ಬೆಂಗಳೂರು ಗ್ರಾಮಾಂತರ

ಒಂದೇ ಹಂತ ಮತದಾನ ನೆರೆ ಹಾವಳಿಗೆ ಕಡಿವಾಣ

Published On :

ಕ.ಪ್ರ.ವಾರ್ತೆ, ರಾಮನಗರ, ಮಾ.21 ರಾಜ್ಯ ವಿಧಾನಸಭೆಯ ಎಲ್ಲ 224 ಕ್ಷೇತ್ರಗಳಿಗೆ ಒಂದೇ ಹಂತದಲ್ಲಿ ಚುನಾವಣೆ ಘೋಷಣೆ ಪರಿಣಾಮ ನೆರೆ ಹಾವಳಿಗೆ ಕಡಿವಾಣ ಬಿದ್ದಂತಾಗಿದೆ
ಚುನಾವಣೆಗೂ ನೆರೆಗೂ ಎತ್ತಿಂದೆತ್ತಣ ಸಂಬಂಧವೆನ್ನುವ ಪ್ರಶ್ನೆ ಕಾಡುವುದು ಸಹಜ. ಆದರೆ, ಇದು ಅತಿವೃಷ್ಟಿಯ ನೆರೆಯಂತೂ ಖಂಡಿತ ಅಲ್ಲ. ಪ್ರತ್ಯೇಕ ಹಂತಗಳಲ್ಲಿ ಚುನಾವಣೆ ಇದ್ದಾಗ ನೆರೆಹೊರೆ ಜಿಲ್ಲೆಗಳ ಗಡಿಯುದ್ದಕ್ಕೂ ನಡೆಯುತ್ತಿದ್ದ ಅಕ್ರಮಗಳ ಹಾವಳಿಯಷ್ಟೇ.ದಾಸ್ತಾನಿನ ಗೋದಾಮು: ಎರಡು ಹಂತದ ಚುನಾವಣೆಯಲ್ಲಿ ಒಂದರಿಂದ ಮತ್ತೊಂದು ಹಂತಕ್ಕೆ ಕನಿಷ್ಠ ನಾಲ್ಕೈದು ದಿನಗಳ ಅಂತರ ಇದ್ದೇ ಇರುತ್ತದೆ. ಚುನಾವಣಾ ಆಯೋಗ ಮತ್ತು ಅಧಿಕಾರಿಗಳ ಹದ್ದಿನ ಕಣ್ಣು ಮೊದಲ ಹಂತದ ಚುನಾವಣೆ ಮೇಲೆ ಬಿದ್ದಿರುತ್ತದೆ. ಆ ವೇಳೆ 2ನೇ ಹಂತದ ಚುನಾವಣಾ ವ್ಯಾಪ್ತಿ ಕಡೆಗೆ ಹೆಚ್ಚು ಗಮನ ಇರಲಾರದು.
ಹೀಗಾಗಿ ಮೊದಲ ಹಂತದ ಮತದಾನ ನಡೆಯುವ ಕ್ಷೇತ್ರಗಳ ಅಭ್ಯರ್ಥಿಗಳು ತಮ್ಮ ಚುನಾವಣಾ ಸರಕು, ಸಾಮಗ್ರಿಗಳನ್ನು ದಾಸ್ತಾನು ಮಾಡಲು ಗಡಿಯಂಚಿನಲ್ಲಿರುವ 2ನೇ ಹಂತದ ಮತದಾನ ವ್ಯಾಪ್ತಿಯ ಪ್ರದೇಶದವನ್ನು ಗೋದಾಮು ಮಾಡಿಕೊಂಡಿರುತ್ತಾರೆ. ಅಲ್ಲಿಂದ ತಮ್ಮ ಕ್ಷೇತ್ರಕ್ಕೆ ಸುಗಮವಾಗಿ ಸಾಗಣೆ ಮಾಡಿಕೊಳ್ಳುತ್ತಿದ್ದರು.
ಮತ್ತಷ್ಟು ಸುಗಮ: ಎರಡನೇ ಹಂತದಲ್ಲಿ ಮತದಾನ ನಡೆಯುವ ಕ್ಷೇತ್ರಗಳ ಅಭ್ಯರ್ಥಿಗಳ ಪಾಲಿಗೆ ಅಕ್ರಮಗಳನ್ನು ನಡೆಸುವುದು ಮತ್ತಷ್ಟು ಸಲೀಸು. ಹೇಗೂ ಮೊದಲ ಹಂತದ ಕ್ಷೇತ್ರಗಳಲ್ಲಿ ಮತದಾನ ಮುಗಿದಾದ ಮೇಲೆ ಅತ್ತ ಅಧಿಕಾರಿಗಳು ತಿರುಗಿಯೂ ನೋಡುವುದಿಲ್ಲ.
 ಇದು ಎರಡನೇ ಹಂತದ ಚುನಾವಣೆಯ ಕ್ಷೇತ್ರಗಳ ಅಭ್ಯರ್ಥಿಗಳ ಪಾಲಿಗೆ ವರದಾನವಾಗುತ್ತಿತ್ತು. ಎರಡನೇ ಹಂತದ ಚುನಾವಣೆಯ ಅಭ್ಯರ್ಥಿಗಳು ನಡೆಸುತ್ತಿದ್ದ ಎಲ್ಲ ಅಕ್ರಮಗಳಿಗೆ ಮೊದಲ ಹಂತದಲ್ಲಿ ಮತದಾನ ಮುಗಿದಾಗಿದ್ದ ಕ್ಷೇತ್ರಗಳ ಪ್ರದೇಶವೇ ಕಾರಸ್ಥಾನ.
 ಅಲ್ಲೂ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಮತದಾನ ಮುಗಿದಿರುವ ಕಾರಣಕ್ಕೆ ಆಯೋಗ ಹಾಗೂ ಅಧಿಕಾರಿಗಳು ಗಮನ ನೀಡುವುದಿಲ್ಲ. ಗಡಿಯಾಚೆಗಿನ ಕಸರತ್ತು: ರಾಜಕಾರಣಿಗಳಿಗೆ ಚುನಾವಣಾ ಅಕ್ರಮಗಳು ಕರಗತವಾಗಿರುತ್ತವೆ. ಇದನ್ನು ಯಾವ ಗರಡಿಯಲ್ಲೂ ಕಲಿತು, ಪಳಗಬೇಕಾಗಿಲ್ಲ. ಪ್ರತ್ಯೇಕ ಹಂತಗಳಲ್ಲಿ ಚುನಾವಣೆ ನಡೆದಾಗಿನ ಅಕ್ರಮಗಳ ನೆರೆ ಹಾವಳಿಗೆ ಪರಸ್ಪರ ಸುಮಾರು 60 ಮೈಲು ದೂರದ ಗಡಿ ಹೊಂದಿದ ರಾಮನಗರ ಹಾಗೂ ಮಂಡ್ಯ ಜಿಲ್ಲೆಗಳೇ ಸಾಕ್ಷಿ.
ಸಾಮಾನ್ಯವಾಗಿ ಅವಿಭಜಿತ ಬೆಂಗಳೂರು ಗ್ರಾಮಾಂತರ, ತುಮಕೂರು ಕ್ಷೇತ್ರಗಳ ಚುನಾವಣೆ ಮೊದಲ ಹಂತದಲ್ಲಿ ಮುಗಿದಿರುತ್ತಿತ್ತು.  
 ಮಂಡ್ಯ ಜಿಲ್ಲೆ ಮತದಾನ 2ನೇ ಹಂತದಲ್ಲಿ ನಡೆಯುತ್ತಿತ್ತು. ಗಡಿಯಾಚೆಗಿನ ಚಟುವಟಿಕೆಗಳ ಕರಾಮತ್ತು ಹೇಗಿರುತ್ತದೆ ಎನ್ನುವುದು ಈ ಭಾಗದ ಜನತೆ ಕಣ್ಣಿಗೆ ಈಗಲೂ ಕಟ್ಟಿದಂತಿದೆ.

