ಸುದ್ದಿ ಸಂಕ್ಷೇಪ
ಹಾಡ ಹಗಲೇ ಕಳ್ಳತನ
ರಾಮನಗರ: ಹಾಡ ಹಗಲೇ ಮನೆಯ ಬೀಗ ಮುರಿದು ಒಳ ನುಗ್ಗಿರುವ ಕಳ್ಳರು ರು.70 ಸಾವಿರ ಬೆಲೆ ಬಾಳುವ 44 ಗ್ರಾಂ. ತೂಕದ ಚಿನ್ನಾಭರಣ ಕಳ್ಳತನ ಮಾಡಿರುವ ಘಟನೆ ಕುಂಬಳಗೋಡು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಕೆಂಗೇರಿಯ ಹೋಬಳಿ ಬೆಟ್ಟನಪಾಳ್ಯದ ಸಿದ್ದಲಿಂಗಯ್ಯ ಅವರ ಮನೆಯಲ್ಲಿ ಈ ಕಳ್ಳತನ ನಡೆದಿದೆ. ಮನೆಯಲ್ಲಿ ಯಾರೂ ಇಲ್ಲದಿರುವುದನ್ನು ಖಚಿತ ಪಡಿಸಿಕೊಂಡ ಕಳ್ಳರು ಈ ದುಷ್ಕೃತ್ಯ ಎಸಗಿದ್ದಾರೆ. ಈ ಸಂಬಂಧ ಕುಂಬಳಗೋಡು ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಬೈಕ್- ವ್ಯಾನ್ ಡಿಕ್ಕಿ: ಸವಾರ ಸಾವು
ಮಾಗಡಿ: ಬೈಕ್ ಹಾಗೂ ಹಾಲಿನ ವ್ಯಾನ್ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬ ಮೃತಪಟ್ಟ ಘಟನೆ ಸೋಮವಾರ ಇಲ್ಲಿನ ಹೊಸಪಾಳ್ಯದ ವೃತ್ತದ ಬಳಿ ನಡೆದಿದೆ. ಬೈಕ್ ಸವಾರ ನರಸಿಂಹಮೂರ್ತಿ (40) ಮೃತಪಟ್ಟ ದುರ್ದೈವಿ. ನರಸಿಂಹಮೂರ್ತಿ ಪತ್ನಿ ಗಾಯಿತ್ರಿ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ನರಸಿಂಹಮೂರ್ತಿ ಬೆಂಗಳೂರಿನ ಯಲಹಂಕ ಹತ್ತಿರದ ಕಬ್ಬನಹಳ್ಳಿ ವಾಸಿ ಎಂದು ಪೊಲೀಸರು ಗುರುತಿಸಿದ್ದಾರೆ. ಮಾಗಡಿ ಪೋಲೀಸರು ಘಟನೆ ಕುರಿತು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ಕೈಗೊಂಡಿದ್ದಾರೆ.
ಬೈಕ್ ಅಪಘಾತ: ವ್ಯಕ್ತಿ ಸಾವು
ನೆಲಮಂಗಲ: ಆಷಾಡ ಮಾಸಕ್ಕೆ ಪತ್ನಿಯನ್ನು ತವರಿಗೆ ಬಿಟ್ಟು ನವ ವಿವಾಹಿತ ತನ್ನ ಊರಿಗೆ ಹಿಂದಿರುಗುತ್ತಿದ್ದಾಗ ಬೈಕ್ ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ಸೋಮವಾರ ತಾಲೂಕಿನ ಗೊಲ್ಲಹಳ್ಳಿಯಲ್ಲಿ ನಡೆದಿದೆ. ಮೃತನನ್ನು ಲಗ್ಗೆರೆ ವಾಸಿ ಕುಮಾರ (28) ಎಂದು ಗುರುತಿಸಲಾಗಿದೆ. ಈತ ತಾಲೂಕಿನ ಗೊಲ್ಲಹಳ್ಳಿ ಗ್ರಾಮದಲ್ಲಿ ಇತ್ತೀಚೆಗೆ ಮದುವೆಯಾಗಿದ್ದ. ಆಷಾಡ ಮಾಸಕ್ಕೆ ಕಳೆದ ಭಾನುವಾರದಂದು ಪತ್ನಿಯನ್ನು ಆಕೆಯ ತವರಿಗೆ ಬಿಟ್ಟು ತನ್ನ ಊರಾದ ಲಗ್ಗೆರೆಗೆ ಸೋಮವಾರ ಬೈಕ್ನಲ್ಲಿ ತೆರಳುತ್ತಿದ್ದಾಗ ಮಾರ್ಗಮಧ್ಯೆ ಕಲ್ಲುಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ತೀವ್ರ ರಕ್ತಸ್ರಾವವಾಗಿ ಆತ ಸ್ಥಳದಲ್ಲೇ ಮೃತಪಟ್ಟ. ಈ ಬಗ್ಗೆ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಾದಚಾರಿಗೆ ಲಾರಿ ಡಿಕ್ಕಿ: ಸ್ಥಳದಲ್ಲೇ ಸಾವು
ನೆಲಮಂಗಲ: ಬೆಂಗಳೂರು-ತುಮಕೂರು ರಾಷ್ಟ್ರೀಯ ಹೆದ್ದಾರಿ 4ರ ಟಿ.ಬೇಗೂರು ಬಳಿ ಲಾರಿಯೊಂದು ಪಾದಚಾರಿಯೊಬ್ಬನಿಗೆ ಡಿಕ್ಕಿ ಹೊಡೆದ ಪರಿಣಾಮ ಆತ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಸೋಮವಾರ ನಡೆದಿದೆ. ಮೃತ ವ್ಯಕ್ತಿ ಸುಮಾರು 45 ವರ್ಷದ ಅಪರಿಚಿತ ವ್ಯಕ್ತಿಯಾಗಿದ್ದಾನೆ. ಈತನ ಚಹರೆ ತೆಳ್ಳನೆ ಶರೀರ ಹೊಂದಿದ್ದು, ಕುರುಚಲು ಗಡ್ಡ ಬಿಟ್ಟಿದ್ದಾನೆ. ಮಾಸಲು ಶರ್ಟ್ ಧರಿಸಿದ್ದು, ನೀಲಿ ಪ್ಯಾಂಟ್ ಹಾಕಿದ್ದಾನೆ. ಈತನ ಬಗ್ಗೆ ಮಾಹಿತಿ ಹೊಂದಿರುವವರು ನೆಲಮಂಗಲ ಗ್ರಾಮಾಂತರ ಪೊಲೀಸರಿಗೆ ನೀಡುವಂತೆ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

