ಮದ್ಯದೊಟ್ಟಿಗೆ ಅಕ್ಕಿ ವಿತರಣೆ ಭರಾಟೆ ಜೋರು
-ಮತ್ತೀಕೆರೆ ಜಯರಾಮ್
ರಾಮನಗರ: ಪೌರ ಸಂಸ್ಥೆ ಚುನಾವಣೆಯಲ್ಲಿ ಹಣ, ಮದ್ಯದೊಟ್ಟಿಗೆ ಅಕ್ಕಿ ವಿತರಣೆ ಭರಾಟೆ ಜೋರಾಗಿದೆ. ಅಕ್ಕಿ ಮೇಲಿನ ಆಸೆಯೇ ಅಭ್ಯರ್ಥಿ ಮೇಲಿನ ಪ್ರೀತಿಗೆ ಪ್ರಮುಖ ಕಾರಣವಾದ ನಿದರ್ಶನಗಳು ಸಾಕಷ್ಟಿರುವ ಹಿನ್ನೆಲೆಯಲ್ಲಿ ಪಕ್ಷಾತೀತವಾಗಿ ಅಭ್ಯರ್ಥಿಗಳು ಅಕ್ಕಿ ಬ್ಯಾಗ್ ಬಳುವಳಿಗೆ ಜೋತು ಬಿದ್ದಿದ್ದಾರೆ.
ರಾಮನಗರ ನಗರ ಪ್ರದೇಶದಲ್ಲಿ 2004ರ ಸಾರ್ವತ್ರಿಕ ಚುನಾವಣೆಯಲ್ಲಿ ಇಲ್ಲಿಂದ ಎಚ್.ಡಿ.ಕುಮಾರಸ್ವಾಮಿ ಕಣಕ್ಕೆ ಇಳಿದಾಗ ಜೆಡಿಎಸ್ ವತಿಯಿಂದ ಹೇರಳ ಪ್ರಮಾಣದಲ್ಲಿ ಅಕ್ಕಿ ವಿತರಿಸಲಾಗಿತ್ತು. ಬಳಿಕ ಆ ಪರಿಪಾಠ ಪ್ರತಿ ಚುನಾವಣೆಯಲ್ಲೂ ಮುಂದುವರೆದುಕೊಂಡು ಬಂದಿದೆ. ಸಾಕಷ್ಟು ಅಭ್ಯರ್ಥಿಗಳು ಈಗಲೂ ಮತ ಸೆಳೆಯಲು ಅಕ್ಕಿ ವಿತರಿಸುತ್ತಿದ್ದಾರೆ.
ಕೂಪನ್ ವಿತರಣೆ: ಆಗ ವಾರ್ಡ್ವಾರು ಮುಖಂಡರ ಮನೆಗಳಲ್ಲಿ ಅಕ್ಕಿ ದಾಸ್ತಾನಿಟ್ಟು, ಆಯಾ ಭಾಗದಲ್ಲಿರುವ ಬಡ ಕುಟುಂಬದವರಿಗೆ ಹಂಚಿಕೆ ಮಾಡಿಸಲಾಗಿತ್ತು. ಎಷ್ಟೋ ಮಂದಿ ಅಕ್ಕಿ ಉಳಿಸಿಕೊಂಡು, ವರ್ಷಾನುಗಟ್ಟಲೆ ಹೊಟ್ಟೆ ಹೊರೆದಿದ್ದೂ ಇದೆ. ಈ ಅನುಭವ ಕಣ್ಮುಂದೆ ಇರುವ ಜತೆಗೆ ಚುನಾವಣಾ ವ್ಯವಸ್ಥೆ ಕೊಂಚ ಬಿಗಿಗೊಂಡಿರುವ ಪರಿಣಾಮ ಅಭ್ಯರ್ಥಿಗಳು ಈಗ ಕೂಪನ್ ಮೊರೆ ಹೋಗಿದ್ದಾರೆ.
