ಬೆಂಗಳೂರು ಗ್ರಾಮಾಂತರ

ಹೆಪಟೈಟಿಸ್ ಬಿ ಲಕ್ಷಣ ರಹಿತ ಮಾರಕ ರೋಗ

Published On :

ಬೆಂಗಳೂರು: ಯಾವುದೇ ರೋಗ ಲಕ್ಷಣವಿಲ್ಲದೆ ಕಾಡುವ ಮಾರಕ ರೋಗ ಹೆಪಟೈಟಿಸ್ ಬಿ ನಗರದ ಐವತ್ತು ಜನರ ಪೈಕಿ ಒಬ್ಬರಲ್ಲಿ ಪತ್ತೆಯಾಗಿದೆ ಎಂದು ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಉಪಾಧ್ಯಕ್ಷ ಡಾ.ಎನ್.ಕೆ. ವೆಂಕಟರಮಣ ತಿಳಿಸಿದ್ದಾರೆ.
ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ಇಂಟಿಗ್ರೇಟೆಡ್ ಲಿವರ್ ಕೇರ್ ಫೌಂಡೇಷನ್ ಸಹಯೋಗದಲ್ಲಿ ಆಯೋಜಿಸಿರುವ ಬೆಂಗಳೂರು ಹೆಪಟೈಟಿಸ್ ಪ್ರೊಜೆಕ್ಟ್‌ನ ಸಮೀಕ್ಷೆಯಿಂದ ಇದು ತಿಳಿದು ಬಂದಿದೆ ಎಂದು ಅವರು ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಜನಜಾಗೃತಿ ಇಲ್ಲ: ಏಯ್ಡ್ಸ್‌ಗಿಂತಲೂ ಮಾರಕ ರೋಗ ಹೆಪಟೈಟಿಸ್ ಬಿ ಮತ್ತು ಸಿ ಬಗ್ಗೆ ಜನಜಾಗೃತಿ ಇಲ್ಲ. ಆತಂಕದ ವಿಷಯ ಎಂದರೆ, ಇವು ಉಲ್ಬಣಗೊಳ್ಳುವವರೆಗೂ ಪೀಡಿತರಲ್ಲಿ ಯಾವುದೇ ರೋಗಲಕ್ಷಣ ಕಾಣಿಸುವುದಿಲ್ಲ. ಆರಂಭಿಕ ಹಂತದಲ್ಲೇ ಇದನ್ನು ಪತ್ತೆ ಮಾಡಿ ಚಿಕಿತ್ಸೆ ನೀಡದಿದ್ದಲ್ಲಿ ಲಿವರ್ ಸಂಪೂರ್ಣ ಹಾನಿಗೊಳ್ಳುತ್ತದೆ. ಈ ನಿಟ್ಟಿನಲ್ಲಿ ಜನಜಾಗೃತಿ ಮೂಡಿಸುವ ಸಲುವಾಗಿ ಬಿಜಿಎಸ್ ಗ್ಲೋಬಲ್ ಆಸ್ಪತ್ರೆ ನಡೆಸಿದ ಸಮೀಕ್ಷೆಯಲ್ಲಿ ನಗರದ 50 ಜನರ ಪೈಕಿ ಒಬ್ಬರಿಗೆ ಹೆಪಟೈಟಿಸ್ ಬಿ ಮತ್ತು 200 ಜನರ ಪೈಕಿ ಒಬ್ಬರಲ್ಲಿ ಹೆಪಟೈಟಿಸ್ ಸಿ ಪತ್ತೆಯಾಗಿದೆ. ಪ್ರಸ್ತುತ 1918 ಮಂದಿಯನ್ನು ಸಮೀಕ್ಷೆ ಗೊಳಪಡಿಸಿದ್ದು, ಇನ್ನು 1 ವರ್ಷದಲ್ಲಿ ಒಟ್ಟು 50 ಸಾವಿರ ಜನರನ್ನು ತಪಾಸಣೆ ನಡೆಸಿ ಕರಾರುವಾಕ್ ಹಾಗೂ ವರ್ಗೀಕೃತ ಅಂಕಿ ಅಂಶ ಬಿಡುಗಡೆ ಮಾಡಲಾಗುವುದು ಎಂದು ಅವರು ತಿಳಿಸಿದರು.
