ಬೆಂಗಳೂರು ಗ್ರಾಮಾಂತರ

50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Published On :

ಸೂಲಿಬೆಲೆ: ಹೊಸಕೋಟೆ ತಾಲೂಕಿನ ಬೈಲುನರಸಾಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ ಬುಧವಾರ ಮಧ್ಯಾಹ್ನದ ಬಿಸಿಯೂಟ ಸೇವಿಸಿದ ನಂತರ ಸುಮಾರು 50ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥರಾಗಿದ್ದು, ಘಟನೆಗೆ ಬಿಸಿಯೂಟದ ವಿಷಪೂರಿತ ಆಹಾರಸೇವನೆಯ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ.  ಈ ಮಧ್ಯ ಘಟನೆಯ ಸಂಬಂಧ ಆಸ್ಪತ್ರೆಗೆ ಧಾವಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ವಿ.ಸಿ. ಬಸವರಾಜೇಗೌಡ ಯಾವುದೇ ಮಗುವಿಗೆ ಅಪಾಯವಿಲ್ಲ. ಎಲ್ಲ ಮಕ್ಕಳನ್ನು ವೈದ್ಯರಿಂದ ತಪಾಸಣೆ ಮಾಡಿ ಪೋಷಕರೊಂದಿಗೆ ಮನೆಗೆ ಕಳುಹಿಸಲಾಗಿದೆ. ಪರಿಶೀಲನೆ ಮಾಡಿ ಘಟನೆ ಬಗ್ಗೆ ಕ್ರಮ   ಕೈಕೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಸೋಂಕು ತಗುಲಿ ನೂರಾರು ಮೇಕೆ ಬಲಿ
ಹನೂರು: ಕಳೆದ ಒಂದು ವಾರದಿಂದ ಹನೂರಿನ ವಿವಿಧೆಡೆ ಮೇಕೆಗಳಿಗೆ ಶ್ವಾಸಕೋಶದ ಸೋಂಕು ತಗುಲಿ 100ಕ್ಕೂ ಹೆಚ್ಚು ಮೇಕೆಗಳು ಮೃತಪಟ್ಟಿವೆ. ಹನೂರು ಸಮೀಪದ ದೊರೆದೊಡ್ಡಿಯ ದೊರೆಸ್ವಾಮಿ ನಾಯ್ಕನಿಗೆ ಸೇರಿದ 30 ಮೇಕೆಗಳು, ದಿನ್ನಳ್ಳಿಯ ಜಡೆಯನಾಯ್ಕನ 25 ಮೇಕೆಗಳು, ಎಡೆಯರ ಹಳ್ಳಿಯ ಪುಟ್ಟಮಾದೇಗೌಡನಿಗೆ ಸೇರಿದ 18 ಮೇಕೆಗಳು ಹಾಗೂ ರಾಮನಾಯ್ಕನ 20 ಮೇಕೆಗಳು ಸೇರಿದಂತೆ ನೂರಾರು ಮೇಕೆಗಳು ಈಗಾಗಲೇ ಮೃತಪಟ್ಟಿವೆ. ಈ ಭಾಗದ ಅನೇಕ ಗ್ರಾಮಗಳಲ್ಲಿ ಇನ್ನೂ ಕೆಲವು ಮೇಕೆಗಳು ಈ ಸೋಂಕಿನಿಂದ ಬಳಲುತ್ತಿದ್ದು ಪಶು ವೈದ್ಯಾಧಿಕಾರಿಗಳಿಂದ ಸೂಕ್ತ ಚಿಕಿತ್ಸೆ ಕೊಡಿಸಲಾಗಿದೆ.

