ಎಂಎಸ್‌ಪಿಎಲ್ ಗಣಿಗಾರಿಕೆ ಪುನರಾರಂಭ
ಹೊಸಪೇಟೆ: ಎಂಎಸ್‌ಪಿಎಲ್ ಲಿಮಿಟೆಡ್ ಸಂಸ್ಥೆ ಇಲ್ಲಿನ ವ್ಯಾಸನಕೆರೆ ಪ್ರದೇಶದಲ್ಲಿ ಶುಕ್ರವಾರ ಗಣಿಗಾರಿಕೆ ಪುನರಾರಂಭಿಸಿದೆ. ಅದಕ್ಕೂ ಪೂರ್ವದಲ್ಲಿ ಕಂಪನಿ ರಾಜ್ಯ ಸರ್ಕಾರದ ಗಣಿ ಮತ್ತು ಭೂವಿಜ್ಞಾನ ಇಲಾಖೆ ನಿರ್ದೇಶಕರಿಂದ ಅನುಮತಿ ಪಡೆದಿದೆ. 2009ರ ಜನವರಿ ತಿಂಗಳಲ್ಲಿ ಈ ಪ್ರದೇಶದಲ್ಲಿ ಗಣಿಗಾರಿಕೆ ಸ್ಥಗಿತಗೊಂಡಿತ್ತು. ಖಾಸಗಿ ಕ್ಷೇತ್ರದಲ್ಲಿ ಹಿರಿಯ ಎನಿಸಿರುವ ಈ ಸಂಸ್ಥೆ, 347.22 ಹೆಕ್ಟೇರ್ ಗಣಿ ಪ್ರದೇಶ ಹೊಂದಿದೆ. ಪ್ರಸ್ತುತ 0.91 ಮಿಲಿಯನ್ ಟನ್ ಅದಿರು ಉತ್ಪಾದನೆ ಮಾಡಲು ಮಂಜೂರಾತಿ ದೊರೆತಿದೆ.
ಸುಪ್ರೀಂ ಕೋರ್ಟ್ ಕೇಂದ್ರ ಉನ್ನತಾಧಿಕಾರಿಗಳ ಸಮಿತಿ ರಚಿಸಿ, ಪುನರ್ವಸತಿ ಮತ್ತು ಸುಸ್ಥಿತಿ (ಆರ್ ಆ್ಯಂಡ್ ಆರ್) ಯೋಜನೆ ಕೈಗೊಳ್ಳಲು ಆದೇಶಿಸಿತ್ತು. ಅದರಂತೆ ಕೇಂದ್ರ ಉನ್ನತಾಧಿಕಾರಿಗಳ ಸಮಿತಿ ವರದಿ ಸಲ್ಲಿಸಿತ್ತು. ನಿಯಮಾನುಸಾರ ಸಮರ್ಪಕವಾಗಿ ಗಣಿ ಕಾರ್ಯ ನಿರ್ವಹಿಸಿದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಎಂಎಸ್‌ಪಿಎಲ್ ಸಂಸ್ಥೆಗೆ ಗಣಿ ಪುನರಾರಂಭಿಸಲು ಅನುಮತಿ ನೀಡಿದೆ.
ಹರ್ಷ ತಂದಿದೆ: ಈ ಕುರಿತು ಪ್ರತಿಕ್ರಿಯಿಸಿರುವ ಎಂಎಸ್‌ಪಿಎಲ್ ಸಂಸ್ಥೆಯ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ನಿರ್ದೇಶಕ ನರೇಂದ್ರಕುಮಾರ್ ಎ. ಬಲ್ಡೋಟ, ಗಣಿಗಾರಿಕೆ ಪುನರಾರಂಭಿಸುವಂತೆ ನೀಡಿರುವ ಆದೇಶ ತಮಗೆ ಹರ್ಷವನ್ನುಂಟು ಮಾಡಿದೆ. ಇಂತಹ ಸುದಿನಕ್ಕಾಗಿ ನಾವು ಹಲವು ದಿನಗಳಿಂದ ತಾಳ್ಮೆಯಿಂದ ಕಾಯುತ್ತಿದ್ದೆವು. ಏಕೆಂದರೆ ನಾವು ಮೊದಲಿನಿಂದಲೂ ವ್ಯವಸ್ಥಿತ ಮತ್ತು ವೈಜ್ಞಾನಿಕ ದೃಷ್ಟಿಯನ್ನಿಟ್ಟುಕೊಂಡು ಗಣಿ ಚಟುವಟಿಕೆ ಕೈಗೊಂಡಿದ್ದೇವೆ. ಅದೇ ರೀತಿಯ ಕಾಳಜಿಯನ್ನು ಮುಂದೆಯೂ ಮುಂದುವರಿಸಿಕೊಂಡು ಹೋಗುತ್ತೇವೆ. ಪರಿಸರ ರಕ್ಷಣೆಗೆ ಆದ್ಯತೆ ಕೊಡುತ್ತೇವೆ. ಈ ಪ್ರದೇಶದ ಸುತ್ತಮುತ್ತಲಿನ ವಾತಾವರಣ ಕಲುಷಿತಗೊಳ್ಳದಂತೆ, ಉದ್ಯೋಗಿಗಳ ಕಲ್ಯಾಣದ ಕಡೆಗೆ ಕೊಂಡೊಯ್ಯಲು ಸದಾ ಪ್ರಯತ್ನಿಸುತ್ತೇವೆ. ಅಷ್ಟೇ ಅಲ್ಲದೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಅವರು ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

