ಬಹಿರಂಗ ಪ್ರಚಾರ ಅಂತ್ಯ; ತೆರೆಮರೆ ಕಸರತ್ತು ಶುರು
ಮತ್ತೀಕೆರೆ ಜಯರಾಮ್
ಕ.ಪ್ರ. ವಾರ್ತೆ ಟಿ ರಾಮನಗರ ಟಿ ಮಾ. 4
ಪೌರ ಸಂಸ್ಥೆಗಳ ಕಿರು ಕದನದ ಬಹಿರಂಗ ಪ್ರಚಾರಕ್ಕೆ ಸೋಮವಾರ ತೆರೆ ಬಿದ್ದಿದೆ. ಮತದಾನಕ್ಕೆ ಇನ್ನು 48 ಗಂಟೆ ಮಾತ್ರವೇ ಬಾಕಿ ಉಳಿದಿದೆ.
ಮತ ಬೇಟೆಗಾಗಿ ಇಲ್ಲಿವರೆಗೆ ಮನೆ ಮನೆ ಕದ ತಟ್ಟಿದ ಅಭ್ಯರ್ಥಿಗಳು ಇದೀಗ ಮಾದರಿ ನೀತಿ ಸಂಹಿತೆಯನ್ನು ಗಾಳಿಗೆ ತೂರಿ ಒಳಗೆಲಸ ಶುರುವಿಟ್ಟುಕೊಂಡಿದ್ದಾರೆ. ಚುನಾವಣೆಗೆ ಫೆ.16ಕ್ಕೆ ಅಧಿಸೂಚನೆ ಹೊರಡಿಸಿದ್ದು, ನಾಮಪತ್ರ ಸಲ್ಲಿಕೆ ಪ್ರಕ್ರಿಯೆ 23ಕ್ಕೆ ಮುಗಿಯಿತು. 25ಕ್ಕೆ ಪರಿಶೀಲನೆ, 26 ಮತ್ತು 27ರಂದು ನಾಮಪತ್ರ ಹಿಂತೆಗೆತ ನಡೆಯಿತು. ಫೆ.28 ರಿಂದ ಮಾ.4ರವರೆಗೆ ಪ್ರಚಾರಕ್ಕೆ ಸಿಕ್ಕ ಅವಕಾಶ 5 ದಿನ ಮಾತ್ರವೇ. 48 ತಾಸು ಮುನ್ನವೇ ಬಹಿರಂಗ ಪ್ರಚಾರಕ್ಕೆ ಚುನಾವಣಾ ಆಯೋಗ ಬ್ರೇಕ್ ಹಾಕಿದೆ. ಅಧಿಸೂಚನೆ ಹೊರಡಿಸಿದಾಗ ಮತದಾನಕ್ಕೆ 24 ತಾಸು ಮುನ್ನಾ ದಿನದವರೆಗೆ ಬಹಿರಂಗ ಪ್ರಚಾರಕ್ಕೆ ಅವಕಾಶ ನೀಡಲಾಗಿತ್ತು. ದಿಢೀರ್ ನಿರ್ಧಾರ ಬದಲಿಸಿದ ಆಯೋ ಗವು 48 ತಾಸು ಮುಂಚಿನಿಂದಲೇ ಒಣ ದಿನ ಘೋಷಣೆ ಮಾಡಿದ್ದು, ಪ್ರಚಾರಕ್ಕೆ ಸಮಯಾವಕಾಶ ಸಿಗದೆ ಅಭ್ಯರ್ಥಿಗಳನ್ನು ಪರದಾಡುವಂತೆ ಮಾಡಿದೆ.
