ಬೆಂಗಳೂರು ಗ್ರಾಮಾಂತರ

ಮನುಷ್ಯ ಸದಾ ಉತ್ಸಾಹದ ಚಿಲುಮೆಯಾಗಲಿ: ಮುರಘಾಶ್ರಿ

Published On :

ಮಾಗಡಿ: ಮನುಷ್ಯ ಸದಾ ಉತ್ಸಾಹದ ಚಿಲುಮೆಯಾಗಬೇಕು ಎಂದು ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಮುರುಘ ರಾಜೇಂದ್ರ ಶರಣ ನುಡಿದರು. ಅವರು ಮಾಗಡಿ ಪಟ್ಟಣದ ಡೂಂ ಲೈಟ್‌ನ  ಶ್ರೀ ಬಸವೇಶ್ವರ ವೃತ್ತದಲ್ಲಿ  ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘ ಮಾಗಡಿ ಘಟಕ ಏರ್ಪಡಿಸಿದ್ದ ಶರಣ ಸಂಗಮ-ಅರಿವಿನ ಅಂಗಳ ಧಾರ್ಮಿಕ ಸಮ್ಮೇಳನ ಕಾರ್ಯಕ್ರಮದ  ಸಾನಿಧ್ಯ ವಹಿಸಿ ಮಾತನಾಡುತ್ತಾ  ನಂದಿ ಹೋಗುವ ಜ್ಯೋತಿ ಬೆಳಗಿಸುವುದಕ್ಕಿಂತಲೂ  ಜ್ಞಾನದ ಜ್ಯೋತಿ ಹೊತ್ತಿಸೋಣ. ಪ್ರತಿಯೊಬ್ಬರಲ್ಲೂ ಮಸ್ತಕದ ಜಾಗೃತಿ ಮೂಡಿಸಬೇಕು. ಮೆರವಣಿಗೆ, ಉತ್ಸವಗಳು ಕೇವಲ ತಾತ್ಕಾಲಿಕ, ಉತ್ಸವಕ್ಕಿಂತ, ಜೀವನೋತ್ಸಾಹ ಮನುಷ್ಯನಿಗೆ ಸದಾ ಬಹಳ ಆನಂದವನ್ನು ಕೊಡುತ್ತದೆ. ಇತ್ತೀಚಿನ ದಿನಗಳಲ್ಲಿ ಮನುಷ್ಯನಲ್ಲಿ ಜೀವನೋತ್ಸಾಹ ಕಡಿಮೆಯಾಗುತ್ತಿದೆ. ಆರೋಗ್ಯವಂತರಾಗಿರಬೇಕು, ಹೃದಯಾಘಾತ ಆಗಬಾರದು, ರಕ್ತದೊತ್ತಡ ಬರಬಾರದು ಎಂದರೆ ದಿನಕ್ಕೆ ಕನಿಷ್ಠ 5 ಬಾರಿಯಾದರೂ ನಗಬೇಕು ಎಂದರು.
ಸದಾ ನಗು: ಏಸು, ಫೈಗಂಬರ್, ಬುದ್ಧ, ಬಸವಾದಿ ಶರಣರು ಸಮಾಜದ ಕಣ್ಣೀರು ಒರೆಸುವ ಕಾಯಕ ಮಾಡುತ್ತಾ ಇತಿಹಾಸ ಸೃಷ್ಟಿಸಿದರು. ಕಣ್ಣೀರಿನ ಸಮಸ್ಯೆ ಹೋಗಲಾಡಿಸಲು ಒಂದೇ ಪರಿಹಾರ ಸದಾ ನಗು, ನಗುತ್ತಾ ಇರಬೇಕು. ಧ್ಯಾನ ಮಾಡಬೇಕು. ಕಾಟಾಚಾರಕ್ಕೆ ಲಿಂಗ ಪೂಜೆ ಬೇಡ, ಭಕ್ತಿಪರ ಕಾಷ್ಠೆ ಪೂಜೆ, ಏಕಾಗ್ರತೆಯ ಧ್ಯಾನವಿರಲಿ, ಆಗ ಮನುಸ್ಸು ನಿರ್ಮಲವಾಗುತ್ತದೆ. ಜೀವನದುದ್ದಕ್ಕೂ ಆನಂದ ತಂದುಕೊಡುತ್ತದೆ ಎಂದರು.
 ಆಧ್ಯಾತ್ಮಿಕ ಧ್ಯಾನ, ವಚನಗಳ ಮೂಲಕ ಚಿಂತನೆಗಳ, ಅನುಭವ ಮಂಟಪದ ಮೂಲಕ ಪರಿಕಲ್ಪನೆ ಕೊಟ್ಟವರು ಬಸವಣ್ಣನವರು. ಬಸವಣ್ಣನವರ ವಚನಗಳು, ಚಿಂತನೆಗಳು, ಸಮಾಜ ಪ್ರತಿಯೊಬ್ಬರಿಗೂ ಸ್ಫೂರ್ತಿದಾಯಕ. ಶರಣರ ವಚನಗಳು, ಧಾರ್ಮಿಕ ಸಮ್ಮೇಳನಗಳು ಕೇವಲ ಸಮ್ಮೇಳನಗಳಾಗದೆ  ಪ್ರತಿಯೊಬ್ಬರಲ್ಲೂ ಧಾರ್ಮಿಕ ಪ್ರಜ್ಞೆ  ಜಾಗೃತಿಗೊಳ್ಳಬೇಕು ಎಂದು ಆಶೀರ್ವಚನದಲ್ಲಿ ತಿಳಿಸಿದರು.
