ಬಗರ್ಹುಕುಂ ಸಕ್ರಮಗೊಳಿಸಲು ನಿರ್ಲಕ್ಷ್ಯ
ಕ.ಪ್ರ.ವಾರ್ತೆ ಟಿ ರಾಮನಗರ ಟಿ ಜು.9
ಬಗರ್ ಹುಕುಂ ಸಾಗುವಳಿದಾರರು ಭೂಮಿಯನ್ನು ಸಕ್ರಮಾತಿಗೊಳಿಸುವಂತೆ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರಗಳು ದಿವ್ಯ ನಿರ್ಲಕ್ಷ್ಯ ವಹಿಸಿವೆ ಎಂದು ಕರ್ನಾಟಕ ಪ್ರಾಂತ ರೈತರ ಸಂಘದ ರಾಜ್ಯಾಧ್ಯಕ್ಷ ಮಾರುತಿ ಮಾನ್ಪಡೆ ಆರೋಪಿಸಿದರು.
ನಗರದ ಅಂಬೇಡ್ಕರ್ ಭವನದಲ್ಲಿ ಮಂಗಳವಾರ ನಡೆದ ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲೆಯ ರೈತರ ತೃತೀಯ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದ ಅವರು, ಅಭಿವೃದ್ಧಿ ಹೆಸರಿನಲ್ಲಿ ರೈತರ ಜಮೀನನ್ನು ಕಡಿಮೆ ಬೆಲೆಗೆ ವಶಪಡಿಸಿಕೊಂಡು ಭೂ ಮಾಫಿಯಾ, ಕೈಗಾರಿಕೆಗಳಿಗೆ, ವಿದೇಶಿ ಕಂಪನಿಗಳಿಗೆ ಅಗತ್ಯಕ್ಕಿಂತ ಹೆಚ್ಚು ಭೂಮಿಯನ್ನು ನೀಡಲು ರಾಜ್ಯ ಸರ್ಕಾರ ಹನ್ನಾರ ನಡೆಸಿದೆ ಎಂದರು.
ಭೂ ಬ್ಯಾಂಕ್ ಹೆಸರಿನಲ್ಲಿ ಸಾಗುವಳಿ ಚೀಟಿ ಇಲ್ಲದ ಅರಣ್ಯ ಮತ್ತು ಬಗರ್ ಹುಕುಂ ಸಾಗುವಳಿ ರೈತರ ಲಕ್ಷಾಂತರ ಎಕರೆ ಜಮೀನನ್ನು ಬಡ ರೈತರಿಂದ ಕಿತ್ತುಕೊಳ್ಳಲು ಹೊರಟಿದೆ. ಇದರಿಂದ ಬಡ ರೈತರಿಗೆ ಭೂಮಿ ನೀಡುವ ನಿವೇಶನ ನೀಡುವಂತಹ ಹಾಗೂ ಸಾರ್ವಜನಿಕ ಉದ್ದೇಶಗಳಿಗೆ ಭೂಮಿ ಹಂಚುವ ನೀತಿಯನ್ನು
ತಿರಸ್ಕರಿಸಿದೆ ಕೈಬಿಟ್ಟು ಉಳ್ಳವರಿಗೆ ಭೂಮಿಯನ್ನು ನೀಡುವ ತಂತ್ರವನ್ನು ಸರ್ಕಾರ ಅನುಸರಿಸುತ್ತಿದೆ ಎಂದು ಆಪಾದಿಸಿದರು.
ತಿರಸ್ಕರಿಸಿದೆ: ಜಿಲ್ಲೆಯಲ್ಲಿ ಕಳೆದ 30 ವರ್ಷದಿಂದ ಸಾಗುವಳಿ ಸಕ್ರಮಕ್ಕಾಗಿ ಫಾರಂ ನಂ.50, 53ರಂತೆ ಅರ್ಜಿ ಹಾಕಿರುವ 29,102 ಅರ್ಜಿದಾರರ 64,055 ಎಕರೆ ಭೂಮಿಯನ್ನು ಸರ್ಕಾರ ತಿರಸ್ಕರಿಸಿದೆ. 19,764 ಅರ್ಜಿದಾರರ 41,594 ಎಕರೆ ಸಾಗುವಳಿ ಚೀಟಿ ನೀಡುವುದನ್ನು ಬಾಕಿ ಉಳಿಸಿದಕೊಂಡಿದೆ ಎಂದು ತಿಳಿಸಿದರು.