ನಗರದ ಕೆಲ ಸಗಟು ಮತ್ತು ಚಿಲ್ಲರೆ ವ್ಯಾಪಾರಿಗಳೊಂದಿಗೆ ವ್ಯವಹಾರ ಕುದುರಿಸಿಕೊಂಡು, ವಾರ್ಡ್ಗಳಲ್ಲಿ ಕೂಪನ್ಗಳನ್ನು ಈಗಾಗಲೇ ಹಂಚಿಕೆ ಮಾಡಲಾಗುತ್ತಿದೆ. ಕೂಪನ್ ಪಡೆದವರು ಗೊತ್ತುಪಡಿಸಿದ ಅಂಗಡಿಗೆ ಹೋಗಿ ಉಚಿತವಾಗಿ ಅಕ್ಕಿ ಬ್ಯಾಗ್ ಪಡೆದುಕೊಳ್ಳುತ್ತಿದ್ದಾರೆ. ಸರಾಸರಿ ರು.800 ರಿಂದ 900 ಬೆಲೆಯ ಪ್ರತಿ 25 ಕೆಜಿ ಅಕ್ಕಿ ಬ್ಯಾಗ್ ಅಭ್ಯರ್ಥಿಗಳಿಂದ ಬಳುವಳಿ ಬರುತ್ತಿದೆ.
ಇತರೆ ಬಳುವಳಿ: ಪ್ರಸಕ್ತ ಚುನಾವಣೆಯಲ್ಲಿ ಬಹುತೇಕ ಕಡೆ ಗೆಲ್ಲಲು ಸರಾಸರಿ 450-500 ಮತಗಳು ಸಾಕು. ಬಡ ಮತ್ತು ಮಧ್ಯಮ ವರ್ಗದವರು ಹೆಚ್ಚಿರುವ ಕಡೆ ಮಿಕ್ಸಿ, ಕುಕ್ಕರ್ ಮತ್ತು ಗೃಹೋಪಯೋಗಿ ವಸ್ತುಗಳ ಬಳುವಳಿಗೂ ಅಭ್ಯರ್ಥಿಗಳು ಇಳಿದಿದ್ದಾರೆ. ಈ ವಸ್ತುಗಳನ್ನು ಹೋಲ್ ಸೇಲ್ ದರದಲ್ಲಿ ಖರೀದಿಸಿ, ಆಯ್ದ ವ್ಯಕ್ತಿಗಳ ಮೂಲಕ ಮನೆ ಮನೆಗೆ ತಲುಪಿಸುವ ಕೆಲಸ ರಾತ್ರೋರಾತ್ರಿ ನಡೆಯುತ್ತಿದೆ.
ವಸ್ತುಗಳ ರೂಪದಲ್ಲಿ ಬಳುವಳಿ ನೀಡಿದರೆ ಸಿಕ್ಕಿ ಬೀಳುವ ಇಲ್ಲವೇ ಹಂಚಿಕೆ ಮಾಡಲು ಬಿಟ್ಟವರೇ ಕಬಳಿಸಬಹುದು ಎನ್ನುವ ಚಿಂತೆಯಿದ್ದ ಕೆಲ ಅಭ್ಯರ್ಥಿಗಳು ಪ್ರತಿ ಓಟಿಗೆ ರು.500 ರಿಂದ 1 ಸಾವಿರದವರೆಗೆ ನಗದು ಹಂಚಿಕೆ ಮಾಡಲಾರಂಭಿಸಿದ್ದಾರೆ. ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ರಾಜಾರೋಷವಾಗಿಯೇ ಈ ಕೆಲಸದಲ್ಲಿ ತೊಡಗಿದ್ದಾರೆ. ಎದುರಾಳಿಯ ಮೊತ್ತ ಅವಲಂಬಿಸಿ, ಪ್ರತಿಸ್ಪರ್ಧಿ ತನ್ನ ಮೊತ್ತ ಹೆಚ್ಚಿಸುತ್ತಿರುವುದೂ ಉಂಟು.