ಉಪನ್ಯಾಸ: ಶಿವಗಂಗೆ ಮೇಲಣ ಗವಿ ಮಹಾ ಸಂಸ್ಥಾನದ ಮಲಯ ಶಾಂತಮುನಿ ದೇಶೀಕೇಂದ್ರ ಶಿವಚಾರ್ಯಸ್ವಾಮೀಜಿ ಅರಿವಿನ ಅಂಗಳ ಮತ್ತು ಧಾರ್ಮಿಕ ಸಮ್ಮೇಳನ ಕುರಿತು ಸುದೀರ್ಘ ಉಪನ್ಯಾಸ ನೀಡಿದರು. ರಾಜ್ಯ ವೀರಶೈವ ಲಿಂಗಾಯಿತ ನೌಕರರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ  ಬಸವಲಿಂಗಯ್ಯ ಅಧ್ಯಕ್ಷತೆ ವಹಿಸಿದ್ದರು. ಸಂಘದ ಅಧ್ಯಕ್ಷ  ಕೆ.ಪಿ. ರೇಣುಕಾರಾಧ್ಯ ಪ್ರಸ್ತಾವಿಕವಾಗಿ ಮಾತನಾಡಿದರು. ವಾಸವಿ ಶಾಲಾ ಮಕ್ಕಳಿಂದ ಸ್ವಾಗತ ನೃತ್ಯ ನಡೆಯಿತು. ಶ್ರೀಬಸವೇಶ್ವರ ಮತ್ತು ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಲಾಯಿತು. ಜಾನಪದ ಕಲಾ ತಂಡಗಳೊಂದಿಗೆ ಪಟ್ಟಣದ ರಾಜ ಬೀದಿಯಲ್ಲಿ ಶ್ರೀಬಸವೇಶ್ವರ ಭವ್ಯ ಮೆರವಣಿಗೆ ನೆರವೇರಿತು.
 ಕನಕಪುರ ಮರಳೆ ಗವಿ ಮಠದ ಮುಮ್ಮಡಿ ಶಿವರುದ್ರಸ್ವಾಮೀಜಿ, ಗದ್ದುಗೆ ಮಠದ ಮಹಂತಸ್ವಾಮಿ, ಕಂಚಗಲ್ ಬಂಡೇಮಠದ ಬಸವಲಿಂಗಸ್ವಾಮಿ, ಗುಮ್ಮಸಂದ್ರ ಮಠದ ಚಂದ್ರಶೇಖರಸ್ವಾಮಿ, ಮೂಡಲ ಮಠದ ಪಂಚಾಕ್ಷರಿ ಸ್ವಾಮಿ, ಚಿಲುಮೆ ಮಠದ ಬಸವಲಿಂಗಸ್ವಾಮಿ, ಶಾಸಕ ಎಚ್.ಸಿ. ಬಾಲಕೃಷ್ಣ, ಕೆಪಿಸಿಸಿ ಸದಸ್ಯ ಎ.ಮಂಜು, ಪುರಸಭಾ ಸದಸ್ಯರಾದ ಎಂ.ಎನ್. ಮಂಜುನಾಥ್, ಕೆ.ವಿ.ಬಾಲು, ಶಿವರುದ್ರಮ್ಮ ವಿಜಯಕುಮಾರ್, ಎಂ.ಬಿ. ಮಹೇಶ್, ಗೌರವ ಕಾರ್ಯದರ್ಶಿ ಮುದ್ದವೀರಪ್ಪ, ಚಿಕ್ಕಹೊನ್ನಯ್ಯ, ಹೊನ್ನಗಂಗಪ್ಪ, ಟಿ.ಸಿ. ಬಸವರಾಜು, ಗುಣಶೇಖರ್, ರುದ್ರಮೂರ್ತಿ, ಪ್ರಭುದೇವರು, ವೈ.ಎನ್.ನಂಜುಂಡಯ್ಯ, ಅರಸನಾಳ್, ಸಂಘದ ಪ್ರಧಾನ ಕಾರ್ಯದರ್ಶಿ ಸದಶಿವಯ್ಯ, ಖಜಾಂಚಿ ಬಿ.ದಿನೇಶ್, ಪಂಚಾಕ್ಷರಿ, ಗಂ. ದಯಾನಂದ, ಹೇಮಾ ಇತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.