ಬೆಂಗಳೂರು ಗ್ರಾಮಾಂತರ

ಪ್ರಾದೇಶಿಕ ಪಕ್ಷಗಳಿಂದ ಅಭಿವೃದ್ಧಿ

Published On :

ಕಪ್ರ ವಾರ್ತೆ ಆನೇಕಲ್ಲು ಮಾ. 25
ರಾಜ್ಯದಲ್ಲಿನ ಜ್ವಲಂತ ಸಮಸ್ಯೆಗಳ ಶಾಶ್ವತ ಪರಿಹಾರಕ್ಕಾಗಿ ಪ್ರಾದೇಶಿಕ ಪಕ್ಷವನ್ನು ಗೆಲ್ಲಿಸಬೇಕೆಂದು ಸಂಸದ ಹಾಗೂ ಜೆಡಿಎಸ್ ಕಾರ್ಯಾದ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಮನವಿ ಮಾಡಿದ್ದಾರೆ.
ಅವರು ಬೆಂಗಳೂರು ದಕ್ಷಿಣ ಕ್ಷೇತ್ರ ಬೇಗೂರಿನಲ್ಲಿ  ಜೆಡಿಎಸ್ ಸಂಭವನೀಯ ಅಭ್ಯರ್ಥಿ ಪ್ರಭಾಕರರೆಡ್ಡಿ ಏರ್ಪಡಿಸಿದ್ದ ಚುನಾವಾಣಾ ಪ್ರಚಾರ ವೇದಿಕೆಯಲ್ಲಿ  ಮಾತನಾಡಿ ಗಡಿ, ಜಲ, ಭಾಷೆಯ ವಿಷಯದಲ್ಲಿ ನೆರೆಯ ತಮಿಳುನಾಡಿನ ಸಂಸದರಂತೆ ರಾಜ್ಯದ ಮುಖಂಡರು ಏಕತೆ ಪ್ರದರ್ಶಿಸುವುದಿಲ್ಲ. ಸಂಖ್ಯಾಬಲವನ್ನೇ ನೆಚ್ಚಿಕೊಂಡಿರುವ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಅನ್ಯಾಯ ಮಾಡಿಯಾದರೂ ತಮಿಳುನಾಡಿನ ಪರ ನಿಲವು ತಳೆಯುತ್ತದೆ. ಕಾವೇರಿ ನೀರಿನ ವಿಷಯದಲ್ಲಿ  ದೇವೇಗೌಡರು ಆಡುತ್ತಿರುವ ಪ್ರತಿ ಪದವೂ ಮುಖ್ಯವಾಗಿದ್ದು ಜನತೆ ಈ ಕೂಡಲೇ ಎಚ್ಚೆತ್ತುಕೊಳ್ಳಬೇಕೆಂದು ಕರೆ ನೀಡಿದರು.
ರಾಜ್ಯವನ್ನಾಳಿದ ಕಾಂಗ್ರೆಸ್ ತನ್ನ  ಪಾಲಿನ ನೀರಾವರಿ ಯೋಜನೆಗಳನ್ನು ಅವಧಿಯಲ್ಲಿ ಪೂರೈಸದೇ ಜನತೆಗೆ ದ್ರೋಹ ಮಾಡಿದೆ. ಪ್ರತಿ ನಿರ್ಣಯಕ್ಕೂ ಸೋನಿಯಾಜಿ ಅವರ ಸೂಚನೆಯನ್ನು ಅವಲಂಬಿಸಿರುವ ರಾಜ್ಯದ ನಾಯಕರು ರಾಜ್ಯದ ಜನತೆಗೆ ನ್ಯಾಯವನ್ನು ಕೊಡಿಸುವ ಯೋಜನೆಗಳನ್ನು ಹೊಂದಿಲ್ಲ ಎಂದರು.
ಭ್ರಮನಿರಸನ: ರಾಜ್ಯದಲ್ಲಿ ಬದಲಾವಣೆಗಾಗಿ ಜನತೆ ಬಿಜೆಪಿಗೆ ಅವಕಾಶ ನೀಡಿದರು. ಭ್ರಷ್ಟಾಚಾರ, ಸ್ವಜನ ಪಕ್ಷಪಾತ ಒಳಜಗಳಗಳಲ್ಲಿ ನಿರತರಾಗಿ ಜನತೆಗೆ ಭ್ರಮನಿರಸನ ಮಾಡಿದ್ದಾರೆ. ಬಿಜೆಪಿಯ ಹಗರಣಗಳ ಪಟ್ಟಿಯನ್ನು ಜನತೆ ಅರ್ಥಮಾಡಿಕೊಂಡಿದ್ದು ಸಮಯೋಚಿತ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದರು.
ಜೆಡಿಎಸ್ ಪ್ರಣಾಳಿಕೆ: ಕೆಲವೇ ದಿನಗಳಲ್ಲಿ ಜೆಡಿಎಸ್  ಅಭ್ಯರ್ಥಿಗಳ ಅಂತಿಮ ಪಟ್ಟಿ ಹಾಗೂ ರಾಜ್ಯದ ಜನತೆ ಒಪ್ಪುವ ಚುನಾವಣಾ ಪ್ರಣಾಳಿಕೆಯನ್ನು ಬಿಡುಗಡೆ ಮಾಡಲಾಗುವುದು. ಬೆಂಗಳೂರಿನ ಜನತೆ ಕನಿಷ್ಠ 20 ಅಭ್ಯರ್ಥಿಗಳನ್ನು ಜೆಡಿಎಸ್ ಪರವಾಗಿ ಗೆಲ್ಲಿಸಿಕೊಡಬೇಕೆಂದು ಕೋರಿದರು.
ಜೆಡಿಎಸ್ ಸಂಭವನೀಯ ಅಭ್ಯರ್ಥಿ ಪ್ರಭಾಕರರೆಡ್ಡಿ ಮಾತನಾಡಿ ಬೆಂಗಳೂರು ದಕ್ಷಿಣ ಭಾಗದ ಕುಡಿಯುವ ನೀರು, ಒಳಚರಂಡಿ ವ್ಯವಸ್ಥೆ, ರಸ್ತೆಗಳನ್ನು ಸ್ವಂತ ನಿಧಿಯಿಂದಲೇ ಮಾಡಿಸುವ ಭರವಸೆ ನೀಡಿ ಮತ ಬೇಡಿದರು.
ಮುಖಂಡರಾದ ಬಂಡೆಪ್ಪ ಕಾಶೆಂಪೂರ್, ಜಮೀರ್ ಅಹಮ್ಮದ್, ಗೊಟ್ಟಿಗೆರೆ ಮಂಜುನಾಥ್, ಬೇಗೂರು ಲಿಂಗಪ್ಪ ಹಾಗೂ ಪಾಲಿಕೆ ಸದಸ್ಯರು ಮಾತನಾಡಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.