ಬೆಂಗಳೂರು ಗ್ರಾಮಾಂತರ

ದೊಡ್ಡಬಳ್ಳಾಪುರ ನಗರದಲ್ಲಿ 4461 ಅನೈರ್ಮಲ್ಯ ಶೌಚಾಲಯಗಳು

Published On :

ಕ.ಪ್ರ. ವಾರ್ತೆ, ದೊಡ್ಡಬಳ್ಳಾಪುರ, ಮೇ 18
ದೊಡ್ಡಬಳ್ಳಾಪುರ ನಗರಸಭೆ, ನಗರಾಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳ ಸಹಯೋಗದಲ್ಲಿ ಶನಿವಾರ ಇಲ್ಲಿನ ಪುರಭವನದಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು (ಕೈಯಿಂದ ಮಲ ತೆಗೆಯುವ ಕೆಲಸ ಮಾಡುವವರು) ಮತ್ತು ಇನ್‌ಸ್ಯಾನಿಟರಿ ಲ್ಯಾಟ್ರಿನ್ಸ್ (ಅನೈರ್ಮಲ್ಯ ಶೌಚಾಲಯ)ಗಳ ಅಸ್ತಿತ್ವದ ಸಮೀಕ್ಷೆ ಕುರಿತು ಗಣತಿದಾರರಿಗೆ ಹಾಗೂ ಮೇಲ್ವಿಚಾರಕರಿಗೆ ತರಬೇತಿ ಕಾರ್ಯಾಗಾರ ನಡೆಯಿತು.
ಕಾರ್ಯಕ್ರಮದಲ್ಲಿ ಬೆಂ.ಗ್ರಾ.ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ನಟರಾಜ್ ಮಾತನಾಡಿ,  ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಇಂದಿಗೂ ಮನುಷ್ಯರು ಅಪರೋಕ್ಷವಾಗಿ ಮಲಹೋರುವ ಪದ್ಧತಿ ನಡೆದುಕೊಂಡು ಬರುತ್ತಿದೆ. ತಿಪ್ಪೆಗುಂಡಿಗಳಲ್ಲಿ ಶೇಖರಣೆಯಾಗುವ ಮಲವನ್ನು ಯಂತ್ರಗಳನ್ನು ಬಳಸದೆ ಮನುಷ್ಯರು ಕೈಯಿಂದಲೇ ಮಲವನ್ನು ಹೊರುವುದು ನಿಷೇಧಿಸಲಾಗಿದೆ. ಈ ಕೃತ್ಯ ನಡೆದರೆ ಅದು ಶಿಕ್ಷಾರ್ಹ ಅಪರಾಧ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಸೂಚನೆಯಂತೆ ನಗರಸಭೆ, ಪುರಸಭೆ ವ್ಯಾಪ್ತಿಗಳಲ್ಲಿ ಮ್ಯಾನುಯಲ್ ಸ್ಕ್ಯಾವೆಂಜರ್‌ಗಳು(ಕೈಯಿಂದ ಮಲ ತೆಗೆಯುವ ಕೆಲಸ ಮಾಡುವವರು) ಮತ್ತು ಇನ್‌ಸ್ಯಾನಿಟರಿ ಲ್ಯಾಟ್ರಿನ್ಸ್(ಅನೈರ್ಮಲ್ಯ ಶೌಚಾಲಯ)ಗಳ ಕುರಿತ ಸಮೀಕ್ಷಾ ಕಾರ್ಯ ಹಮ್ಮಿಕೊಳ್ಳಲಾಗಿದೆ. ಸ್ಕ್ಯಾವೆಂಜರ್‌ಗಳ ಬದುಕನ್ನು ಹಸನುಗೊಳಿಸುವ ನಿಟ್ಟಿನಲ್ಲಿ ಇದು ಮಹತ್ವದ ಕೆಲಸ ಎಂದರು. ಮಲಹೊರುವ ಪದ್ಧತಿ ಆಧರಿಸಿ ಈ ಹಿಂದೆ ಕೆಜಿಎಫ್ ಮತ್ತು ಸವಣೂರಿನಲ್ಲಿ ನಡೆದಿದ್ದ ದುರಂತದ ಹಿನ್ನಲೆಯಲ್ಲಿ ಸ್ವಯಂ ಸೇವಾ ಸಂಸ್ಥೆಗಳು ದಾಖಲಿಸಿದ್ದ ದೂರಿನ ಮೇರೆಗೆ ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಸರ್ಕಾರದ ಸಾಮಾಜಿಕ ಮತ್ತು ಸಬಲೀಕರಣ ಮಂತ್ರಾಲಯದ ಸೂಚನೆ ಮೇರೆಗೆ ತಾಲೂಕು, ಜಿಲ್ಲಾ ಮತ್ತು ರಾಜ್ಯಮಟ್ಟದಲ್ಲಿ ಸಮೀಕ್ಷಾ ವರದಿಗಳನ್ನು ಕ್ರೋಢೀಕರಿಸಿ ಸಲ್ಲಿಸಬೇಕಿದೆ. ಈ ಹಂತದಲ್ಲಿ ಸಮೀಕ್ಷಾ ಕಾರ್ಯದ ಕುರಿತಾಗಿ ಇಲಾಖೆ ನೀಡಿರುವ ನೀಡಿರುವ ಸೂಚನೆಗಳನ್ನು ಚಾಚೂ ತಪ್ಪದೇ ಪಾಲಿಸಿ ವರದಿ ಸಲ್ಲಿಸಬೇಕಿದೆ ಎಂದರು.
ಪ್ರಮಾಣಪತ್ರ: ಆಯುಕ್ತ ಚಿಕ್ಕಣ್ಣ ಮಾತನಾಡಿ, ಸ್ಕ್ಯಾವೆಂಜರ್‌ಗಳ ಕುರಿತಂತೆ ಈಗಾಗಲೇ ಕೇಂದ್ರಕ್ಕೆ ಪ್ರಮಾಣಪತ್ರ ಸಲ್ಲಿಸಲಾಗಿದೆ. 2011ರ ಜನಗಣತಿಯಂತೆ ನಗರಸಭೆ ವ್ಯಾಪ್ತಿಯಲ್ಲಿ 4461 ಅನೈರ್ಮಲ್ಯ ಶೌಚಾಲಯಗಳು ಮತ್ತು ಶೂನ್ಯ ಸಂಖ್ಯೆಯ ಸ್ಕ್ಯಾವೆಂಜರ್‌ಗಳು ಇರುವ ಬಗ್ಗೆ ವರದಿಯಾಗಿರುವ ಹಿನ್ನಲೆಯಲ್ಲಿ ಸದರಿ ಅಂಶಗಳ ಕುರಿತಾಗಿ ಸಮೀಕ್ಷಾ ಪ್ರಕ್ರಿಯೆ ಮೇ 15ರಿಂದ ಜೂನ್ 30ರವರೆಗೆ ನಡೆಸಲಾಗುವುದು. ನಗರಸಭಾ ಕಚೇರಿಯಲ್ಲಿ ಖುದ್ದು ಹಾಜರಾಗಿ ಅಥವಾ ಕಚೇರಿ ಸಂಖ್ಯೆ 080-27628083ಗೆ ಸಂಪರ್ಕಿಸಿ ನಿಗದಿತ ನಮೂನೆಯಲ್ಲಿ ವಿವರಗಳನ್ನು ಭರ್ತಿ ಮಾಡಿ ಸ್ವಯಂ ಘೋಷಣೆ ಮಾಡಿಕೊಳ್ಳಬಹುದಾಗಿದೆ ಎಂದರು.
 ಜಿಲ್ಲಾ ಯೋಜನಾ ಸಂಯೋಜಕ ಅಶ್ವತ್ಥನಾರಾಯಣಗೌಡ, ನಗರಸಭಾ ಮುಖ್ಯಾಧಿಕಾರಿಗಳಾದ ಮಂಜುನಾಥ್, ಮುನಿಸ್ವಾಮಿ, ಉತ್ತಪ್ಪ, ಪ್ರಾಚಾರ್ಯ ಮಂಜುಳಾದೇವಿ ಸೇರಿದಂತೆ ನಗರಸಭೆ ಅಧಿಕಾರಿಗಳು, ಗಣತಿ ಅಧಿಕಾರಿಗಳು ಮತ್ತು ಮೇಲ್ವಿಚಾರಕರು ಭಾಗವಹಿಸಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.