ಚನ್ನಪಟ್ಟಣದಲ್ಲಿ ಬಾಡೂಟ: ಚನ್ನಪಟ್ಟಣ ಕ್ಷೇತ್ರದಲ್ಲಿ ರಾಮನಗರಕ್ಕೂ ಮುಂಚೆಯೇ ಚುನಾವಣಾ ವ್ಯವಸ್ಥೇ ಹದಗೆಟ್ಟಿದೆ. 1999ರಲ್ಲೇ ಅಲ್ಲಿ ಸಿ.ಪಿ. ಯೋಗೇಶ್ವರ್ ವಸ್ತ್ರ, ಹಣ ಹಂಚಿ ಗೆದ್ದಿದ್ದಾರೆ ಎಂದೇ ಆರೋಪಿಸಲಾಗಿದೆ. ಅಲ್ಲಿನ ಮತದಾರರ ನಾಡಿಮಿಡಿತವನ್ನು ರಾಜಕಾರಣಿಗಳು ಚೆನ್ನಾಗಿಯೇ ಅರಿತಿದ್ದಾರೆ. ಆ ತಾಲೂಕಿನ ಚುನಾವಣೆಗಳಲ್ಲಿ ಬಾಡೂಟದ ಗಮ್ಮತ್ತು ಹೆಚ್ಚು ಕೆಲಸ ಮಾಡುತ್ತಿದೆ. ಪ್ರತಿ ಚುನಾವಣೆಗೆ ಮುನ್ನಾ ದಿನ ಮತ್ತು ಮುಂಜಾನೆ ಅಲ್ಲಿ ಕೋಳಿ ಮಾಂಸದ ವಿತರಣೆ ಎಗ್ಗಿಲ್ಲದೆ ನಡೆಯುತ್ತದೆ.
ಇಷ್ಟಲ್ಲದೆ, ಬಾಡೂಟ ಮತ್ತು ಮದ್ಯದ ಪಾರ್ಟಿಗಳು ನಿರಂತರವಾಗಿರುತ್ತವೆ. ಇದೆಲ್ಲದರ ಜತೆಗೆ ಸೀರೆ, ಮೂಗುತಿ, ಗರಿ ಗರಿ ನೋಟುಗಳ ಹಂಚಿಕೆ ಸಾಗಿದೆ. ಈ ಹಿಂದಿನ ನೀತಿ ಸಂಹಿತೆ ಪ್ರಕರಣಗಳಲ್ಲಿ ಶಿಕ್ಷೆಯಾದ ನಿದರ್ಶನಗಳು ಇಲ್ಲದಿರುವುದರಿಂದ ಪ್ರಸಕ್ತ ಚುನಾವಣೆಯ ಅಭ್ಯರ್ಥಿಗಳಿಗೆ ಯಾವ ರೀತಿಯ ಅಂಜಿಕೆ ಇಲ್ಲ. ಹೀಗಾಗಿ ಚುನಾವಣಾ ಅಕ್ರಮಗಳು ಮಿತಿ ಮೀರಿ ನಡೆಯುತ್ತಿವೆ.
ಅಲ್ಲೂ ಮತ್ತಷ್ಟು ಜೋರು: ಚುನಾವಣಾ ಅಕ್ರಮಗಳು ರಾಮನಗರ ಮತ್ತು ಚನ್ನಪಟ್ಟಣಕ್ಕೆ ಮಾತ್ರ ಸೀಮಿತವಲ್ಲ. ಮದಗಜಗಳ ಗುದ್ದಾಟಕ್ಕೆ ಅಖಾಡವಾಗಿರುವ ಕರಿಕಲ್ಲು ಗಣಿಯ ಕನಕಪುರ ಹಾಗೂ ನಾಡಪ್ರಭು ಕೆಂಪೇಗೌಡರ ತವರು ಮಾಗಡಿಯಲ್ಲೂ ಜೋರಾಗಿದೆ. ಅವೆರಡು ಕಡೆಯೂ ಪ್ರತಿಷ್ಠೆಯನ್ನು ಪಣಕ್ಕಿಟ್ಟಿರುವ ರಾಜಕಾರಣಿಗಳು ಬಹುಪಾಲು ಅಭ್ಯರ್ಥಿಗಳ ಖರ್ಚು, ವೆಚ್ಚವನ್ನು ತಾವೇ ಭರಿಸಲು ಸಿದ್ಧವಾಗಿದ್ದಾರೆ.
