ಕರವೇದಿಂದ ಡಾ.ಬಾಲಗಂಗಾಧರನಾಥ ಶ್ರೀಗಳ ಸ್ಮರಣೋತ್ಸವ
ಕನಕಪುರ: ಇಲ್ಲಿನ ಕರ್ನಾಟಕ ರಕ್ಷಣಾ ವೇದಿಕೆ ವತಿಯಿಂದ ಭೈರವೈಕ್ಯರಾದ ಜಗದ್ಗುರು ಡಾ. ಬಾಲಗಂಗಾಧರನಾಥ ಸ್ವಾಮೀಜಿ ಸಂಸ್ಮರಣೋತ್ಸವ, ನೂತನ ಪೀಠಾಧ್ಯಕ್ಷರಾದ ಶ್ರೀನಿರ್ಮಲಾನಂದ ಸ್ವಾಮೀಜಿ ಪುರಪ್ರವೇಶ ಹಾಗೂ ಗುರುವಂದನೆ ಮತ್ತು ಉಚಿತ ಸಾಮೂಹಿಕ ವಿವಾಹ ಸಮಾರಂಭ ಎಸ್.ಬಿ.ಕಲ್ಯಾಣ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮ ಪ್ರಯುಕ್ತ ಕನಕಪುರದ ಕೆಂಗಲ್ ಹನುಮಂತಯ್ಯ ವೃತ್ತದಿಂದ ಶ್ರೀಗಳನ್ನು ಅಲಂಕೃತ ಅಶ್ವಾರೂಢ ವಾಹನದಲ್ಲಿ ಕುಳ್ಳಿರಿಸಿ ಪೂರ್ಣಕುಂಭ ಸ್ವಾಗತ, ಮಂಗಳ ವಾದ್ಯಗಳು ಹಾಗೂ ಜಾನಪದ ಕಲಾ ಮೇಳಗಳೊಂದಿಗೆ ಮಹಾತ್ಮಾ ಗಾಂಧಿ ರಸ್ತೆ ಮೂಲಕ ವೇದಿಕೆಗೆ ಕರೆತರಲಾಯಿತು.ತಾಲೂಕಿನ ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾವಿರಾರು ಮಂದಿ ಭಕ್ತರು, ನಾಗರಿಕರು ಶ್ರೀಗಳಿಗೆ ನಮನ ಸಲ್ಲಿಸಿದರು.
ಸಮಾರಂಭದ ದಿವ್ಯ ಸಾನ್ನಿಧ್ಯವನ್ನು ಮರಳೇಗವಿಮಠದ ಶ್ರೀಮುಮ್ಮಡಿ ಶಿವರುದ್ರ ಸ್ವಾಮೀಜಿ, ದೇಗುಲಮಠದ ಶ್ರೀಮುಮ್ಮಡಿ ಮಹಾಲಿಂಗ ಸ್ವಾಮೀಜಿ, ಆದಿಚುಂಚನಗಿರಿ ಶಾಖಾಮಠದ ಶ್ರೀಅನ್ನದಾನೇಶ್ವರನಾಥ ಸ್ವಾಮೀಜಿ ವಹಿಸಿ ಆಶೀರ್ವಚನ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಮಾತನಾಡಿ, ರಕ್ಷಣಾ ವೇದಿಕೆ ನಾಡು ನುಡಿಯ ಸಂರಕ್ಷಣೆಗಾಗಿ ಮಾತ್ರ ಸೀಮಿತವಾಗಿರದೆ, ಸಮಾಜಮುಖೀ ಕಾರ್ಯಗಳಲ್ಲಿ ತೊಡಗಿಸಿಕೊಂಡು ಜನಪರ ಸೇವೆ ಸಲ್ಲಿಸುತ್ತಿದೆ. ನಾಡಿನ ಹಿತರಕ್ಷಣೆಗಾಗಿ ಸದಾ ಸಿದ್ಧವಾಗಿರುವ ಸಂಘಟನೆ ಸೇವಾ ಕಾರ್ಯಗಳಲ್ಲಿಯೂ ಮುಂದೆ ಹೆಚ್ಚಾಗಿ ತೊಡಗಿಕೊಳ್ಳಲಿದೆ. ಹಿರಿಯ ಸ್ವಾಮೀಜಿಗಳ ಸನ್ನಿಧಿಯಲ್ಲಿ ಆದರ್ಶಪ್ರಾಯರಾಗಿ ನೂತನ ಬಾಳಿಗೆ ಅಡಿಯಿರಿಸಿರುವ ವಧೂ-ವರರ ಬಾಳಿನಲ್ಲಿ ಸಂತಸ ಸಮೃದ್ಧಿ ತುಂಬಲಿ ಎಂದು ಹಾರೈಸಿದರು.
