ಕುಡಿಯುವ ನೀರು ಪೂರೈಕೆಗೆ ಅಗತ್ಯ ಕ್ರಮ
ಕ.ಪ್ರ.ವಾರ್ತೆ ದೊಡ್ಡಬಳ್ಳಾಪುರ ಮೇ 19-
ದೊಡ್ಡಬಳ್ಳಾಪುರದ ಜನತೆಗೆ ಮುಂಬರುವ ದಿನಗಳಲ್ಲಿ 5 ರುಗಳಿಗೆ 20 ಲೀಟರ್ನ ಶುದ್ಧೀಕರಿಸಿದ ಕುಡಿಯುವ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದಕ್ಕಾಗಿ ಘಟಕವನ್ನೂ ತೆರೆಯುವ ಸಿದ್ಧತೆಗಳು ನಡೆದಿವೆ ಎಂದು ಶಾಸಕ ಟಿ.ವೆಂಕಟರಮಣಯ್ಯ ಹೇಳಿದರು.
ಇಲ್ಲಿನ ಕನ್ನಡ ಜಾಗೃತ ಭವನದಲ್ಲಿ ಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಸಂಸ್ಥೆ ನೇತೃತ್ವದಲ್ಲಿ ನಡೆದ ರಂಗತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ನೀರಿನ ಸಮಸ್ಯೆ ಬಗೆಹರಿಸಲು ಹೋಬಳಿ ಕೇಂದ್ರಗಳು ಮತ್ತು ನಗರ ಪ್ರದೇಶಗಳಲ್ಲಿ ಈಗಾಗಲೇ 5 ಕಡೆ ಕೊಳವೆ ಬಾವಿಗಳನ್ನು ತೆರೆಯಲು ಯೋಚಿಸಲಾಗಿದೆ ಎಂದ ಅವರು ರಂಗತರಬೇತಿ ಶಿಬಿರದಲ್ಲಿ ಮಕ್ಕಳಿಗೆ ಉತ್ತಮ ಮಾರ್ಗದರ್ಶನ ದೊರೆತಿರುವುದು ಸಂತಸ ತಂದಿದೆ ಎಂದರು.
ಕಾರ್ಯಕ್ರಮದಲ್ಲಿ ಮಾತನಾಡಿದ ತಾ.ಕಸಾಪ ಅಧ್ಯಕ್ಷ ಕೆ.ಆರ್.ರವಿಕಿರಣ್, ಸಾಂಸ್ಕೃತಿಕ ಬೇರುಗಳನ್ನು ಗಟ್ಟಿಗೊಳಿಸುವಲ್ಲಿ ರಂಗ ತರಬೇತಿ ಶಿಬಿರದ ಮಹತ್ವ ಹೆಚ್ಚು. ಇಂದು ಅತಿ ಆಧುನೀಕತೆ ಮತ್ತು ಗಾಢ ಮೌಡ್ಯಗಳೆರಡೂ ಏಕಕಾಲಕ್ಕೆ ಸಮಕಾಲೀನ ಸಂವೇದನೆಯನ್ನು ಪ್ರಭಾವಿಸುತ್ತಿವೆ. ಹೀಗಾಗಿ ಆಯ್ಕೆ ವಿಚಾರದಲ್ಲಿ ಮನುಷ್ಯ ಸಹಜ ಗೊಂದಲಕ್ಕೀಡಾಗುವ ಅಪಾಯವಿದೆ. ಆದರೆ ಮುಂದಿರುವ ಎರಡೂ ಆಯ್ಕೆಗಳು ಸೂಕ್ತವಲ್ಲ. ಕೇವಲ ತಕ್ಷಣದ ಪರಿಹಾರ ಕಂಡುಕೊಳ್ಳುವ ನೆಪಗಳು ಹೆಚ್ಚು ದಿನ ಉಳಿಯಲಾರವು ಎಂದರು.
