ಬೆಂಗಳೂರು ಗ್ರಾಮಾಂತರ

ರಾತ್ರಿ ನೀರು ತರುತ್ತಿದ್ದ ಮಹಿಳೆ ಬಾವಿಗೆ ಬಿದ್ದು ಗಾಯ

Published On :

ರಾಮನಗರ: ಗ್ರಾಮದ ಹೊರ ವಲಯದ ತೋಟದಿಂದ ನಡುರಾತ್ರಿ ನೀರು ತುಂಬಿದ ಕೊಡ ಹೊತ್ತು ಬರುತ್ತಿದ್ದ ಮಹಿಳೆ ತೆರೆದ ಬಾವಿಗೆ ಬಿದ್ದು ಗಾಯಗೊಂಡ ಘಟನೆ ದೊಡ್ಡನಹಳ್ಳಿಯಲ್ಲಿ ಸಂಭವಿಸಿದೆ. ಘಟನೆಯ ಹೊಣೆ ಹೊತ್ತು ಸರ್ಕಾರವು ಸಾವು-ಬದುಕಿನೊಂದಿಗೆ ಸೆಣೆಸುತ್ತಿರುವ ಮಹಿಳೆಗೆ ಸೂಕ್ತ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ದೊಡ್ಡನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎದುರಾಗಿದೆ. ಗ್ರಾಮಸ್ಥರು ಹೊರ ವಲಯದಲ್ಲಿರುವ ಕೃಷಿ ಪಂಪ್ ಸೆಟ್‌ಗಳ ಬಳಿ ತೆರಳಿ ನೀರು ತರುತ್ತಿದ್ದಾರೆ. ಗ್ರಾಮದ ಸರೋಜಮ್ಮ ಅವರು ಶುಕ್ರವಾರ ರಾತ್ರಿ ನೀರು ತುಂಬಿಸಿಕೊಂಡು ಕೊಡ ಹೊತ್ತು ಬರುತ್ತಿದ್ದಾಗ 40 ಅಡಿ ಆಳದ ತೆರೆದ ಬಾವಿಗೆ ಬಿದ್ದಿದ್ದರು. ವಿಷಯ ತಿಳಿದ ಗ್ರಾಮಸ್ಥರು ಬಾವಿಯಿಂದ ಮೇಲೆತ್ತಿ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದ್ದರು.  ಬೆನ್ನು ಮೂಳೆ ಮುರಿತಕ್ಕೊಳಗಾದ ಗಾಯಾಳುವನ್ನು ಸ್ಟ್ರೆಚರ್ ಮೇಲೆ ಮಲಗಿಸಿಕೊಂಡು ಜಿಲ್ಲಾಧಿಕಾರಿ ಕಚೇರಿ ಎದುರು ತಂದಿಟ್ಟ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ಕಾರ್ಯಕರ್ತರು ಘಟನೆಗೆ ಜಿಲ್ಲಾಡಳಿತ, ತಾ.ಪಂ., ಗ್ರಾ.ಪಂ. ಕಾರಣವೆಂದು ಆರೋಪಿಸಿತು. ಜನ-ಜಾನುವಾರುಗಳಿಗೆ ಕುಡಿಯಲು ನೀರೊದಗಿಸದ ಜಿಲ್ಲಾಡಳಿವೇ ಘಟನೆಗೆ ನೇರ ಕಾರಣವಾಗಿದ್ದು, ಗಾಯಾಳು ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕೆಂದು ಆಗ್ರಹಿಸಿದರು. ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಯನ್ನು ತಕ್ಷಣ ಅಮಾನತುಪಡಿಸಬೇಕು, ಗಾಯಾಳುವಿಗೆ ಪರಿಹಾರ ನೀಡಬೇಕು ಮತ್ತು ಜಿಲ್ಲಾದ್ಯಂತ ಸಮರ್ಪಕ ಕುಡಿಯುವ ನೀರು ಪೂರೈಸಬೇಕು ಎಂದು ಸಂಘಟನೆ ರಾಜ್ಯಾಧ್ಯಕ್ಷ ರಮೇಶಗೌಡ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ, ಇಂತಹ ಪ್ರಕರಣಗಳಿಗೆ ಜಿಲ್ಲಾಡಳಿತದಿಂದ ಪರಿಹಾರ ಸಿಗದು. ಘಟನೆ ಕುರಿತು ಸರ್ಕಾರದ ಗಮನಕ್ಕೆ ತಂದು, ಪರಿಹಾರ ನೀಡುವಂತೆ ಶಿಫಾರಸು ಮಾಡುವುದಾಗಿ ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ಪಾರ್ಥಸಾರಥಿ, ಬಿಳಿಗೌಡ, ಸತೀಶ್, ಕೆಂಚೇಗೌಡ, ಚಿಕ್ಕತಾಯಮ್ಮ, ಸರೋಜಮ್ಮ, ಯೋಗೇಶ್, ಲಕ್ಷ್ಮಮ್ಮ, ರಂಜಿತ್‌ಗೌಡ, ನಾಗರತ್ನ, ಶ್ರೀಧರ್, ಮಹೇಶ್, ರಾಜು ಮತ್ತಿತರರು ಪಾಲ್ಗೊಂಡಿದ್ದರು. ಪ್ರತಿಭಟನೆ ಬಳಿಕ ಗಾಯಾಳುವನ್ನು ಚಿಕಿತ್ಸೆಗಾಗಿ ಪುನಃ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಅಪರಿಚಿತ ವ್ಯಕ್ತಿ ಸಾವು
ಚನ್ನಪಟ್ಟಣ: ಅಪರಿಚಿತ ವ್ಯಕ್ತಿಯೊಬ್ಬ ಸಾವನ್ನಪ್ಪಿರುವ ಘಟನೆ ಪಟ್ಟಣದ ಸಾತನೂರು ವೃತ್ತದಲ್ಲಿ ಸಂಭವಿಸಿದೆ.
ಸುಮಾರು 55 ವರ್ಷ ವಯಸ್ಸಿನ ವ್ಯಕ್ತಿ ಸಾವಿಗೀಡಾಗಿದ್ದು ಮೃತನ ವಾರಸುದಾರರು ಪತ್ತೆಯಾಗದ ಹಿನ್ನೆಲೆಯಲ್ಲಿ ಶವವನ್ನು ರಾಜರಾಜೇಶ್ವರಿ ಆಸ್ಪತ್ರೆಯ ಶವಾಗಾರದಲ್ಲಿ ಇರಿಸಲಾಗಿದೆ. ಈ ಸಂಬಂಧ ಪೂರ್ವ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.