ಬೆಂಗಳೂರು ಗ್ರಾಮಾಂತರ

ಕಾಲಮಿತಿಯೊಳಗೆ ಕಾಮಗಾರಿ ಆರಂಭಿಸಲು ಬದ್ಧ

Published On :

ಕ.ಪ್ರ. ವಾರ್ತೆ ದೇವನಹಳ್ಳಿ ಜೂ.25
ಶಾಶ್ವತ ನೀರಾವರಿ ಯೋಜನೆಗೆ ನೀರಾವರಿ ತಜ್ಞರಾದ ಡಾ. ಪರಮಶಿವಯ್ಯರವರ ವರದಿ ಅನುಷ್ಠಾನಕ್ಕಾಗಿ ರಾಜ್ಯದ ಬೃಹತ್ ನೀರಾವರಿ ಸಚಿವರಾದ ಎಂ.ಬಿ.ಪಾಟೀಲ್ ಅವರು ಬೆಂಗಳೂರಿನ ಕರ್ನಾಟಕ ನೀರಾವರಿ ನಿಗಮದ ಕಚೇರಿಯಲ್ಲಿ ಬಯಲು ಸೀಮೆ ಜಿಲ್ಲೆಗಳ ಶಾಸಕರ, ನೀರಾವರಿ ಇಲಾಖೆಯ ಮುಖ್ಯ ಎಂಜಿನಿಯರ್‌ಗಳ, ನೀರಾವರಿ ತಜ್ಞರಾದ ಡಾ.ಪರಮಶಿವಯ್ಯ, ಡಾ.ಮಧುಸೀತಪ್ಪ ಅಲ್ಲದೆ ಶಾಶ್ವತ ನೀರಾವರಿ ಹೋರಾಟ ಸಮಿತಿಯ ಮುಖಂಡರ ಸಭೆಯನ್ನು ಸೋಮವಾರ ಕರೆಯಲಾಗಿತ್ತು ಎಂದು ಹೋರಾಟ ಸಮಿತಿಯ ಸಂಚಾಲಕರಾದ ಕಲ್ಯಾಣಕುಮಾರ್ ಪತ್ರಕರ್ತರಿಗೆ ತಿಳಿಸಿದರು.
 ಬಯಲು ಸೀಮೆ ಜಿಲ್ಲೆಗಳ ರೈತರ ಮತ್ತು ನಾಗರಿಕರ ಬಹುದಿನಗಳ ಬೇಡಿಕೆಯಾಗಿರುವ ಶಾಶ್ವತ ನೀರಾವರಿ ಯೋಜನೆಗೆ ಎಲ್ಲ ರಾಜಕೀಯ ಪಕ್ಷಗಳು ಚುನಾವಣೆ ಸಂದರ್ಭದಲ್ಲಿ ಶಾಶ್ವತ ನೀರಾವರಿ ಯೋಜನೆ ಕಾರ್ಯಗತ ಗೊಳಿಸುವುದೇ ಪ್ರಣಾಳಿಕೆಯಲ್ಲಿ ರಾರಾಜಿಸುತ್ತಿತ್ತು,  ಈಗ ಈ ಯೋಜನೆಗೆ ಜೀವಕಳೆ ಬಂದಂತಿದೆ.
ಈ ಸಭೆಯಲ್ಲಿ ಸಚಿವರಾದ ಎಂ.ಬಿ.ಪಾಟೀಲ್ ಮಾತನಾಡಿ ವರದಿ ಅನುಷ್ಠಾನದಲ್ಲಿ ಈಗಾಗಲೇ 13 ವರ್ಷ ಕಳೆದಿದ್ದು ಇನ್ನು ಮುಂದೆ ಯೋಜನೆಯು ನಿಗದಿತ ಕಾಲಮಿತಿಯೊಳಗೆ ತಜ್ಞರ ಸಲಹೆಯಂತೆ ಕಾಮಗಾರಿ ಆರಂಭಿಸಲು ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
   ಇದೇ ಸಂಧರ್ಭದಲ್ಲಿ ನೀರಾವರಿ ತಜ್ಞರಾದ ಡಾ.ಪರಮಶಿವಯ್ಯರವರು ಮಾತನಾಡಿ ಎತ್ತಿನಹೊಳೆ ಯೋಜನೆ ತಮ್ಮ ವರದಿಯ ಒಂದು ಭಾಗವಾಗಿದ್ದು ಇದರಲ್ಲಿ ಕೇವಲ 8ರಿಂದ 9 ಟಿಎಂಸಿ ನೀರು ಮಾತ್ರ ಲಭ್ಯವಿದ್ದು ಬಯಲು ಸೀಮೆಯ ಎಲ್ಲ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯವಿಲ್ಲ. ಅದಕ್ಕೆ ಬದಲಾಗಿ ಪಶ್ಚಿಮಾಭಿಮುಖವಾಗಿ ಹರಿಯುವ ಇತರ ಜಲಮೂಲಗಳಿಂದ ಘಟ್ಟ ಪ್ರದೇಶಗಳಲ್ಲಿ ಲಭ್ಯವಾಗುವ ನೀರಿನ ಇಳುವರಿ ಆಧರಿಸಿ ಕಾಮನ್ ಗ್ರಿಡ್ ಮುಖಾಂತರ ಬೆಂಗಳೂರು ನಗರ ಸೇರಿದಂತೆ 7 ಜಿಲ್ಲೆಗಳ ಕೆರೆಗಳಿಗೆ ನೀರು ತುಂಬಿಸಲು ಸಾಧ್ಯ ಎಂದು ಸಭೆಗೆ ತಿಳಿಸಿದ್ದಾರೆ.
