ಚುನಾವಣಾ ಅಕ್ರಮ ಸಂಭವಿಸದಂತೆ ಕ್ರಮ ವಹಿಸಿ
ಕ.ಪ್ರ.ವಾರ್ತೆ ರಾಮನಗರ ಮಾ.26
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಚುನಾವಣಾ ಅಕ್ರಮಗಳು ಸಂಭವಿಸದಂತೆ ಎಚ್ಚರಿಕೆ ವಹಿಸಲು ಹಾಗೂ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಜಿಲ್ಲಾಧಿಕಾರಿ ವಿ.ಶ್ರೀರಾಮರೆಡ್ಡಿ ಅವರು ವಿವಿಧ ತಂಡಗಳನ್ನು ರಚಿಸಿ ಆದೇಶ ಹೊರಡಿಸಿದ್ದಾರೆ.
ಚುನಾವಣಾ ಲೆಕ್ಕಪರಿಶೋಧನಾ ತಂಡ, ನೀತಿ ಸಂಹಿತೆ ಜಾರಿ ತಂಡ, ವೀಡಿಯೋ ಸರ್ವೆಲೆನ್ಸ್ತಂಡ, ವಿಡಿಯೋ ವೀಕ್ಷಣಾ ತಂಡ, ತೀವ್ರ ನಿಗಾ ತಂಡ, ಮಾಧ್ಯಮ ಪ್ರಮಾಣ ಹಾಗೂ ನಿಗಾ ಸಮಿತಿಗಳು ರಚಿತಗೊಂಡಿವೆ. ಅಲ್ಲದೆ, ಜಿಲ್ಲೆ ಹಾಗೂ ತಾಲೂಕು ಹಂತಗಳಲ್ಲಿ ದಿನದ 24 ಗಂಟೆಯೂ ನಿರಂತರ ಕಾರ್ಯನಿರ್ವಹಿಸುವ ಕಂಟ್ರೋಲ್ ರೂಂಗಳನ್ನು ತೆರೆಯಲಾಗಿದೆ. ಕಂಟ್ರೋಲ್ ರೂಂಗಳಲ್ಲಿ ಆನ್ಲೈನ್ನಲ್ಲಿ ಹಾಗೂ ದೂರವಾಣಿ ಮೂಲಕ ದೂರುಗಳನ್ನು ದಾಖಲಿಸುವುದರ ಜತೆಗೆ ಮತದಾರರ ಅರ್ಜಿ ನಮೂನೆಗಳನ್ನು ಸ್ವೀಕರಿಸಲು ಸಹ ಕ್ರಮ ವಹಿಸಲಾಗಿದೆ.
ತರಬೇತಿ ಕಾರ್ಯಕ್ರಮ: ತಂಡಗಳ ಮುಖ್ಯಸ್ಥರು ಹಾಗೂ ಸಹಾಯಕರುಗಳಿಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ತರಬೇತಿ ಕಾರ್ಯಕ್ರಮ ನಡೆಯಿತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಜಿಲ್ಲಾ ವ್ಯಾಪ್ತಿಯಲ್ಲಿ ಚುನಾವಣೆಯು ನಿಷ್ಪಕ್ಷಪಾತ ಹಾಗೂ ಶಾಂತ ರೀತಿಯಲ್ಲಿ ನಡೆಯಲು ಹಲವು ಸಮಿತಿಗಳನ್ನು ರಚಿಸಿದ್ದಾರೆ. ಸಮಿತಿಗಳಿಗೆ ನೀಡಿರುವ ಅಧಿಕಾರವನ್ನು ಸಮರ್ಪಕವಾಗಿ ಬಳಸಿಕೊಂಡು ಕಾರ್ಯನಿರ್ವಹಿಸಿ, ಚುನಾವಣಾ ಯಶಸ್ಸಿಗೆ ಸಹಕರಿಸಬೇಕೆಂದು ಕೋರಿದರು.
ವಿಚಕ್ಷಣ ದಳಗಳ ರಚನೆ: ಚುನಾವಣಾ ಕೆಲಸ ಕಾರ್ಯಗಳನ್ನು ಲಘುವಾಗಿ ಪರಿಗಣಿಸದೆ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ಎಲ್ಲ ಅಧಿಕಾರಿಗಳು ಕೈಜೋಡಿಸಬೇಕಿದ್ದು, ನೀತಿ ಸಂಹಿತೆ ಜಾರಿ ತಂಡದೊಂದಿಗೆ ಕೊನೆ 2 ದಿನಗಳ ಅವಧಿಯಲ್ಲಿ ಕಾರ್ಯನಿರ್ವಹಿಸಲು ಜಿಲ್ಲಾದ್ಯಂತ 20 ವಿಚಕ್ಷಣ ದಳಗಳನ್ನು ರಚಿಸಲಾಗಿದೆ. ಚುನಾವಣಾ ಅಕ್ರಮಗಳು, ಮತದಾರರ ಓಲೈಸುವಿಕೆ, ಒತ್ತಡ ಹೇರುವುದು, ಆಮಿಷ ಒಡ್ಡುವುದು, ಹಣ, ಮದ್ಯ ಹಂಚುವುದು, ಕೊಡುಗೆ ಇತ್ಯಾದಿಗಳನ್ನು ಮತದಾರರಿಗೆ ನೀಡುವುದು ಕಂಡುಬಂದಲ್ಲಿ ಈ ದಳವು ತಕ್ಷಣವೇ ಕಾರ್ಯಪ್ರವೃತ್ತವಾಗಲಿದೆ ಎಂದು ತಿಳಿಸಿದರು.