ನಿದರ್ಶನಗಳು ಸಾಕಷ್ಟು...
ರಾಜಕೀಯ ಪಕ್ಷಗಳು ಮತ್ತು ಅಭ್ಯರ್ಥಿಗಳು ಹಣ, ಮದ್ಯ, ಬಳುವಳಿಗಳ ಮಹಾಪೂರದ ಹೊಳೆ ಹರಿಸುವುದೇ ಮತದಾನಕ್ಕಿನ್ನು 2-3 ದಿನ ಇದ್ದಾಗಷ್ಟೇ. ಇಂತಹ ಸಂದರ್ಭದಲ್ಲಿ ಮಾತ್ರವೇ ಚುನಾವಣಾ ಆಯೋಗ ಹಾಗೂ ಅಧಿಕಾರಿಗಳು ಎಚ್ಚರ ವಹಿಸುವುದು ಸಹಜ. ಕನಕಪುರ ಲೋಕಸಭೆ ಕ್ಷೇತ್ರದ 2002ರ ಮರು ಚುನಾವಣೆ, 2009ರ ಲೋಕಸಭೆ ಚುನಾವಣೆ, ವಿಧಾನಸಭೆಗೆ 2004 ಮತ್ತು 2008ರಲ್ಲಿ ನಡೆದ ಸಾರ್ವತ್ರಿಕ  ಚುನಾವಣೆಗಳಲ್ಲಿ ನೆರೆ ಹಾವಳಿ ಸಾಕಷ್ಟು ಮಿತಿ ಮೀರಿತ್ತು. ಇದೆಲ್ಲಕ್ಕಿಂತ 2008ರ ಮದ್ದೂರು ಮರು ಚುನಾವಣೆ ವೇಳೆ ಪ್ರಮುಖ ಪಕ್ಷಗಳ ಚಟುವಟಿಕೆಗಳ ತಾಣ ಚನ್ನಪಟ್ಟಣ ಗಡಿಯಂಚಿನ ಪ್ರದೇಶವೇ ಆಗಿತ್ತು.  2009 ಮತ್ತು 11ರಲ್ಲಿ ನಡೆದ ಚನ್ನಪಟ್ಟಣದ ಮರು ಚುನಾವಣೆಗಳಲ್ಲಿ ಬಹುಪಾಲು ಚಟುವಟಿಕೆಗಳ ತಾಣ ನೆರೆಯ ಮದ್ದೂರು ಭಾಗವಾಗಿತ್ತು. ಈಗಲೂ ಗುಂಡು-ತುಂಡಿನ ಪಾರ್ಟಿಗಳು ವ್ಯಾಪ್ತಿಯಲ್ಲಿ ನಡೆಯುತ್ತಿದೆ.

