ಗ್ರಾ.ಜಿಲ್ಲೆ ಆಯವ್ಯಯದಲ್ಲಿ 316.37 ಕೋಟಿ ಅನುದಾನ
ಬೆಂಗಳೂರು: ಬೆಂಗಳೂರು ಗ್ರಾಮಾಂತರ ಜಿಲ್ಲೆಗೆ 2013- 14ನೇ ಸಾಲಿನ ಆಯವ್ಯಯದಲ್ಲಿ 316.37 ಕೋಟಿ ಮೊತ್ತದ ಅನುದಾನ ಮೀಸಲಿರಿಸಲಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯಿತಿ ಮಾಸಿಕ ಸಭೆಯಲ್ಲಿ ಆಯವ್ಯಯ ಮಂಡಿಸಿದ ಅಧ್ಯಕ್ಷ ತಿರುವರಂಗ ವಿ.ನಾರಾಯಣಸ್ವಾಮಿ, ಪ್ರಸಕ್ತ ಸಾಲಿನಲ್ಲಿ ಯೋಜನಾ ಕಾರ್ಯಗಳಿಗೆ 95.53 ಕೋಟಿ ಹಾಗೂ ಯೋಜನೇತರ ಕಾರ್ಯಗಳಿಗೆ 220 ಕೋಟಿ ನಿಗದಿಪಡಿಸಲಾಗಿದೆ ಎಂದರು.
ಜಿಲ್ಲಾ ಪಂಚಾಯಿತಿಗೆ 42.44 ಕೋಟಿ, ತಾಲೂಕು ಪಂಚಾಯಿತಿಗೆ 42.42 ಕೋಟಿ ಹಾಗೂ ಗ್ರಾಮ ಪಂಚಾಯಿತಿಗೆ 11.06 ಕೋಟಿ ಅನುದಾನ ನಿಗದಿಪಡಿಸಲಾಗಿದೆ. ಯೋಜನಾ ಕಾರ್ಯಗಳಿಗೆ ರಾಜ್ಯ ಸರ್ಕಾರದಿಂದ 47.33 ಕೋಟಿ ಹಾಗೂ ಕೇಂದ್ರದಿಂದ 47.9 ಕೋಟಿ ಅನುದಾನ ಬಿಡುಗಡೆಯಾಗಿದೆ. ಯೋಜನೇತರ ವೆಚ್ಚದಲ್ಲಿ ತಾಲೂಕು ಪಂಚಾಯಿತಿಗೆ 155 ಕೋಟಿ, ಜಿಲ್ಲಾ ಪಂಚಾಯಿತಿಗೆ 65 ಕೋಟಿ ನಿಗದಿಪಡಿಸಲಾಗಿದೆ ಎಂದರು.
ಪ್ರಸಕ್ತ ಸಾಲಿನ ಬಜೆಟ್ನಲ್ಲಿ ಯೋಜನಾ, ಯೋಜನೇತರ ವೆಚ್ಚದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಒಟ್ಟು 34 ಕೋಟಿ, ವೈದ್ಯಕೀಯ ಮತ್ತು ಜನಾರೋಗ್ಯ ಕ್ಷೇತ್ರಕ್ಕೆ 18 ಕೋಟಿ ಮೊತ್ತವನ್ನು ತೆಗೆದಿರಿಸಲಾಗಿದೆ ಎಂದರು.
ಸಮಸ್ಯೆಗಳ ಆಗರ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳಲ್ಲಿನ ಅವ್ಯವಸ್ಥೆ, ವೈದ್ಯರ ಕೊರತೆ, ಪ್ರಸೂತಿಗೆ ಲಂಚ ಕೇಳುವ ವೈದ್ಯರು, ಶಾಲೆಗಳಲ್ಲಿ ಶಿಕ್ಷಕರ ಕೊರತೆ ಮತ್ತಿತರರ ಆರೋಪಗಳು ಸಭೆಯಲ್ಲಿ ಪ್ರತಿಧ್ವನಿಸಿದವು.
ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ರೋಗಿಗಳಿಂದ ಹಣ ಕೀಳುತ್ತಿದ್ದಾರೆ. ಒಂದು ಪ್ರಸೂತಿ ಮಾಡಿಸಲು 6 ಸಾವಿರ ಹಣ ಕೀಳುತ್ತಿದ್ದಾರೆ.
ತಾವು ಕಳಿಸಿದ ಇಬ್ಬರು ರೋಗಿಗಳಿಂದ ಹಣ ಪಡೆದಿದ್ದಾರೆ. ಇನ್ನು ಸಿಸೇರಿಯನ್ಗೆ 25 ಸಾವಿರದವರೆಗೂ ಶುಲ್ಕ ಪಡೆಯುತ್ತಿದ್ದಾರೆ ಎಂದು ಸದಸ್ಯೆ ಕಲ್ಪನಾ ಆನಂದ್ ಆರೋಪಿಸಿದರು. ಇದನ್ನು ಪರಿಗಣಿಸಿದ ಅಧ್ಯಕ್ಷರು ಸಂಜೆಯೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ಸಭೆಯಲ್ಲಿ ನಿರ್ದೇಶನ ನೀಡಿದರು.
ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ: ಇದಕ್ಕೆ ಪೂರಕವಾಗಿ ಮಾತನಾಡಿದ ದೊಡ್ಡಬಳ್ಳಾಪುರದ ಶಾಸಕ ವೆಂಕಟರಾಮಯ್ಯ ಹಾಗೂ ನೆಲಮಂಗಲದ ಶಾಸಕ ಡಾ. ಶ್ರೀನಿವಾಸ ಮೂರ್ತಿ, ದೊಡ್ಡಬಳ್ಳಾಪುರದ ಸಪ್ತಗಿರಿ ವೈದ್ಯಕೀಯ ಮಹಾವಿದ್ಯಾಲಯ ದತ್ತು ಪಡೆದಿರುವ ಕನಸವಾಡಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಅವ್ಯವಸ್ಥೆ ತಾಂಡವವಾಡುತ್ತಿದೆ. ಅದನ್ನು ಸರಿಯಾಗಿ ನಿರ್ವಹಿಸುತ್ತಿಲ್ಲ. ರೋಗಿಗಳನ್ನು ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ. ಇದೊಂದೆ ಅಲ್ಲದೆ, ಇತರ ಆಸ್ಪತ್ರೆಗಳು ಕೂಡ ಶೌಚಾಲಯಕ್ಕಿಂತ ಕೆಟ್ಟದಾಗಿವೆ. ಅದನ್ನು ತಡೆಯಬೇಕು. ಆಸ್ಪತ್ರೆಗಳಿಗೆ ಸುಣ್ಣಬಣ್ಣ ಹೊಡಿಸಿ ಅಗತ್ಯ ಯಂತ್ರೋಪಕರಣಗಳನ್ನು ಒದಗಿಸಬೇಕು ಎಂದು ಸಲಹೆ ನೀಡಿದರು.
ಅಲ್ಲದೆ, ಪಟ್ಟಣ ಹಾಗೂ ಗ್ರಾಮಾಂತರ ಆಸ್ಪತ್ರೆಗಳಲ್ಲಿ ಒಟ್ಟು 10 ವೈದ್ಯರು ಹಾಗೂ 45 ಶುಶ್ರೂಷಕರು ಹಾಗೂ ಸಹಾಯಕರ ಕೊರತೆಯಿದೆ. ಇದನ್ನು ನೀಗಿಸಬೇಕು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರು, ಆಸ್ಪತ್ರೆಗಳ ವಸ್ತುಸ್ಥಿತಿ ಪರಿಶೀಲನೆ ನಡೆಸುವಂತೆ ಹಾಗೂ ವೈದ್ಯರು ಮತ್ತಿತರರ ಸಿಬ್ಬಂದಿ ಕೊರತೆ ಕುರಿತು ಮಾಹಿತಿ ನೀಡುವಂತೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಆದೇಶಿಸಿದರು.
1,400 ಅಡಿಗೆ ಹೆಚ್ಚಿಸಿ!
ಕೊಳವೆಬಾವಿಗಳ ಸಮಸ್ಯೆಗಳ ಕುರಿತು ಚರ್ಚೆ ನಡೆಯುವ ಸಂದರ್ಭದಲ್ಲಿ ದೊಡ್ಡಬಳ್ಳಾಪುರ ಶಾಸಕ ವೆಂಕಟರಾಮಯ್ಯ ಅವರು ಕೊಳವೆ ಬಾವಿಗಳನ್ನು ಕೊರೆಯುವ ಗರಿಷ್ಠ ಆಳವನ್ನು 1,200 ಅಡಿಯಿಂದ 1,400 ಅಡಿಗೆ ಹೆಚ್ಚಿಸಬೇಕು ಎಂಬ ಸಲಹೆ ನೀಡಿದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾರ್ಯನಿರ್ವಾಹಕ ಎಂಜಿನಿಯರ್, ಸಾವಿರ ಅಡಿಗೂ ಹೆಚ್ಚಿಗೆ ಕೊರೆದಲ್ಲಿ ವಿಷಾನಿಲವುಳ್ಳ ಹಾಗೂ ಫ್ಲೋರೈಡ್ ಅಂಶ ಇರುವ ನೀರು ದೊರೆಯುವ ಸಾಧ್ಯತೆಗಳು ಹೆಚ್ಚಿವೆ. ಆದ್ದರಿಂದ ಆಳದ ಪ್ರಮಾಣ ಹೆಚ್ಚಿಸುವುದು ಸರಿಯಲ್ಲ ಎಂದರು.
ಇದಕ್ಕೆ ಸಮರ್ಥನೆ ನೀಡಿದ ಶಾಸಕರು, ಒಂದೊಮ್ಮೆ ಫ್ಲೋರೈಡ್ ನೀರು ದೊರೆತಲ್ಲಿ ಅದನ್ನು ಕುಡಿಯಲು ಬಳಸುವ ಬದಲು, ಇತರೆ ಕಾರ್ಯಗಳಿಗೆ ಬಳಸಬಹುದಲ್ಲ ಎಂಬ ಸಬೂಬು ಹೇಳಿದರು. ಇದಕ್ಕೆ ದೇವನಹಳ್ಳಿ ಶಾಸಕ ಪಿಳ್ಳ ಮುನಿಸ್ವಾಮಪ್ಪ ವಿರೋಧ ವ್ಯಕ್ತಪಡಿಸಿದರು. ಕೊನೆಗೆ ಈ ಸಂಬಂಧ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸುವುದಾಗಿ ತಿಳಿಸಿದ ಅಧ್ಯಕ್ಷರು ಚರ್ಚೆಗೆ ಅಂತ್ಯ ಹಾಡಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

