ಬೆಂಗಳೂರು ಗ್ರಾಮಾಂತರ

ಬೆಂಗಳೂರು ರಸ್ತೆಯಲ್ಲಿ ಭೂ ಒತ್ತುವರಿ ತೆರವು

Published On :

ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜು. 22
ತಾಲೂಕಿನಲ್ಲಿ ಅಕ್ರಮ ಭೂ ಒತ್ತುವರಿ ತೆರವು ಕಾರ್ಯಾಚರಣೆ ಚುರುಕುಗೊಂಡಿದೆ. ತಹಸೀಲ್ದಾರ್ ಚಂದ್ರ ನೇತೃತ್ವದಲ್ಲಿ ತಾಲೂಕಿನ ಬೆಂಗಳೂರು ರಸ್ತೆಯ ಹೊಸಹುಡ್ಯ ಗೇಟ್ ಬಳಿ ಕಾರ್ಯಾಚರಣೆ ನಡೆಸಿ ಕೆರೆ ಅಂಗಳದಲ್ಲಿ 5 ಕೋಟಿ ಮೌಲ್ಯದ 1 ಎಕರೆ 10 ಗುಂಟೆ ಜಾಗವನ್ನು ಸರ್ಕಾರದ ವಶಕ್ಕೆ ಪಡೆಯಲಾಗಿದೆ.
ಸರ್ವೇ ನಂಬರ್ 23ರಲ್ಲಿ ಕಂಟ್ರಿ ಕ್ಲಬ್ ರೆಸಾರ್ಟ್ ಈ ಜಾಗವನ್ನು ಒತ್ತುವರಿ ಮಾಡಿಕೊಂಡಿತ್ತು. ಕಳೆದ 10- 15 ವರ್ಷಗಳಿಂದ ಈ ಭೂಮಿಯನ್ನು ಬಳಕೆ ಮಾಡಿಕೊಳ್ಳುತ್ತಿತ್ತು ಎನ್ನಲಾಗಿದ್ದು, 2 ಕಟ್ಟಡಗಳನ್ನೂ ನೆಲಸಮ ಮಾಡಿ, ಕ್ಲಬ್ ಪಕ್ಕದ ಸುಮಾರು 20 ಗುಂಟೆ ಜಾಗವನ್ನೂ ತೆರವುಗೊಳಿಸಲಾಗಿದೆ.
ನಂತರ ಮಾತನಾಡಿದ ತಹಸೀಲ್ದಾರ್ ಚಂದ್ರ, ಈಗಾಗಲೇ ಜಿಲ್ಲಾಧಿಕಾರಿಗಳು ಮತ್ತು ಸರ್ಕಾರದ ಸೂಚನೆ ಮೇರೆಗೆ ಸ್ಮಶಾನ, ಗುಂಡುತೋಪು, ಕೆರೆ ಅಂಗಳದ ಒತ್ತುವರಿ ಭೂಮಿಯನ್ನು ಹಂತ- ಹಂತವಾಗಿ ತೆರವುಗೊಳಿಸಲಾಗುತ್ತಿದೆ. ಕಂಟ್ರಿ ಕ್ಲಬ್ ಮಾಲೀಕ ಆಂಧ್ರಪ್ರದೇಶ ಮೂಲದ ರಾಜೀವರೆಡ್ಡಿ ಕೋಟ್ಯಂತರ ಬೆಲೆ ಬಾಳುವ ಈ ಜಾಗವನ್ನು ಅಕ್ರಮ ಒತ್ತುವರಿ ಮಾಡಿಕೊಂಡಿದ್ದರು.
ಹೀಗಾಗಿ ಸಾರ್ವಜನಿಕರ ದೂರಿನನ್ವಯ ಈ ಕಾರ್ಯಾಚರಣೆ ನಡೆಸಲಾಗಿದೆ. ಇದರ ಪಕ್ಕದಲ್ಲೇ ಸುಮಾರು 20 ಗುಂಟೆ ಜಾಗವನ್ನು ಬೆಂಗಳೂರು ಮೂಲದ ವೆಂಕಟಲಕ್ಷ್ಮಿ ಎಂಬವರು ಒತ್ತುವರಿ ಮಾಡಿಕೊಂಡಿದ್ದರು. ಇದರ ಮಾರುಕಟ್ಟೆ ಮೌಲ್ಯ 1 ಕೋಟಿಗೂ ಅಧಿಕ ಎನ್ನಲಾಗಿದೆ. ಭೂ ಒತ್ತುವರಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ವಿವರಿಸಿದರು.
ಸಾರ್ವಜನಿಕರು ಸರ್ಕಾರಿ ಭೂಮಿ ಒತ್ತುವರಿ ಕುರಿತು ಮಾಹಿತಿಯನ್ನು ತಹಸೀಲ್ದಾರರ ಕಚೇರಿಗೆ ನೀಡಿದರೆ ಯಾವುದೇ ಒತ್ತಡಕ್ಕೂ ಮಣಿಯದೆ, ದಾಖಲೆ ಪರಿಶೀಲಿಸಿ ಒತ್ತುವರಿ ತೆರವುಗೊಳಿಸಲಾಗುವುದು. ಇದಕ್ಕೆ ಸಾರ್ವಜನಿಕರ ಸಹಕಾರ ಮುಖ್ಯ ಎಂದು ಹೇಳಿದರು.

