಟಳ ಹೆಚ್ಚಿದೆ ಎನ್ನುವ ವಿಧಾನಸಭೆ ಪ್ರತಿಪಕ್ಷ ನಾಯಕ ಎಚ್.ಡಿ.ಕುಮಾರಸ್ವಾಮಿ ಆರೋಪಕ್ಕೂ ಚನ್ನಪಟ್ಟಣದ ಕಾರ್ಯಕ್ರಮಗಳಿಗೆ ಜಾರ್ಜ್ ಗೈರು ಪುಷ್ಠಿ ನೀಡಿದಂತಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