ಶಿವರುದ್ರ ಸ್ವಾಮೀಜಿ ಆಶೀರ್ವಚನದಲ್ಲಿ, ಶ್ರೀ ಬಾಲಗಂಗಾಧರ ಸ್ವಾಮೀಜಿಗಳು ಆದಿಚುಂಚನಗಿರಿಯನ್ನು ಚಿನ್ನದಗಿರಿಯನ್ನಾಗಿಸಿ ವಿಶ್ವಮಟ್ಟಕ್ಕೆ ಅದರ ಕೀರ್ತಿ ಕೊಂಡೊಯ್ದರು. ಸಮಾಜದ ಶಿಕ್ಷಣ, ಆರೋಗ್ಯ, ಅಂಧರ ಬಗ್ಗೆ ಕಾಳಜಿ ಮೊದಲಾದವುಗಳನ್ನು ಮಾದರಿಯನ್ನಾಗಿಸಿಕೊಟ್ಟ ಶ್ರೀಗಳ ಮಾರ್ಗದಲ್ಲಿ ಶ್ರೀನಿರ್ಮಲಾನಂದರು ಸಮಾಜವನ್ನು ಮುನ್ನಡೆಸುತ್ತಿದ್ದಾರೆ. ಕ್ಷೇತ್ರವು ತನ್ನ ಭವ್ಯ ಪರಂಪರೆಯನ್ನು ಮುಂದುವರಿಸುತ್ತಿದೆ ಎಂದು ಹೇಳಿದರು.
ಶ್ರೀ ಮಹಾಲಿಂಗಸ್ವಾಮೀಜಿ ಮಾತನಾಡಿ, ಪುರ ಪ್ರವೇಶ ಹಾಗೂ ಗುರುವಂದನೆಗಳನ್ನು ಸರಳ ಸಾಮೂಹಿಕ ವಿವಾಹಗಳ ಮೂಲಕ ಅರ್ಥಪೂರ್ಣವಾದ ಕಾರ್ಯವನ್ನು ರಕ್ಷಣಾ ವೇದಿಕೆ ಮಾಡಿದೆ ಎಂದರು. ಕೆರಳಾಳುಸಂದ್ರದ ಗಿರೀಗೌಡರು ಶ್ರೀಗಳಿಗೆ ಬೆಳ್ಳಿಯ ಕಿರೀಟ ತೊಡಿಸಿ ಗೌರವಿಸಿದರು. ಕರವೇ ವತಿಯಿಂದ ಶ್ರೀಗಳಿಗೆ ಪುಷ್ಟಾರ್ಪಣೆ ಮಾಡಿ, ಶಾಲು ಹೊದಿಸಿ ಗೌರವಿಸಿ ಗುರುವಂದನೆ ಸಲ್ಲಿಸಲಾಯಿತು.
ಪುರಸಭಾ ಮಾಜಿ ಉಪಾಧ್ಯಕ್ಷ ಕೆ.ಎಂ. ಬಸವರಾಜು, ಶಾಖಾಮಠದ ಆಡಳಿತಾಧಿಕಾರಿ ಡಾ.ಶಿವಬಸವೇಗೌಡ, ರಾಜ್ಯ ವಕೀಲರ ಪರಿಷತ್ತಿನ ಸದಸ್ಯರಾದ ಮಲ್ಲೇಶಯ್ಯ, ವಕೀಲರ ಸಂಘದ ಅಧ್ಯಕ್ಷರಾದ ಮುತ್ತೇಗೌಡ ಪಾಲ್ಗೊಂಡಿದ್ದರು.
ಕರವೇ ಅಧ್ಯಕ್ಷ ವಾಡೇದೊಡ್ಡಿ ಕಬ್ಬಾಳೇಗೌಡ ಪ್ರಾಸ್ತಾವಿಕವಾಗಿ ಮಾನತಾಡಿದರು. ಪ್ರಾಂಶುಪಾಲ ದೊಡ್ಡರಸಿನಕೆರೆ ಮಾಯಪ್ಪ ನಿರೂಪಿಸಿ ವಂದಿಸಿದರು. ಹೊಳಸಾಲಯ್ಯ ಸಂಗಡಿಗರಿಂದ ರಸಮಂಜರಿ ಕಾರ್ಯಕ್ರಮ ನಡೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