ಅಪಘಾತದಲ್ಲಿ ಯುವಕ ಸಾವು
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಜು. 22

ತಾಲೂಕಿನ ಚಿಕ್ಕಬಳ್ಳಾಪುರ ಮುಖ್ಯ ರಸ್ತೆಯ ಲಿಂಗನಹಳ್ಳಿ ಗೇಟ್ ಸಮಿಪ ಕೆಎಸ್ಸಾರ್ಟಿಸಿ ಬಸ್ ಮತ್ತು ದ್ವಿಚಕ್ರ ವಾಹನದ ನಡುವೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಯುವಕನೊಬ್ಬ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಮೃತನನ್ನು ತಾಲೂಕಿನ ಮುಕ್ಕೇನಹಳ್ಳಿ ಗ್ರಾಮದ ಮಂಜುನಾಥ್(20) ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಇದೇ ಗ್ರಾಮದ ಅಭಿಲಾಷ್(16) ತೀವ್ರವಾಗಿ ಗಾಯಗೊಂಡಿದ್ದು, ಸ್ಥಿತಿ ಗಂಭೀರವಾಗಿದೆ. ಆತನನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.
ರಾಗಿ ಬಿತ್ತನೆ ಕಾರ್ಯಕ್ಕೆ ಟ್ರ್ಯಾಕ್ಟರ್ನಲ್ಲಿ ಉಳುಮೆ ಮಾಡಲು ರಾಜಘಟ್ಟದ ಪೆಟ್ರೋಲ್ ಬಂಕ್ನಿಂದ ಪೆಟ್ರೋಲ್ ಖರೀದಿಸಿ ತಮ್ಮ ದ್ವಿಚಕ್ರ ವಾಹನದಲ್ಲಿ ಬರುತ್ತಿದ್ದರು. ಆ ಸಂದರ್ಭದಲ್ಲಿ ಚಿಕ್ಕಬಳ್ಳಾಪುರದಿಂದ ಮುದ್ದೇನಹಳ್ಳಿ ಮಾರ್ಗವಾಗಿ ದೊಡ್ಡಬಳ್ಳಾಪುರಕ್ಕೆ ಬರುತ್ತಿದ್ದ ಕೆಎಸ್ಆರ್ಟಿಸಿ ಗ್ರಾಮೀಣ ಸಾರಿಗೆ ಬಸ್ ಮುಖಾಮುಖಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಜುನಾಥ್ ಸ್ಥಳದಲ್ಲೇ ಮೃತಪಟ್ಟಿದ್ದಾನೆ.
ಆಕ್ರೋಶ: ಘಟನೆಗೆ ಕಿರಿದಾದ ರಸ್ತೆ ಮತ್ತು ಹದಗೆಟ್ಟ ಬಸ್ಸುಗಳೇ ಕಾರಣ ಎಂದು ನಾಗರಿಕರು ಆರೋಪಿಸಿದ್ದಾರೆ. ಘಟನೆಯಿಂದ ಆಕ್ರೋಶಿತರಾದ ಮುಕ್ಕೇನಹಳ್ಳಿ ಸೇರಿದಂತೆ ಹಲವು ಗ್ರಾಮಗಳ ಗ್ರಾಮಸ್ಥರು ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಕೆಲಕಾಲ ಉದ್ವಿಘ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಸ್ಥಳಕ್ಕೆ ದೊಡ್ಡಬಳ್ಳಾಪುರ ಡಿವೈಎಸ್ಪಿ ಶ್ರೀಧರ್, ಗ್ರಾಮಾಂತರ ಪಿಎಸೈ ಶಬರೀಶ್, ಕೃಷ್ಣಕುಮಾರ್ ಭೇಟಿ ನೀಡಿ ಪರಿಸ್ಥಿತಿ ತಿಳಿಗೊಳಿಸಿದರು.
50 ಸಾವಿರ ಪರಿಹಾರ: ಘಟನೆಯಲ್ಲಿ ಮೃತಪಟ್ಟಿರುವ ಮಂಜುನಾಥ್ ಕುಟುಂಬಕ್ಕೆ ಕೆಎಸ್ಸಾರ್ಟಿಸಿ 50 ಸಾವಿರ ಪರಿಹಾರ ಘೋಷಿಸಿದೆ. ಸ್ಥಳಕ್ಕೆ ಭೇಟಿ ನೀಡಿದ್ದ ಸಾರಿಗೆ ಘಟಕದ ನಿರ್ವಾಹಕ ಅಧಿಕಾರಿ ಸಿ.ಡಿ. ಪ್ರಸಾದ್ ಈ ವಿಚಾರ ತಿಳಿಸಿದರು.