ಪರಿಹಾರವಲ್ಲ: ದೊಡ್ಡಬಳ್ಳಾಪುರದ ನೀರಿನ ಸಮಸ್ಯೆಗೆ ಕೊಳವೆ ಬಾವಿ ಕೊರೆಸುವುದು ಅಥವಾ ಕಡಿಮೆ ದರದಲ್ಲಿ ನೀರು ಪೂರೈಕೆ ಮಾಡುವ ಯೋಜನೆಗಳು ತಾತ್ಕಾಲಿಕ ಮಾರ್ಗೋಪಾಯಗಳೇ ಹೊರತು ಪರಿಹಾರವಲ್ಲ. ಹೀಗಾಗಿ ಶಾಶ್ವತ ಪರಿಹಾರದತ್ತ ಗಮನ ಹರಿಸಬೇಕು. ತಪ್ಪಿದಲ್ಲಿ ಇಡೀ ಊರಿನ ಅಸ್ತಿತ್ವಕ್ಕೆ ದೊಡ್ಡ ಸಮಸ್ಯೆ ಬಂದೊದಗಲಿದೆ. ಈ ಬಗ್ಗೆ ಆಡಳಿತವರ್ಗ ಮತ್ತು ಸರ್ಕಾರ ಎಚ್ಚರ ವಹಿಸಬೇಕು. ಪ್ರಾಕೃತಿಕ ಅಸ್ತಿತ್ವಕ್ಕೆ ಮಾರಕವಲ್ಲದ ನಿಸರ್ಗ ಸಹಜ ಯೋಜನೆಗಳಿಂದ ಮಾತ್ರ ಶಾಶ್ವತ ಪರಿಹಾರ ಕಂಡುಕೊಳ್ಳಲು ಸಾಧ್ಯ ಎಂಬುದರ ಪ್ರಾಯೋಗಿಕ ಅನುಷ್ಠಾನ ಆಗಬೇಕು ಎಂದರು.
ಬಿರ್ಲಾ ಸೂಪರ್ ಬಲ್ಕ್ ಟರ್ಮಿನಲ್ನ ಆಡಳಿತಾಧಿಕಾರಿ ಮಂಜುನಾಥ್, ತಾ. ಕಾಂಗ್ರೆಸ್ ಯುವ ಘಟಕದ ಅಧ್ಯಕ್ಷ ವೆಂಕಟೇಶ್(ಅಪ್ಪಿ), ನಗರ ಎಸ್ಸಿ ಘಟಕದ ಅಧ್ಯಕ್ಷ ಡಿ.ಎನ್.ಅಂಜನಮೂರ್ತಿ, ಯುವ ಮುಖಂಡ ರಾಜೇಶ್, ವಕೀಲ ಮೋಹನ್ ಮಾತನಾಡಿದರು.
ಭಗವಾನ್ ಬುದ್ಧ ಸಮುದಾಯ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷೆ ಜಿ.ಸವಿತಾ ಅಧ್ಯಕ್ಷತೆ ವಹಿಸಿದ್ದರು. ಶಿಕ್ಷಕ ಕೆ.ಜಯಕುಮಾರ್, ಸಂಸ್ಥೆಯ ಕಾರ್ಯದರ್ಶಿ ರಾಜು ಸಣ್ಣಕ್ಕಿ, ವಕೀಲ ನಾಗೇಂದ್ರ, ಪ್ರಭಾಕರ ಮತ್ತಿತರರು ಭಾಗವಹಿಸಿದ್ದರು.
ಇದೇ ಸಂದರ್ಭದಲ್ಲಿ ಎಲೆಪೇಟೆ ಸರ್ಕಾರಿ ಶಾಲೆ ಮುಖ್ಯಶಿಕ್ಷಕ ಅರೆರಂಗಯ್ಯ ಅವರನ್ನು ಸನ್ಮಾನಿಸಲಾಯಿತು. ದೇವರಾಜು ನಿರ್ದೇಶನದಲ್ಲಿ ಮಕ್ಕಳಿಂದ ಪ್ರದರ್ಶನಗೊಂಡ ದುರಾಸೆಯ ಫಲ ನಾಟಕ ಸಮಕಾಲೀನ ಸಮಸ್ಯೆಗಳ ತರ್ಕಬದ್ಧ ವಿಮರ್ಶೆಯಿಂದ ಕೂಡಿತ್ತು. ಮಕ್ಕಳಿಗೆ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

