ಬೆಂಗಳೂರು ಗ್ರಾಮಾಂತರ

ಆದಿ ಮಠಕ್ಕೆ ಐಟಿ: ಆಕ್ರೋಶ

Published On :

ಕ.ಪ್ರ.ವಾರ್ತೆ   ರಾಮನಗರ   ಜು.19
ಬೆಂಗಳೂರಿನ ವಿಜಯನಗರದಲ್ಲಿರುವ ಆದಿ ಚುಂಚನಗಿರಿ ಶಾಖಾ ಮಠದ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯನ್ನು ಖಂಡಿಸಿ ವಿವಿಧ ಸಂಘಟನೆಗಳು ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದವು.
ನಗರದ ಐಜೂರು ವೃತ್ತದಲ್ಲಿ ಜಮಾಯಿಸಿದ ಪ್ರತಿಭಟನಾಕಾರರು ಕೇಂದ್ರ, ರಾಜ್ಯ ಸರ್ಕಾರ, ಸೋನಿಯಾ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ವಾಹನ ಸಂಚಾರಕ್ಕೆ ಅಡಚಣೆ ಉಂಟುಮಾಡಿದರು. ಸೋನಿಯಾ ಗಾಂಧಿ ಪ್ರತಿಕೃತಿ ದಹಿಸಲಾಯಿತು.
ತಂಟೆಗೆ ಬಂದಿರಲಿಲ್ಲ: ಬ್ರಿಟೀಷರು ಭಾರತದಲ್ಲಿದ್ದಷ್ಟೂ ದಿನ ನಮ್ಮ ಸಂಪತ್ತನ್ನು ಕೊಳ್ಳೆ ಹೊಡೆಯುವುದರಲ್ಲೇ ನಿರತರಾಗಿದ್ದರು. ಅಪ್ಪಿತಪ್ಪಿಯೂ ಕೂಡ ಹಿಂದೂ ಧರ್ಮದ ತಂಟೆಗೆ ಬಂದಿರಲಿಲ್ಲ. ಆದರೆ ಕಾಂಗ್ರೆಸ್ಣನ ರಾಷ್ಟ್ರೀಯ ಅಧ್ಯಕ್ಷೆ ಸೋನಿಯಾ ಗಾಂಧಿ ಹಿಂದೂ ವಿರೋಧಿಯಾಗಿದ್ದು, ಹಿಂದೂ ಧರ್ಮದ ಮಠಗಳನ್ನು ಹತ್ತಿಕ್ಕಲು ಷಡ್ಯಂತ್ರ ರೂಪಿಸಿದ್ದಾರೆ ಎಂದು ಆರೋಪಿಸಿದರು.
ತುಳಿಯುವ ಕೆಲಸ: ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾದಾಗಿನಿಂದಲೂ ಒಕ್ಕಲಿಗರನ್ನು ತುಳಿಯುವ ಕೆಲಸಕ್ಕೆ ಕೈಹಾಕಿದ್ದಾರೆ. ಒಕ್ಕಲಿಗ ಅಧಿಕಾರಿಗಳನ್ನು ವರ್ಗ ಮಾಡಿಸುವುದು, ಮುಖ್ಯಮಂತ್ರಿ ಕಚೇರಿಯಲ್ಲಿದ್ದ ಮಾಜಿ ಪ್ರಧಾನಿ ದೇವೇಗೌಡರ ಭಾವಚಿತ್ರವನ್ನು ತೆಗೆಸಿರುವುದು ಹಾಗೂ ಕಾಂಗ್ರೆಸ್ನ ಪ್ರಭಾವಿ ಮುಖಂಡ ಡಿ.ಕೆ.ಶಿವಕುಮಾರ್ ಅವರಿಗೆ ಸಚಿವ ಸ್ಥಾನ ಕೈತಪ್ಪುವಂತೆ ಮಾಡಿರುವುದು ಸಿದ್ದರಾಮಯ್ಯ ಅವರ ಒಕ್ಕಲಿಗ ವಿರೋಧೀತನಕ್ಕೆ ಸಾಕ್ಷಿಯಾಗಿದೆ ಎಂದರು.
ಕಾಂಗ್ರೆಸ್ ಪಕ್ಷವು ಈ ಕೂಡಲೇ ಒಕ್ಕಲಿಗ ವಿರೋಧಿ ನೀತಿಯನ್ನು ಕೈಬಿಡಬೇಕು. ಒಕ್ಕಲಿಗರು ರೊಚ್ಚಿಗೆದ್ದರೆ ಸರ್ಕಾರಕ್ಕೆ ಉಳಿಗಾಲವಿಲ್ಲ. ಶಾಂತಿಗೆ ಹೆಸರಾಗಿರುವ ಕನ್ನಡ ನಾಡಿನಲ್ಲಿ ರಕ್ತಪಾತ ಸಂಭವಿಸುವುದರಲ್ಲಿ ಎರಡು ಮಾತಿಲ್ಲ. ಮುಂದಾಗುವ ಅನಾಹುತಗಳಿಗೆ ಸಿದ್ದರಾಮಯ್ಯ ಅವರೇ ಹೊಣೆಯಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಮಾಜಿ ಶಾಸಕ ಕೆ.ರಾಜು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಮರಿದೇವರು, ಬಿಜೆಪಿ ಮುಖಂಡ ಶಿವಮಾಧು, ಮಹೇಂದ್ರ, ಕೆ.ದೇವೇಗೌಡ, ಚಿಕ್ಕವೀರೇಗೌಡ, ಕೃಷ್ಣಮೂರ್ತಿ, ಕಾಂತರಾಜ ಪಟೇಲ್, ಚೇತನ್, ಡಿ.ಕೆ.ಶಿವಕುಮಾರ್, ಮಂಜುನಾಥ್, ಶಿವಲಿಂಗೇಗೌಡ, ಹನುಮಂತೇಗೌಡ, ಪ್ರಭಾಕರ್, ಎಂ.ಸಿ.ರಂಗಸ್ವಾಮಿ, ಚಂದ್ರಣ್ಣ, ಬೋರೇಗೌಡ ಮತ್ತಿತರರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.