ಬೆಂಗಳೂರು ಗ್ರಾಮಾಂತರ

ನಿಗಮ-ಮಂಡಳಿಗೆ ಲಾಬಿ ಶುರು

Published On :

ಮತ್ತೀಕೆರೆ ಜಯರಾಮ್
ರಾಮನಗರ: ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದಿರುವ ಸಿದ್ದರಾಮಯ್ಯ ನೇತೃತ್ವ ಕಾಂಗ್ರೆಸ್ ಸರ್ಕಾರದಲ್ಲಿ ಜಿಲ್ಲೆಯಿಂದ ಸಚಿವ ಸ್ಥಾನಾಕಾಂಕ್ಷಿ ಶಾಸಕ ಒಬ್ಬರೇ. ಹೀಗಾಗಿ ಸಂಪುಟ ಸೇರ್ಪಡೆಗೆ ಜಿಲ್ಲೆಯಲ್ಲಿ ಪೈಪೋಟಿ ಇಲ್ಲ. ಬದಲಿಗೆ ನಿಗಮ-ಮಂಡಳಿ, ಸಹಕಾರ ಮತ್ತು ಸ್ಥಳೀಯ ಸಂಸ್ಥೆಗಳ ಹುದ್ದೆಗಳಿಗೆ ಲಾಬಿ ತೀವ್ರಗೊಂಡಿದೆ.
ಜಿಲ್ಲೆಯ 4 ಕ್ಷೇತ್ರಗಳ ಪೈಕಿ ಕನಕಪುರದ ಡಿ.ಕೆ.ಶಿವಕುಮಾರ್ ಒಬ್ಬರೇ ಕಾಂಗ್ರೆಸ್ ಶಾಸಕ. ಮುಖ್ಯಮಂತ್ರಿ ಹುದ್ದೆಯ ಆಕಾಂಕ್ಷಿಯಾಗಿದ್ದ ಒಕ್ಕಲಿಗ ಸಮುದಾಯದ ಪ್ರಬಲ ನಾಯಕರಾಗಿರುವ ಅವರಿಗೆ ಸಚಿವ ಸ್ಥಾನ ಸಾಧ್ಯತೆ ಬಹುತೇಕ ಖಚಿತವಾಗಿದೆ.
ಈಗೇನಿದ್ದರೂ ಜಿಲ್ಲೆಯಲ್ಲಿ ನಿಗಮ-ಮಂಡಳಿ, ಸಹಕಾರ ಮತ್ತು ಸ್ಥಳೀಯ ಸಂಸ್ಥೆಗಳ ನಾಮಕರಣ ಹುದ್ದೆಗಳ ಮೇಲೆ ಕಣ್ಣಿಟ್ಟವರದ್ದೇ ದೊಡ್ಡ ಮಟ್ಟದ ಲಾಬಿಯಾಗಿದೆ. ಪಕ್ಷ ನಿಷ್ಠರನ್ನು ಗುರುತಿಸಿ ಹುದ್ದೆ ನೀಡುವುದು ಮತ್ತು ಎಲ್ಲ ಆಕಾಂಕ್ಷಿಗಳನ್ನು ಸಂಬಾಳಿಸುವುದು ವರಿಷ್ಠರಿಗೆ ತಲೆಬಿಸಿ ತರಲಿದೆ.  