ಕಬ್ಬಡಿಗೆ ಇಲ್ಲ ಅವಕಾಶ....
ಕೆಲ ನಾಯಕರು ತಮ್ಮ ಚುನಾವಣೆ ಮುಗಿಸಿ, ನೆರೆ ಕ್ಷೇತ್ರ ಮತ್ತು ಜಿಲ್ಲೆಗಳಲ್ಲಿ ಪ್ರಚಾರಕ್ಕೆ ಧುಮುಕುತ್ತಿದ್ದರು. ಇನ್ನು ಕೆಲವರು ಕಣಕ್ಕಿಳಿದ ಸ್ವಪಕ್ಷೀಯ ವಿರೋಧಿಗಳ ಕಾಲೆಳೆಯಲು ಮಸಲತ್ತು ನಡೆಸುತ್ತಿದ್ದರು. ಇದಕ್ಕೆ ಪ್ರತ್ಯೇಕ ಹಂತಗಳಲ್ಲಿ ನಡೆಯುವ ಚುನಾವಣೆ ನೇರವಾಗುತ್ತಿತ್ತು. ಆದರೆ, ಈಗ ರಾಜಕೀಯ ಕಬ್ಬಡಿಗೂ ಬ್ರೇಕ್ ಬಿದ್ದಂತಾಗಿದೆ. ಸ್ಟಾರ್ ಪ್ರಚಾರಕರಿಗೆ ಅಷ್ಟು ಸುಲಭದ ಕೆಲಸವಲ್ಲ. ಒಂದೇ ಹಂತದಲ್ಲಿ ಮತದಾನ ನಡೆಸುವುದರಿಂದ ಅಕ್ರಮಕ್ಕೆ ಕಡಿವಾಣ ಬಿದ್ದಿದೆ.
- ಮತ್ತೀಕೆರೆ ಜಯರಾಮ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.