ಮುಖಂಡರ ಪರದಾಟ: ಮುಂಬರುವ ವಿಧಾನಸಭೆ ಚುನಾವಣೆಗೆ ಸೆಮಿ ಫೈನಲ್ ಆಗಿರುವ ಪ್ರಸಕ್ತ ಚುನಾವಣೆಯಲ್ಲಿ ಪ್ರಮುಖ ರಾಜಕೀಯ ಪಕ್ಷಗಳ ಮುಖಂಡರು ಪ್ರತಿಷ್ಠೆಯನ್ನು ಪಣಕ್ಕಿಟ್ಟಿದ್ದು, ಅಭ್ಯರ್ಥಿಗಳಿಗಿಂತ ಸ್ವತಃ ತಾವೇ ಹೆಚ್ಚು ಮುತುವರ್ಜಿ ತೋರಿದ್ದಾರೆ. ಶತಾಯ ಗತಾಯ ಗೆಲ್ಲಲೇಬೇಕೆಂದು ಪಣತೊಟ್ಟು, ಭಾರಿ ಮೊತ್ತದ ಬಂಡವಾಳ ಹೂಡಿದ್ದಾರೆ.
ಚುನಾವಣೆಯಲ್ಲಿ ಹೇರಳ ಪ್ರಮಾಣದಲ್ಲಿ ಹಣ, ಮದ್ಯ ಮತ್ತು ಬಳುವಳಿಗಳ ಮಹಾಪೂರವೇ ಹರಿಯುತ್ತಿದೆ. ಪ್ರಚಾರಕ್ಕೆ ಐದು ದಿನ ಮಾತ್ರವೇ ಅವಕಾಶವಿದ್ದ ಹಿನ್ನೆಲೆಯಲ್ಲಿ ಪ್ರಮುಖ ಮುಖಂಡರು ಎಲ್ಲ ವಾರ್ಡ್ಗಳಿಗೂ ತೆರಳಿ, ಪ್ರಚಾರ ನಡೆಸಲಾಗದೆ ಪರಿತಪಿಸುತ್ತಿದ್ದಾರೆ. ಮೊದ ಮೊದಲು ಮನೆ ಮನೆಗೆ ತೆರಳಿದವರು, ಕಡೆಗೆ ರೋಡ್ ಶೋ ಮುಗಿಸಿದ್ದಾರೆ.
ಡಿಕೆಶಿ ಹೆಚ್ಚು ಗಂಭೀರ: ತಮ್ಮ ವ್ಯಾಪ್ತಿಯ ಪೌರ ಸಂಸ್ಥೆಯ ಎಲ್ಲ ವಾರ್ಡ್ಗಳಲ್ಲಿ ಬಿಡುವಿಲ್ಲದೆ ಪ್ರಚಾರದಲ್ಲಿ ಹೆಚ್ಚು ತೊಡಗಿಸಿಕೊಂಡವರು ಮಾಜಿ ಸಚಿವ ಡಿ.ಕೆ.ಶಿವಕುಮಾರ್. ಅವರು ಈ ಚುನಾವಣೆಯನ್ನು ಅವರಷ್ಟು ಗಂಭೀರವಾಗಿ ಉಳಿದ ಮುಖಂಡರು ತೆಗೆದುಕೊಂಡಿಲ್ಲ. ಇವರ ನಂತರದಲ್ಲಿ ಶಾಸಕದ್ವಯರಾದ ಎಚ್.ಸಿ.ಬಾಲಕೃಷ್ಣ, ಅನಿತಾ ಕುಮಾರಸ್ವಾಮಿ ಇದ್ದಾರೆ. ರಾಮನಗರದಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರ ರೋಡ್ ಶೋ ಕೆಲವೇ ಹೊತ್ತಿಗೆ ಸೀಮಿತವಾಯ್ತು. ಚನ್ನಪಟ್ಟಣದಲ್ಲಿ ಮೂರು ದಿನ ತಣ್ಣಗಿದ್ದ ಸೈನಿಕ ಸಿ.ಪಿ.ಯೋಗೇಶ್ವರ್ ಕಡೆಯ 2 ದಿನ ಮಾತ್ರವೇ ಪ್ರಚಾರಕ್ಕೆ ಇಳಿದರು. ಸಾಮೂಹಿಕ ನಾಯಕತ್ವದ ಮೇಲೆ ನಂಬಿಕೆಯಿಲ್ಲದ ಅವರು ಏಕಾಂಗಿಯಾಗಿಯೇ ಬಲ ಪ್ರದರ್ಶನಕ್ಕೆ ಹೊರಟಿದ್ದಾರೆ.