ರಾಜ್ಯ ಮಟ್ಟಕ್ಕೆ ಪೈಪೋಟಿ: ಈಗಾಗಲೇ ಕೇಂದ್ರ ರೇಷ್ಮೆ ಮಂಡಳಿ ಅಧ್ಯಕ್ಷರಾಗಿದ್ದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಯ್ಯದ್ ಜಿಯಾವುಲ್ಲಾ, ಪರಾಜಿತ ಅಭ್ಯರ್ಥಿಗಳ ಪೈಕಿ ಮರಿದೇವರು, ರಘುನಂದನ್ ರಾಮಣ್ಣ, ಟಿ.ಕೆ.ಯೋಗೇಶ್, ವಿಪ ಮಾಜಿ ಸದಸ್ಯ ಎಸ್.ರವಿ, ಮಾಜಿ ಶಾಸಕ ಡಿ.ಟಿ.ರಾಮು ಪುತ್ರ ಭಗತ್ ರಾಮ್, ಕೆಪಿಸಿಸಿ ಸದಸ್ಯ ಕೆ.ರಮೇಶ್, ಕನಕಪುರದ ಶ್ರೀಕಂಠು, ಸೂರನಹಳ್ಳಿ ಜಯರಾಮ್ ಸಹಜವಾಗಿಯೇ ರಾಜ್ಯ ಮಟ್ಟದ ನಿಗಮ-ಮಂಡಳಿ ಅಧ್ಯಕ್ಷ ಸ್ಥಾನಾಕಾಂಕ್ಷಿಗಳಾಗಿದ್ದಾರೆ.
ಮಾಜಿ ಶಾಸಕ ಸಿ.ಎಂ.ಲಿಂಗಪ್ಪ ಅವರಿಗೆ ವಿಧಾನ ಪರಿಷತ್ ಸದಸ್ಯ ಸ್ಥಾನ ಇಲ್ಲವೇ ಪ್ರಮುಖ ನಿಗಮ-ಮಂಡಳಿ ಅಧ್ಯಕ್ಷ ಹುದ್ದೆಯನ್ನು ಅನಾಯಾಸವಾಗಿ ಪಡೆಯಲು ಅರ್ಹತೆ, ಅವಕಾಶವಿದೆ. ಆದರೆ, ಅವರು ಲೋಕಸಭೆ ಚುನಾವಣೆಗೆ ಪಕ್ಷದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಅವರ ಪುತ್ರರ ಪೈಕಿ ಒಬ್ಬರಿಗೆ ನಾಮಕರಣ ಅವಕಾಶ ಸಾಧ್ಯತೆ ತಳ್ಳಿ ಹಾಕುವಂತಿಲ್ಲ. ಬೆಂಗಳೂರಿನ ಹೆಬ್ಬಾಳದಲ್ಲಿ ಕಾಂಗ್ರೆಸ್ ಟಿಕೆಟ್ ವಂಚಿತ ಮಾಜಿ ಸಚಿವ ಎಚ್.ಎಂ.ರೇವಣ್ಣ ಮೇಲ್ಮನೆ ಇಲ್ಲವೇ ಪ್ರಮುಖ ಸ್ಥಾನದ ನಿರೀಕ್ಷೆಯಲ್ಲಿದ್ದಾರೆ. ಚುನಾವಣೆ ಸಂದರ್ಭದಲ್ಲಷ್ಟೇ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾದ ಬಮೂಲ್ ಮಾಜಿ ಅಧ್ಯಕ್ಷ ಹಾಗೂ ಕೆಎಂಎಫ್ ನಿರ್ದೇಶಕ ಪಿ.ನಾಗರಾಜು ಅವರಿಗೆ ಸರ್ಕಾರದ ಬೆಂಬಲದೊಂದಿಗೆ ಕೆಎಂಎಫ್ ಅಧ್ಯಕ್ಷ ಹುದ್ದೆ ಗಿಟ್ಟಿಸುವುದೇ ಗುರಿ.
