ಭ್ರಷ್ಟ ಬಿಜೆಪಿ ಕಿತ್ತೊಗೆಯಿರಿ: ನಟ ಎಸ್.ನಾರಾಯಣ್ ಕರೆ
ಕ.ಪ್ರ. ವಾರ್ತೆ ದೊಡ್ಡಬಳ್ಳಾಪುರ ಮೇ.2
ಎಲ್ಲ ಹಂತಗಳಲ್ಲೂ ಭ್ರಷ್ಟವಾಗಿರುವ ಬಿಜೆಪಿ ಸರ್ಕಾರವನ್ನು ಕಿತ್ತೊಗೆದು ಅಭಿವೃದ್ಧಿ ಪರ ಜೆಡಿಎಸ್ ಸರ್ಕಾರ ಸ್ಥಾಪಿಸಲು ಇದು ಸೂಕ್ತ ಸಮಯ. ಮತದಾರರು ಜೆಡಿಎಸ್ ಬೆಂಬಲಿಸಿ ರಾಜ್ಯದಲ್ಲಿ ಅಭಿವೃದ್ಧಿಯ ಹೊಸ ಶಕೆ ಆರಂಭವಾಗಲು ಸಹಕಾರ ನೀಡಬೇಕು ಎಂದು ಚಿತ್ರ ನಿರ್ದೇಶಕ, ಜೆಡಿಎಸ್ ಮುಖಂಡ ಎಸ್.ನಾರಾಯಣ್ ಅಭಿಪ್ರಾಯಪಟ್ಟರು.
ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಸಿ.ಚನ್ನಿಗಪ್ಪ ಪರ ಮತ ಯಾಚಿಸಿ ಗುರುವಾರ ನಡೆದ ರೋಡ್ ಶೋದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ದೊಡ್ಡಬಳ್ಳಾಪುರದ ಅಭಿವೃದ್ಧಿಯನ್ನು ನಿರ್ಲಕ್ಷಿಸಿದ್ದೇ ಇಲ್ಲಿನ ಶಾಸಕರ ದೊಡ್ಡ ಸಾಧನೆಯಾಗಿದೆ ಎಂದು ಜರಿದ ಅವರು, ಮೂಲಸೌಕರ್ಯಗಳ ವಂಚನೆಯಿಂದ ಕ್ಷೇತ್ರ ಬಳಲುತ್ತಿದೆ. ರಾಜಧಾನಿಗೆ ಹತ್ತಿರವಿರುವ ತಾಲೂಕು ಈ ಮಟ್ಟಿಗೆ ನಿರ್ಲಕ್ಷ್ಯಕ್ಕೊಳಗಾಗಿದೆ ಎಂದರೆ ಅದರ ಸಂಪೂರ್ಣ ಹೊಣೆ ಕ್ಷೇತ್ರವನ್ನಾಳಿದ ಜನಪ್ರತಿನಿಧಿಗಳಿಗೇ ಸಲ್ಲುತ್ತದೆ. ತಾಲೂಕಿಗೆ ಸರ್ಕಾರಿ ತಾಂತ್ರಿಕ ಕಾಲೇಜು ತರುವಲ್ಲಿ, ಸರ್ಕಾರಿ ಆಸ್ಪತ್ರೆ, ಬಸ್ ನಿಲ್ದಾಣ ಸೇರಿದಂತೆ ಕನಿಷ್ಠ ಸೌಲಭ್ಯಗಳ ಸುಧಾರಣೆ ಕಡೆ ಕೂಡ ಗಮನ ಹರಿಸಿಲ್ಲ. ಹೀಗಾಗಿ ಜನ ಈ ಬಾರಿ ಬದಲಾವಣೆ ಬಯಸಿದ್ದು ಜೆಡಿಎಸ್ ಕೈಹಿಡಿಯಲಿದ್ದಾರೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದ ಅಭ್ಯರ್ಥಿ ಸಿ.ಚನ್ನಿಗಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಆರ್.ಗೋವಿಂದರಾಜು ಮಾತನಾಡಿ 4 ಟ್ಯಾಂಕರ್ಗಳ ಮೂಲಕ ಜನಕ್ಕೆ ನೀರು ಕೊಟ್ಟ ಮಾತ್ರಕ್ಕೇ ತಾವು ಭಗೀರಥರು ಎಂದು ಹೇಳಿಕೊಳ್ಳುವ ಜನ ನೈಜ ಕಾಳಜಿಯಿದ್ದರೆ ಕ್ಷೇತ್ರಕ್ಕೆ ಶಾಶ್ವತ ನೀರಾವರಿ ಯೋಜನೆ ಒದಗಿಸಲು ಶ್ರಮಿಸುತ್ತಿರುವ ಕುಮಾರಸ್ವಾಮಿ ಪರ ನಿಲ್ಲಬೇಕು. ಕೇವಲ ಚುನಾವಣೆ ಲಾಭಕ್ಕಾಗಿ ನೀರು ಪೂರೈಕೆ ಮಾಡಿದ ಮಾತ್ರಕ್ಕೆ ನೀರಿನ ಬವಣೆ ತಪ್ಪದು ಎಂದರು. ಅಲ್ಲದೆ ಕುಮಾರಸ್ವಾಮಿ ಅವರ ಮೇಲೆ 5 ಕೋಟಿ ಡೀಲ್ ಆರೋಪ ಹೊರಿಸುವ ಮೂಲಕ ಮುನೇಗೌಡರು ಸಲ್ಲದ ಆರೋಪ ಮಾಡುತ್ತಿದ್ದಾರೆ. ಇಂತಹವರಿಗೆ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಹೇಳಿದರು. ನೆಲದಾಂಜನೇಯಸ್ವಾಮಿ ದೇವಾಲಯದಿಂದ ಹೊರಟ ರೋಡ್ ಶೋ ತಾಲೂಕು ಕಚೇರಿ ವೃತ್ತದಲ್ಲಿ ಕೊನೆಗೊಂಡಿತು. ರೋಡ್ ಶೋದಲ್ಲಿ ಜೆಡಿಎಸ್ ನಗರಾಧ್ಯಕ್ಷ ತ.ನ.ಪ್ರಭುದೇವ್, ಮುಖಂಡರಾದ ಅಂಚರಹಳ್ಳಿ ಆನಂದ್, ಜಗನ್ನಾಥಾಚಾರ್, ಪುಟ್ಟಬಸವರಾಜು, ವಡ್ಡರಹಳ್ಳಿ ರವಿ, ಆಜಿಂಪಾಷಾ ಸೇರಿದಂತೆ ಅನೇಕ ನಗರಸಭಾ ಸದಸ್ಯರು, ಮುಖಂಡರು ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