ಇಬ್ಬರು ಲಂಚಬಾಕ ಅಧಿಕಾರಿಗಳಿಗೆ ಜೈಲು
ದಾವಣಗೆರೆ: ಗಂಗಾ ಕಲ್ಯಾಣ ಯೋಜನೆಯಡಿ ಸೌಲಭ್ಯ ಕಲ್ಪಿಸಲು ಲಂಚ ಕೇಳಿದ ಇಬ್ಬರು ಅಧಿಕಾರಿಗಳ ಪೈಕಿ ಒಬ್ಬನಿಗೆ 5 ವರ್ಷ ಜೈಲು ಮತ್ತು 15 ಸಾವಿರ ದಂಡ ಹಾಗೂ ಮತ್ತೊಬ್ಬನಿಗೆ 3 ವರ್ಷ ಜೈಲು, 10 ಸಾವಿರ ದಂಡ ವಿಧಿಸಿ ಹಾವೇರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ತೀರ್ಪು ನೀಡಿದೆ. ಹಾವೇರಿ ಜಿಲ್ಲೆಯ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ನಿಗಮ ನಿಯಮದ ಜಿಲ್ಲಾ ವ್ಯವಸ್ಥಾಪಕ ಎಸ್.ಎನ್. ಮಂಜುನಾಥ ಹಾಗೂ ಧಾರವಾಡದ ಕೆಎಂಎಫ್ ಡೇರಿ ಆಪರೇಟರ್ ಬಿ. ನೀಲಕಂಠಪ್ಪ ಬಸವಲಿಂಗಪ್ಪ ಮಠದ ಶಿಕ್ಷೆಗೆ ಗುರಿಯಾಗಿರುವ ಅಧಿಕಾರಿಗಳು. ಹಾವೇರಿ ಜಿಲ್ಲೆ ನೆಲೋಗಲ್ ತಾಂಡಾದ ವಾಸಿ ಪರಮೇಶ್ವರಪ್ಪ ಹಾಗೂ ಆತನ ತಂದೆ ಹೆಸರಿನಲ್ಲಿ ಹೊಂಬರಡಿ ಗ್ರಾಮದಲ್ಲಿ ಗಂಗಾ ಕಲ್ಯಾಣದಡಿ ಕೊಳವೆ ಬಾವಿ ಕೊರೆಸಲು ನಿಗಮದ ಜಿಲ್ಲಾ ವ್ಯವಸ್ಥಾಪಕ ಎಸ್.ಎಲ್. ಮಂಜುನಾಥ 3 ಸಾವಿರ ಲಂಚ ಕೇಳಿದ್ದ. ಈ ಕುರಿತು ಪರಮೇಶ್ವರಪ್ಪ ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು. ಲಂಚ ಪಡೆಯುವಾಗ ಹಾವೇರಿ ಲೋಕಾಯುಕ್ತ ಇನ್‌ಸ್ಪೆಕ್ಟರ್ ಜಿ. ಗುರುದತ್ ಬಲೆಗೆ ಕೆಡವಿದ್ದರು. ಇಬ್ಬರೂ ಆರೋಪಿಗಳ ವಿರುದ್ಧ ಹಾವೇರಿ ಜಿಲ್ಲಾ ಸತ್ರ ಮತ್ತು ವಿಶೇಷ ನ್ಯಾಯಾಲಯದಲ್ಲಿ ಆರೋಪಿ ವಿರುದ್ಧ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ತೀರ್ಪು ನೀಡಿದೆ.

ಡಾ. ಮೋಹನದಾಸ ಅಸಹಜ ಸಾವು
ಮಂಗಳೂರು: ಭಾರತೀಯ ವೈದ್ಯಕೀಯ ಸಂಘಟನೆ ರಾಜ್ಯ ಉಪಾಧ್ಯಕ್ಷ ಡಾ. ಕೆ.ಮೋಹನದಾಸ ಭಂಡಾರಿ (64) ಅಸಹಜವಾಗಿ ಮೃತಪಟ್ಟಿದ್ದಾರೆ. ಅಳಪೆ ಪಡೀಲ್‌ನ ಅವರ ಮನೆ ಮುಂದಿನ ಬಾವಿಯಲ್ಲಿ ಬುಧವಾರ ಅವರ ಶವ ಪತ್ತೆಯಾಗಿದೆ. ಆತ್ಮಹತ್ಯೆ ಮಾಡಿಕೊಂಡರೇ ಆಯತಪ್ಪಿ ಬಿದ್ದರೆ ಅಥವಾ ದೂಡಿಹಾಕಲಾಯಿತೇ ಎನ್ನುವ ಬಗ್ಗೆ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.