ಕಲೆ, ಸಂಸ್ಕೃತಿ ಎಲ್ಲರೂ ಪ್ರೀತಿಸಲಿ
ನೆಲಮಂಗಲ: ಕಲೆ, ಸಂಸ್ಕೃತಿಯನ್ನು ಎಲ್ಲರೂ ಪ್ರೀತಿಸಬೇಕು, ಗೌರವಿಸಬೇಕು. ಆಗ ಮಾತ್ರ ನಮ್ಮ ಸಂಸ್ಕೃತಿಯು ಉಳಿಯಲು ಸಾಧ್ಯ ಎಂದು ಕವಿ, ಚಿಂತಕ ಪ್ರೊ.ಕೆ.ಬಿ.ಸಿದ್ದಯ್ಯ ಹೇಳಿದರು. ಅವರು ಭಾನುವಾರ ಪಟ್ಟಣದ ದಿವ್ಯಜ್ಯೋತಿ ಕಲಾ ಕೇಂದ್ರ ಹಾಗೂ ಸಂಸ್ಕೃತಿ ಸಚಿವಾಲಯ ಸಹಯೋಗದಲ್ಲಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಪ್ರತಿಯೊಂದು ಕಾರ್ಯಕ್ರಮವು ಯಶಸ್ವಿಯಾಗಲು ಸ್ತ್ರೀ ಇರಬೇಕು. ಸಮಾಜವನ್ನು ನಾಗರಿಕತೆಯನ್ನು ಸಂಸ್ಕೃತಿಯನ್ನು ಬೆಳೆಸಿ ಉಳಿಸುವಲ್ಲಿ ಮಹಿಳೆಯರ ಪಾತ್ರ ಅತೀ ಅಮೂಲ್ಯ. ಆದ್ದರಿಂದ ಸಮಾನತೆಯ ದೃಷ್ಟಿಕೋನದಿಂದ ಸ್ತ್ರೀಯರನ್ನು ಗೌರವದಿಂದ ಕಂಡಾಗ ಮಾತ್ರ ಕುಟುಂಬದ ಘನತೆ, ಸಮಾಜದ ಘನತೆ, ರಾಷ್ಟ್ರದ ಘನತೆ ಉಳಿಯಲು ಸಾಧ್ಯ ಎಂದರು. ಇಡೀ ಪ್ರಪಂಚವನ್ನು ನೋಡಿದಾಗ ನಮ್ಮ ದೇಶದಲ್ಲಿರುವ ಸಂಸ್ಕೃತಿ, ನಾಗರಿಕತೆ ಬೇರಾವ ರಾಷ್ಟ್ರದಲ್ಲಿ ಇಲ್ಲ. ಆದ್ದರಿಂದ ನಮ್ಮ ದೇಶದ ಬಗ್ಗೆ ಹೆಮ್ಮೆ ಎನಿಸುತ್ತದೆ ಎಂದು ಎಲ್.ಕೃಷ್ಣಮೂರ್ತಿ ಹೇಳಿದರು. ಹಿರಿಯ ಕಲಾವಿದ ಎಂ.ಪಿ.ಎಸ್.ಕುಮಾರ್ ಮಾತನಾಡುತ್ತಾ ಈ ಸಂಸ್ಥೆಯು ಸಾಂಸ್ಕೃತಿಕವಾಗಿ ತೊಡಗಿಸಿಕೊಂಡು ಉತ್ತಮ ಕಾರ್ಯಕ್ರಮ ನೀಡುತ್ತಿರುವುದು ಇಂದಿನ ಯುವ ಜನಾಂಗಕ್ಕೆ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಹಕಾರಿಯಾಗಿದೆ ಎಂದು ತಿಳಿಸಿದರು. ತ್ಯಾಮಗೊಂಡ್ಲು ಸರ್ಕಾರಿ ಪದವಿಪೂರ್ವ ಕಾಲೇಜಿನ ಉಪನ್ಯಾಸಕ ಹಾಗೂ ಜಾನಪದ ವಿದ್ವಾಂಸ ಕಂಟಲಗೆರೆ ಸಣ್ಣಹೊನ್ನಯ್ಯ ಮಾತನಾಡಿದರು. ಡಾ.ಗಿರೀಶ್ ಕಾರ್ನಾಡ್ ಅವರ ನಾಟಕವನ್ನು ಮತ್ತು ಎನ್.ಎಸ್.ರಾವ್ ಅವರ ವಿಷಜ್ವಾಲೆ ಎಂಬ ಐತಿಹಾಸಿಕ ನಾಟಕವನ್ನು ಪ್ರದರ್ಶಿಸಲಾಯಿತು. ಮೇಕಪ್ ಕೃಷ್ಣಪ್ಪ, ದಿವ್ಯಜ್ಯೋತಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ರೇಣುಕಾರಾಧ್ಯ, ಹಾಗೂ ಸಂಸ್ಥೆಯ ಸಿಬ್ಬಂದಿ ವರ್ಗದವರಾದ ಎಸ್.ಶ್ರೀನಿವಾಸ, ಎಸ್.ಪ್ರಕಾಶ್, ವಿಜಯ್ಕುಮಾರ್, ಮಹೇಶ್, ವೆಂಕಿ, ವೆಂಕಟೇಶ್ ಚೌಥಾಯಿ ಇದ್ದರು.
