ಬೆಂಗಳೂರು ಗ್ರಾಮಾಂತರ

ರಸ್ತೆಬದಿಯ ಗುಂಡಿಗೆ ಬಿದ್ದ ಬೈಕ್

Published On :

ವ್ಯಕ್ತಿಗೆ ತೀವ್ರ ಗಾಯ, ದೊಡ್ಡಬಳ್ಳಾಪುರದ ಡಿಕ್ರಾಸ್‌ರಸ್ತೆಯಲ್ಲಿ ಘಟನೆ
ದೊಡ್ಡಬಳ್ಳಾಪುರ:  ನಗರಸಭೆಯಿಂದ ರಸ್ತೆ ಬದಿಯಲ್ಲಿ ತೆಗೆಯಲಾಗಿರುವ ಗುಂಡಿಯೊಂದಕ್ಕೆ ಬೈಕ್ ಸವಾರನೊಬ್ಬ ಆಕಸ್ಮಿಕವಾಗಿ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ಇಲ್ಲಿನ ಡಿಕ್ರಾಸ್ ರಸ್ತೆಯ ಶಿವಪುರಗೇಟ್ ಬಳಿ ಸಂಭವಿಸಿದೆ.
ಇಲ್ಲಿನ ಮಾರುತಿನಗರ ನಿವಾನಿ ಶ್ರೀನಿವಾಸ್(35) ಗುಂಡಿಗೆ ಬಿದ್ದು ಗಾಯಗೊಂಡಿರುವ ವ್ಯಕ್ತಿ. ಚಿಕ್ಕಬಳ್ಳಾಪುರದ ಜಕ್ಕಲಮಡಗು ಜಲಾಶಯದಿಂದ ನಗರಕ್ಕೆ ನೀರು ಪ್ರಾಯೋಗಿಕವಾಗಿ ಪೂರೈಕೆಯಾಗುತ್ತಿರುವ ಹಿನ್ನಲೆಯಲ್ಲಿ ಕಳೆದ ಹಲವು ವರ್ಷಗಳ ಹಿಂದೆ ಹಾಕಲಾಗಿದ್ದ ಪೈಪುಗಳು ಒಡೆಯುವ ಸಾಧ್ಯತೆ ಇರುವುದರಿಂದ ನಗರಸಭೆ ಕೆಲವೆಡೆ ಪೈಪ್‌ಲೈನ್ ದುರಸ್ತಿ ಕಾರ್ಯ ನಡೆಸುತ್ತಿದೆ.
ಈ ಕಾಮಗಾರಿಗೆ ಸುಮಾರು 5 ಅಡಿಗೂ ಹೆಚ್ಚಿನ ಆಳದ ಗುಂಡಿಗಳನ್ನು ತೆಗೆಯಲಾಗಿದೆ. ಕಾಮಗಾರಿ ಆರಂಭವಾಗಿ 10 ದಿನ ಕಳೆದರೂ ಗುಂಡಿಗಳನ್ನು ಮುಚ್ಚಲಾಗಿಲ್ಲ. ಅಲ್ಲದೆ ತೆರೆದ ಗುಂಡಿಗಳಿರುವ ಕಡೆ ಸೂಚನಾ ಫಲಕಗಳನ್ನೂ ಹಾಕದೆ ನಿರ್ಲಕ್ಷ್ಯ ವಹಿಸಲಾಗಿದೆ. ಅಪಘಾತಕ್ಕೆ ಕಾರಣವಾದ ಗುಂಡಿಯನ್ನು ಶುಕ್ರವಾರ ಮುಚ್ಚಲಾಗಿದೆ ಎಂದು ತಿಳಿದುಬಂದಿದೆ.
ಹೂವಿನ ವ್ಯಾಪಾರಿಯಾಗಿರುವ ಶ್ರೀನಿವಾಸ್, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ವೇಗವಾಗಿ ಬಂದು ತಿರುವಿನಲ್ಲಿ ಬೀದಿದೀಪವೂ ಇಲ್ಲದ ಸ್ಥಳದಲ್ಲಿ ಈ ಅವಘಡಕ್ಕೀಡಾಗಿದ್ದಾರೆ. ಶ್ರೀನಿವಾಸ್‌ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ನಗರಸಭೆ ನಿರ್ಲಕ್ಷ್ಯ ಮತ್ತು ಅಧಿಕಾರಿಗಳ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