31 ಅಭ್ಯರ್ಥಿಗಳು ಯಾವ ಪಕ್ಷದಲ್ಲೂ ಇಲ್ಲ
- ಕೆ.ಆರ್.ರವಿಕಿರಣ್
ದೊಡ್ಡಬಳ್ಳಾಪುರ: ದೊಡ್ಡಬಳ್ಳಾಪುರ ನಗರಸಭೆಯ ಎಲ್ಲ 31 ವಾರ್ಡುಗಳಲ್ಲಿ ತನ್ನ ಪಕ್ಷದ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಧೈರ್ಯ ಈ ಬಾರಿ ಯಾವ ರಾಷ್ಟ್ರೀಯ ಪಕ್ಷವೂ ಮಾಡಿಲ್ಲ. ಜೊತೆಗೆ ರಾಜ್ಯ ಮತ್ತು ಸ್ಥಳೀಯ ಮಟ್ಟದ ಪಕ್ಷಗಳು ತಮ್ಮ ಇಮೇಜ್ ಅನ್ನು ವೃದ್ಧಿಸಿಕೊಳ್ಳುವ ಯಾವುದೇ ಉತ್ಸಾಹ ತೋರದಿರುವುದು ಈ ಬಾರಿಯ ನಗರಸಭೆ ಚುನಾವಣೆಯ ವಿಶೇಷ ಎನ್ನಬಹುದು.
1995ರಲ್ಲಿ ನಗರಸಭೆಯಾಗಿ ಪರಿವರ್ತನೆಯಾದ ದೊಡ್ಡಬಳ್ಳಾಪುರದಲ್ಲಿ ಕಾಂಗ್ರೆಸ್ ಮೊದಲಿನಿಂದಲೂ ತನ್ನ ಪ್ರಾಬಲ್ಯ ಮೆರೆಯುತ್ತಾ ಬಂದಿದೆ. ಬಿಜೆಪಿ ಕೂಡ ಒಂದೆರಡು ಬಾರಿ ಅಧಿಕಾರದ ಗದ್ದುಗೆ ಏರಿದೆ. ಕಳೆದ 5 ವರ್ಷಗಳಲ್ಲಿ ಮಾತ್ರ ಕಾಂಗ್ರೆಸ್-ಜೆಡಿಎಸ್ ಪಕ್ಷಗಳಿಂದ ಗೆದ್ದಿದ್ದ ಅಭ್ಯರ್ಥಿಗಳು ಬಿಜೆಪಿಯ ಕೃಪೆಯಿಂದ ಅಧ್ಯಕ್ಷರಾಗಿ ಮೆರೆದದ್ದು ಈಗ ಇತಿಹಾಸ. ಆದರೆ ಪಕ್ಷಗಳಿಗೆ ನಗರಸಭೆಯ ವ್ಯಾಪ್ತಿಯಲ್ಲಿ ಇಡಿಯಾದ ಹಿಡಿತವಿಲ್ಲ ಎಂಬುದು ಈಗ ಸಾಬೀತಾದಂತಾಗಿದೆ. ಕೆಲ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹಾಕದೇ ಇರುವುದು ಅಭ್ಯರ್ಥಿಗಳ ಕೊರತೆಯಿಂದಲೋ ಅಥವಾ ಮತ್ತೊಬ್ಬರಿಗೆ ಲಾಭವಾದರೆ ನಮಗಾಗುವ ಮುಂದಿನ ಒಳಿತಿನ ಲೆಕ್ಕಾಚಾರವೋ ಎಂಬುದು ರಾಜಕೀಯವಲಯದಲ್ಲಿ ತೀವ್ರ ಚರ್ಚೆಯ ವಸ್ತುವಾಗಿದೆ.