ಧರ್ಮಪ್ರಜ್ಞೆ, ಜಾಗೃತಿಯಿಂದ ಸದೃಢ ಭವಿಷ್ಯ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮಾ.31
ಧಾರ್ಮಿಕ ಚಿಂತನೆಯ ಪರಮೋಚ್ಚ ಜ್ಞಾನಿ ನೈಜ ಮಾನವ ಕುಲದ ಉದ್ಧಾರಕನಾಗುತ್ತಾನೆ. ಕೇವಲ ಉಪದೇಶದಿಂದ ಜಗತ್ತಿನಲ್ಲಿ ಸಾಧನೆಯಾಗುವುದು ಏನೂ ಇಲ್ಲ. ಬದಲಿಗೆ ವಿವೇಕ ಶೂನ್ಯತೆ ಆವರಿಸುತ್ತದೆ. ಧರ್ಮಪ್ರಜ್ಞೆ ಮತ್ತು ಜಾಗೃತಿ ಮಾತ್ರ ಭವಿಷ್ಯವನ್ನು ಸದೃಢಗೊಳಿಸುತ್ತದೆ ಎಂದು ರಾಮಕೃಷ್ಣ ವಿವೇಕಾನಂದಾಶ್ರಮದ ಶ್ರೀನಿರ್ಭಯಾನಂದ ಸರಸ್ವತಿ ಸ್ವಾಮೀಜಿ ಹೇಳಿದರು. ಇಲ್ಲಿನ ರಂಗಪ್ಪ ವೃತ್ತದಲ್ಲಿರುವ ಶ್ರೀ ಶಿರಡಿ ಸಾಯಿಬಾಬಾ ಮಂದಿರದ ಪ್ರಥಮ ವರ್ಷದ ವಾರ್ಷಿಕೋತ್ಸವ ಸಮಾರಂಭದಲ್ಲಿ ಭಾಗವಹಿಸಿ ಅವರು ಧರ್ಮೋಪದೇಶ ಉಪನ್ಯಾಸ ನೀಡಿ ಮಾತನಾಡಿದರು. ನಂತರ ಮಾತನಾಡಿದ ಶ್ರೀವೀರೇಶಾನಂದ ಸರಸ್ವತಿ ಸ್ವಾಮೀಜಿ, ವಿವೇಕಾನಂದರು ದೇಶದ ಸಾಂಸ್ಕೃತಿಕ ರಾಯಭಾರವನ್ನು ಪ್ರಪಂಚದಾದ್ಯಂತ ವಹಿಸಿದ್ದರು. ಅವರ ಮಾರ್ಗದರ್ಶನ ಈ ದೇಶಕ್ಕೆ ಎಂದೆಂದೂ ಅಗತ್ಯವಿದೆ. ಧರ್ಮದ ಬಗ್ಗೆ ಇತ್ತೀಚೆಗೆ ಅಜ್ಞಾನಿಗಳೂ ಮಾತನಾಡಲು ಆರಂಭಿಸಿರುವುದು ದುರಂತ. ಪ್ರಜ್ಞಾವಂತಿಕೆಯ ಹೆಸರಿನಲ್ಲಿ ಧಾರ್ಮಿಕ ವಿಚಾರಗಳನ್ನು ಅಲ್ಲಗೆಳೆಯುವ ಜನಕ್ಕೆ ಧಾರ್ಮಿಕ ಪ್ರಜ್ಞೆ ಇದೆಯೇ ಎಂಬುದು ಮುಖ್ಯ ಎಂದರು.