ಪರಾರಿಯಾಗಿದ್ದ ಕೊಲೆ ಆರೋಪಿ ಬಂಧನ
ನೆಲಮಂಗಲ:
ಚಾಲಕನೊಬ್ಬನ ಕುತ್ತಿಗೆಗೆ ಟವೆಲ್ನಿಂದ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ ಆರೋಪಿಯನ್ನು ದಾಬಸ್ಪೇಟೆ ಪೊಲೀಸರು ಬಂಧಿಸಿ ನ್ಯಾಯಾಂಗ ವಶಕ್ಕೆ ನೀಡಿರುವುದಾಗಿ ಡಿ.ವೈ.ಎಸ್ಪಿ ಮಲ್ಲೇಶ್ ತಿಳಿಸಿದ್ದಾರೆ.
ಬಂಧಿತ ಅರೋಪಿಯನ್ನು ಗಿರೀಶ್ ಅಲಿಯಾಸ್ ಪವನ್(25) ಎಂದು ಗುರುತಿಸಲಾಗಿದೆ. ಈತ ಮೈಸೂರು ಜಿಲ್ಲೆ ನಂಜನಗೂಡಿನವನಾಗಿದ್ದು, ಹಾಲಿ ಬೆಂಗಳೂರಿನ ಮಲ್ಲತ್ತಹಳ್ಳಿಯಲ್ಲಿ ವಾಸವಿದ್ದನು. ಈ ಆರೋಪಿ ಕಳೆದ ಒಂದು ತಿಂಗಳ ಹಿಂದಷ್ಟೆ ದಾಬಸ್ಪೇಟೆಯ ಹಳೇನಿಜಗಲ್ನ ನೀಲಗಿರಿ ತೋಪಿನ ಬಳಿ ಹರಿಯಾಣ ಮೂಲದ ಲಾರಿ ಚಾಲಕ ಸಜ್ಜನ್ಕುಮಾರ್(50) ಎಂಬಾತನನ್ನು ಟವೆಲ್ನಿಂದ ಕುತ್ತಿಗೆಗೆ ಬಿಗಿದು ಕೊಲೆಗೈದು ಆತನ ಬಳಿ ಇದ್ದ ಏಳುನೂರು ರುಪಾಯಿ ಹಾಗೂ ಮೊಬೈಲ್ ತೆಗೆದುಕೊಂಡು ಪರಾರಿಯಾಗಿದ್ದನು. ಈ ಬಗ್ಗೆ ದಾಬಸ್ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡು ಆರೋಪಿಯನ್ನು ಬಂಧಿಸಿದ್ದಾರೆ. ಬಂದಿತ ಆರೋಪಿಯ ಮೇಲೆ ಮಂಡ್ಯ, ಚಾಮರಾಜನಗರ ಜಿಲ್ಲೆಗಳ ಕೊಲೆ, ದರೋಡೆ ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸರು ತಿಳಿಸಿದ್ದಾರೆ.