ಇನ್ನೇನಿದ್ದರೂ ಒಳಗೆಲಸ: ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳ ಮುಖಂಡರು ವಾರ್ಡ್ ವಾರು ಪ್ರಚಾರವನ್ನು ಮುಗಿಸಿದ್ದಾಗಿದೆ. ಜಿಲ್ಲೆಯ ಎಲ್ಲ 4 ಪೌರ ಸಂಸ್ಥೆಗಳ ವ್ಯಾಪ್ತಿಯಲ್ಲಿ ಒಳಗೆಲಸ ಎಗ್ಗಿಲ್ಲದೆ ಸಾಗಿದೆ. ಮಾದರಿ ನೀತಿ ಸಂಹಿತೆಯ ಕಟ್ಟುನಿಟ್ಟಿನ ಜಾರಿ, ಅದಕ್ಕಾಗಿ ತಂಡಗಳ ರಚನೆ ಚುನಾವಣಾ ಆಯೋಗದ ಸೂಚನೆ ಪಾಲನೆಗೆ ಸೀಮಿತವಾಗಿದೆ.
ಭ್ರಷ್ಟಾತಿ ಭ್ರಷ್ಟ ಚುನಾವಣಾ ವ್ಯವಸ್ಥೆಯಿರುವ ರಾಮನಗರ ಜಿಲ್ಲೆಯಲ್ಲಿ ಅಕ್ರಮಗಳು ಎಗ್ಗಿಲ್ಲದೆ ಸಾಗಿವೆ. ಇಷ್ಟಾಗಿಯೂ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳು ಬೆರಳೆಣಿಕೆಯಷ್ಟೂ ದಾಖಲಾಗಿಲ್ಲ. ಜಿಲ್ಲೆಯಲ್ಲಿರುವ ಅಧಿಕಾರಿ ವರ್ಗವು ರಾಜಕೀಯ ವ್ಯವಸ್ಥೆಗೆ ಕಡಿವಾಣ ಹಾಕುವಲ್ಲಿ ವಿಫಲವಾಗಿದೆ.
ಒಣ ದಿನ ಘೋಷಣೆಗೆ ಮುನ್ನವೇ ಇಲ್ಲಿ ಅಭ್ಯರ್ಥಿಗಳು ಮದ್ಯದ ದಾಸ್ತಾನು ಮಾಡಿಕೊಂಡಾಗಿದೆ. ವಾರ್ಡ್ ವ್ಯಾಪ್ತಿಯಲ್ಲಿ ಉಳಿದ ಎರಡು ರಾತ್ರಿ ಮದ್ಯ ಹಂಚಿಕೆಗೆ ಅಭ್ಯರ್ಥಿ ಬೆಂಬಲಿಗರ ಪಡೆ ಸಜ್ಜಾಗಿದೆ. ಅಕ್ಕಿ ಬ್ಯಾಗ್ ಕೂಪನ್ಗಳ ವಿತರಣೆ ಮುಗಿದು, ಮತದಾರರ ಮನೆಗೆ ಅಕ್ಕಿ ಸರಾಗವಾಗಿ ಸೇರುತ್ತಿದೆ. ಹಂಚಿಕೆಗೆ ದಾಸ್ತಾನಿರುವ ಉಡುಗೊರೆಗಳ ಮೇಲೆ ಅಧಿಕಾರಿಗಳ ಕಣ್ಣು ಬಿದ್ದಿಲ್ಲ.