ಜೆಡಿಎಸ್ ಸಮಾವೇಶಕ್ಕೆ ಅನುಮತಿ ನಿರಾಕರಣೆ
ರಾಮನಗರ: ನಗರದಲ್ಲಿ ಭಾನುವಾರ ನಡೆಯಬೇಕಿದ್ದ ಜೆಡಿಎಸ್ ಮಹಿಳಾ ಕಾರ್ಯಕರ್ತರ ಸಮಾವೇಶಕ್ಕೆ ಜಿಲ್ಲಾಧಿಕಾರಿ ನವೀನ್ರಾಜ್ ಸಿಂಗ್ ಅನುಮತಿ ನಿರಾಕರಿಸಿದ ಹಿನ್ನೆಲೆಯಲ್ಲಿ ಸಮಾವೇಶವು ರದ್ದುಗೊಂಡಿದೆ. ನಗರದ ವಿವೇಕಾನಂದನಗರದಲ್ಲಿ ಸಮಾವೇಶವನ್ನು ನಡೆಸಲು ತೀರ್ಮಾನಿಸಲಾಗಿತ್ತು. ಸಮಾವೇಶ ನಡೆಸಲು 48 ತಾಸು ಮುನ್ನ ಅನುಮತಿ ಕಡ್ಡಾಯ. ಆದರೆ ಜೆಡಿಎಸ್ ಮುಖಂಡರು ಶನಿವಾರವಷ್ಟೇ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದರು. 48 ತಾಸು ಮುನ್ನ ಅರ್ಜಿ ಸಲ್ಲಿಸಿಲ್ಲ ಎನ್ನುವ ಕಾರಣ ನೀಡಿ ಸಮಾವೇಶಕ್ಕೆ ಜಿಲ್ಲಾಧಿಕಾರಿ ಅನುಮತಿ ನಿರಾಕರಿಸಿದ್ದಾರೆ.
ಆದಿಶಕ್ತಿ ಬಿಸಿಲು ಮಾರಮ್ಮದೇವಿ ಹಬ್ಬ ಇಂದಿನಿಂದ
ಮಾಗಡಿ: ಪಟ್ಟಣದ ತಿರುಮಲೆ, ಹೊಸಪೇಟೆ ಗ್ರಾಮದಲ್ಲಿ ಆದಿಶಕ್ತಿ ಬಿಸಿಲು ಮಾರಮ್ಮದೇವಿ ಗ್ರಾಮ ದೇವತೆ ಹಬ್ಬವನ್ನು ಏ.1 ಮತ್ತು 2 ರಂದು ಅದ್ಧೂರಿಯಾಗಿ ಏರ್ಪಡಿಸಲಾಗಿದೆ ಎಂದು ಅರ್ಚಕ ತಿರುಮಲಯ್ಯ ತಿಳಿಸಿದ್ದಾರೆ. ಗ್ರಾಮ ದೇವತೆ ಹಬ್ಬದ ಪ್ರಯುಕ್ತ ಭಾನುವಾರ ಜಾಗರದ ಉತ್ಸವ ಮತ್ತು ಸಂಜೆ ರಾಜಬೀದಿ ಕುದುರೆ ಉತ್ಸವ ಅರೆ, ತಮಟೆ ಮಂಗಳವಾದ್ಯದೊಂದಿಗೆ ವಿಜೃಂಭಣೆಯಿಂದ ನೆರವೇರಿತು. ಸೋಮವಾರ ಆದಿಶಕ್ತಿ ಬಿಸಿಲು ಮಾರಮ್ಮ ದೇವಿಗೆ ಮುತ್ತೈದೆಯರಿಂದ ತಂಬಿಟ್ಟಿನಾರತಿ ನೈವೇದ್ಯ ನಡೆಯಲಿದೆ.