ಜಿಲ್ಲಾ ವ್ಯಾಪ್ತಿಯ ಗಡಿಗಳಲ್ಲಿಯೂ ಸಹ 11 ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು, ಪೊಲೀಸ್, ಆರ್.ಟಿ.ಓ, ವಾಣಿಜ್ಯ ತೆರಿಗೆ, ಅರಣ್ಯ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತೀವ್ರ ನಿಗಾ ತಂಡವು ಜಿಲ್ಲೆಗೆ ಬಂದು ಹೋಗುವ ವಾಹನಗಳ ಮೇಲೆ ಹದ್ದಿನ ಕಣ್ಣಿಟ್ಟು ಅಕ್ರಮಗಳು ಸಂಭವಿಸದಂತೆ ಎಚ್ಚರಿಕೆ ವಹಿಸುತ್ತವೆ ಎಂದರು.
ಯಾವುದೇ ವಾಹನದಲ್ಲಿ ಅಕ್ರಮವಾಗಿ ಹಣ, ಮದ್ಯ, ಕೊಡುಗೆಗಳನ್ನು ಸಾಗಿಸುವುದು ಕಂಡುಬಂದಲ್ಲಿ ಅಂತಹ ವಾಹನಗಳನ್ನು ಜಫ್ತಿ ಮಾಡುವಂತೆ ಸೂಚಿಸಿದರು. ತಂಡವು ಯಾವುದಾದರೂ ನೀತಿ ಸಂಹಿತೆ ಉಲ್ಲಂಘನೆ ಪ್ರಕರಣಗಳನ್ನು ದಾಖಲಿಸಿದಾಗ ಅವುಗಳ ಸಂಪೂರ್ಣ ದಾಖಲೀಕರಣಕ್ಕಾಗಿ ವಿಡಿಯೋ ಸರ್ವಲೆನ್ಸ್ ತಂಡವು ಕಾರ್ಯನಿರ್ವಹಿಸಲಿದೆ ಎಂದು ವಿವರಿಸಿದರು. ಗೋಡೆ ಬರಹ ನಿಷಿದ್ಧವಾಗಿದ್ದು, ಬಂಟಿಂಗ್ಸ್, ಫ್ಲೆಕ್ಸ್, ಹೋರ್ಡಿಂಗ್ಸ್ , ಕರಪತ್ರ ಇತ್ಯಾದಿಗಳ ಮೂಲಕ ಪೂರ್ವಾನುಮತಿ ಪಡೆದು ಪ್ರಚಾರ ಮಾಡಬಹುದಾಗಿದೆ. ಉಲ್ಲಂಘಿಸಿದವರ ವಿರುದ್ಧ ಕಾನೂನು ರೀತ್ಯ ಕ್ರಮ ಜರುಗಿಸಲಾಗುವುದು ಎಂದರು.
ಗೋಡೆ ಮೇಲೆ ಭಿತ್ತಿಪತ್ರಗಳನ್ನು ಅಂಟಿಸಿ ಸೌಂದರ್ಯಕ್ಕೆ ಧಕ್ಕೆ ತರುವುದನ್ನು ಸಹ ನಿಷೇಧಿಸಲಾಗಿದೆ ಎಂದು ಈ ಸಂದರ್ಭದಲ್ಲಿ ತಿಳಿಸಿದ ಜಿಲ್ಲಾಧಿಕಾರಿಗಳು ಚುನಾವಣಾ ಕಾರ್ಯಕ್ಕೆ ಸಹಕಾರ ನೀಡದವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯನ್ವಯ ಪ್ರಕರಣ ದಾಖಲಿಸುವಂತೆ ಸೂಚಿಸಿದರು. ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳಿಗೆ ರು.16 ಲಕ್ಷ ಮಿತಿಗೊಳಪಟ್ಟು ವೆಚ್ಚ ಮಾಡಲು ಅನುಮತಿ ಇದ್ದು, ಚುನಾವಣೆ ಮುಗಿದ ಒಂದು ತಿಂಗಳೊಳಗಾಗಿ ವೆಚ್ಚದ ವಿವರವನ್ನು ಜಿಲ್ಲಾ ಚುನಾವಣಾಧಿಕಾರಿಗೆ ಸಲ್ಲಿಸಬೇಕಿದೆ. ಉಲ್ಲಂಘಿಸಿದ್ದಲ್ಲಿ 3 ವರ್ಷ ಅನರ್ಹತೆ ಶಿಕ್ಷೆಯನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು. ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ, ಚುನಾವಣಾ ತಹಸೀಲ್ದಾರ್ ಹೊನ್ನಸ್ವಾಮೇಗೌಡ ಹಾಗೂ ತಂಡಗಳ ಮುಖ್ಯಸ್ಥರು ಹಾಗೂ ಸಹಾಯಕರುಗಳು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