ಪ್ರಾಧಿಕಾರದತ್ತ ಚಿತ್ತ: ರಾಮನಗರ-ಚನ್ನಪಟ್ಟಣ ನಗರಾಭಿವೃದ್ಧಿ ಪ್ರಾಧಿಕಾರವು ಈ ಜಿಲ್ಲೆಯ ಮಟ್ಟಿಗೆ ಆಯಕಟ್ಟಿನ ಸಂಸ್ಥೆಯಾಗಿದೆ. ಇದರ ಅಧ್ಯಕ್ಷ ಸ್ಥಾನದ ಮೇಲೆ ರಾಮನಗರ ಮತ್ತು ಚನ್ನಪಟ್ಟಣದ ಹಲವರ ಚಿತ್ತ ನೆಟ್ಟಿದೆ. ಬಿಜೆಪಿ ಸರ್ಕಾರದಲ್ಲಿ ಪ್ರಾಧಿಕಾರದ ಅಧ್ಯಕ್ಷರಾಗಿದ್ದ ಕೆ.ಶೇಷಾದ್ರಿ ಈಗಲೂ ಹುದ್ದೆಯಲ್ಲಿ ಮುಂದುವರೆಯುವ ಇರಾದೆ ಹೊಂದಿದ್ದಾರೆ. ಸಿ.ಎನ್.ಆರ್.ವೆಂಕಟೇಶ್, ಕಾಂತರಾಜ್ ಪಟೇಲ್, ಉಮ್ಮರ್, ಆರಿಫ್ ಖುರೇಷಿ, ನಿಜಾಂ ಪಾಷ ಕೂಡ ರೇಸ್‌ಗೆ ಬರುವ ಸಂಭವವಿದೆ.
ಸ್ಥಳೀಯ ಸಂಸ್ಥೆಗಳು: ಬೆಂಗಳೂರು ಹಾಲು ಒಕ್ಕೂಟ, ರಾಮನಗರವೂ ಸಹಿತ 3 ಜಿಲ್ಲೆಗಳನ್ನೊಳಗೊಂಡ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್, 4 ತಾಲೂಕುಗಳಲ್ಲಿರುವ ಟಿಎಪಿಸಿಎಂಎಸ್, 3 ಕಡೆ ಇರುವ ಎಪಿಎಂಸಿ ಸೇರಿದಂತೆ ಸಹಕಾರ ಸಂಸ್ಥೆಗಳು, 4 ಪೌರ ಸಂಸ್ಥೆಗಳು, 2 ಪಟ್ಟಣ ಯೋಜನಾ ಪ್ರಾಧಿಕಾರಗಳ ನಾಮಕರಣಕ್ಕೂ ಲಾಬಿ ಈಗಾಗಲೇ ತೀವ್ರವಾಗುತ್ತಿದೆ.
ಚನ್ನಪಟ್ಟಣದಲ್ಲಿ ಎ.ಸಿ.ವೀರೇಗೌಡ, ಅರುಣಕುಮಾರ್, ಪಿ.ಡಿ.ರಾಜು, ರಾಮನಗರದಲ್ಲಿ ಜಯರಾಮಯ್ಯ, ದೊಡ್ಡವೀರೇಗೌಡ, ವಿ.ಎಚ್.ರಾಜು, ಆಂಜನಪ್ಪ, ಉಮಾಶಂಕರ್, ಮಾಗಡಿಯಲ್ಲಿ ಕೆ.ಎಚ್.ಕೃಷ್ಣಮೂರ್ತಿ, ಚಿಗಳೂರು ಗಂಗಾಧರ್, ಜಯರಾಮ್, ಮಂಜೇಶ್, ಅಶೋಕ್, ಬಿಡದಿ ರಾಮಚಂದ್ರ, ಕನಕಪುರದಲ್ಲಿ ವಿಜಯದೇವ್, ಡಿ.ಸಿ.ರಮೇಶ್ ಹೆಸರು ನಾಮಕರಣಕ್ಕೆ ಮುಂಚೂಣಿಯಲ್ಲಿವೆ.