ಜಿಲ್ಲೆಯ ಜನರಿಗೆ ಕೃಷಿಯೇ ಮೂಲ ಕಸುಬಾಗಿದೆ. ಶೇ.70ರಷ್ಟು ಜನತೆಗೆ ಕೃಷಿಯೇ ಆರ್ಥಿಕ ಮೂಲಧಾರವಾಗಿದೆ. ಜಿಲ್ಲೆಯಲ್ಲಿ 20 ಸಾವಿರ ಎಕರೆಗೂ ಹೆಚ್ಚು ಭೂಮಿಯಲ್ಲಿ ಉಳುಮೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಬಡ ರೈತರಿಗೆ ಬೆಳೆ ಸಾಲ ಸಿಗದೆ ಹಣವಂತರಿಂದ ಸಾಲ ಪಡೆದು ದುಬಾರಿ ಬಡ್ಡಿಯನ್ನು ಕಟ್ಟಲಾಗದೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ ಎಂದು ಕೆಪಿಆರ್ಎಸ್ನ ರಾಜ್ಯ ಘಟಕದ ಉಪಾಧ್ಯಕ್ಷ ಎನ್.ವೆಂಕಟಾಚಲಯ್ಯ ತಿಳಿಸಿದರು.
ತಾ.ಪಂ. ಸದಸ್ಯ ಎಚ್.ಶಿವಪ್ರಸಾದ್ ಮಾತನಾಡಿ, ರೈತರ ಉತ್ಪನ್ನಗಳ ಸಂಸ್ಕರಣೆ, ಮೌಲ್ಯವರ್ಧನೆಗೆ ವ್ಯವಸ್ಥೆಯಾದರೆ ಮಾತ್ರ ಉತ್ಪನ್ನ ದೀರ್ಘಕಾಲ ಉಳಿಯಲು ಸಾಧ್ಯ. ಇದರೊಂದಿಗೆ ರೈತ ಯಾಂತ್ರೀಕೃತ ಕೃಷಿಗೆ ಮುಂದಾಗಬೇಕು. ಕೃಷಿಯಲ್ಲಿ ತಂತ್ರಜ್ಞಾನದ ಬಳಕೆ ವ್ಯಾಪಕವಾಗಬೇಕು. ಇದಕ್ಕೆ ಇಲಾಖೆ ಹಾಗೂ ಸಂಘ ರೈತರಿಗೆ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು.
ಜಲ ಬತ್ತಿದೆ: ಜಿಲ್ಲೆಯಲ್ಲಿ ನಿರಂತರವಾಗಿ ನಡೆಯುತ್ತಿರುವ ಮರಳು ಗಣಿಗಾರಿಕೆಯಿಂದ ಜಲಮೂಲ ಬತ್ತಿ ಹೋಗಿದೆ. ಯುವ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದು, ಹಳ್ಳಿಗಳೆಲ್ಲಾ ವೃದ್ಧಾಶ್ರಮಗಳಂತಾಗಿವೆ ಎಂದು ಜಾನಪದ ವಿದ್ವಾಂಶ ಡಾ.ಎಂ. ಬೈರೇಗೌಡ ವಿಷಾದ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಕೆಪಿಆರ್ಎಸ್ನ ಜಿಲ್ಲಾ ಸಂಚಾಲಕ ಶ್ರೀನಿವಾಸ್, ತಾಲೂಕು ಘಟಕದ ಅಧ್ಯಕ್ಷ ಎಸ್.ಎಂ.ಮಹದೇವಯ್ಯ, ಕಾರ್ಯದರ್ಶಿ ಸಂಜೀವಯ್ಯ, ಮುಖಂಡರಾದ ಗೋವಿಂದರಾಜು, ಶಿವಲಿಂಗೇಗೌಡ ಮತ್ತಿತರರು ಭಾಗವಹಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