ಎಲ್ಲಿ ಯಾರು ಸ್ಪರ್ಧೆ: ಹಾಗೆ ನೋಡಿದರೆ ಅತಿಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವ ಪಕ್ಷವಾಗಿ ಜೆಡಿಎಸ್ ಕಾಣಸಿಗುತ್ತಿದೆ. 31ರ ಪೈಕಿ 29ರಲ್ಲಿ ತನ್ನ ಅಭ್ಯರ್ಥಿಗಳನ್ನು ಜೆಡಿಎಸ್ ಕಣಕ್ಕಿಳಿಸಿದೆ. 8 ಮತ್ತು 18ನೇ ವಾರ್ಡಿನಲ್ಲಿ ಜೆಡಿಎಸ್ ತನ್ನ ಅಭ್ಯರ್ಥಿಗಳನ್ನು ಕಣಕ್ಕಿಳಿಸಿಲ್ಲ. ಕಾಂಗ್ರೆಸ್ 28 ಕ್ಷೇತ್ರಗಳಲ್ಲಿ ತನ್ನ ಅಭ್ಯರ್ಥಿಗಳನ್ನು ನಿಲ್ಲಿಸಿದ್ದು, 2 ಕ್ಷೇತ್ರಗಳಲ್ಲಿ ಕನ್ನಡಪಕ್ಷವನ್ನು ಬೆಂಬಲಿಸುವುದಾಗಿ ಹೇಳಿದೆ. ಮತ್ತೊಂದು ಕ್ಷೇತ್ರವಾದ ವಾರ್ಡ್ನಂ.24ರಲ್ಲಿ ಕಾಂಗ್ರೆಸ್ ಸ್ಪರ್ಧೆಗಿಳಿದಿಲ್ಲ. ಬಿಜೆಪಿ ಹಲವು ನಿರೀಕ್ಷೆ ಮತ್ತು ಅಸ್ತಿತ್ವದ ಪ್ರಬಲ ಉಳಿವಿನ ಮಹತ್ವಾಕಾಂಕ್ಷೆ ತೋರಿ 27 ಕ್ಷೇತ್ರಗಳಿಗೆ ಮಾತ್ರ ತನ್ನ ಸ್ಪರ್ಧೆಯನ್ನು ಸೀಮಿತಗೊಳಿಸಿದೆ. 2, 3, 4 ಮತ್ತು 16ನೇ ವಾರ್ಡುಗಳಲ್ಲಿ ಬಿಜೆಪಿ ಅಭ್ಯರ್ಥಿಗಳಿಲ್ಲ. ಉಳಿದಂತೆ ಈ ಬಾರಿ ಅಸ್ತಿತ್ವ ಪಡೆದಿರುವ ಕೆಜೆಪಿ ಆಯ್ದ 19 ವಾರ್ಡುಗಳಲ್ಲಿ ಸ್ಪರ್ಧಿಸಿದ್ದರೆ, ಸ್ಪರ್ಧೆಯ ಅಬ್ಬರ ತೋರಿ ಠುಸ್ ಆದ ಬಿಎಸ್ಆರ್ ಕಾಂಗ್ರೆಸ್ ಒಂದೇ ಒಂದು ಕ್ಷೇತ್ರದಲ್ಲೂ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಸಾಧ್ಯವಾಗಿಲ್ಲ. ಬಿಎಸ್ಪಿ ಸಹ ಸ್ಪರ್ಧಿಸಿಲ್ಲ. ಕಳೆದ ಬಾರಿ ಎರಡಂಕಿಯ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದ ಕನ್ನಡಪಕ್ಷ ದಿಢೀರನೇ ಎದುರಾದ ಚುನಾವಣೆಯ ಅಬ್ಬರಕ್ಕೆ ಈ ಬಾರಿ 3 ಕ್ಷೇತ್ರಗಳಲ್ಲಿ ಮಾತ್ರ ಸ್ಪಂದಿಸಿದೆ. ಸಿಪಿಐ(ಎಂ) ಕೂಡ 3 ಕ್ಷೇತ್ರದ ಸ್ಪರ್ಧೆ ನಡೆಸಿದೆ.