ದೂರಿನಲ್ಲಿ ಹುರುಳಿಲ್ಲ
ರಾಮನಗರ ಜಿಲ್ಲೆಯಲ್ಲಿ ಹಿಂದೆಂದೂ ಕಂಡರಿಯದ ಮಟ್ಟಿಗೆ ಚುನಾವಣೆ ವ್ಯವಸ್ಥೆ ಹದಗೆಟ್ಟಿದೆ. ಜಿಲ್ಲಾಡಳಿತದ ಉನ್ನತ ಅಧಿಕಾರಿಯೊಬ್ಬರ ಮಾಹಿತಿ ಪ್ರಕಾರ, ಜಿಲ್ಲೆಯಲ್ಲಿ ಈವರೆಗೆ ಒಂದೇ ಒಂದು ಚುನಾವಣಾ ಅಕ್ರಮ ಮತ್ತು ನೀತಿ ಸಂಹಿತೆಯ ಪ್ರಕರಣ ದಾಖಲಾಗಿಲ್ಲ. ನೀತಿ ಸಂಹಿತೆ ಉಲ್ಲಂಘನೆ ಸಂಬಂಧ ಬಂದ ದೂರುಗಳನ್ನು ಪರಿಶೀಲಿಸಿದ್ದು, ದೂರಿನಲ್ಲಿ ಹುರುಳಿಲ್ಲವೆಂದು ಕೈಬಿಡಲಾಗಿದೆ.
ವಿವರ ಬಹಿರಂಗವಿಲ್ಲ
ರಾಮನಗರದಲ್ಲಿ ಜಿದ್ದಾಜಿದ್ದಿನ ಹೋರಾಟದಿಂದ ಕೂಡಿರುವ ವಾರ್ಡ್ಗಳ ಪೈಕಿ ಒಂದೆಡೆ ಮತದಾರರಿಗೆ ವಿತರಿಸಲು ಅಕ್ರಮವಾಗಿ ಅಕ್ಕಿ ದಾಸ್ತಾನಿರುವ ಬಗ್ಗೆ ದೊರೆತ ಖಚಿತ ಮಾಹಿತಿಯನ್ನಾಧರಿಸಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಅಕ್ಕಿ ವಶ, ಪ್ರಕರಣ ದಾಖಲು ಕುರಿತು ಯಾವುದೇ ಮಾಹಿತಿ ಹೊರಗೆಡವಲಾಗಿಲ್ಲ.
ಇವಿಎಂ ಪ್ರಾತ್ಯಕ್ಷಿಕೆ
ಪೌರ ಸಂಸ್ಥೆಗಳ ಚುನಾವಣೆಗೆ ಸಜ್ಜಾಗಿರುವ ಜಿಲ್ಲಾಡಳಿತವು ಸೋಮವಾರ ವಿದ್ಯುನ್ಮಾನ ಮತಯಂತ್ರಕ್ಕೆ ಅಭ್ಯರ್ಥಿಗಳ ಹೆಸರು, ಚಿಹ್ನೆಯನ್ನು ಅಳವಡಿಸುವ ಕಾರ್ಯ ಪೂರ್ಣಗೊಳಿಸಿದೆ. ಹಾಜರಿದ್ದ ಅಭ್ಯರ್ಥಿಗಳ ಸಮಕ್ಷಮ ಅಣಕು ಮತದಾನ ಮಾಡುವ ಮೂಲಕ ಯಂತ್ರಗಳ ಕಾರ್ಯಕ್ಷಮತೆಯನ್ನು ಪರಿಶೀಲಿಸಲಾಯಿತು.
