ಬೆಂಗಳೂರು ಗ್ರಾಮಾಂತರ

ಜನಸಂಖ್ಯೆ ನಿಯಂತ್ರಣದಲ್ಲಿ ಜನರ ಸಹಭಾಗಿತ್ವ ಮುಖ್ಯ

Published On :

ದೇವನಹಳ್ಳಿ: ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ, ರಾಷ್ಟ್ರೀಯ ಗ್ರಾಮೀಣ ಆರೋಗ್ಯ ಅಭಿಯಾನ ಹಾಗೂ ಆರೋಗ್ಯ ಇಲಾಖೆ ಇವರ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆಯನ್ನು ಶನಿವಾರ ಇಲ್ಲಿನ ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿಯಲ್ಲಿ ಆಯೋಜಿಸಲಾಗಿತ್ತು.
ಸಮಾರಂಭವನ್ನು ಶಾಸಕರಾದ ಪಿಳ್ಳಮುನಿಶಾಮಪ್ಪರವರು ಉದ್ಘಾಟಿಸಿ ನಮ್ಮ ದೇಶದ ಜನಸಂಖ್ಯೆ ಸ್ವಾತಂತ್ರ್ಯ ಪೂರ್ವ 40 ಕೋಟಿ ಇದ್ದು ಈಗ 114 ಕೋಟಿಗೂ ಮೀರಿದೆ. ಇದೇ ರೀತಿ ಜನಸಂಖ್ಯೆ ಹೆಚ್ಚಾದಂತೆ ಯಾವುದೇ ಸರ್ಕಾರಗಳು ಅಧಿಕಾರಕ್ಕೆ ಬರಲಿ ಎಲ್ಲ ಅಭಿವೃದ್ಧಿ ಯೋಜನೆಗಳು ಜನರ ತಲುಪಲು ಸಾಧ್ಯವಿಲ್ಲ. ಆದ್ದರಿಂದ ಜನಸಂಖ್ಯೆ ನಿಯಂತ್ರಣದಲ್ಲಿ ಜನರ ಸಹಭಾಗಿತ್ವ ಮುಖ್ಯವಾಗಿರುತ್ತದೆ ಎಂದರು.
ಅಲ್ಲದೆ ಆಶಾ ಕಾರ್ಯಕರ್ತೆಯರು ಗ್ರಾಮೀಣ ಪ್ರದೇಶದ ಎಲ್ಲ ಮನೆಗಳಿಗೆ ಹೋಗಿ ಗರ್ಭವತಿಯರ ಹಾಗೂ ಬಾಣಂತಿ ಮತ್ತು ಮಗುವಿನ ಆರೋಗ್ಯ ಕಾಪಾಡುವಲ್ಲಿ ಮತ್ತು ಆರೋಗ್ಯ ಶಿಕ್ಷಣ ನೀಡುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗುತ್ತದೆ. ಸರ್ಕಾರದ ಎಲ್ಲ ಸೌಲಭ್ಯಗಳು ಜನರಿಗೆ ತಲುಪಲು ಎಲ್ಲ ಅಧಿಕಾರಿಗಳ ಪ್ರಾಮಾಣಿಕ ಕರ್ತವ್ಯವಾಗಿರುತ್ತದೆ ಎಂದರಲ್ಲದೆ ಜನರ ಸೇವೆಗಾಗಿ ಯಾವುದೇ ಸಮಸ್ಯೆ ಇದ್ದರೂ ನಮ್ಮಲ್ಲಿ ಸಂಪರ್ಕಿಸಿರಿ ಎಂದರು.
