ಬೆಂಗಳೂರು ಗ್ರಾಮಾಂತರ

ಅರಣ್ಯ ಇಲಾಖೆ ಕ್ರಮ ಖಂಡಿಸಿ ಪ್ರತಿಭಟನೆ

Published On :

ಕಪ್ರ ವಾರ್ತೆ ರಾಮನಗರ ಮಾ. 25
ರಾಮದೇವರ ಬೆಟ್ಟದ ಮೀಸಲು ಅರಣ್ಯ ಸುತ್ತಮುತ್ತ ಇರುವ ಕೃಷಿ ಭೂಮಿ ಕಬಳಿಕೆಗೆ ಮುಂದಾಗಿರುವ ಅರಣ್ಯ ಇಲಾಖೆ ಕ್ರಮ ಖಂಡಿಸಿ ಕರ್ನಾಟಕ ರಾಜ್ಯ  ರೈತ ಸಂಘ ಮತ್ತು ಹಸಿರುಸೇನೆ ಕಾರ್ಯಕರ್ತರು ನಗರದಲ್ಲಿ ಸೋಮವಾರ ಧರಣಿ ನಡೆಸಿದರು.  
ಜಿಲ್ಲಾಧಿಕಾರಿ ಕಚೇರಿ ಎದುರು ಜಮಾಯಿಸಿದ ಪ್ರತಿಭಟನಾಕಾರರು ಅರಣ್ಯ ಇಲಾಖೆ ಅಧಿಕಾರಿಗಳ ವಿರುದ್ಧ ಘೋಷಣೆ ಕೂಗಿದರು. ರೈತರ ಪರವಾದ ನಿಲುವು ಕೈಗೊಳ್ಳುವವರೆಗೆ ಅನಿರ್ದಿಷ್ಟಾವಧಿ ಸತ್ಯಾಗ್ರಹ ನಡೆಸಲಾಗುವುದು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ಸ್ವಾತಂತ್ರ ಪೂರ್ವ ಮತ್ತು ನಂತರದಲ್ಲಿ ಸರ್ಕಾರವು ರಾಮದೇವರ ಬೆಟ್ಟದ ಸುತ್ತಮುತ್ತ ಇದ್ದ ಕೃಷಿ ಭೂಮಿಯನ್ನು ಭೂರಹಿತ ರೈತರಿಗೆ ಮುಫತ್ತಾಗಿ ನೀಡಿದೆ. ಸದರಿ ರೈತರು ಭೂ ಹಕ್ಕುದಾರಿಕೆ ಹೊಂದಿದ್ದು, ಇದೀಗ ಅವರೆನ್ನಲ್ಲ ಒಕ್ಕಲೆಬ್ಬಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಸದರಿ ಜಮೀನಿನ ಹಿಡುವಳಿದಾರರಿಗೆ ಸರ್ವೆ ಸ್ಕೆಚ್, ಆಕಾರಬಂದು, ಪೋಡಿ-ದುರಸ್ತು ಮಾಡಿಕೊಟ್ಟಿದ್ದು, ಪಹಣಿ ಮತ್ತು ಮ್ಯುಟೇಷನ್ ದಾಖಲೆಗಳಲ್ಲೂ ಹಕ್ಕುದಾರಿಕೆಯ ವಿವರ ಬರುತ್ತಿದೆ. 2 ತಿಂಗಳಿಂದ ಈಚೆಗೆ ಅರಣ್ಯ ಇಲಾಖೆ ಸದರಿ ಜಮೀನಿಗೆ ತಂತಿ ಬೇಲಿ ಹಾಕಿ, ವಶಪಡಿಸಿಕೊಳ್ಳುತ್ತಿದೆ ಎಂದು ಅವರು ದೂರಿದರು.
ಕೆಲ ರೈತರು ಮಂಜೂರಾದ ಜಾಗವನ್ನು ಕ್ರಯ ಮಾಡಿ, ಕೈ ಬದಲಾಯಿಸಿದ್ದಾರೆ. ಇನ್ನು ಕೆಲವರು ಅಲ್ಲೇ ಮನೆ ಕಟ್ಟಿ ವಾಸವಿದ್ದಾರೆ. ಕೃಷಿ ಪಂಪ್‌ಸೆಟ್ ಹಾಕಿಸಿ ಬೇಸಾಯದಲ್ಲೂ ತೊಡಗಿದ್ದಾರೆ. ಈಗ ಜಾಗ ವಶಪಡಿಸಿಕೊಂಡರೆ ರೈತರು ಭಾರಿ ನಷ್ಟ ಅನುಭವಿಸಬೇಕಾಗುತ್ತದೆ ಎಂದು ಟೀಕಿಸಿದರು.
ಪುಟ್ಟಸ್ವಾಮಿ ಎಚ್ಚರಿಕೆ : ಜಾಗವನ್ನು ಬಿಟ್ಟುಕೊಡಲು ಅಡ್ಡಿಪಡಿಸುವ ರೈತರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುತ್ತಿದೆ. ಅರಣ್ಯ ಇಲಾಖೆ ಅಧಿಕಾರಿಗಳ ಗೂಂಡಾಗಿರಿಯನ್ನು ರೈತ ಸಂಘ ಸಹಿಸುವುದಿಲ್ಲ. ತಕ್ಷಣ ಎಲ್ಲ ಮೊಕದ್ದಮೆಗಳನ್ನು ಹಿಂತೆಗೆದುಕೊಂಡು, ಜಮೀನು ವಾಪಸ್ ಬಿಡದಿದ್ದಲ್ಲಿ ಜಿಲ್ಲಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ರೈತ ಸಂಘದ ರಾಜ್ಯ ಮುಖಂಡ ಸಿ.ಪುಟ್ಟಸ್ವಾಮಿ ಎಚ್ಚರಿಸಿದರು.
ರೈತರಿಗೆ ನ್ಯಾಯ ಒದಗಿಸಿ: ಅಧಿಕಾರಶಾಹಿಯು ರಿಯಲ್ ಎಸ್ಟೇಟ್ ಮಾಫಿಯಾ ಮತ್ತು ಕಾನೂನು ಬಾಹಿರ ಚಟುವಟಿಕೆ ನಡೆಸುವವರ ಬಗ್ಗೆ ತೋರುವ ಕಾಳಜಿಯನ್ನು ರೈತರ ವಿಷಯದಲ್ಲಿ ತೋರುತ್ತಿಲ್ಲ. ಈ ಪ್ರಕರಣದಲ್ಲಿ ಜಿಲ್ಲಾಡಳಿತ ತಕ್ಷಣ ಮಧ್ಯ ಪ್ರವೇಶಿಸಬೇಕು. ನೊಂದ ರೈತರಿಗೆ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಮುಂದಾಗಬೇಕು ಎಂದು ಅವರು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಣಸ್ವಾಮಿ, ಮುಖಂಡರಾದ ಸೀಬಕಟ್ಟೆ ಕೃಷ್ಣಪ್ಪ, ಸಂಪತ್, ಪುರದಯ್ಯ, ಭೈರೇಗೌಡ, ಕುಮಾರ, ಕೃಷ್ಣಪ್ಪ, ಹನುಮಂತ ಹಾಗೂ ನೊಂದ ರೈತರಾದ ತಿಮ್ಮಯ್ಯ, ನಂಜಪ್ಪ, ಸಿದ್ದರಾಮಯ್ಯ, ದೇವರಾಜು, ಸುಮಿತ್ರ, ಭಾಗ್ಯಮ್ಮ ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.