ರೋಗ ತಡೆಯಬಹುದು: ಈ ರೋಗ ಉಲ್ಬಣಿಸಿದರೆ ರಕ್ತಸ್ರಾವ, ಪಿತ್ತಜನಕಾಂಗದ ಕ್ಯಾನ್ಸರ್ ಅಥವಾ ವೈಫಲ್ಯ ಮಾತ್ರವಲ್ಲದೆ ಸಾವು ಕೂಡ ಸಂಭವಿಸಬಹುದು. ಸೋಂಕು ಹೊಂದಿರುವ ರಕ್ತ ಅಥವಾ ಸೋಂಕಿತ ಸೂಜಿ ಅಥವಾ ಲೈಂಗಿಕ ಸಂಪರ್ಕದಿಂದ ಇದು ಹರಡುತ್ತದೆ. ರೋಗ ನಿರೋಧಕ ಲಸಿಕೆಯನ್ನು ಮೂರು ಬಾರಿ ಕಡ್ಡಾಯವಾಗಿ ತೆಗೆದುಕೊಳ್ಳುವುದರಿಂದ ಇದನ್ನು ತಡೆಯಬಹುದು ಎಂದರು.
12 ರಿಂದ 20 ಲಕ್ಷ ಮಂದಿ ಪೀಡಿತರು: ಬಿಜಿಎಸ್‌ನ ಬಹು ಅಂಗಕಸಿ ತಜ್ಞ ಡಾ.ಸೋನಾಲ್ ಆಸ್ಥಾನ, ದೇಶದಲ್ಲಿ 4 ಕೋಟಿ ಜನ ಹೆಪಟೈಟಿಸ್ ಬಿ ವೈರಸ್ ಹೊಂದಿದ್ದು, ಇದು ಎಚ್‌ಐವಿ ಪೀಡಿತರಿಗಿಂತ ಹತ್ತು ಪಟ್ಟು ಅಧಿಕ. ಕರ್ನಾಟಕವೊಂದರಲ್ಲೇ ಸುಮಾರು 12 ರಿಂದ 20 ಲಕ್ಷ ಮಂದಿ ಹೆಪಟೈಟಿಸ್ ಪೀಡಿತರಾಗಿದ್ದಾರೆ ಎಂದರು. ಬಿಜಿಎಸ್‌ನ ಪಿತ್ತಜನಕಾಂಗ(ಲಿವರ್) ತಜ್ಞ ಡಾ.ಕೈಸರ್ ರಾಜಾ ಮಾತನಾಡಿ, ಸಮೀಕ್ಷೆಯ ಮೊದಲ ಹಂತದ 8 ತಪಾಸಣಾ ಶಿಬಿರಗಳಲ್ಲಿ ಒಟ್ಟು 1918 ಜನರನ್ನು 5 ವಾರಗಳ ಅವಧಿಯಲ್ಲಿ ತಪಾಸಣೆ ನಡೆಸಲಾಗಿದೆ. 3ತಿಂಗಳಿನಿಂದ 87 ವರ್ಷ ವಯಸ್ಸಿನವರೆಗಿನವರು ಈ ತಪಾಸಣೆಯಲ್ಲಿ ಭಾಗಿಯಾಗಿದ್ದು, ಅವರಲ್ಲಿ ಶೇ. 1.7ರಷ್ಟು ಜನರಲ್ಲಿ ಹೆಪಟೈಟಿಸ್ ಬಿ ಮತ್ತು ಶೇ. 0.2ರಷ್ಟು ಜನರಲ್ಲಿ ಹೆಪಟೈಟಿಸ್ ಸಿ ಪತ್ತೆಯಾಗಿದೆ. ಅಲ್ಲದೆ, 20 ರಿಂದ 40 ವರ್ಷ ವಯೋವಾನದವರಲ್ಲಿ ಇದು ಶೇ. 51ರಷ್ಟು ಕಂಡು ಬಂದಿದೆ. ಸೋಂಕು ಪತ್ತೆಯಾದವರಿಗೆ ಪ್ರಾಥಮಿಕ ಸಲಹೆ ನೀಡಿದ್ದು ಅವರು ಚಿಕಿತ್ಸೆಗೆ ಹಾಜರಾಗಿದ್ದಾರೆ. ಉಳಿದ 1716 ಜನರಿಗೆ ರೋಗ ನಿರೋಧಕ ಲಸಿಕೆ ನೀಡಲಾಗಿದೆ ಎಂದರು.  ಪಿತ್ತಜನಕಾಂಗ ಕಸಿ ತಜ್ಞ ಡಾ.ಮ್ಯಾಥ್ಯೂ ಜಾಕೋಬ್ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.