ನಿಷ್ಠರಿಗೆ ಮನ್ನಣೆ: ಬಿಜೆಪಿ ಅಧಿಕಾರಾವಧಿಯಲ್ಲಿ ಜಿಲ್ಲೆಯ ಮಟ್ಟಿಗೆ ಪಕ್ಷ ಮತ್ತು ಸರ್ಕಾರಿ ನಾಮಕರಣದ ಪ್ರಮುಖ ಹುದ್ದೆಗಳನ್ನೆಲ್ಲಾ ವಲಸಿಗರೇ ಅನುಭವಿಸಿದ್ದರು. ಆ ಪೈಕಿ ಬಹುಪಾಲು ಮಂದಿ ಚುನಾವಣೆ ಸಂದರ್ಭದಲ್ಲಿ ಬಿಜೆಪಿಯಿಂದ ಅನ್ಯ ಪಕ್ಷಗಳಿಗೆ ಜಿಗಿದಿದ್ದಾರೆ.
ಈ ಬಾರಿ ಕಾಂಗ್ರೆಸ್‌ನಲ್ಲೂ ಜಿಗಿತವೀರರು ಹುದ್ದೆಗಾಗಿ ಹಗ್ಗ ಜಗ್ಗಾಟಕ್ಕೆ ಇಳಿಯುವ ಮುನ್ಸೂಚನೆ ಇದೆ. ಒಂದೊಮ್ಮೆ ಅವರಿಗೆ ಮಣೆ ಹಾಕಿದಲ್ಲಿ ನಿಷ್ಠರು ಅತೃಪ್ತರಾಗುವುದು ಸಹಜ. ನಾಮಕರಣಕ್ಕೆ ಕಾಂಗ್ರೆಸ್ ಅನುಸರಿಸುವ ಮಾನದಂಡದ ಮೇಲೆ ಎಲ್ಲವೂ ಅವಲಂಬಿತವಾಗಿದೆ.


ಡಿಕೆಶಿಯೇ ನಿರ್ಣಾಯಕ
ಆಯಾ ಜಿಲ್ಲಾ ಉಸ್ತುವಾರಿ ಸಚಿವರು , ಪ್ರಭಾವಿ ನಾಯಕರು ತಮ್ಮ ವ್ಯಾಪ್ತಿ ನಾಮಕರಣದಲ್ಲಿ ಪ್ರಮುಖ ಪಾತ್ರ ವಹಿಸುವುದು ಸರ್ವೆ ಸಾಮಾನ್ಯ. ಸದ್ಯದ ಮಟ್ಟಿಗೆ ರಾಮನಗರ ಜಿಲ್ಲೆಯಲ್ಲಿ ಡಿ.ಕೆ.ಶಿವಕುಮಾರ್ ಅವರೇ ಪ್ರಭಾವಿ ನಾಯಕ. ಉಸ್ತುವಾರಿ ಸಚಿವ ಸ್ಥಾನವೂ ಅವರ ಪಾಲಾಗುವ ಸಂಭವವಿರುವ ಕಾರಣಕ್ಕೆ ಅವರೇ ನಿರ್ಣಾಯಕರಾಗುತ್ತಾರೆ. ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ರಾಮನಗರ ವಿಷಯವಾಗಿ ಯಾವುದೇ ತೀರ್ಮಾನವಿದ್ದರೂ ಶಿವಕುಮಾರ್ ನಿಲುವನ್ನೇ ಅಬಲಂಬಿಸಿದೆ ಎನ್ನುವುದಕ್ಕೆ ಕಳೆದ ಚುನಾವಣೆಯ ಟಿಕೆಟ್ ಹಂಚಿಕೆಯೇ ಸಾಕ್ಷಿ. ಹೀಗಾಗಿ ಪ್ರಸ್ತುತ ನಾಮಕರಣ ಪ್ರಕ್ರಿಯೆಯಲ್ಲೂ ಶಿವಕುಮಾರ್ ಮಾತಿಗೇ ಮನ್ನಣೆ ಸಿಗಲಿದ್ದು, ಅವರ ಮೇಲೆ ಒತ್ತಡ ಹೆಚ್ಚಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.