ಇದೇ ಮೊದಲ ಬಾರಿ ನಗರಸಭೆ ಮತ್ತು ಪುರಸಭೆ ಚುನಾವಣೆಯಲ್ಲಿ ವಿದ್ಯುನ್ಮಾನ ಮತಯಂತ್ರಗಳನ್ನು ಬಳಸಲಾಗುತ್ತಿದೆ. ಹೀಗಾಗಿ ಯಾವುದೇ ಗೊಂದಲಕ್ಕೆ ಆಸ್ಪದವಿಲ್ಲದಂತೆ ಜಿಲ್ಲಾಡಳಿತ ಎಚ್ಚರ ವಹಿಸಿದೆ. ಅಳವಡಿಸಿರುವ ಹೆಸರು ಮತ್ತು ಚಿಹ್ನೆಯಲ್ಲಿ ಕಂಡು ಬಂದ ಸಣ್ಣಪುಟ್ಟ ಲೋಪಗಳನ್ನು ತಕ್ಷಣವೇ ಸರಿಪಡಿಸಲಾಗಿದೆ.
ಬಳುವಳಿಗೂ ಅಸ್ಪೃಶ್ಯತೆ
ಚುನಾವಣೆಯಲ್ಲಿ ಮತದಾರರಿಗೆ ಆಮಿಷವೊಡ್ಡುವುದು ಅಪರಾಧ. ಅಭ್ಯರ್ಥಿ ನೀಡುವ ಬಳುವಳಿಗಳನ್ನು ತಿರಸ್ಕರಿಸುವ ಮತದಾರರ ಸಂಖ್ಯೆ ತೀರಾ ವಿರಳ. ಇಲ್ಲೊಂದು ವಾರ್ಡ್ನಲ್ಲಿ ಅಸ್ಪೃಶ್ಯತೆಯ ಕಾರಣಕ್ಕೆ ಒಂದು ಜನಾಂಗದವರು ರಾಜಕೀಯ ಪಕ್ಷವೊಂದರ ಅಭ್ಯರ್ಥಿ ಹಂಚಲು ತಂದಿದ್ದ ಬಳುವಳಿಯನ್ನು ಸಾರಾಸಗಟು ತಿರಸ್ಕರಿಸಿರುವ ಪ್ರಕರಣ ವರದಿಯಾಗಿದೆ. ರಾಮನಗರ ನಗರಸಭೆ ವ್ಯಾಪ್ತಿಯ 21ನೇ ವಾರ್ಡ್ಗೆ ಸೇರಿದ ಕೊತ್ತೀಪುರದಲ್ಲಿ ಅಸ್ಪೃಶ್ಯತೆ ಕಾರಣಕ್ಕೆ ಬಳುವಳಿ ನಿರಾಕರಿಸಲಾಗಿದೆ. ಸದರಿ ವಾರ್ಡ್ ಅನುಸೂಚಿತ ಜಾತಿಗೆ ಮೀಸಲಾಗಿದ್ದು, ಒಬ್ಬ ಅಭ್ಯರ್ಥಿ ಪ್ರತಿ ಮನೆಗೂ ಸೀರೆ ಮತ್ತು ಕುಪ್ಪಸವನ್ನು ವಿತರಿಸುತ್ತಿದ್ದರು. ಕೊತ್ತೀಪುರದಲ್ಲಿರುವ ಮೇಲ್ವರ್ಗದವರು ಜಾತಿ ಕಾರಣಕ್ಕೆ ಆ ಅಭ್ಯರ್ಥಿಯಿಂದ ಉಡುಗೊರೆ ನಿರಾಕರಿಸಿದ್ದಾರೆ.
ಕವರ್ ಸಂಸ್ಕೃತಿ ಪರಿಚಯ
ರಾಮನಗರ ನಗರಸಭೆ ವ್ಯಾಪ್ತಿಯ ಸಾಕಷ್ಟು ಅಭ್ಯರ್ಥಿಗಳು ಮತದಾರರಿಗೆ ಅವರ ಕ್ರಮ ಸಂಖ್ಯೆ, ಭಾಗ ಸಂಖ್ಯೆ, ಮತಗಟ್ಟೆಯ ವಿವರ ಸಮೇತ ಚೀಟಿ ಹಾಗೂ ನೋಟು ಇಟ್ಟು ಹಂಚಲು ಕವರ್ಗಳನ್ನು ಮುದ್ರಣ ಮಾಡಿಸಿದ್ದಾರೆ. ಕವರ್ ಮೇಲೆ ವಾರ್ಡ್ ಸಂಖ್ಯೆ, ಅಭ್ಯರ್ಥಿ ಹೆಸರು, ಕ್ರಮ ಸಂಖ್ಯೆ, ಚಿಹ್ನೆ, ಮತಗಟ್ಟೆ ಸ್ಥಳವನ್ನು ಮುದ್ರಿಸಲಾಗಿದೆ.