ನಿರ್ಲಕ್ಷ್ಯ: ದೇವನಹಳ್ಳಿ ಶಾಸಕರಾದ ಪಿಳ್ಳಮುನಿಶಾಮಪ್ಪರವರು ಮಾತನಾಡಿ ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಶಾಶ್ವತ ನೀರಾವರಿಗಾಗಿ ಬಯಲು ಸೀಮೆ ಜಿಲ್ಲೆಗಳು ಸರ್ಕಾರದ ನಿರ್ಲಕ್ಷಕ್ಕೆ ಒಳಗಾಗಿವೆ, ಕೇವಲ ಮಳೆಯಿಂದ ದೊರೆಯುವ ನೀರಿನಿಂದಲೇ  ಈ ಭಾಗದ ಜನರು ಜೀವಿಸುತ್ತಿದ್ದಾರೆ. ಆದ್ದರಿಂದ ರಾಜ್ಯ ಮತ್ತು ಕೇಂದ್ರ ಸರ್ಕಾರ ಶಾಶ್ವತ ನೀರಾವರಿಗೆ ಅಗತ್ಯವಾದ ಹಣವನ್ನು ಮೀಸಲಿಟ್ಟು ಕಾಮಗಾರಿ ಕೂಡಲೇ ಆರಂಭಿಸಬೇಕು. ಅಲ್ಲದೆ ಬಯಲು ಸೀಮೆ ಜಿಲ್ಲೆಗಳ ಎಲ್ಲ ಕೆರೆಗಳ ಹೂಳನ್ನು ತೆಗೆಸಿ ರಾಜಕಾಲುವೆಗಳ ಒತ್ತುವರಿಯನ್ನು ತೆರವುಗೊಳಿಸುವ ಕೆಲಸ ಆಗಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದರು.
ಹೊಸಕೋಟೆ ಕ್ಷೇತ್ರದ ಶಾಸಕ ನಾಗರಾಜ್ ಮಾತನಾಡಿ ಸರ್ಕಾರ ಬೇರೆ ಇಲಾಖೆಗಳಿಗೆ ಹಣ ಕಡಿತಗೊಳಿಸಿಯಾದರೂ ಶಾಶ್ವತ ನೀರಾವರಿಗೆ ಪ್ರಥಮ ಆದ್ಯತೆ ನೀಡಿ 2 ರಿಂದ 3 ವರ್ಷದೊಳಗಾಗಿ ಯೋಜನೆ ಪೂರ್ಣಗೊಳ್ಳಬೇಕು ಎಂದರು.
ಸಭೆಯಲ್ಲಿ ಸಂಸದರಾದ ತುಮಕೂರಿನ ಬಸವರಾಜು, ಮಾಜಿ ಸ್ಪೀಕರ್ ರಮೇಶ್‌ಕುಮಾರ್, ಕೋಲಾರ ಶಾಸಕರು ಹಾಗೂ ಮಾಜಿ ಸಚಿವರಾದ ವರ್ತೂರು ಪ್ರಕಾಶ್, ಗೌರಿಬಿದನೂರು ಶಾಸಕರಾದ ಶಿವಶಂಕರರೆಡ್ಡಿ, ಬಾಗೇಪಲ್ಲಿ ಶಾಸಕರಾದ ಕೆ.ಎನ್.ಸುಬ್ಬಾರೆಡ್ಡಿ, ಶಿಡ್ಲಘಟ್ಟ ಶಾಸಕರಾದ ರಾಜಣ್ಣ, ಚಿಂತಾಮಣಿ ಶಾಸಕರಾದ ಜಿ.ಕೆ ಕೃಷ್ಣಾರೆಡ್ಡಿ, ಮುಳಬಾಗಿಲು ಶಾಸಕರಾದ ಮಂಜುನಾಥ್, ಬೇತಮಂಗಲ ಶಾಸಕ ನಾರಾಯಣಸ್ವಾಮಿ, ಕೆಜಿಎಫ್ ಶಾಸಕಿ ರಾಮಕ್ಕ, ಹಾಗೂ ವಿಧಾನ ಪರಿಷತ್ ಸದಸ್ಯರಾದ ವೈ.ಎ. ನಾರಾಯಣಸ್ವಾಮಿ, ವಿ.ಆರ್. ಸುದರ್ಶನ್ ಉಪಸ್ಥಿತರಿದ್ದರು.
ಶಾಶ್ವತ ನೀರಾವರಿ ಹೋರಾಟ ಸಮಿತಿಯ ಜಿಲ್ಲಾ ಸಂಚಾಲಕರಾದ ಕಲ್ಯಾಣಕುಮಾರ್, ಚಿಕ್ಕಬಳ್ಳಾಪುರ ಹೋರಾಟ ಸಮಿತಿಯ ಅಧ್ಯಕ್ಷ ಆಂಜನೇಯರೆಡ್ಡಿ, ಭಕ್ತರಹಳ್ಳಿ ಬೈರೇಗೌಡ, ಯಲುವಹಳ್ಳಿ ಸೊಣ್ಣೇಗೌಡ, ಮಳ್ಳೂರು ಹರೀಶ್ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.