ಬಹಿರಂಗ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು
ರಾಮನಗರ ಜಿಲ್ಲಾ ತೃತೀಯ ಕನ್ನಡ ಸಾಹಿತ್ಯ ಸಮ್ಮೇಳನದ ಬಹಿರಂಗ ಅಧಿವೇಶನದಲ್ಲಿ ಕೈಗೊಂಡ ನಿರ್ಣಯಗಳು.
1. ರಾಮನಗರ ಜಿಲ್ಲೆಯಾದ್ಯಂತ ಬಹು ಮುಖ್ಯವಾಗಿ ಕಾಡುತ್ತಿರುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುವ ಪ್ರಯತ್ನವಾಗಿ, ಈಗಿರುವ ಏತ ನೀರಾವರಿ ಯೋಜನೆಗಳು ವಿದ್ಯುತ್ ಅಭಾವದಿಂದಲೋ, ಯಂತ್ರ ದೋಷದಿಂದಲೋ ಸ್ಥಗಿತವಾಗುವ ಸಾಧ್ಯತೆ ಇರುವುದರಿಂದ ಜಿಲ್ಲೆಯ ಗಡಿಭಾಗದಲ್ಲಿರುವ ಕಾವೇರಿಯ ಉಪ ನದಿಗಳಾದ ಶಿಂಷಾ ಮತ್ತು ಹೇಮಾವತಿ ನದಿಗಳಿಂದ ಸಂಪರ್ಕ ಪಡೆದು ಗುರುತ್ವಾಕರ್ಷಣೆ ಪ್ರಕ್ರಿಯೆಯಲ್ಲಿ ಶಾಶ್ವತವಾಗಿ ನೀರು ಹರಿಸುವುದರಿಂದ ಅಂತರ್ಜಲ ವೃದ್ಧಿಯೂ ಆಗುವಂತೆ ಮಾಡುವ ನಿರ್ಧಾರ ಕೈಗೊಳ್ಳಲು ಸಂಬಂಧಪಟ್ಟ ಜನಪ್ರತಿನಿಧಿಗಳು ಕ್ರಿಯಾಶೀಲರಾಗುವಂತೆ ಒಕ್ಕೊರಲಿನ ಒತ್ತಾಯ.
2. ರಾಮನಗರ ಜಿಲ್ಲೆಯು ರಾಜ್ಯದಲ್ಲೇ ಅತಿ ಹೆಚ್ಚು ಬೆಲೆಬಾಳುವ ಗ್ರಾನೈಟ್ ಬೆಟ್ಟಗುಡ್ಡಗಳಿಂದ ಕೂಡಿದ್ದು, ಅಕ್ರಮ ಕ್ವಾರಿ ಗಣಿಗಾರಿಕೆಯಿಂದ ಬೆಟ್ಟಗುಡ್ಡಗಳು ಕರಗುತ್ತಾ ಬರುತ್ತಿದ್ದು, ಮುಂದೊಂದು ದಿನ ಅಲ್ಲಲ್ಲಿ ಬಾರಿ ಬಾರಿ ಗುಂಡಿ ಬಿದ್ದು ಅಸ್ತಿ ಪಂಜರದಂಥ ಬೋಳು ಪ್ರದೇಶವಾಗಿ ಪರಿಸರ ಅಸಮತೋಲವಾಗುವ ಮೊದಲೇ ಸಂಪನ್ಮೂಲ ಬರಿದಾಗದಂತೆ ಕ್ರಮ ಕೈಗೊಳ್ಳಲು ಈ ಅಧಿವೇಶನ ಒತ್ತಾಯ.
3. ರಾಮನಗರ ಜಿಲ್ಲೆಯು ಮೂರು ಪ್ರಮುಖ ನದಿಗಳಾದ ಕಣ್ವ, ಅರ್ಕಾವತಿ, ವಣಷಭಾವತಿ ನದಿಗಳಿಂದ ಕೂಡಿದ್ದು ಸದರಿ ನದಿ ತಟದ ಉದ್ದಕ್ಕೂ ನಡೆಯುತ್ತಿರುವ ಅಕ್ರಮ ಮರಳು ಸಾಗಾಣಿಕೆಯಿಂದಾಗಿ ಅಂತರ್ಜಲ ಕುಸಿತವಾಗಿ ಪ್ರಾಕೃತಿಕ ಅಸಮತೋಲನ ಉಂಟಾಗಿದ್ದು, ರೈತನ ಬದುಕು ದುಸ್ತರವಾಗಿರುವುದರಿಂದ ಮರಳು ಸಾಗಾಣಿಕೆಯನ್ನು ನಿಷೇಧಿಸಬೇಕೆಂದು ಈ ಅಧಿವೇಶನ ಒತ್ತಾಯ.