'ಜೀವನದಲ್ಲಿ ಶಿಸ್ತು, ಗುರಿ ಮುಖ್ಯ'
ನೆಲಮಂಗಲ: 
ಆರ್ಥಿಕವಾಗಿ ದುರ್ಬಲ ಹೊಂದಿದಂಥವರಿಗೆ ಸಹಾಯ ಹಸ್ತ ನೀಡಿ ಸ್ವಾವಲಂಬನೆಯ ಬದುಕನ್ನು ಸಂಘ ಸಂಸ್ಥೆಗಳು ನೀಡುತ್ತಿವೆ ಎಂದು ಮಾಜಿ ವಸತಿ ಸಚಿವ ಅಂಜನಮೂರ್ತಿ ಹೇಳಿದರು.ಅವರು ಶುಕ್ರವಾರ ತಾಲೂಕಿನ ವಿಶ್ವೇಶ್ವರಪುರದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಶಾಖೆಯ ನೂತನ ಘಟಕವನ್ನು ಉದ್ಘಾಟಿಸಿ ಮಾತನಾಡುತ್ತಾ ಜೀವನದಲ್ಲಿ ಮುನ್ನುಗ್ಗಬೇಕಾದರೆ ಶಿಸ್ತು, ಗುರಿ, ಪರಿಣತಿ ಸೇರಿದಂತೆ ಉತ್ತಮ ಬದುಕಿನ ಸೂತ್ರಗಳನ್ನು ನಾವು ಅಳವಡಿಸಿಕೊಂಡಾಗ ಅಭಿವೃದ್ಧಿ ಹೊಂದಲು ಸಾಧ್ಯ ಎಂದರು.
ಗ್ರಾಮೀಣರಿಗೆ ಹೊಸ ಜೀವನದ ಚೈತನ್ಯ ನೀಡುವ ಸಂಸ್ಥೆಯೇ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ. ಗ್ರಾಮೀಣ ಬಡ ಜನರು ಆರ್ಥಿಕವಾಗಿ ಸದೃಢರಾಗಲು ಸ್ವಯಂ ಉದ್ಯೋಗ ಅವಶ್ಯಕವಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ದೊಡ್ಡಬಳ್ಳಾಪುರ ಶಾಸಕ ವೆಂಕಟರಮಣಯ್ಯ ತಿಳಿಸಿದರು.ಸಂಸ್ಥೆಯ ಜಿಲ್ಲಾ ನಿರ್ದೇಶಕ ಶಿವಾನಂದ ಆಚಾರ್ಯ ಹೇಳಿದರು.ತಾ.ಪಂ. ಅಧ್ಯಕ್ಷ ಪುಟ್ಟಗಂಗಯ್ಯ, ತಾಲೂಕು ಯೋಜನಾಧಿಕಾರಿ ಸುರೇಶ್. ಎ.ಎಸ್, ಮುಖಂಡರಾದ ಮಂಜುನಾಥ್ ಸೇರಿದಂತೆ ನೂರಾರು ಜನ ಸಾರ್ವಜನಿಕರು ಇದ್ದರು.

ಕಾರು ಡಿಕ್ಕಿ: ವ್ಯಕ್ತಿ ಸಾವು
ರಾಮನಗರ:
ರಸ್ತೆ ದಾಟುತ್ತಿದ್ದ ಪಾದಚಾರಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟ ಘಟನೆ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ಬಸವನಪುರ ಗೇಟ್ ಬಳಿ ನಡೆದಿದೆ. ಬೆಂಗಳೂರಿನ ರಾಜಾಜಿನಗರದ ಗೋವಿಂದಯ್ಯ(49) ಮೃತಪಟ್ಟ ವ್ಯಕ್ತಿ. ಶುಕ್ರವಾರ 1 ಗಂಟೆ ವೇಳೆಗೆ ಹಿಲ್‌ವ್ಯೂ ರೆಸಾರ್ಟ್‌ನಲ್ಲಿ ಔತಣ ಕೂಟದಲ್ಲಿ ಭಾಗವಹಿಸಿ, ರಾಮನಗರಕ್ಕೆ ತೆರಳಲು ಬೆಂಗಳೂರು-ಮೈಸೂರು ರಸ್ತೆ ದಾಟುತ್ತಿದ್ದ ವೇಳೆ, ಬೆಂಗಳೂರು ಕಡೆಗೆ ತೆರಳುತ್ತಿದ್ದ ಬೆಂಜ್ ಕಾರು ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಗೋವಿಂದಯ್ಯ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಾರು ಚಾಲಕ ಪರಾರಿಯಾಗಿದ್ದಾನೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.