ಜಾಣನಡೆ-ಯಾರಕಡೆ: ಈ ಸ್ಪರ್ಧೆಯಲ್ಲಿ ಪ್ರಮುಖವಾಗಿ ಕಾಣಸಿಗುತ್ತಿರುವುದು ಆಡಳಿತಶಾಹಿಯ ಸ್ಪಷ್ಟ ಜಾಣನಡೆ. ಕೆಲ ಪಕ್ಷಗಳು ಅಭ್ಯರ್ಥಿಗಳನ್ನು ಹಾಕದಿರುವ ಕಡೆಗಳಲ್ಲಿ ಕೆಲ ಪಕ್ಷೇತರರ ಪ್ರಾಬಲ್ಯ ಕಂಡು ಬರುತ್ತಿದೆ. ಇದು ಮುಂದಿನ ಭವಿಷ್ಯದ ರಾಜಕಾರಣದ ಲೆಕ್ಕಾಚಾರವಾಗಿದೆ ಎಂಬ ವಿಶ್ಲೇಷಣೆ ತಪ್ಪಲ್ಲ. ಪಕ್ಷೇತರರಾಗಿ ಸ್ಪರ್ಧಿಸಿರುವ ಬಹಳಷ್ಟು ಮಂದಿ ನಾಯಕರು ಈ ಹಿಂದೆ ವ್ಯಕ್ತಿ ಮತ್ತು ಪಕ್ಷದ ಅಡಿಯಲ್ಲೇ ತನ್ನ ಅಸ್ತಿತ್ವವನ್ನು ಕಂಡುಕೊಂಡವರು. ಗೆದ್ದರೂ ಮುಂದೆ ಅದೇ ಹಾದಿಯಲ್ಲಿ ನಡೆಯುವ ಸ್ಪಷ್ಟ ಕುರುಹು ತೋರಿರುವವರು ಎಂಬುದು ವಿಶೇಷ. ಈ ಹಿನ್ನಲೆಯಲ್ಲಿ ದೊಡ್ಡಬಳ್ಳಾಪುರ ಕ್ಷೇತ್ರದ ಜನ ಮತ್ತೊಂದು ಪಕ್ಷಾಂತರ ಪರ್ವವನ್ನು ಎದುರು ನೋಡುವ ಕಾಲ ತೀರಾ ಸನ್ನಿಹಿತ ಎಂಬ ಪರೋಕ್ಷ ಸಂದೇಶ ಅಡಗಿದೆ ಎಂಬುದಂತೂ ಸದ್ಯದ ಸತ್ಯ.
ಏನಾಗುತ್ತೆ ಮುಂದೆ: ಸ್ಪರ್ಧೆಯಲ್ಲಿರುವ ಪಕ್ಷೇತರ 30 ಅಭ್ಯರ್ಥಿಗಳಲ್ಲಿ ಕನಿಷ್ಠ 6-7 ಮಂದಿಗೆ ಪಕ್ಷಗಳ ಚಿಹ್ನೆಯಡಿಯಲ್ಲೇ ಸ್ಪರ್ಧಿಸುವುದು ಕಷ್ಟವೇನೂ ಆಗಿರಲಿಲ್ಲ. ಪಕ್ಷದ ಅಡಿಯಲ್ಲಿ ಸ್ಪರ್ಧಿಸುವ ಮನಸ್ಸು ಮಾಡಿಲ್ಲ ಅಷ್ಟೇ. ಕಳೆದ ಬಾರಿಯ ವಿಪ್ ಉಲ್ಲಂಘನೆ, ಪಕ್ಷಾಂತರದ ಗೊಂದಲಗಳಿಂದ ಪಾಠ ಕಲಿತಿರುವ ಕೆಲವರು ಪಕ್ಷೇತರರಾಗಿ ಗೆದ್ದರೆ ಸೇಫ್ ಎಂಬ ನಿರ್ಧಾರಕ್ಕೆ ಬಂದಂತಿದೆ. ಹೀಗಾಗಿ ಈ ಬಾರಿಯ ಚುನಾವಣಾ ಅಖಾಡ ಮೇಲು ನೋಟಕ್ಕೆ ಒಂದು ರೀತಿಯಾಗಿ ಕಂಡರೆ ಆಂತರ್ಯದಲ್ಲಿ ಹಲವು ಪ್ರಶ್ನೆಗಳನ್ನು ಹುಟ್ಟುಹಾಕುವ ಕಗ್ಗಂಟಾಗಿ ಕಾಣುತ್ತಿದೆ. ಗೊಂದಲದಲ್ಲಿರುವ ಆಡಳಿತಶಾಹಿಯ ಸ್ಪಷ್ಟ ನಡೆ ನಗರಸಭೆ ಚುನಾವಣೆಯ ನಂತರವಷ್ಟೇ ಕಾಣಸಿಗುತ್ತದೆ. ವಿಧಾನಸಭೆ ಚುನಾವಣೆಯ ವೇಳೆಗಂತೂ ಸ್ಥಳೀಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆಗಳು ನಿರೀಕ್ಷಿತ ಎನ್ನಲಾಗುತ್ತಿದ್ದು ಅದಕ್ಕೆ ಎಲ್ಲೂ ಕಂಟಕವಾಗದಂತೆ ಈ ಬಾರಿಯ ಚುನಾವಣಾ ಅಖಾಡ ಸಜ್ಜಾಗಿದೆ. ಏನಾಗುತ್ತದೆ.... ಕಾದು ನೋಡಬೇಕಷ್ಟೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