384 ಮಂದಿ 11ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ
ಕ.ಪ್ರ.ವಾರ್ತೆ ರಾಮನಗರ ಜು. 22

ತಾಲೂಕಿನ ಬಿಡದಿಯ ಗೆಳೆಯರ ಬಳಗವು ರಾಷ್ಟ್ರೋತ್ಥಾನ ರಕ್ತ ನಿಧಿಯ ಸಹಯೋಗದೊಂದಿಗೆ ಬಿಡದಿ ಸರ್ಕಾರಿ ಆಸ್ಪತ್ರೆಯಲ್ಲಿ ಆಯೋಜಿಸಿದ್ದ 11ನೇ ವರ್ಷದ ಸ್ವಯಂಪ್ರೇರಿತ ರಕ್ತದಾನ ಶಿಬಿರದಲ್ಲಿ 384 ಮಂದಿ ರಕ್ತದಾನ ಮಾಡಿದ್ದಾರೆ. ಸಂಕಷ್ಟದಲ್ಲಿರುವ ರೋಗಿಗಳಿಗೆ ನೆರವಾಗುವ ಸದುದ್ದೇಶದಿಂದ ಬಳಗವು ಕಳೆದ 11 ವರ್ಷದಿಂದ ರಕ್ತದಾನ ಶಿಬಿರ ನಡೆಸುತ್ತಾ ಬಂದಿದೆ. ಇದುವರೆಗೂ ಸಂಸ್ಥೆಯು 2794 ಯೂನಿಟ್ ರಕ್ತ ಸಂಗ್ರಹಿಸಿ ನೂರಾರು ಜೀವಗಳ ಉಳಿವಿಗೆ ಕಾರಣವಾಗಿದೆ. ಇಂತಹ ಮಾನವೀಯ ಸೇವಾ ಕಾರ್ಯ ಕೈಗೊಳ್ಳಲು ಪ್ರೋತ್ಸಾಹ ನೀಡಿದ ದಾನಿಗಳು, ರಕ್ತದಾನದ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿರುವ ಬಳಗದ ಸದಸ್ಯರು, ದಾನಿಗಳಿಗೆ ಹಾಗೂ ರಕ್ತ ಸಂಗ್ರಹಿಸಿ ಅಗತ್ಯವಿರುವ ರೋಗಿಗಳಿಗೆ ತಲುಪಿಸುವ ಕಾರ್ಯದಲ್ಲಿ ನಿರತರಾಗಿರುವ ರಾಷ್ಟ್ರೋತ್ಥಾನ ರಕ್ತನಿಧಿಯ ಸಿಬ್ಬಂದಿಗೆ ಗೆಳೆಯರ ಬಳಗದ ಅಧ್ಯಕ್ಷ ರವಿಕುಮಾರ್ ಕೃತಜ್ಞತೆ ಅರ್ಪಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.