ಇಲ್ಲಿ ಇದೇ ಮೊದಲ ಬಾರಿ ಕವರ್ ಸಂಸ್ಕೃತಿ ಮತದಾರರಿಗೆ ಪರಿಚಯವಾಗಿದೆ. 20ಕ್ಕೂ ಹೆಚ್ಚು ಅಭ್ಯರ್ಥಿಗಳು ಈ ರೀತಿಯ ಕವರ್ಮೂಲಕ ಹಣ ಮತ್ತು ವಿವರ ಹಂಚುತ್ತಿದ್ದಾರೆ. ಕುಟುಂಬವಾರು ಮತದಾರರ ಸಂಖ್ಯೆಗೆ ಅನುಗುಣವಾದ ಮೊತ್ತ ಸಮೇತ ಕವರ್ಗಳು ಮಂಗಳವಾರ ಮತ್ತು ಬುಧವಾರ ರಾತ್ರಿ ಮನೆ ಮನೆಗೆ ತಲುಪಲಿವೆ.
ಯೋಗಿಯ ಪ್ರಣಾಳಿಕೆ
ಚನ್ನಪಟ್ಟಣ ನಗರಸಭೆ ವ್ಯಾಪ್ತಿಯ ಮತದಾರರನ್ನು ಸೆಳೆಯಲು ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ತಮ್ಮದೇ ಆದ ಪ್ರಣಾಳಿಕೆಯೊಂದಿಗೆ ಪ್ರಚಾರಕ್ಕೆ ನಡೆಸುತ್ತಿದ್ದಾರೆ. ಬಿಜೆಪಿ ಸೇರಿದ ಅನಿವಾರ್ಯತೆ, ಕ್ಷೇತ್ರದಲ್ಲಾದ ಕೆಲಸಗಳು ಮತ್ತು ತಮ್ಮ ಮುಂದಿನ ಗುರಿಗಳ ಸಮಗ್ರ ವಿವರಣೆ ಸಮೇತ ಇರುವ ಕಲರ್ ಕರಪತ್ರದಲ್ಲಿ ಕಾಂಗ್ರೆಸ್ಗೆ ಅಧಿಕಾರ ನೀಡಲು ಮತದಾರರಿಗೆ ಮನವಿ ಮಾಡಿದ್ದಾರೆ. ಪಕ್ಷದ ನಗರ ಮತ್ತು ಗ್ರಾಮಾಂತರ ಬ್ಲಾಕ್ ಅಧ್ಯಕ್ಷರು, ತಮ್ಮೆದುರು 3 ಪ್ರತ್ಯೇಕ ಚುನಾವಣೆಗಳಲ್ಲಿ ಕಾಂಗ್ರೆಸ್ನಿಂದ ಸ್ಪರ್ಧಿಸಿ ಪರಾಭವಗೊಂಡ ಸಾದತ್ ಅಲಿಖಾನ್, ಟಿ.ಕೆ.ಯೋಗೇಶ್, ರಘುನಂದನ್ ಅವರ ಭಾವಚಿತ್ರಗಳನ್ನು ಹಾಕಿಸಿದ್ದಾರೆ. ಆದರೆ, ಅವರೊಟ್ಟಿಗೆ ಕೂಡಿಕೊಂಡು ಚನ್ನಪಟ್ಟಣದಲ್ಲಿ ಪ್ರಚಾರ ನಡೆಸಲು ಯೋಗೇಶ್ವರ್ ನಿರಾಸಕ್ತಿ ತೋರಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

