ಬೆಂಗಳೂರು ಗ್ರಾಮಾಂತರ

ಜಾನಪದ ಸಾಂಸ್ಕೃತಿಕ ಜೀವಂತಿಕೆಯ ಸಂಕೇತ

Published On :

ಕಪ್ರ ವಾರ್ತೆ ದೊಡ್ಡಬಳ್ಳಾಪುರ ಮಾ. 25
ಜಾನಪದದ ಜೀವಂತಿಕೆ ಹಳ್ಳಿಗಾಡಿನಲ್ಲಿ ಉಳಿದಿದೆಯೇ ಹೊರತು ನಗರದಲ್ಲಿ ಅಲ್ಲ. ನಮ್ಮ ಸಾಂಸ್ಕೃತಿಕ ಜೀವಂತಿಕೆಯ ಪ್ರತೀಕ ಎಂದರೆ ಜನಪದ ಮಾತ್ರ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕ ಸಿದ್ಧರಾಜು ಹೇಳಿದರು.
ತಾಲೂಕಿನ ಕನಸವಾಡಿ ಕ್ಷೇತ್ರದಲ್ಲಿ ಶ್ರೀಪ್ರತಿಭಾ ಜಾನಪದ ಕಲಾ ವೃಂದ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ನಡೆದ ಸಾಂಸ್ಕೃತಿಕ ಕಲಾ ಮಹೋತ್ಸವ 2012-13ಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಬೆಂ.ಗ್ರಾ.ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಸಿ.ಡಿ.ಸತ್ಯನಾರಾಯಣಗೌಡ ಮಾತನಾಡಿ, ಜಾನಪದ ನಮ್ಮ ಸಂಸ್ಕೃತಿಯ ತಾಯಿಬೇರು. ಬದುಕಿನ ಹಲವು ಸಂವೇದನೆಗಳು ಜನಪದದ ಜೀವಾಳ. ಜಾತ್ರೆ, ಹಬ್ಬ-ಹರಿದಿನಗಳ ಮಹತ್ವವನ್ನು ಸಾರುವ ಮತ್ತು ಬದುಕಿನ ನಿಜವಾದ ಅರ್ಥವಂತಿಕೆಯನ್ನು ಬೆಸೆಯುವ ಶಕ್ತಿ ಜಾನಪದಕ್ಕೆ ಮಾತ್ರ ಇದೆ. ಆದರೆ ಇಂದು ಆಧುನಿಕತೆಯ ಭರಾಟೆಯಲ್ಲಿ ಜನಪದದ ಸೊಗಡು ಮರೆಯಾಗುತ್ತಿದೆ. ಜನಪದ ಕೇವಲ ಮನರಂಜನೆಯ ವಸ್ತುವಾಗುತ್ತಿರುವುದು ವಿಷಾದನೀಯ. ಜನಪದದ ಬಗ್ಗೆ ಸಂಶೋಧಿಸುತ್ತಿರುವವರು ಅತ್ಯಂತ ಜಾಗರೂಕತೆಯಿಂದ ಮೂಲ ಭಾವನೆಗಳಿಗೆ ಪೆಟ್ಟಾಗದಂತೆ ಕಲಾವಂತಿಕೆಯನ್ನು ಹಿಡಿದಿಡುವ ಪ್ರಯತ್ನ ಮಾಡಬೇಕಿದೆ ಎಂದರು.
ಗುಡ್ಡದ ಆದಿಶಕ್ತಿ ಕ್ಷೇತ್ರದ ಶ್ರೀನರಸಿಂಹಮೂರ್ತಿ ಸ್ವಾಮೀಜಿ, ತಾ.ಪಂ ಮಾಜಿ ಅಧ್ಯಕ್ಷ ಚುಂಚೇಗೌಡ, ಜನಪದ ಕಲಾವಿದ ರಾಮಚಂದ್ರ ಶ್ಯಾಕಲದೇವನಪುರ, ಆರ್.ವಿ.ಗೌಡ, ಕಲಾವಿದರಾದ ಹನುಮಂತರಾಯಪ್ಪ, ಸಂಸ್ಥೆ ಅಧ್ಯಕ್ಷ ಎಸ್.ಬಿ. ಹನುಮಂತರಾಯಪ್ಪ, ಆರ್.ಸಿ.ರಾಮಲಿಂಗಯ್ಯ, ಎಚ್.ರತ್ನಮ್ಮ, ಸಿ.ಮಹದೇವಸ್ವಾಮಿ, ಶಶಿಕುಮಾರ್, ಧನಂಜಯಮಾಗೋಡು, ಮರಿಸ್ವಾಮಿ ಉಪಸ್ಥಿತರಿದ್ದರು.
ಸಾಂಸ್ಕೃತಿಕ ಮೆರವಣಿಗೆ: ಗೊರವರ ಕುಣಿತ, ಹಗಲು ವೇಷ, ಪಟ ಕುಣಿತ, ಡ್ರಮ್ಸ್ ವಾದನ, ಕೀಲು ಕುದುರೆ, ಡೊಳ್ಳುಕುಣಿತ, ಸೋಮನ ಕುಣಿತ, ತಮಟೆ ವಾದನ, ಗಾರುಡಿ ಗೊಂಬೆ, ಅರೆವಾದನ, ಪೂಜಾ ಕುಣಿತ ಸೇರಿದಂತೆ ಹಲವು ಕಲಾ ತಂಡಗಳು ಭಾಗವಹಿಸಿದ್ದವು. ಜಾನಪದ ಸಾಂಸ್ಕೃತಿಕ ತಂಡದ ಸಾಂಸ್ಕೃತಿಕ ವೈಭವ, ಬೆಂಗಳೂರಿನ ದರ್ಶಿನಿ ತಂಡದ ಸುಗಮ ಸಂಗೀತ, ಜೂನಿಯರ್ ರಾಜ್‌ಕುಮಾರ್ ಅವರ ರಂಗಪ್ರದರ್ಶನ ಗೀತೆ, ನಾಗರತ್ನ ಮತ್ತು ಸಂಗಡಿಗರಿಂದ ಸಮೂಹ ಗಾಯನ, ಜಂಬಣ್ಣ ಮತ್ತು ಸಂಗಡಿಗರ ವಚನ ಸಂಗೀತ, ಈರಪ್ಪ ಅನ್ನಳು ಅವರ ಭಕ್ತಿಸಂಗೀತ, ಧನಂಜಯ ಮಾಗೋಡು ಅವರ ತತ್ವಪದ, ದೊಡ್ಡಳ್ಳಿ ರಮೇಶ್‌ರ ಗೀಗೀ ಪದ, ಹನುಮಕ್ಕ ಅವರ ಸೋಬಾನೆ ಪದ, ಶೈಲಜಾ ಸಂಗಡಿಗರ ಜಾನಪದ ನೃತ್ಯ, ಭವಾನಿ ವಿದ್ಯಾಪೀಠದ ಮಕ್ಕಳಿಂದ ಹಾಸ್ಯ ಕಾರ್ಯಕ್ರಮ, ಕಡಬ ಶ್ರೀನಿವಾಸ್‌ರಿಂದ ಜಾನಪದ ಜಾದೂ, ಮಧುರೆ ಹೋಬಳಿ ಕಲಾವಿದರ ಸಂಘದಿಂದ ಪೌರಾಣಿಕ ರಂಗ ದೃಶ್ಯಾವಳಿ ಕಾರ್ಯಕ್ರಮಗಳು ನಡೆದವು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.