4. ರಾಮನಗರ ಜಿಲ್ಲೆಯಾದ್ಯಂತ ವೈವಿಧ್ಯಮಯವಾದ ಸಾಹಿತ್ಯ ಚಟುವಟಿಕೆಗಳು, ನಿರಂತರವಾಗಿ ನಡೆಯುತ್ತಲೇ ಇವೆ. ಆದರೆ ಚಟುವಟಿಕೆಗಳು ವ್ಯವಸ್ಥಿತವಾಗಿ ನಡೆಯುವುದಕ್ಕಾಗಲೀ ಆಸಕ್ತರು ಸೇರಿ ಅದರ ಪ್ರಯೋಜನ ಪಡೆಯುವುದಕ್ಕಾಗಲೀ ಸೂಕ್ತ ಸಭಾಂಗಣವಿಲ್ಲ. ಆದ್ದರಿಂದ ಸಾಹಿತ್ಯ ಚಟುವಟಿಕೆಗಳು ಇನ್ನೂ ಹೆಚ್ಚು ನಿರಂತರವಾಗಿ ನಡೆಯಲು ಅನುಕೂಲವಾಗುವಂತೆ ಹೆಚ್ಚು ಮಂದಿ ಕೂರುವಂತಹ ಸುಸಜ್ಜಿತವಾದ ಸಾಹಿತ್ಯ ಭವನಗಳು ಪ್ರತಿ ತಾಲೂಕಿನಲ್ಲೂ ನಿರ್ಮಿಸಲು ಜಿಲ್ಲಾ ಜನ ಪ್ರತಿನಿಧಿಗಳು ಮತ್ತು ಜಿಲ್ಲಾಡಳಿತ ಕೂಡಲೆ ಕ್ರಮ ಕೈಗೊಳ್ಳಬೇಕೆಂದು ಈ ಅಧಿವೇಶನ ಒತ್ತಾಯಿಸಿದೆ.
5. ಮೂರು ಸಾವಿರಕ್ಕೂ ಅಧಿಕ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕರ್ನಾಟಕ ಸರ್ಕಾರದ ನಿರ್ಧಾರ ಕನ್ನಡದ ಪಾಲಿಗೆ ಒಂದು ಕರಾಳ ಶಾಸನ. ಇಂಗ್ಲಿಷ್ ಮಾಧ್ಯಮ ಶಾಲೆಗಳ ಒತ್ತಡಕ್ಕೆ ಮಣಿದು, ಸರ್ಕಾರ ಕನ್ನಡವನ್ನು ಕೊಲ್ಲುವ ಕೆಲಸ ಮಾಡುತ್ತಿದೆ ಎನ್ನುವುದಕ್ಕೆ ಇದು ಸ್ಪಷ್ಟ ನಿದರ್ಶನ. ಸರ್ಕಾರದ ಈ ಕನ್ನಡ ವಿರೋಧಿ ಬಡ ವಿದ್ಯಾರ್ಥಿಗಳ ವಿರೋಧಿಯಾದ ಧೋರಣೆಯನ್ನು ಈ ಮಹಾಸಭೆ ವಿರೋಧಿಸುತ್ತದೆ ಮತ್ತು ಕನ್ನಡ ಶಾಲೆಗಳನ್ನು ಮುಚ್ಚುವ ಆದೇಶವನ್ನು ಹಿಂದಕ್ಕೆ ಪಡೆದು, ಆ ಶಾಲೆಗಳಲ್ಲಿ ಮಕ್ಕಳು ಕಲಿಯಲು ಅಗತ್ಯವಾದ ಎಲ್ಲಾ ಸೌಲಭ್ಯಗಳನ್ನು ಒದಗಿಸಬೇಕೆಂದೂ ಇಲ್ಲವಾದಲ್ಲಿ ಸರ್ಕಾರದ ಕನ್ನಡ ವಿರೋಧಿ ಧೋರಣೆಯನ್ನು ಖಂಡಿಸಿ ಜನ ಬೀದಿಗಿಳಿದು ಹೋರಾಟ ಮಾಡಬೇಕಾದ ಸನ್ನಿವೇಶ ನಿರ್ಮಾಣವಾಗುತ್ತದೆಂದೂ ಎಚ್ಚರಿಸುತ್ತದೆ. ಅಲ್ಲದೆ ನಾಯಿಕೊಡೆಗಳಂತೆ ಹುಟ್ಟಿಕೊಂಡು, ಕನ್ನಡ ಸಂಸ್ಕೃತಿಗೆ ಕಂಟಕ ಪ್ರಾಯವಾಗಿರುವ, ಶಿಕ್ಷಣವನ್ನು ವ್ಯಾಪಾರೀಕರಣಗೊಳಸಿರುವ ಇಂಗ್ಲಿಷ್ ಶಾಲೆಗಳನ್ನು ಮುಚ್ಚುವ ದಿಟ್ಟ ಕ್ರಮಕ್ಕೆ ಸರ್ಕಾರ ಮುಂದಾಗಬೇಕೆಂದು ಈ ಅಧಿವೇಶನ ಒತ್ತಾಯ.
6. ರಾಮನಗರ ಜಿಲ್ಲಾ ಕೇಂದ್ರದ ಎಲ್ಲಾ ಸರ್ಕಾರಿ ಇಲಾಖೆಗಳಲ್ಲಿ ಕನ್ನಡದಲ್ಲಿ ವ್ಯವಹಾರ ನಡೆಯಬೇಕು.
ಪತ್ರಗಳು, ಟಿಪ್ಪಣಿಗಳು, ಆದೇಶಗಳು, ವರದಿಗಳು, ಸುತ್ತೋಲೆಗಳು ಕಡ್ಡಾಯವಾಗಿ ಕನ್ನಡದಲ್ಲೇ ಇರಬೇಕು. ಇಂಗ್ಲಿಷ್ನಲ್ಲಿ ಅವುಗಳನ್ನು ಸಿದ್ದಪಡಿಸುವ ಅಧಿಕಾರಿಗಳು, ಸಿಬ್ಬಂದಿ ವರ್ಗದವರನ್ನು ನಿಯಮದಂತೆ ದಂಡಿಸಬೇಕು ಎಂದು ಸರ್ಕಾರವನ್ನು ಈ ಅಧಿವೇಶನ ಒತ್ತಾಯ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