ವಿದ್ಯೆ ಇಲ್ಲದ ಬಾಳು ಪ್ರಾಣಿಗಿಂತ ಕೀಳು
ಚನ್ನಪಟ್ಟಣ: ವಿದ್ಯೆ ಇಲ್ಲದವನ ಬಾಳು ಪ್ರಾಣಿಗಳಿಗಿಂತ ಕೀಳಾಗಿದ್ದು, ಶ್ರದ್ಧೆಯಿಂದ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ತೊಡಗಿಕೊಳ್ಳುವಂತೆ ಹೊಡಿಕೆ ಹೊಸಹಳ್ಳಿ ಸರ್ಕಾರಿ ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ನಾಗರಾಜು ತಿಳಿಸಿದರು. ತಾಲೂಕು ಸಮನ್ವಯ ಸಂಪನ್ಮೂಲಧಿಕಾರಿ ಅನಿಲ್, ಕ್ಷೇತ್ರ ಶಿಕ್ಷಣಾಧಿಕಾರಿ ಶಿವಪ್ಪ, ದೈಹಿಕ ಶಿಕ್ಷಣ ಪರಿವೀಕ್ಷಕ ಕೆಂಪರಾಜು, ಆದಿಚುಂಚನಗಿರಿಯ ಭಕ್ತನಾಥ ಸ್ವಾಮೀಜಿ, ಉಪನ್ಯಾಸಕ ರಮೇಶಯ್ಯ, ಶಿಕ್ಷಣ ಸಂಯೋಜಕ ಎ.ಪಿ.ಪುಟ್ಟೇಗೌಡ, ಸಿಆರ್ಪಿ ವೆಂಕಟೇಶ್ ಮುಂತಾದವರು ಉಪಸ್ಥಿತರಿದ್ದರು.
ಯುವಕ ನೇಣಿಗೆ ಶರಣು
ರಾಮನಗರ: ಜೀವನದಲ್ಲಿ ಜಿಗುಪ್ಸೆಗೊಂಡ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬಿಡದಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಿಡದಿ ಹೋಬಳಿಯ ಮೆರವೇಗೌಡನದೊಡ್ಡಿಯ ವಿಜಯ್ ಕುಮಾರ್ (25) ಮೃತ ದುರ್ದೈವಿ. ಭಾನುವಾರ ಬೆಳಗಿನ ಜಾವ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಶವ ಪರೀಕ್ಷೆ ನಂತರ ಮೃತದೇಹವನ್ನು ವಾರಸುದಾರರಿಗೆ ಒಪ್ಪಿಸಿದ್ದಾರೆ. ತನಿಖೆ ಮುಂದುವರಿದಿದೆ.
ಅಪಘಾತ: ಸಾವು
ಕನಕಪುರ: ಕನಕಪುರ ತಾಲೂಕು ಕೆಬ್ಬೆದೊಡ್ಡಿ ಗೇಟ್ ಸಮೀಪ ದ್ವಿಚಕ್ರವಾಹನ ಹಾಗೂ ಸರಕುಸಾಗಣೆ ವಾಹನಗಳ ನಡುವೆ ನಡೆದ ಅಪಘಾತವೊಂದರಲ್ಲಿ ದ್ವಿಚಕ್ರವಾಹನ ಚಾಲಕ ಸ್ಥಳದಲ್ಲಿಯೇ ಮೃತಪಟ್ಟ ಘಟನೆ ನಡೆದಿದೆ. ಮೃತರನ್ನು ಮೈಸೂರಿನ ರವಿಚಂದ್ರ ಕಾಂಬ್ಳೆ (29) ಎಂದು ಗುರುತಿಸಲಾಗಿದೆ. ಬೆಂಗಳೂರಿನಿಂದ ಮೈಸೂರಿಗೆ ಯೂನಿಕಾರ್ನ್ ಬೈಕ್ನಲ್ಲಿ ತೆರಳುತ್ತಿದ್ದ ರವಿಚಂದ್ರನಿಗೆ ಹಾರೋಹಳ್ಳಿ ಕಡೆಯಿಂದ ಬರುತ್ತಿದ್ದ ಟಾಟಾಏಸ್ ವಾಹನದೊಂದಿಗೆ ಡಿಕ್ಕಿಯಾದ ಪರಿಣಾಮ ಸವಾರನ ತಲೆಗೆ ತೀವ್ರಪೆಟ್ಟಾಗಿ ಅತಿಯಾದ ರಕ್ತಸ್ರಾವದಿಂದ ರವಿಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ. ಹಾರೋಹಳ್ಳಿ ಠಾಣೆಯಲ್ಲಿ ದೂರುದಾಖಲಾಗಿದ್ದು ಪೊಲೀಸರು ತನಿಖೆ ನಡೆಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