ದೇವನಹಳ್ಳಿ ತಾಲೂಕಿನಲ್ಲಿ ಡೆಂಘೀ ಮತ್ತು ಚಿಕುನ್‌ಗುನ್ಯ ರೋಗಗಳ ನಿಯಂತ್ರಣ ಮುಖ್ಯವಾಗಿದ್ದು ಗ್ರಾಮೀಣ ಪ್ರದೇಶಗಳಲ್ಲಿ ಸೊಳ್ಳೆಗಳು ಉತ್ಪತ್ತಿಯಾಗಲು ನೀರು ನಿಲ್ಲದಂತೆ ಮತ್ತು ನೈರ್ಮಲ್ಯ ಕಾಪಾಡಲು ಗ್ರಾಮ ಪಂಚಾಯಿತಿಗಳು ಹಾಗೂ ಆರೋಗ್ಯ ಕಾರ್ಯಕರ್ತರು ವಿಶೇಷ ಗಮನ ತೆಗೆದುಕೊಳ್ಳಬೇಕೆಂದು ಶಾಸಕರು ತಿಳಿಸಿದರು.
ಇದೇ ಸಂದರ್ಭದಲ್ಲಿ ಆಶಾ ಕಾರ್ಯಕರ್ತೆಯೊಬ್ಬರು ಸಭೆಯಲ್ಲಿ ಎದ್ದು ನಿಂತು ತಮಗೆ ಮೂರು ತಿಂಗಳಿನಂದ ವೇತನ ಬಂದಿಲ್ಲ ಜೀವನ ಸಾಗಿಸುವುದು ಹೇಗೆ ಎಂದು ಶಾಸಕರಲ್ಲಿ ಪ್ರಶ್ನಿಸಿದರು. ಇದರ ಬಗ್ಗೆ ಸಂಭಂಧಪಟ್ಟ ಅಧಿಕಾರಗಳಲ್ಲಿ ಚರ್ಚಿಸುವುದಾಗಿ ತಿಳಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾ ಆರೋಗ್ಯಾಧಿಕಾರಿಗಳಾದ ಸಿರಾಚ ಮದ್ನಿರವರು ಮಾತನಾಡಿ ಸರ್ಕಾರ ನಿಗದಿ ಪಡಿಸಿದ ವಯಸಿನಲ್ಲಿಯೆ ಮದುವೆಯಾಗಬೇಕು ಮತ್ತು ದಂಪತಿಗಳಿಗೆ ಆರೋಗ್ಯ ಶಿಕ್ಷಣ ಮುಖ್ಯವಾಗಿರುತ್ತದೆ. ಅಲ್ಲದೆ ಮಕ್ಕಳ ನಡುವೆ ಕನಿಷ್ಠ ಮೂರು ವರ್ಷ ಅಂತರವಿರಬೇಕು ಎಂದರು.
ಸಮಾರಂಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷರಾದ ಮುನಿಶಾಮಯ್ಯ, ತಾಲೂಕು ಪಂಚಾಯಿತಿ ಅಧ್ಯಕ್ಷರಾದ ರಾಧಿಕಾ ತ್ಯಾಗರಾಜ್, ತಾಲೂಕು ಪಂಚಾಯಿತಿ ಉಪಾಧ್ಯಕ್ಷರಾದ ಪಟಾಲಪ್ಪ, ಸದಸ್ಯರಾದ ನರಸಿಂಹಮೂರ್ತಿ, ರಾಮಣ್ಣ, ಪುರಸಭಾ ಸದಸ್ಯರಾದ ಜಿ.ಎ.ರವೀಂದ್ರ ಹಾಗೂ ತಾಲೂಕು ಆರೋಗ್ಯಾಧಿಕಾರಿ ಡಾ.ಪ್ರಿಯಲತ ಉಪಸ್ಥಿತರಿದ್ದರು.
ತಾಲೂಕು ಆರೋಗ್ಯ ಕೇಂದ್ರ ಪರವಾಗಿ ಶಾಸಕರನ್ನು ಹಿರಿಯ ವೈದ್ಯರಾದ ನಾಗೇಶ್‌ರವರು ಸನ್ಮಾನಿಸಿದರು. ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಮೇಶ್ ಸ್ವಾಗತ ಕೋರಿದರು. ಆರೋಗ್ಯ ಶಿಕ್ಷಣಾಧಿಕಾರಿಗಳಾದ ಜಿ.ಗೋವಿಂದರಾಜು ನಿರೂಪಣೆ ಮಾಡಿದರು, ಡಾ.ಚೇತನ್‌ಕುಮಾರ್ ವಂದನೆ ಅರ್ಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.